ತಿರುಪತಿ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ನೆನಪಿಗೆ ಬರುವುದು ಆಂಧ್ರಪ್ರದೇಶದ ತಿರುಮಲ ದೇವಸ್ಥಾನ. ಎಲ್ಲರ ಪಾಲಿಗೆ ಅದು ತಿರುಪತಿ ದೊಡ್ಡ ತಿರುಪತಿ ಎಂದೇ ಹೇಳಬಹುದು. ಆದರೆ ಕರ್ನಾಟಕದಲ್ಲಿ ಕೂಡಾ ಒಂದು ತಿರುಪತಿ ದೇವಾಲಯವಿದೆ ಇದಮನು ಎಲ್ಲರೂ ಚಿಕ್ಕ ತಿರುಪತಿ ಎಂದೇ ಕರೆಯುತ್ತಾರೆ. ಆ ಚಿಕ್ಕ ತಿರುಪತಿ ಇರುವುದೇ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ. ಇಲ್ಲಿನ ಪ್ರಸನ್ನ ವೆಂಕಟೇಶ್ವರ ಸ್ವಾಮಿಯು ಬಾಲಾಜಿ ಹೇಗೆ ತಿರುಪತಿಯಲ್ಲಿ ಪ್ರಸಿದ್ದಿ ಆದರೆ ಇಲ್ಲಿಯೂ ಕೂಡಾ ಅತೀ ಪ್ರಸಿದ್ಧನಾಗಿದ್ದಾನೆ. ಈ ದೇವಾಲಯವು ಚೋಳರ ಕಾಲದ ಒಂದು ಹಳೆಯ ದೇವಸ್ಥಾನ ಆಗಿದೆ. ಇದು ದಶಕಗಳಿಂದಲೂ ಜೀರ್ಣೋದ್ಧಾರವನ್ನು ಕಾಣುತ್ತಲೇ ಬಂದಿದೆ. ಪುರಾಣಗಳ ಪ್ರಕಾರ ಶಾಪಗ್ರಸ್ಥ ಅಗ್ನಿಗೆ ಈ ಸ್ಥಳದಲ್ಲಿ ಪ್ರತ್ಯಕ್ಷನಾದ ವಿಷ್ಣುವು ಪ್ರಸನ್ನ ವೆಂಕಟೇಶ್ವರನ ರೂಪದಲ್ಲಿ ಅಭಯ ಹಸ್ತವನ್ನು ಪ್ರಧಾನ ಮಾಡಿದನಂತೆ. ಅಂತಹ ಒಂದು ಪುಣ್ಯ ಕ್ಷೇತ್ರವೇ ಈ ಚಿಕ್ಕ ತಿರುಪತಿ.

ಚಿಕ್ಕ ತಿರುಪತಿ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕೇವಲ 39 ಕಿಲೋಮೀಟರ್ ದೂರದಲ್ಲಿದ್ದರೆ, ತಾಲೂಕು ನಗರವಾದಂತಹ ಮಾಲೂರಿನಿಂದ 17 ಕಿಲೋಮೀಟರ್ ದೂರದಲ್ಲಿದೆ. ಹಾಗೆಯೇ ಕೋಲಾರದಿಂದ 42 ಕಿಲೋಮೀಟರ್ ದೂರದಲ್ಲಿದೆ. ವೈಟ್ ಫೀಲ್ಡ್ ರೈಲ್ವೆ ಸ್ಟೇಶನ್ ಹತ್ತಿರದ ರೈಲ್ವೆ ಸ್ಟೇಶನ್ ಆಗಿದೆ. ಚಿಕ್ಕ ತಿರುಪತಿಯನ್ನು ಪ್ರವೇಶಿಸಿದಕೂದಲೇ ಒಂದು ಮಹಾ ದ್ವಾರ ಗೋಚರ ಆಗುತ್ತದೆ. ಮಹಾ ದ್ವಾರದ ಮುಂಭಾಗದಲ್ಲಿ ಕ್ಷೇತ್ರ ಪಾಲಕನಾದ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಆಕರ್ಷಕ ಮಹಾದ್ವಾರವನ್ನು ದಾಟಿ ಸುಮಾರು 100 ಮೀಟರ್ ದೂರದಲ್ಲಿ ದೇವಸ್ಥಾನದ ಭವ್ಯ ರಾಜಗೋಪುರ ಕಾಣಿಸುತ್ತದೆ. ಸ್ವಲ್ಪ ಮುಂದೆ ಹೋದರೆ ಭಕ್ತಾದಿಗಳನ್ನು ಆಕರ್ಷಿಸುವ 32 ಅಡಿ ಎತ್ತರದ ಧ್ವಜ ಸ್ತಂಭವನ್ನು ಕಾಣಬಹುದು. ಮುಖ ಮಂಟಪವನ್ನು ದಾಟಿ ನವರಂಗವನ್ನು ಪ್ರವೇಶಿಸುತ್ತಿರುವ ಹಾಗೆ ಗರ್ಭ ಗುಡಿಯಲ್ಲಿ ಇರುವಂತಹ ಅತ್ಯಂತ ಸುಂದರವಾದ ಪ್ರಸನ್ನ ವೆಂಕಟೇಶ್ವರ ಮೂರ್ತಿಯು ಭಕ್ತರನ್ನು ಆಕರ್ಷಿಸುತ್ತದೆ. ಶ್ರೀದೇವಿ ಭೂದೇವಿಯರ ಸಂಗಡ ಒಂದೂವರೆ ಅಡಿ ಎತ್ತರದ ಪದ್ಮ ಪೀಠದ ಮೇಲೆ ನಿ ತಿರುವ ಮೂರೂವರೆ ಅಡಿ ಎತ್ತರದ ಪ್ರಸನ್ನ ವೆಂಕಟೇಶ್ವರ ವಿಗ್ರಹವು ನಗುಮುಖದಿಂದಿದ್ದು ಭಕ್ತರ ಯಾಟನೆಗಳನ್ನೆಲ್ಲ ನಿವಾರಣೆ ಮಾಡುವ ಅಭಯ ಮುದ್ರೆಯನ್ನು ತೋರುತ್ತದೆ. ಎಡಗೈ ಮೊಳಕಾಲಿನ ಕಡೆಗೆ ತೋರುತ್ತಿದ್ದು ಭಗವಂತನ ಪಾದ ಪದ್ಮಗಳಲ್ಲಿ ಶರಣಾದವನ ಸಂಸಾರ ಸಾಗರದ ಕಷ್ಟ ಕಾರ್ಪಣ್ಯಗಳೆಲ್ಲ ಮೊಣಕಾಲುದ್ದದ ನೀರಿನ ಹಾಗೆ ಎಂದು ಇದು ಸೂಚಿಸುತ್ತದೆ. ಇದನ್ನು ಗಮನವಿಟ್ಟು ನೋಡಬೇಕಾಗುತ್ತದೆ. ಪ್ರಾಚೀನ ಮತ್ತು ಅತ್ಯಂತ ಸುಂದರವಾಗಿ ಕೆಟ್ಟಲಾದ ಉತ್ಸವ ಮೂರ್ತಿಗಳನ್ನು ಸುಕನಾಸಿನಿಯಲ್ಲಿ ಇರಿಸಲಾಗಿದೇ. ಬೆರಳ ಉಗುರುಗಳೂ ಕೂಡಾ ಸ್ಪಷ್ಟವಾಗಿ ಕಾಣಿಸುವಂತಹ ಕುಸುರಿ ಕೆಲಸವನ್ನು ಇಲ್ಲಿ ಕಾಣಬಹುದು. ಈ ವಿಗ್ರಹಗಳ ಚೆಲುವನ್ನು ನೋಡಲು ಎರಡು ಕಣ್ಣುಗಳು ಸಾಲದು.

ವೈಖಾಸನ ಆಗಮನದ ಪ್ರಕಾರ ಪ್ರತೀ ನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಪ್ರತೀ ನಿತ್ಯ ಬೆಳಿಗ್ಗೆ ಸುಪ್ರಭಾತ, ಸ್ತೋತ್ರಗಳ ಮೂಲಕ ಯೋಗ ನಿದ್ರೆಯಲ್ಲಿರುವ ಸ್ವಾಮಿಯನ್ನು ಎಚ್ಚರಿಸಲಾಗುತ್ತದೆ. ಬೆಳಗ್ಗೆ ಒಂಭತ್ತು ಗಂಟೆಗೆ ಮಹಾ ಮಂಗಳಾರತಿ ಮತ್ತು ಶೋಡಶೋಪಚಾರಗಳು ನಡೆಯುತ್ತ ಇರುತ್ತವೆ. ಸಾಯಂಕಾಲ ಏಳು ಗಂಟೆಗೆ ಅರ್ಚನೆ ಮತ್ತು ಏಕಾಂತ ಪೂಜೆಗಳೊಂದಿಗೆ ದಿನದ ಕಾರ್ಯಕ್ರಮಗಳು ಮುಕ್ತಾಯಗೊಳ್ಳುತ್ತವೆ. ದೂರದಿಂದ ಬರುವ ಭಕ್ತರಿಗೆ ನಿರಂತರ ದರ್ಶನವನ್ನು ನೀಡುವ ಉದ್ದೇಶದಿಂದ ಬೆಳಗಿನಿಂದ ಸಂಜೆಯವರೆಗೂ ದೇವಸ್ಥಾನದ ಬಾಗಿಲು ತೆರೆದೆ ಇರುತ್ತದೆ. ಶನಿವಾರವು ಸ್ವಾಮಿಯ ವಿಶೇಷ ದಿನವಾಗಿದ್ದು ಅಂದು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯು ಅಧಿಕವಾಗಿರುತ್ತದೆ. ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಸ್ವಾಮಿಯು ಅವತರಿಸಿರುವುದರಿಂದ ಶ್ರಾವಣ ಮಾಸದ ಎಲ್ಲ ದಿನಗಳಲ್ಲಿಯೂ ವಿಶೇಷ ಅಲಂಕಾರ ಕೂಡಾ ಇರುತ್ತದೆ. ಕೊನೆಯ ಶನಿವಾರದ ಲಕ್ಷಕ್ಕೂ ಮೀರಿ ಭಕ್ತರು ಆಗಮಿಸುತ್ತಾರೆ.

ಕೃಷ್ಣ ಜನ್ಮಾಷ್ಟಮಿ ಮತ್ತು ಶರನ್ನವರಾತ್ರಿ ಹಬ್ಬದಲ್ಲಿಯೂ ವಿಶೇಷ ಇತ್ಸವ ಕೂಡಾ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ವಿಷ್ಣು ದೀಪೋತ್ಸವ ಮತ್ತು ಉತ್ಥಾನ ದೀಪೋತ್ಸವಗಳು ನಡೆಯುತ್ತವೆ. ವೈಕುಂಠ ಏಕಾದಶಿ ಕೂಡಾ ದೇವರ ದರ್ಶನಕ್ಕೆ ಸೂಕ್ತ ಸಮಯ ಆಗಿರುತ್ತದೆ. ರಥ ಸಪ್ತಮಿಯಲ್ಲಿ ಸ್ವಾಮಿಯು ಸೂರ್ಯ ಪ್ರಭಾ ಉತ್ಸವದ ಮೂಲಕ ಭಕ್ತರಿಗೆ ದರ್ಶನ ನೀಡುತ್ತಾನೆ. ಪ್ರತೀ ವರ್ಷದ ಚೈತ್ರ ಮಾಸದ ಹುಬ್ಬ ನಕ್ಷತ್ರದಲ್ಲಿ ವೈಭವವಾಗಿ ಬ್ರಹ್ಮೋತ್ಸವವೂ ನಡೆಯುತ್ತದೆ. ಕರ್ನಾಟಕದಲ್ಲಿ ಇನ್ನೊಂದು ಚಿಕ್ಕ ತಿರುಪತಿ ಇದೆ ಅದು ಬೆಂಗಳೂರಿನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರಿವ ಬೆಂಗಳೂರು ಕನಕಪುರ ರಾಜ್ಯ ಹೆದ್ದಾರಿಯಲ್ಲಿ ಕಳ್ಳಲ್ಲಿ ಎಂಬ ಗ್ರಾಮದಲ್ಲಿದೆ. ಇದು ತಾಲೂಕಿಗೆ ಸೇರಿದ್ದು ಕನಕಪುರದಿಂದ ಮುಂಚೆ ಚಿಕ್ಕ ತಿರುಪತಿಯ ವಶಿಷ್ಟ ಕ್ಷೇತ್ರವಾಗಿದೆ. ಈ ಎರಡೂ ಕ್ಷೇತ್ರಗಳಿಗೂ ಒಮ್ಮೆಲೇ ಭೇಟಿ ನೀಡಿದರೆ ಪುಣ್ಯ ಲಭಿಸುತ್ತದೆ ಎಂದು ಭಕ್ತಾದಿಗಳು ಹೇಳುತ್ತಾರೆ.

By

Leave a Reply

Your email address will not be published. Required fields are marked *