ಬಾಡಿ ಬಿಲ್ಡ್ ಮಾಡಲು ಬಯಸುವವರಿಗೆ, ಹಾಗೇ ತೂಕ ಕಡಿಮೆ ಮಾಡಿಕೊಳ್ಳಬೇಕು ಅನ್ನೋರಿಗೆ ಎಲ್ಲರೂ ಮೊದಲು ಸಲಹೆ ನೀಡುವುದು ಚಿಕನ್. ಯಾಕಂದ್ರೆ ಚಿಕನ್’ನಲ್ಲಿ ಅತಿ ಕಡಿಮೆ ಕೊಬ್ಬಿನಂಶ ಇದ್ದು, ಹೆಚ್ಚು ಪ್ರೊಟೀನುಗಳಿವೆ ಎಂದೇ ನಂಬಲಾಗಿದೆ. ಹಾಗಾಗಿ ಚಿಕನ್ ಆರೋಗ್ಯಕ್ಕೆ ಒಳ್ಳೆಯ ಅಹಾರವೇ. ಆದರೆ ಅತ್ಯುತ್ತಮ ಆಹಾರವಲ್ಲ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಆದರೆ ವಾರಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಚಿಕನ್​ ಸೇವಿಸುವ ಅಭ್ಯಾಸ ಇದ್ದವರು ಇದರ ಅಡ್ಡಪರಿಣಾಮಗಳ ಬಗ್ಗೆ ಕೂಡಾ ಎಚ್ಚರ ವಹಿಸುವುದು ಅಗತ್ಯ. ಹಾಗಾದರೆ ಚಿಕನ್ ಸೇವನೆ ಮಾಡುವುದರಿಂದ ಏನೆಲ್ಲಾ ಅಡ್ಡಪರಿಣಾಮಗಳು ಇವೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಾನ್​ ವೆಜ್​ ಪ್ರಿಯರು ಹೆಚ್ಚಾಗಿ ಇಷ್ಟಪಡುವುದು ಚಿಕನ್​ ಊಟವನ್ನೇ. ಭೋಜನದ ಜೊತೆಗೆ ಒಂದು ತುಂಡು ಚಿಕನ್​ ಇಲ್ಲ ಎಂದರೆ ಅದೆಷ್ಟೋ ಜನರಿಗೆ ಅವತ್ತಿನ ಊಟ ಸಮಾಧಾನವೇ ತರುವುದಿಲ್ಲ. ಅಷ್ಟರಮಟ್ಟಿಗೆ ಚಿಕನ್​ ಊಟವನ್ನು ಇಷ್ಟಪಡುತ್ತಾರೆ. ಅಲ್ಲದೇ ಚಿಕನ್ ರುಚಿಯಷ್ಟೇ ಪ್ರೋಟೀನ್ ಹೊಂದಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್ ಬಿರಿಯಾನಿ, ಚಿಕನ್ ಟಿಕ್ಕಾ, ಸುಕ್ಕ, ಕಬಾಬ್​ ಹೀಗೆ ವಿವಿಧ ಶೈಲಿಯಲ್ಲಿ ಚಿಕನ್ ಅನ್ನು ಸವಿಯಬಹುದು. ಆದರೆ ಚಿಕನ್​ ಅತಿಯಾಗಿ ತಿನ್ನುವುದರಿಂದ ಅನೇಕ ಅಡ್ಡಪರಿಣಾಮಗಳನ್ನು ಚಿಕನ್ ತಿನ್ನುವವರು ಎದುರಿಸಬೇಕಾಗುತ್ತದೆ. ಚಿಕನ್​ ತಿಂದರೆ ಏನು ಆಗಲ್ಲ, ನಾವು ಪ್ರತೀ ದಿನ ಚಿಕನ್ ಊಟ ಮಾಡಿಯೇ ಮಾಡುತ್ತೇವೆ ಎನ್ನುವವರು ಇಲ್ಲೊಮ್ಮೆ ನೋಡಿ. ಚಿಕನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ ಆದರೆ ಅತಿಯಾಗಿ ಸೇವನೆ ಮಾಡಿದರೆ ಅಮೃತ ಕೂಡಾ ವಿಷ ಎನ್ನುವ ಹಾಗೆ ಈ ಚಿಕನ್ ಸೇವನೆ ಕೂಡಾ ಅತಿಯಾಗಿ ತಿಂದರೆ ಇದರಿಂದ ಸಾಕಷ್ಟು ಅಡ್ಡಪರಿಣಾಮಗಳು ಸಹ ಇವೆ.

ಹಾಗಾದ್ರೆ ಪ್ರತೀ ದಿನ ಅಥವಾ ವಾರದಲ್ಲಿ ಮೂರು ದಿನಕ್ಕಿಂತ ಹೆಚ್ಚು ಬಾರಿ ಚಿಕನ್ ತಿನ್ನುವುದರಿಂದ ಆಗುವ ಅಡ್ಡಪರಿಣಾಮಗಳು ಏನೂ ಎಂದು ನೋಡುವುದಾದರೆ , ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಹೆಚ್ಚಳ ಮಾಡುತ್ತದೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ನ್‌ನಲ್ಲಿ ಪ್ರಕಟವಾದ ವಿವರಗಳ ಪ್ರಕಾರ, ಚಿಕನ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅತಿಯಾಗಿ ಚಿಕನ್ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತದೆ ಎಂದು ಈ ಒಂದು ಸಂಸ್ಥೆ ತನ್ನ ಸಂಶೋಧನೆಯಲ್ಲಿ ತಿಳಿಸಿದೆ. ಅದರಂತೆ ಬ್ಯಾಕ್ಟೀರಿಯಾ ಹೆಚ್ಚಳಕ್ಕೆ ಚಿಕನ್ ಕಾರಣವಾಗಿದೆ ಎಂದು ಹೇಳುತ್ತಾರೆ ವೈದ್ಯರು. ಕೋಳಿಯಲ್ಲಿ ಹೆಚ್ಚಿನ ಪ್ರಮಾಣದ ಬ್ಯಾಕ್ಟೀರಿಯಾಗಳಿದ್ದು, ಅದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ಕೋಳಿ ಎದೆಯಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತದೆ. 2014 ರಲ್ಲಿ, ವಿಜ್ಞಾನಿಗಳು ಯುನೈಟೆಡ್ ಸ್ಟೇಟ್ಸ್​ನಲ್ಲಿ 300 ಕ್ಕೂ ಹೆಚ್ಚು ಕೋಳಿ ಎದೆಗಳನ್ನು ಪರೀಕ್ಷಿಸಿದ್ದು, ಹೆಚ್ಚಿನ ಕೋಳಿಗಳಲ್ಲಿ ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ.

ಲಂಡನ್‌ನ ಲಿಂಡಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಸಸ್ಯಾಹಾರಿಗಳಿಗೆ ಹೋಲಿಸಿದರೆ, ಚಿಕನ್ ತಿನ್ನುವವರಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುತ್ತದೆ. ನಿಯಮಿತ ಮಟ್ಟಕ್ಕಿಂತ ಮೀರಿ ಕೋಳಿ ಸೇವಿಸುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇಷ್ಟಿದ್ದರೂ ಕಡಿಮೆ ಪ್ರಮಾಣದಲ್ಲಿ ಚಿಕನ್ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ ಹಾಗೆಯೇ ಹೆಚ್ಚು ಚಿಕನ್ ಸೇವಿಸುವುದು ಸಹ ಅಪಾಯಕಾರಿ. ಹಾಗಾಗಿ ನಿಯಮಿತ ಪ್ರಮಾಣದಲ್ಲಿ ಚಿಕನ್ ಸೇವಿಸುವುದು ಉತ್ತಮ. ಚಿಕನ್ ಇದು ಪುರುಷರ ಬಂಜೆತನಕ್ಕೂ ಸಹ ಕಾರಣವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಕೋಳಿಯಲ್ಲಿ ನಾಟಿ ಕೋಳಿ, ಫಾರಮ್​ ಕೋಳಿ ಮತ್ತು ಬಾಯ್ಲರ್​ ಕೋಳಿ ಎಂಬ ವಿಧಗಳಿವೆ. ಬಾಯ್ಲರ್​ ಕೋಳಿಯನ್ನು ಅತಿಯಾಗಿ ತಿನ್ನುವುದರಿಂದ ಪುರುಷರಲ್ಲಿ ಬಂಜೆತನ ಪ್ರಮಾಣ ಹೆಚ್ಚಾಗುತ್ತದೆ. ಅಂದರೆ ಈ ಕೋಳಿಯಲ್ಲಿ ಇರುವಂತಹ ರಾಸಾಯನಿಕ ಅಂಶಗಳು ಪುರುಷರ ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಪುರುಷರಲ್ಲಿ ಬಂಜೆತನ ಉಂಟಾಗುತ್ತದೆ. ಇನ್ನೂ ಚಿಕನ್‌ನಲ್ಲಿರುವ ಇ ಕೋಲಿ ಬ್ಯಾಕ್ಟೀರಿಯಾ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕನ್ ಸೊಸೈಟಿ ಫಾರ್ ಮೈಕ್ರೋಬಯಾಲಜಿ ಎಂಬ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ. ಸರಿಸುಮಾರು 2,500 ಕೋಳಿ ಮಾದರಿಗಳನ್ನು ಈ ಸಂಶೋಧನೆಗೆ ಬಳಸಿ ಪರೀಕ್ಷಿಸಲಾಯಿತು ಮತ್ತು ಅವುಗಳಲ್ಲಿ ಸುಮಾರು ಶೇಕಡಾ 72 ರಷ್ಟು ಇ ಕೋಲಿ ಇರುವುದು ಕಂಡುಬಂದಿದೆ.

ಹಾಗಾಗಿ ಪ್ರತೀ ನಿತ್ಯ ಅಥವಾ ವಾರದಲ್ಲಿ ಮೂರು ದಿನಕ್ಕಿಂತ ಹೆಚ್ಚು ಚಿಕನ್ ಸೇವನೆ ಮಾಡುವವರು ಈ ಎಲ್ಲಾ ರೀತಿಯ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರತೀ ದಿನ ಚಿಕನ್ ಸೇವನೆ ನಿಮಗೇ ಎಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಚಿಕನ್ ಸೇವನೆ ಮಾಡಿ.

Leave a Reply

Your email address will not be published. Required fields are marked *