ನಮಗೆ ಬುದ್ದಿವಂತ ಎಂದ ಕೂಡಲೆ ನೆನಪಾಗುವುದೆ ಚಾಣಕ್ಯ. ಚಾಣಕ್ಯನಂತಹ ಬುದ್ದಿವಂತನ ಉದಾಹರಣೆ ಮತ್ತೆಲ್ಲೂ ಸಿಗುವುದಿಲ್ಲವೆಂದೆ ಹೇಳಬಹುದು. ಪ್ರತಿಯೊಂದು ಕ್ಲಿಷ್ಟಕರವಾದ ಸಮಯದಲ್ಲೂ ತಾಳ್ಮೆಯಿಂದ, ಜಾಣತನದಿಂದ ಕೆಲಸ ಸಾಧಿಸಿದವನು ಚಾಣಕ್ಯ. ನಮ್ಮ ಭಾರತದ ಚರಿತ್ರೆಯಲ್ಲಿಯೆ ಚಾಣಕ್ಯನಿಗೆ ಪ್ರತ್ಯೇಕ ಸ್ಥಾನ ನೀಡಲಾಗಿದೆ. ಯಾರಾದರೂ ಕಷ್ಟಕರವಾದ ಸಮಸ್ಯೆಯನ್ನು ಬಗೆಹರಿಸಿದರೆ ಅವನಿಗೆ ಚಾಣಕ್ಯನ ರೀತಿಯಲ್ಲಿ ಯೋಚಿಸಿರುವೆ ಎನ್ನುತ್ತಾರೆ. ಕಷ್ಟಕರವಾದ ಸಮಸ್ಯೆಯನ್ನು ಬಗೆಹರಿಸುವುದರ ಬಗೆಗೆ ಚಾಣಕ್ಯ ಒಂದು ಕಥೆಯನ್ನು ಹೇಳಿದ್ದಾನೆ. ಈ ಕಥೆಯಲ್ಲಿ ಯಾವ ಕಷ್ಟಕರವಾದ ಸಂಗತಿಗಳನ್ನು ಹೇಗೆ ನಿಭಾಯಿಸಬೇಕೆಂಬ ಸಂದೇಶವಿದೆ.
ಒಂದು ಕಾಡಿನಲ್ಲಿ ತುಂಬು ಗರ್ಭಿಣಿಯಾದ ಜಿಂಕೆಯೊಂದು ಪ್ರಸವ ವೇದನೆಯಲ್ಲಿ ನರಳುತ್ತಾ ಭಾರವಾದ ಹೆಜ್ಜೆಗಳನ್ನು ಇಟ್ಟು ನಡೆಯುತ್ತಿತ್ತು. ಪ್ರಸವಕ್ಕೆ ಪ್ರಶಸ್ತವಾದ ಜಾಗವನ್ನು ಹುಡುಕುತ್ತಾ ಹೊರಟಿತ್ತು. ಅಷ್ಟರಲ್ಲಿ ಅಲ್ಲೆ ಇರುವ ನದಿಯ ದಡದಲ್ಲಿ ಒಂದು ದೊಡ್ಡ ಪೊದೆ ಕಂಡು ಬಂದಿತು. ಆ ಜಿಂಕೆ ಇದೆ ಪ್ರಶಸ್ತವಾದ ಸ್ಥಳವೆಂದು ಭಾವಿಸಿ ಅಲ್ಲೆ ಮರಿಗೆ ಜನ್ಮ ನೀಡಲು ನಿರ್ಧರಿಸಿತು. ನಿಟ್ಟುಸಿರು ಬಿಡುತ್ತಾ ಆಕಡೆ ಇಂದ ಈ ಕಡೆ ತಿರುಗಲು ಪ್ರಾರಂಭಿಸಿತ್ತು. ಅದಾಗಲೇ ಕಾರ್ಮೋಡ ಕವಿದು ಗುಡುಗು ಮಿಂಚು ಶುರುವಾಗಿದ್ದವು.. ಜಿಂಕೆಯಿಂದ ಸ್ವಲ್ಪ ದೂರದಲ್ಲೆ ಸಿಡಿಲಿನ ಹೊಡೆತಕ್ಕೆ ಬೆಂಕಿ ಹತ್ತಿಕೊಂಡಿತು. ಅಷ್ಟರಲ್ಲಿ ಜಿಂಕೆಯ ಗಮನಕ್ಕೆ ಬಲಗಡೆಯಿಂದ ಬರುತ್ತಿದ್ದ ಸಿಂಹ ಹಾಗೂ ಎಡಗಡೆಯಲ್ಲಿ ಒಬ್ಬ ಬೇಟೆಗಾರ ಗುರಿ ಹಿಡಿದು ನಿಂತಿರುವುದು ಕಂಡುಬಂದಿತ್ತು. ಮತ್ತೊಂದೆಡೆ ಉಕ್ಕುತ್ತಿದ್ದ ನದಿಯ ಪ್ರವಾಹ.
ಯಾವ ಕಡೆ ಹೋದರು ಜೀವಕ್ಕೆ ಅಪಾಯವೆ. ಸುತ್ತಲೂ ಇರುವ ಅಪಾಯದಿಮದ ಜಿಂಕೆ ಪಾರಾಗುವುದೇ? ತನ್ನ ಮರಿಗೆ ಜನ್ಮ ನೀಡುವುದೆ? ಜಿಂಕೆಯನ್ನು ಸಿಂಹ ತಿಂದುಬಿಡಬಹುದೆ? ಬೇಟೆಗಾರನ ಬಾಣಕ್ಕೆ ಜಿಂಕೆ ಬಲಿಯಾಗುವುದೆ? ಇಲ್ಲವೇ ಬೆಂಕಿಯ ಕೆನ್ನಾಲಿಗೆಗೆ ಜಿಂಕೆ ಹಾಗೂ ಜಿಂಕೆ ಮರಿ ಸುಟ್ಟುಹೋಗುವರೇ? ಎಲ್ಲವೂ ಪ್ರಶ್ನೆಗಳೆ… ಆದರೆ ಜಿಂಕೆ ಸನಿಹವಿದ್ದ ಸಿಂಹ, ಬೇಟೆಗಾರ, ಬೆಂಕಿ, ನದಿ ಇವು ಯಾವುದರ ಮೇಲು ಗಮನ ಕೊಡದೆ ತನ್ನ ಮರಿಗೆ ಜನ್ಮ ನೀಡುವುದರ ಮೇಲೆ ಮಾತ್ರ ಗಮನ ಹರಿಸಿತ್ತು. ಆಗ ಅಲ್ಲಿ ನಡೆದ ಘಟನೆಗಳ ಪರಿಣಾಮ ಹೇಗಿತ್ತು ಗೊತ್ತಾ. ಸಿಡಿಲಿನ ಬೆಳಕಿನ ತೀವ್ರತೆ ಸಹಿಸದೆ ಕಣ್ಣು ಮುಚ್ಚಿದ ಬೇಟೆಗಾರನ ಬಿಲ್ಲಿನಿಂದ ಹೊರಟ ಬಾಣ ಸಿಂಹದ ಜೀವವನ್ನು ಹರಣ ಮಾಡಿತ್ತು.
ಜಿಂಕೆಗೆಂದು ಬಂದ ಮರಣ ಸಿಂಹದ ಪಾಲಾಗಿತ್ತು. ತೀರ ಹತ್ತಿರಕ್ಕೆ ಬರುತ್ತಿದ್ದ ಬೆಂಕಿ ಮಳೆಯ ನೀರಿನಿಂದ ಆರಿತ್ತು. ಈ ಕಡೆ ಜಿಂಕೆ ತನ್ನ ಮರಿಗೆ ಜನ್ಮ ನೀಡಿತ್ತು ಮರಿ ಕೂಡ ಆರೋಗ್ಯದಿಂದ ಕೂಡಿತ್ತು. ಒಂದು ವೇಳೆ ಮಗುವಿಗೆ ಜನ್ಮ ನೀಡಲೇ ಬೇಕೆಂಬ ದೃಢ ಸಂಕಲ್ಪ ಆ ಜಿಂಕೆ ಮಾಡಿಲ್ಲದೆ ಹೋಗಿದ್ದರೆ? ಪ್ರಾಣ ಭಯಕ್ಕೆ ಹೆದರಿ ಓಡಿಹೋಗಲು ನೋಡಿ ತಪ್ಪು ಹೆಜ್ಜೆ ಇಟ್ಟಿದ್ದರೆ? ಏನಾಗುತ್ತಿತ್ತೆನೋ.. ನಮ್ಮ ಜೀವನವೂ ಹಾಗೆಯೆ. ಸಮಸ್ಯೆಗಳು ನಮ್ಮ ಸುತ್ತಲೂ ಇದ್ದೆ ಇರುತ್ತವೆ. ಋಣಾತ್ಮಕವಾಗಿಯೆ ಯೋಚಿಸುವುದು ಹೆಚ್ಚು. ನಮ್ಮ ಕೆಲಸ ಕಾರ್ಯವನ್ನು ಪಕ್ಕಕ್ಕೆ ಇಟ್ಟು ಆಗುವ ಹೋಗುವ ಬಗೆಗೆ ಯೋಚಿಸುತ್ತಿರುತ್ತೆವೆ. ನಮ್ಮ ಕರ್ತವ್ಯವನ್ನು ನಾವು ನಿಭಾಯಿಸಬೇಕು ಉಳಿದದ್ದನ್ನು ಭಗವಂತನ ಮೇಲೆ ಬಿಡಬೇಕು ಎಂಬುದು ಈ ಕಥೆಯ ನೀತಿ. ನಿರುತ್ಸಾಹದಿಂದ ನಮ್ಮ ಕಾರ್ಯ ನಿಲ್ಲಿಸದೆ ಫಲವನ್ನು ದೇವರಿಗೆ ಬಿಟ್ಟು ನಮ್ಮ ಕೈಲಿ ಇದ್ದುದ್ದನ್ನು ಮುಂದುವರೆಸಿಕೊಂಡು ಹೋಗಬೇಕು. ಇದೆ ಈ ಕಥೆಯ ಚಾಣಕ್ಯ ನೀತಿಯು ಇದೆ ಆಗಿದೆ. ಇದೇ ಸಂದೇಶವನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ.