ನಾವೆಲ್ಲರೂ ಮಾತನಾಡುತ್ತೇವೆ ಆದರೆ ಮಾತಿನ ಮಹತ್ವ ಗೊತ್ತಿರುವುದಿಲ್ಲ. ಎಷ್ಟು ಮತ್ತು ಹೇಗೆ ಮಾತನಾಡಬೇಕು ಎಂಬುದನ್ನು ಭಗವಾನ್ ಬುದ್ಧನ ನೀತಿ ಕಥೆಯ ಮೂಲಕ ತಿಳಿಯೋಣ
ಒಮ್ಮೆ ಗೌತಮ ಬುದ್ಧನ ಬಳಿ ಅವರ ಶಿಷ್ಯ ಕಡಿಮೆ ಮಾತನಾಡಿದರೆ ಒಳ್ಳೆಯದೆ ಹೆಚ್ಚು ಮಾತನಾಡಿದರೆ ಒಳ್ಳೆಯದೆ ಎಂದು ಕೇಳುತ್ತಾನೆ. ಅದಕ್ಕೆ ಬುದ್ಧನು ಕಪ್ಪೆ ದಿನವೆಲ್ಲಾ ಅರಚುತ್ತದೆ ಯಾರೂ ಅದರ ಕೂಗಿಗೆ ಗಮನ ಕೊಡುವುದಿಲ್ಲ ಆದರೆ ಕೋಳಿ ಕೂಗಿದರೆ ಪ್ರಾಧಾನ್ಯತೆ ಕೊಡುತ್ತಾರೆ ಮಾತನಾಡಬೇಕಾದಾಗ ಮಾತನಾಡದೆ ಇರುವುದು ಎಷ್ಟು ತಪ್ಪೊ ತಮ್ಮದಲ್ಲದ ಸಮಯದಲ್ಲಿ ಮಾತನಾಡುವುದು ಅಷ್ಟೆ ತಪ್ಪು ಕೆಲವರು ತಾವೆ ಬುದ್ಧಿವಂತರಂತೆ ಮಾತನಾಡುತ್ತಾರೆ. ಕೇಳಿದಾಗ ಸಲಹೆ ಕೊಡುವವನು ಜ್ಞಾನಿ. ಕೇಳದೆ ಇದ್ದರೂ ಸಲಹೆ ಕೊಡುವವನು ಮೂರ್ಖ ಎಂದು ಬುದ್ಧ ಉತ್ತರಿಸುತ್ತಾನೆ. ಅದೇ ಸಮಯದಲ್ಲಿ ಅಲ್ಲಿಗೆ ಒಬ್ಬ ಮಹಿಳೆ ಬಂದು ಸ್ವಾಮಿ ನನ್ನ ಮಗಳು ಹೆಚ್ಚು ಮಾತನಾಡಿ ದಿನ ಜಗಳವನ್ನು ತರುತ್ತಾಳೆ ಇದರಿಂದ ಬೇಸರವಾಗಿದೆ ನೀವೆ ಅವಳನ್ನು ಬದಲಾಯಿಸಿ ಎಂದು ವಿನಯದಿಂದ ಕೇಳುತ್ತಾಳೆ. ಅದಕ್ಕೆ ಬುದ್ಧನು ನಾಳೆ ನನ್ನ ಬಳಿ ನಿನ್ನ ಮಗಳನ್ನು ಕರೆದುಕೊಂಡು ಬಾ ಎನ್ನುತ್ತಾರೆ. ಅದರಂತೆ ಮರುದಿನ ಮಹಿಳೆ ತನ್ನ ಮಗಳೊಂದಿಗೆ ಬುದ್ದನ ಬಳಿ ಹೋಗುತ್ತಾಳೆ.
ಆಗ ಬುದ್ಧರು ಮಹಿಳೆಯ ಮಗಳ ಹತ್ತಿರ ನಿನ್ನ ಹೇಸರೇನು ಕೇಳುತ್ತಾರೆ. ಅವಳು ನಗುತ್ತಾ ನನ್ನ ಹೆಸರು ಪದ್ಮಮುಖಿ ಎನ್ನುತ್ತಾಳೆ. ಬುದ್ಧನು ನಿನ್ನ ಧ್ವನಿ ಚೆನ್ನಾಗಿದೆ ನೀನು ಚೆನ್ನಾಗಿ ಮಾತನಾಡುತ್ತೀಯಾ ಎಂದು ಕೇಳಿದ್ದೇನೆ ಎನ್ನುತ್ತಾರೆ ಆಗ ಪದ್ಮಮುಖಿ ಸಂತೋಷಗೊಂಡು ಈ ಊರಿನಲ್ಲಿ ನನಗೆ ಬಹಳ ಮಿತ್ರರಿದ್ದಾರೆ ಅವರು ಹೀಗೆ ಹೇಳುತ್ತಾರೆ ಆದರೆ ಅಮ್ಮ ನನಗೆ ನೀನು ಪ್ರತಿದಿನ ಜಗಳ ತರುತ್ತೀಯಾ ಎಂದು ಬೈಯುತ್ತಾರೆ ಎಂದು ಭಾದೆಯಲ್ಲಿ ಹೇಳುತ್ತಾಳೆ.
ಆಗ ಬುದ್ಧರು ಹೌದೆ ಹಾಗಾದರೆ ನಿನಗೆ ಒಂದು ಕೆಲಸ ಹೇಳುತ್ತೇನೆ ಮಾಡುತ್ತೀಯಾ ಕೇಳುತ್ತಾರೆ. ಅದಕ್ಕವಳು ಸರಿ ಮಾಡುತ್ತೇನೆ ಎನ್ನುತ್ತಾಳೆ. ಬುದ್ಧ ಅಲ್ಲೊಂದು ಬುಟ್ಟಿಯಿದೆ ಅದರಲ್ಲಿ ಕೋಳಿಯ ಗರಿಗಳಿವೆ ನೀನು ಅವುಗಳನ್ನು ತೆಗೆದುಕೊಂಡು ಹೋಗಿ ಪ್ರತಿಯೊಂದು ಮನೆಯ ಮುಂದೆ ಹಾಕಿ ನಾಳೆ ಬಾ ಎನ್ನುತ್ತಾರೆ. ಅದರಂತೆ ಪದ್ಮ ಬುಟ್ಟಿಯನ್ನು ತೆಗೆದುಕೊಂಡು ಊರಿನ ಕಡೆ ಹೋಗಿ ಕೆಲವರ ಬಳಿ ಜಗಳವಾಡುತ್ತಾ ಕೋಳಿ ಗರಿಗಳನ್ನು ಖಾಲಿ ಮಾಡಿ ಮರುದಿನ ತನ್ನ ತಾಯಿಯೊಂದಿಗೆ ಬುದ್ಧರ ಬಳಿ ಹೋಗುತ್ತಾಳೆ ಬುದ್ಧರ ಬಳಿ ನೀವು ಹೇಳಿದಂತೆ ಮಾಡಿದ್ದೇನೆ ಎನ್ನುತ್ತಾಳೆ ಅದಕ್ಕೆ ಬುದ್ಧರು ಹೌದೆ ಸರಿ ನಿನ್ನೆ ಬಿಸಾಕಿದ ಗರಿಗಳನ್ನು ವಾಪಸ್ ತೆಗೆದುಕೊಂಡು ಬರುವೆಯಾ ಎನ್ನುತ್ತಾರೆ. ಪದ್ಮಮುಖಿ ಸರಿ ಎಂದು ಊರಿನ ಕಡೆ ಹೋಗುತ್ತಾಳೆ ಆದರೆ ತಾನು ಹಾಕಿದ ಗರಿಗಳಲ್ಲಿ ಸ್ವಲ್ಪ ಮಾತ್ರ ಸಿಗುತ್ತದೆ ಬೇಸರದಿಂದ ಬುದ್ಧರ ಬಳಿ ನಡೆದದ್ದನ್ನು ಹೇಳುತ್ತಾಳೆ.
ಆಗ ಬುದ್ಧರು ನಾವು ಮಾತನಾಡುವ ಮಾತು ಕೋಳಿಯ ಗರಿಗಳಿದ್ದಂತೆ ನಮ್ಮ ಮಾತು ಒಂದು ಬಾರಿ ನಾಲಿಗೆಯಿಂದ ಜಾರಿದರೆ ಅದು ಮನುಷ್ಯನ ಮನಸ್ಸನ್ನು ಸೀಳುತ್ತದೆ. ಬಾಣದಿಂದಾಗುವ ಗಾಯಕ್ಕಿಂತ ಮನುಷ್ಯನ ಮಾತಿನಿಂದಾಗುವ ಗಾಯ ದೊಡ್ಡದು ಅದರ ನೋವು ದೊಡ್ಡದು ಅತಿಯಾದ ಮಾತು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸುತ್ತಾರೆ. ಆಗ ಪದ್ಮಮುಖಿಗೆ ತನ್ನ ತಪ್ಪಿನ ಅರಿವಾಗಿ ಇನ್ನುಮುಂದೆ ಅನಾವಶ್ಯಕ ಮಾತನಾಡಬಾರದು ಎಂದು ನಿರ್ಧರಿಸುತ್ತಾಳೆ.