ಆಸ್ತಿಯ ಹಕ್ಕನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡಲು ದಾನಪತ್ರ ಮುಖ್ಯವಾಗಿದೆ. ದಾನಪತ್ರ ಎಂದರೇನು, ದಾನಪತ್ರ ಮಾಡಿಸಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ, ದಾನಪತ್ರದಲ್ಲಿ ಏನೆಲ್ಲಾ ಬರೆಯಬೇಕು ಹಾಗೂ ದಾನಪತ್ರ ಮಾಡಿಸಲು ಗಮನಿಸಬೇಕಾದ ಮುಖ್ಯ ಅಂಶಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯಾಗಲಿ ಅಥವಾ ಸ್ಥಿರಾಸ್ತಿಯಾಗಲಿ, ಚರಾಸ್ಥಿಯಾಗಲಿ ತಮಗೆ ಇಷ್ಟ ಬಂದವರಿಗೆ ಪುಕ್ಕಟೆಯಾಗಿ ಹಕ್ಕು ವರ್ಗಾವಣೆಯನ್ನು ದಾನ ಪತ್ರದ ಮೂಲಕ ಮಾಡಲಾಗುತ್ತದೆ ಅದನ್ನು ದಾನ ಪತ್ರ ಎಂದು ಕರೆಯುತ್ತಾರೆ. ಬಾಯಿ ಮಾತಿನಲ್ಲಿ ದಾನ ಕೊಟ್ಟಿದ್ದೇನೆ ಎಂದು ಹೇಳಿದರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಸಿಗುವುದಿಲ್ಲ ಅಲ್ಲದೆ ಮುಂದೆ ಅದರಿಂದ ತೊಂದರೆ ಆಗಬಹುದು. ದಾನಪತ್ರ ಬರೆದು ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದರೆ ಮಾತ್ರ ಮಾನ್ಯತೆ ಇರುತ್ತದೆ. ದಾನ ಪತ್ರ ಮಾಡಲು ಕೆಲವು ದಾಖಲೆಗಳು ಬೇಕಾಗುತ್ತದೆ. ಜಮೀನು ಅಥವಾ ಮನೆಯ ಹಕ್ಕು ಪತ್ರ ಅಂದರೆ ದಾನ ಮಾಡಲು ಬಯಸುವವರು ತಮ್ಮ ಹೆಸರಿನಲ್ಲಿರುವ ಪಹಣಿ ಪತ್ರ, ಸ್ವಯಾರ್ಜಿತ ಮನೆಯನ್ನು ದಾನ ಮಾಡಲು ಇಚ್ಛಿಸಿದರೆ ಮನೆ ಹಕ್ಕು ಪತ್ರ ಬೇಕಾಗುತ್ತದೆ.

ದಾನ ಮಾಡುವವರು ಹಾಗೂ ದಾನ ಪಡೆಯುವವರ ಆಧಾರ್ ಕಾರ್ಡ್, ಕುಟುಂಬದ ಸದಸ್ಯರೊಬ್ಬರಿಗೆ ದಾನ ಮಾಡಲು ಇಚ್ಛಿಸುವುದಾದರೆ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ. ದಸ್ತಾವೇಜು ಹಾಳೆಯಲ್ಲಿ ದಾನ ಪತ್ರ ಬರೆದು ಅಥವಾ ಮುದ್ರಿಸಿ ನೋಟರಿ ಮಾಡಿಸಿ ದೃಢೀಕರಣ ಮಾಡಿಸುವುದು. ದಾನ ಪತ್ರದಲ್ಲಿ ದಾನ ಮಾಡುತ್ತಿರುವಾಗ ಇಸ್ವಿ, ತಿಂಗಳು, ತಾರೀಖು ಹಾಕಬೇಕು. ಪಾರ್ಟಿ ನಂಬರ್ 1 ರಲ್ಲಿ ದಾನ ಕೊಡುವವರ ಹೆಸರು, ಪಾರ್ಟಿ ನಂಬರ್ 2 ರಲ್ಲಿ ದಾನ ಪಡೆಯುವವರ ಹೆಸರನ್ನು ಬರೆಯಬೇಕು. ದಾನ ಮಾಡುವ ಆಸ್ತಿಯ ಸಂಕ್ಷಿಪ್ತ ವಿವರವನ್ನು ಬರೆಯಬೇಕಾಗುತ್ತದೆ. ದಾನ ಮಾಡುತ್ತಿರುವ ಉದ್ದೇಶವನ್ನು ಬರೆಯಬೇಕಾಗುತ್ತದೆ. ದಾನ ಮಾಡುವ ಆಸ್ತಿಯ ವಿವರ ಸಂಪೂರ್ಣ ವಿಳಾಸವನ್ನು ಬರೆಯಬೇಕಾಗುತ್ತದೆ. ದಾನ ಮಾಡುವ ಜಮೀನಿನ ಸುತ್ತ ಮತ್ತ ಯಾರ ಯಾರ ಜಮೀನಿದೆ ಎಂಬುದನ್ನು ಸಹ ಬರೆಯಬೇಕು.

ದಾನ ಪಡೆಯುವವರ ಹೆಸರು ವಿಳಾಸವನ್ನು ಬರೆಯಬೇಕು ಹಾಗೂ ಇಲ್ಲಿಯೂ ಸಹ ದಾನವಾಗಿ ಪಡೆದ ಜಮೀನಿನ ಸುತ್ತ ಮುತ್ತ ಯಾರ ಯಾರ ಜಮೀನಿದೆ ಅವರ ಹೆಸರನ್ನು ಬರೆಯಬೇಕು. ನಂತರ ಮುದ್ರಾಂಕದ ಶುಲ್ಕವನ್ನು ಬರೆಯಬೇಕಾಗುತ್ತದೆ. ದಾನ ಮಾಡುವವರ ಮತ್ತು ದಾನ ಪಡೆಯುವವರ ಸಹಿಯನ್ನು ಹಾಕಬೇಕು. ಕೆಳಗಡೆ ಸಾಕ್ಷಿಗಳ ಸಹಿಯನ್ನು ಮಾಡಬೇಕಾಗುತ್ತದೆ. ನಂತರ ಈ ದಾನಪತ್ರವನ್ನು ಲಾಯರ್ ಅವರಿಂದ ನೋಟರಿ ಮಾಡಿಸಿ ದಾನ ಪಡೆಯುವವರು ದಾನ ತೆಗೆದುಕೊಳ್ಳುವವರು ಮತ್ತು ಸಾಕ್ಷಿದಾರರು ಸಬ್ ರಿಜಿಸ್ಟ್ರಾರ್ ಆಫೀಸ್ ಗೆ ಭೇಟಿ ಕೊಟ್ಟು ನೋಂದಣಿ ಕಚೇರಿಯಲ್ಲಿ ಎಲ್ಲಾ ದಾಖಲಾತಿಗಳನ್ನು ಕೊಟ್ಟರೆ ಅವರು ದಾನಪತ್ರವನ್ನು ನೋಂದಣಿ ಮಾಡುತ್ತಾರೆ.

ಸ್ವಯಾರ್ಜಿತ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದು ಹಾಗೂ ಮಾರಾಟ ಮಾಡಬಹುದು. ರಕ್ತ ಸಂಬಂಧವಲ್ಲದ ಹೊರಗಿನವರಿಗೆ ಆಸ್ತಿಯನ್ನು ದಾನವಾಗಿ ಕೊಡಲು ಇಚ್ಛಿಸಿದರೆ ದಾನ ಕೊಡುವ ಆಸ್ತಿಯ ಮೌಲ್ಯದ 5% ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಕುಟುಂಬದ ಒಬ್ಬ ಸದಸ್ಯನಿಗೆ ದಾನ ಕೊಡಲು ಇಚ್ಛಿಸಿದರೆ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ. ದಾನ ಪತ್ರದಲ್ಲಿ ಮುಖ್ಯವಾಗಿ ಸಾಕ್ಷಿದಾರರ ಸಹಿ ಮಾಡಿಸಬೇಕಾಗುತ್ತದೆ. ಮ್ಯೂಟೇಶನ್ ಪ್ರಕ್ರಿಯೆಗೆ ಒಳಪಡುತ್ತದೆ. ನಿಮ್ಮ ಆಸ್ತಿಯನ್ನು ದಾನವಾಗಿ ಕೊಡುವುದಾದರೆ ಅಥವಾ ನೀವು ಒಬ್ಬರಿಂದ ದಾನ ಪಡೆಯುವುದಾದರೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *