70ರ ದಶಕದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ನಟ ವಿಷ್ಣುವರ್ಧನ್ ಅವರು ಚಿತ್ರರಂಗದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. 1980 ರಲ್ಲಿ ವಿದೇಶಿ ಸಿನಿ ಪತ್ರಕರ್ತೆಯೊಬ್ಬರು ಭಾರತೀಯ ಸಿನಿ ಚಿತ್ರರಂಗವನ್ನು ತಿರುಗಾಡಿ ಭಾರತೀಯ ಚಿತ್ರರಂಗದಲ್ಲಿ ನಾನು ಕಂಡ ಸ್ಪುರದ್ರೂಪಿ ನಟನೆಂದರೆ ಕನ್ನಡದ ಸಾಹಸಸಿಂಹ ವಿಷ್ಣುವರ್ಧನ್ ಎಂದು ಬರೆದಿದ್ದಾರೆ. ವಿಷ್ಣು ಅವರ ಜೀವನದ ಕೆಲವು ಸ್ವಾರಸ್ಯ ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ನಟ ವಿಷ್ಣುವರ್ಧನ್ ಅವರ ಮೂಲ ನಾಮಧೇಯ ಸಂಪತ್ ಕುಮಾರ್ 1950 ಸೆಪ್ಟೆಂಬರ್ 18 ರಂದು ಎಚ್.ಎಲ್. ನಾರಾಯಣರಾವ್ ಹಾಗೂ ಕಾಮಾಕ್ಷಮ್ಮ ದಂಪತಿಗೆ ಜನಿಸಿದ ವಿಷ್ಣುವರ್ಧನ್ ಅವರ ಜನ್ಮಸ್ಥಳ ಮೈಸೂರು ಜಿಲ್ಲೆ. ಇವರ ಪೂರ್ವಜರು ಮೂಲತಃ ಮಂಡ್ಯ ಜಿಲ್ಲೆಯ ಹಳ್ಳಗೆರೆಯವರು. ವಿಷ್ಣುವರ್ಧನ್ ಅವರ ತಂದೆ ನಾರಾಯಣರಾವ್ ಅವರು ಸಂಗೀತ ಸಂಯೋಜಕರು ವಾದಕರು, ನಾಟಕಗಳಿಗೆ ಕಥೆ ಬರೆಯುತ್ತಿದ್ದ ಸಾಹಿತಿಗಳು ಆಗಿದ್ದರು. ಇವರು ಒಟ್ಟು 6 ಜನ ಮಕ್ಕಳು ಇಬ್ಬರು ಗಂಡುಮಕ್ಕಳು ಹಾಗೂ 4 ಜನ ಹೆಣ್ಣುಮಕ್ಕಳು ಅದರಲ್ಲಿ ಎರಡನೇಯವರು ವಿಷ್ಣುವರ್ಧನ್. ಇವರು ಒಂದು ವೇಳೆ ಚಿತ್ರರಂಗಕ್ಕೆ ಬರದೇ ಇದ್ದರೆ ಆರ್ಮಿಗೆ ಸೇರುತ್ತಿದ್ದರಂತೆ. ನನಗೆ ಸಾಹಸ ಮತ್ತು ಚಾಲೆಂಜ್ ಅಂದ ಇಷ್ಟ ಎಂದು ಅವರು ಹೇಳಿಕೊಂಡಿದ್ದರು. ವಿಷ್ಣುವರ್ಧನ್ ಅವರು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ನಂತರ ಬೆಂಗಳೂರಿನ ಕನ್ನಡ ಮಾಡೆಲ್ ಹೈಸ್ಕೂಲಿನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪಡೆದರು. ಮೆಟ್ರಿಕ್ ಪಾಸಾದ ಬಳಿಕ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪೂರೈಸಿದರು. 1971 ರಲ್ಲಿ ವಂಶವೃಕ್ಷ ಎಂಬ ಹೆಸರಿನ ಗಿರೀಶ್ ಕಾರ್ನಾಡ್ ಅವರು ನಿರ್ದೇಶಿಸಿದ ಕಪ್ಪು ಬಿಳುಪಿನ ಕನ್ನಡ ಚಿತ್ರದಲ್ಲಿ ವಿಷ್ಣು ನಟಿಸಿದ್ದರು ಇದು ಅವರ ಮೊದಲ ಚಿತ್ರ ಸಾಹಿತಿ ಎಸ್. ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಈ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಪಡೆಯಿತು. ನಂತರ 1972 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರಕ್ಕೆ ವಿಷ್ಣು ಆಯ್ಕೆಯಾದರು. ಈ ಸಿನಿಮಾ ಜನಪ್ರಿಯವಾಯಿತಲ್ಲದೆ ವೀಕ್ಷಕರಲ್ಲಿ ಹೊಸ ಸಂಚಲನ ಮೂಡಿಸಿತು ಹಾಗೂ ಕೆಲವು ಟೀಕೆಗೂ ಒಳಗಾಯಿತು. ಆದರೆ ಅಭಿಮಾನಿಗಳು ಅತ್ಯಂತ ಯಶಸ್ವಿ ಚಿತ್ರವನ್ನಾಗಿ ಮಾಡಿದರು. ನಂತರ ವಿಷ್ಣುವರ್ಧನ್ ಅವರು ಕರ್ನಾಟಕದ ಮನೆಮಾತಾದರು. ಕನ್ನಡದ ನೂತನ ಆ್ಯಂಗ್ರಿಮ್ಯಾನ್ ಎಂದೇ ಆಗಿನ ಪತ್ರಿಕೆಗಳು ವಿಷ್ಣು ಅವರನ್ನು ಬಿಂಬಿಸಿ ಬರೆದವು. ಪುಟ್ಟಣ್ಣ ಕಣಗಾಲ್ ಸಂಪತ್ ಆಗಿದ್ದ ವಿಷ್ಣುವಿಗೆ ವಿಷ್ಣುವರ್ಧನ್ ಎಂದು ನಾಮಕರಣ ಮಾಡಿದರು ಅದೆ ಹೆಸರೆ ಇಂದಿಗೂ ಜನಪ್ರಿಯವಾಯಿತು. ನಂತರ 1973 ರಲ್ಲಿ ಸೀತೆಯಲ್ಲ ಸಾವಿತ್ರಿ, ಮನೆ ಬೆಳಗಿದ ಸೊಸೆ, ಗಂಧದ ಗುಡಿ ಸಿನಿಮಾಗಳಲ್ಲಿ ನಟಿಸಿದ ವಿಷ್ಣು 1974 ರಲ್ಲಿ ಅವಾರ್ಡ್ ಸಿನಿಮಾ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸಿದರು ಇದು ಕನ್ನಡದ ಕವಿ ಗೋರೂರು ರಾಮಸ್ವಾಮಿ. ಅಯ್ಯಂಗಾರ್ ಅವರ ಅದೆ ಹೆಸರಿನ ಕಾದಂಬರಿ ಆಧಾರಿತ ಚಿತ್ರವು ಹೌದು. 70ರ ದಶಕದ ಅತ್ಯಂತ ಬ್ಯುಸಿ ನಟರೆಂದು ಗುರುತಿಸಿಕೊಂಡ ವಿಷ್ಣು ಅವರು ಸ್ಟಾರ್ ನಟಿಯರಾದ ಭಾರತಿ, ಆರತಿ, ಮಂಜುಳಾ, ಲಕ್ಷ್ಮೀ ಮುಂತಾದವರೊಂದಿಗೆ ನಟಿಸುತ್ತಾ ಹೋದರು. ಕನ್ನಡದ ಟಾಪ್ ನಿರ್ದೇಶಕರೊಡನೆ ಕಾರ್ಯ ನಿರ್ವಹಿಸಿದ ವಿಷ್ಣು ಅವರ ಒಡನಾಟ ಹೆಚ್ಚು ಪ್ರಖರವಾಗಿದ್ದುದು ನಿರ್ದೇಶಕ ಭಾರ್ಗವ ಅವರೊಂದಿಗೆ. ಭಾರ್ಗವ ಅವರ ನಿರ್ದೇಶನದ ಗುರುಶಿಷ್ಯರು, ಜೀವನ ಚಕ್ರ, ಕರುಣಾಮಯಿ, ಹೃದಯ ಗೀತೆ, ಕರ್ಣ, ಮತ್ತೆ ಹಾಡಿತು ಕೋಗಿಲೆ ಮುಂತಾದ ಚಿತ್ರಗಳಲ್ಲಿ ವಿಷ್ಣು ನಟಿಸಿದ್ದರು. ವಿಷ್ಣುವರ್ಧನ್ ಮತ್ತು ನಟಿ ಸುಹಾಸಿನಿ ಅವರ ಜೋಡಿ ಎಂಬತ್ತರ ದಶಕದ ಕನ್ನಡದ ಜನಪ್ರಿಯ ಜೋಡಿ ಎನಿಸಿಕೊಂಡಿತ್ತು. ವಿಷ್ಣು ಹಾಗೂ ನಟಿ ಭವ್ಯಾರವರ ಕಾಂಬಿನೇಷನ್ ನ ಹಲವು ಚಿತ್ರಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 1985 ರಲ್ಲಿ ತೆರೆಕಂಡ ಸಾಹಸ ಸಿಂಹದ ಖ್ಯಾತಿ ಅವರಿಗೆ ಸಾಹಸಸಿಂಹ ಬಿರುದನ್ನು ತಂದುಕೊಟ್ಟಿತು. ಎಂಬತ್ತರ ದಶಕದ ಕೊನೆಯಲ್ಲಿ ವಿಷ್ಣು ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ಹಿಂದಿಯಲ್ಲಿ ನಟಿಸಿ ಗೆದ್ದ ಏಕೈಕ ಯಶಸ್ವಿ ಕಲಾವಿದರೆಂದು ಎನಿಸಿಕೊಂಡಿದ್ದಾರಲ್ಲದೆ ನಟನೆಯಲ್ಲಿ ಡಾಕ್ಟರ್ ರಾಜಕುಮಾರ್ ಅವರ ನಂತರದ ನಟರೆಂದು ವಲಯದಲ್ಲಿ ಗುರುತಿಸಿಕೊಂಡರು. 200ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ವಿಷ್ಣುವರ್ಧನ ಅವರ ಕಟ್ಟಕಡೆಯ ಚಿತ್ರ ಆಪ್ತರಕ್ಷಕ.

ನಲವತ್ತು ವರ್ಷಗಳ ಕಾಲ ಪ್ರೀತಿಯ ದಾದಾ, ಸಾಹಸ ಸಿಂಹ, ಅಭಿನಯ ಭಾರ್ಗವ ಹೀಗೆ ನಾನಾ ಬಿರುದುಗಳಿಂದ ಗೌರವಿಸಲ್ಪಟ್ಟ ಮತ್ತು ಪೂಜಿಸಲ್ಪಟ್ಟ ಈ ನಟ ತಮ್ಮ ಬದುಕಿನುದ್ದಕ್ಕೂ ಹಲವಾರು ಸಂಕಷ್ಟಗಳನ್ನು, ಅವಮಾನಗಳನ್ನು ಎದುರಿಸಿದ ಕಲಾವಿದ. ಅವರ ಜೀವನದ ಕಹಿ ಆರಂಭಗೊಂಡಿದ್ದೇ ಗಂಧದಗುಡಿ ಸಿನಿಮಾದ ಮೂಲಕ ಅದರ ಶೂಟಿಂಗ್ ವೇಳೆ ಮಸಾಲೆ ಬೆಟ್ಟದ ತುದಿಯಲ್ಲಿ ಅಚಾನಕ್ಕಾಗಿ ನಡೆದ ಘೋರ ದುರಂತ ವಿಷ್ಣು ಅವರ ಜೀವನದ ದಿಕ್ಕನ್ನೆ ಬದಲಿಸಿತು. ಆ ಘಟನೆಯ ಸತ್ಯಾಸತ್ಯತೆಯನ್ನು ಅರಿಯದ ಅಭಿಮಾನಿಗಳ ಗುಂಪು 2 ದಶಕಗಳ ಕಾಲ ವಿಷ್ಣುವರ್ಧನ್ ಅವರಿಗೆ ನಾನಾ ರೀತಿಯ ತೊಂದರೆ ಕೊಟ್ಟಿದ್ದು ನಿಜಕ್ಕೂ ವಿಷಾದನೀಯ ಸಂಗತಿ. ನಟಿ ಭಾರತಿ ಅವರನ್ನು ಪ್ರೇಮಿಸಿ ಮದುವೆಯಾದರು ವಿವಾಹದ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ತನಗೆ ಎಷ್ಟೇ ನೋವಾದರೂ ನಗುಮುಖದಿಂದಲೇ ಎಲ್ಲರನ್ನೂ ಸ್ವೀಕರಿಸುವ ಸಹನೆಯ ನಿಧಿಯಾಗಿದ್ದರು ವಿಷ್ಣು ಎಂದು ಅವರ ಆಪ್ತರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. 2009 ಡಿಸೆಂಬರ್ 30 ರಂದು ದಿಡೀರ್ ಹೃದಯಾಘಾತದಿಂದ ಸ್ವರ್ಗಸ್ಥರಾದ ವಿಷ್ಣು ಅಸಂಖ್ಯಾತ ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದರು ಇವರ ಮರಣದ ನಂತರ ಅವರ ಕಡೆಯ ಚಿತ್ರ ಆಪ್ತರಕ್ಷಕ ಚಿತ್ರವನ್ನು 2010ರಲ್ಲಿ ಬಿಡುಗಡೆ ಮಾಡಲಾಯಿತು. ಸ್ನೇಹಲೋಕ ಎಂಬ ಚಾರಿಟಿ ಸಂಸ್ಥೆ ಕಟ್ಟಿದ ವಿಷ್ಣು ನೆರೆ ಹಾವಳಿಯ ಪರಿಹಾರಕ್ಕಾಗಿ ಪಾದಯಾತ್ರೆಯ ಮೂಲಕ ದೇಣಿಗೆ ಸಂಗ್ರಹಿಸುವ ಕೆಲಸ ಮಾಡಿದ್ದರು. ಮೇಲುಕೋಟೆ ಬಳಿ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದ ವಿಷ್ಣು ಹಾಗೂ ಭಾರತಿ ದಂಪತಿಯರು ಅಲ್ಲಿ ಬೋರ್ ಕೊರೆಸುವ ಕಾರ್ಯ ಮಾಡಿದರು. ಸಮಾಜಮುಖಿ ಹಾಗೂ ಹಲವು ಕನ್ನಡಪರ ಕಾರ್ಯಗಳಲ್ಲಿ ಭಾಗವಹಿಸಿದ್ದ ವಿಷ್ಣು ಕನ್ನಡಕ್ಕೆ ದೊರೆತ ಆಸ್ತಿ ಆಗಿದ್ದರು. ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿವರೆಗಿನ ಸುಮಾರು ಹದಿನಾಲ್ಕು ಕಿಲೋಮೀಟರ್ ಹೈವೇಯನ್ನು ನಟ ವಿಷ್ಣುರವರ ಸ್ಮರಣಾರ್ಥದಲ್ಲಿ ನಿರ್ಮಿಸಲಾಗಿದೆ. ಒಬ್ಬ ವ್ಯಕ್ತಿ ಹೆಸರಲ್ಲಿ ಇಷ್ಟು ಉದ್ದದ ರಸ್ತೆ ಇರುವುದು ಏಷ್ಯಾದಲ್ಲೇ ಇದೆ ಮೊದಲು. ಅನೇಕ ಬಿರುದುಗಳಿಗೆ ಭಾಜನರಾಗಿದ್ದ ವಿಷ್ಣು 2008ನೇ ಸಾಲಿನ ಡಾಕ್ಟರ್ ರಾಜಕುಮಾರ್ ಪ್ರಶಸ್ತಿಗೂ ಆಯ್ಕೆಯಾದರು. 2013 ರಲ್ಲಿ ಅವರ ಮರಣದ ನಂತರ ಅವರ ಚಿತ್ರವುಳ್ಳ ಸ್ಟಾಂಪ್ ನ್ನು ಸರ್ಕಾರ ಹೊರಡಿಸಿತು. ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿ ಅವರ ಸಮಾಧಿ ಇದೆ. ಅವರು ಇಂದಿಗೂ ಎಲ್ಲರ ಮನಸಲ್ಲಿಯೂ ಇದ್ದಾರೆ.

Leave a Reply

Your email address will not be published. Required fields are marked *