ವಾಣಿಜ್ಯ ಹೈನುಗಾರಿಕೆ ಎನ್ನುವುದು ಇಂದು ಪೂರ್ಣ ಪ್ರಮಾಣದ ಉದ್ಯೋಗವಾಗಿ ಹೊರಹೊಮ್ಮಿದೆ. ಹೈನುಗಾರಿಕೆಯಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಅಧಿಕ ಹಾಲು ಉತ್ಪಾದಿಸುವ ಮಿಶ್ರ ಜಾತಿಯ ಹಸುಗಳನ್ನು ಬಹಳಷ್ಟು ಜನರು ಸಾಕುತ್ತಿದ್ದಾರೆ. ಹಸುಗಳನ್ನು ಖರೀದಿಸುವಾಗ ರೈತರು ಕೆಲವು ಅಂಶಗಳನ್ನು ಗಮನಿಸಬೇಕು. ವಂಶಾವಳಿ ದಾಖಲೆಗಳನ್ನು ಗಣನೆಗೆ ತೆಗೆದುಕೊಂಡು ಆ ಹಸುವಿನ ಬಗ್ಗೆ ಚರ್ಚಿಸಬೇಕು. ಹಸು 2 ಅಥವಾ 3 ನೆ ಸೂಲಿನಲ್ಲಿರುವುದು ಮುಖ್ಯ 3ಕ್ಕಿಂತ ಹೆಚ್ಚಿನ ಸೂಲಿನದ್ದಾದರೆ ಖರೀದಿಸಬಾರದು ಏಕೆಂದರೆ 2 ಅಥವಾ 3 ನೆ ಸೂಲಿನಲ್ಲಿ ಗರಿಷ್ಠ ಪ್ರಮಾಣದ ಹಾಲನ್ನು ನೀರಿಕ್ಷಿಸಬಹುದು. ಹಸುವಿನ ವಯಸ್ಸು 4-5 ವರ್ಷ ಆಗಿರಬೇಕು. ಹೆಚ್ಚು ಹಾಲು ಕೊಡುವ ಹಸು ಸೌಮ್ಯ ಸ್ವಭಾವದ್ದಾಗಿರುತ್ತದೆ. ದೇಹದ ಮೇಲಿನ ಕೂದಲು ನಯವಾಗಿರಬೇಕು ಮತ್ತು ಹೊಳಪಿನಿಂದ ಕೂಡಿರಬೇಕು ಇದು ಹಸುಗಳನ್ನು ಉತ್ತಮವಾಗಿ ಪಾಲನೆ ಮಾಡಿರುವುದನ್ನು ಮತ್ತು ಯಾವುದೇ ಪೋಷಕಾಂಶದ ಕೊರತೆ ಇಲ್ಲದಿರುವುದನ್ನು ಸೂಚಿಸುತ್ತದೆ. ಹೆಚ್ಚು ಹಾಲು ಕೊಡುವ ಹಸುವಿನ ಕಣ್ಣುಗಳು ಕಾಂತಿಯುತವಾಗಿ ಮತ್ತು ಚುರುಕಾಗಿರುತ್ತದೆ. ಮೂಗಿನ ಹೊಳ್ಳೆಗಳು ವಿಶಾಲವಾಗಿ ರುತ್ತದೆ. ಎದೆ ಮತ್ತು ಹೊಟ್ಟೆಯ ಭಾಗ ವಿಶಾಲವಾಗಿ ಮತ್ತು ದೊಡ್ಡದಾಗಿರುತ್ತದೆ.
ಕೆಚ್ಚಲಿನ ಬಳಿ ಸಾಕಷ್ಟು ಅಂಕು ಡೊಂಕಿನ ರಕ್ತನಾಳಗಳಿದ್ದು ಅವು ಎದ್ದುಕಾಣುವಂತಿರಬೇಕು. ಕೆಚ್ಚಲು ದೊಡ್ಡದಾಗಿದ್ದು, ಮೃದುವಾಗಿರಬೇಕು. ಮೊಲೆತೊಟ್ಟುಗಳು ಉದ್ದವಾಗಿರಬೇಕು. ಚಪ್ಪೆಯ ಮೇಲ್ಬಾಗ ಕಡಿಮೆ ಇಳಿಜಾರಿನಿಂದ ಕೂಡಿದ್ದು ವಿಶಾಲವಾಗಿರಬೇಕು. ಹಲ್ಲುಗಳು ಚೂಪಾಗಿರದೆ ಸಮನಾಗಿರಬೇಕು. ಕರು ಹಾಕಿ 2 ರಿಂದ 4 ನೆ ವಾರದೊಳಗಿನ ಹಸುವನ್ನು ಖರೀದಿಸುವುದು ಒಳ್ಳೆಯದು. ಹಸುವನ್ನು ಖರೀದಿಸುವಾಗ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಹಾಲಿನ ಇಳುವರಿಯನ್ನು ಪರಿಶೀಲಿಸಬೇಕು 3 ಬಾರಿ ಹಾಲು ಕರೆಯಲು ತಿಳಿಸಿ 2ನೆ ಮತ್ತು 3ನೆ ಬಾರಿ ಹಿಂಡಿದ ಹಾಲಿನ ಸರಾಸರಿಯನ್ನು ತೆಗೆದುಕೊಂಡರೆ ಅದುವೆ ಆ ಹಸುವಿನ ಹಾಲಿನ ಸರಾಸರಿ ಇಳುವರಿಯಾಗಿರುತ್ತದೆ. ಈ ರೀತಿಯಲ್ಲಿ ಹಸುವಿನ ಆಯ್ಕೆ ಮಾಡಿದರೆ ರೈತರು ಪಶು ಸಾಕಾಣಿಕೆಯಿಂದ ಲಾಭ ಗಳಿಸಬಹುದು.
ನೈಸರ್ಗಿಕ ಕೃಷಿ: ಹೊರಗಿನ ವಸ್ತುಗಳನ್ನು ಕೊಳ್ಳದೆ ನಮ್ಮಲ್ಲೆ ಇರುವ ವಸ್ತುಗಳನ್ನು ಬಳಕೆ ಮಾಡಿ ಅದನ್ನೆ ತ್ಯಾಜ್ಯವಾಗಿ ಉಪಯೋಗಿಸಿ ಜೀವಾಮೃತವಾಗಿ ತಯಾರಿಸಿ ಭೂಮಿಗೆ ಹಾಕಿದಾಗ ಅದರಲ್ಲಿರುವ ಸೂಕ್ಷ್ಮ ಜೀವಾಣುಗಳನ್ನು ಆಕ್ಟಿವೇಟ್ ಮಾಡುತ್ತದೆ. ಸೂಕ್ಷ್ಮಾಣು ಜೀವಿಗಳ ಆಕ್ಟಿವೇಟ್ ಆದಾಗ ಮಾತ್ರ ಭೂಮಿ ಫಲವತ್ತತೆಯನ್ನು ಹೊಂದುತ್ತದೆ. ಒಣ ಬೇಸಾಯಕ್ಕೂ ಮತ್ತು ನೀರಾವರಿಗೂ ಅನ್ವಯಮಾಡಬಹುದು. ಒಣ ಬೇಸಾಯ ಪದ್ಧತಿಯಲ್ಲಿ ಮಳೆ ಕಡಿಮೆ ಇದ್ದರೂ ಬೆಳೆ ಚೆನ್ನಾಗಿ ಬರುವುದು. ಕೀಟ ಬಾಧೆಯಿರುವುದಿಲ್ಲ. ಎಲ್ಲ ರೀತಿಯ ಬೆಳೆಗಳಾದ ಕಬ್ಬು, ಜೋಳ, ಕಡ್ಲೆ, ಬೆಳೆಗಳಿಗೆ ನೈಸರ್ಗಿಕ ಕೃಷಿ ಉತ್ತಮವಾಗಿದೆ. ನೈಸರ್ಗಿಕ ಕೃಷಿಗೆ ಶೂನ್ಯ ಬಂಡವಾಳ ಎನ್ನುವರು. ಇದರಿಂದ ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಅಧಿಕ ಬೆಳೆಯನ್ನು ಬೆಳೆಯಬಹುದು.