ಪವನ ಪುತ್ರ ಹನುಮಾನ್ ಆಂಜನೇಯ ಜನಿಸಿದ ಸ್ಥಳವೇ “ಅಂಜನಾದ್ರಿ”. ಅಂಜನಾದ್ರಿ ಕರ್ಣಾಟಕ ರಾಜ್ಯದ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಪಟ್ಟಣದಲ್ಲಿದೆ. ಈ ಹಿಂದೆ ಆನೆಗುಂದಿ ಪಟ್ಟಣವನ್ನು ಕಿಷ್ಕಿಂದೆ ಎಂದೂ ಕರೆಯಲಾಗುತ್ತಿತ್ತು. ಈ ಅದ್ಭುತವಾದ ಆನೆಗುಂದಿ ಪಟ್ಟಣ ತುಂಗಭದ್ರಾ ನದಿಯ ದಂಡೆಯಮೇಲೆ ಇದೆ. ಹಿಂದೆ ರಾಮಾಯಣದ ಕಾಲದಲ್ಲಿ ಕಪಿರಾಜನಾದಂತಹ ವಾಲಿಯ ರಾಜಧಾನಿ ಆಗಿತ್ತು ಈ ಆನೆಗುಂದಿ. ಅದಕ್ಕೆ ಇದನ್ನು ಕಿಷ್ಕಿಂದೆ ಎಂದೂ ಕರೆಯಲಾಗುತ್ತಿತ್ತು.
ಈ ಆನೆಗುಂದಿ ಪಟ್ಟಣದಲ್ಲಿ ಇರುವುದೇ ಅದ್ಭುತವಾದ ಅಂಜನಾದ್ರಿ ಬೆಟ್ಟ. ಈ ಬೆಟ್ಟದ ತುದಿಯನ್ನು ತಲುಪಲು ನೀವು ಸುಮಾರು 575 ಮೆಟ್ಟಿಲುಗಳನ್ನು ಹತ್ತಬೇಕು. ಈ ಬೆಟ್ಟದ ಮೇಲೆ ಅದ್ಭುತವಾದ ಆಂಜನೇಯನ ದೇವಸ್ಥಾನವಿದೆ. ಕಲ್ಲು ಬಂಡೆಗಳ ನಡುವೇ ಈ ದೇವಸ್ಥಾನ ಇದ್ದು ದೇವಸ್ಥಾನದ ಒಳಗೆ ಆಂಜನೇಯನ ಕಲ್ಲಿನ ವಿಗ್ರಹವನ್ನು ಅಲ್ಲಿ ಕಾಣಬಹುದು. ಹಾಗೆ ಅಲ್ಲಿನ ಕಲ್ಲುಗಳ ಮೇಲೆ ಶ್ರೀರಾಮ್ ಶ್ರೀರಾಮ್ ಎಂದು ಬರೆದಿರುವುದನ್ನು ಕಾಣಬಹುದು. ಈ ಬೆಟ್ಟವನ್ನು ಹತ್ತುವ ಭಕ್ತಾದಿಗಳಿಗೆ ಮಧ್ಯಾನ್ಹ ಭೋಜನದ ವ್ಯವಸ್ಥೆ ಕೂಡಾ ಇದೆ.
ಈ ಪ್ರದೇಶವು ಹಂಪಿಯ ಒಂದು ಭಾಗವೂ ಆಗಿದ್ದರಿಂದ ಅಂಜನಾದ್ರಿ ಬೆಟ್ಟದಿಂದ ಹಂಪಿಯ ಹಲವಾರು ಸ್ಮಾರಕಗಳನ್ನು ಸಹ ಕಾಣಬಹುದು. ಅದರಲ್ಲೂ ಇಲ್ಲಿಂದ ಕಾಣುವಂತಹ ಸೂರ್ಯಾಸ್ತ ಕಣ್ಣಿಗೆ ಹೊಸ ಲೋಕವನ್ನೇ ತೋರಿಸುತ್ತದೆ.
ಅಂಜನಾದ್ರಿ ತಾಲೂಕು ನಗರ ಗಂಗಾವತಿಯಿಂದ ಸುಮಾರು ೧೨ km ದೂರದಲ್ಲಿ ಇದ್ದರೆ, ಜಿಲ್ಲಾ ಕೇಂದ್ರವಾದ ಕೊಪ್ಪಳದಿಂದ ೪೪ km ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡದಿಂದ ೧೮೨ km ದೂರದಲ್ಲಿ ಇದ್ದರೆ, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು ೩೬೦ km ದೂರದಲ್ಲಿದೆ. ಅಂಜನಾದ್ರಿಗೆ ರೈಲಿನಲ್ಲಿ ಹೋಗಬೇಕು ಅಂದರೆ ಹೊಸಪೇಟೆ ರೈಲ್ವೆ ಸ್ಟೇಶನ್ ಹತ್ತಿರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿಯ ವಿಮಾನ ನಿಲ್ದಾಣ ಆಗಿದೆ. ಅಂಜನಾದ್ರಿಗೆ ಭೇಟಿ ನೀಡಲು ಉತ್ತಮ ಸಮಯ ಎಂದರೆ, ಆಕ್ಟೊಬರ್ ನಿಂದ ಮಾರ್ಚ್ ತಿಂಗಳು.
ರಾಮಾಯಣದಲ್ಲಿ ರಾಮ, ಸೀತೆ ಮತ್ತು ಲಕ್ಷಣರ ನಂತರ ಅತ್ಯಂತ ಜನಪ್ರಿಯ ಆದವನೆ ರಾಮನ ಭಂಟ ಹನುಮಂತ. ಪುರಾಣಗಳ ಪ್ರಕಾರ ಹಂಪಿಯ ಬಳಿ ತುಂಗಭದ್ರಾ ನದಿಯ ತಟದ ಬೆಟ್ಟಗಳ ತಪ್ಪಲಿನಲ್ಲಿಯೇ ವಾಸವಾಗಿದ್ದ ಅಂಜನಾ ದೇವಿ ಮತ್ತು ವಾನರ ನಾಯಕ ಕೇಸರಿ ಅವರ ಮಗನೇ ಹನುಮಂತ. ಅಂಜನಾ ದೇವಿ ವಾಸವಾಗಿದ್ದ ಕಾರಣಕ್ಕಾಗಿಯೇ ಈ ಪರ್ವತವನ್ನು ಅಂಜನಾದ್ರಿ ಬೆಟ್ಟ ಎಂದು ಕರೆಯುತ್ತಾರೆ. ಆಂಜನೇಯನ ಜನನದ ಕುರಿತು ಹಲವಾರು ಕಥೆಗಳಿವೆ. ಕಪಿ ಸೇನೆಯ ನಾಯಕ ಕೇಸರಿ ಒಮ್ಮೆ ಅಂಜನಾ ದೇವಿಯನ್ನು ಆ ಕಾಡಿನಲ್ಲಿ ನೋಡಿ ಪ್ರೇಮಾಂಕಿತನಾಗಿ, ಅವರಿಬ್ಬರ ಪ್ರೇಮದ ಫಲವಾಗಿಯೇ ಆಂಜನೇಯನ ಜನನ ಆಯಿತು ಎಂದು ಹೇಳುತ್ತಾರೆ. ಮತ್ತೊಂದು ಕಥೆಯ ಪ್ರಕಾರ, ವಾಯು ದೇವನು ಅಂಜನಿಯ ಕಿವಿಯ ಮೂಲಕ ಆಕೆಯ ಗರ್ಭ ಸೇರಿದ್ದರಿಂದ ಆಕೆ ಗರ್ಭವತಿ ಆದಳು ಹಾಗೂ ಆಂಜನೇಯನ ಜನನಕ್ಕೆ ಕಾರಣ ಆದಳು ಎಂದೂ ಇನ್ನೊಂದು ಪುರಾಣ ಹೇಳುತ್ತದೆ. ಅದಕ್ಕೆ ಹನುಮಂತನನ್ನು ವಾಯು ಪುತ್ರ ಎಂದೂ ಕೂಡ ಕರೆಯುತ್ತಾರೆ.
ಅಂಜನಾದ್ರಿ ಬೆಟ್ಟ ಹತ್ತುವಾಗ ಹಲವಾರು ಕೋತಿಗಳು ಎದುರಾಗುತ್ತವೆ. ಹನುಮಾನ್ ಭಕ್ತರೆಲ್ಲರೂ ಒಮ್ಮೆ ಈ ತಾಣಕ್ಕೆ ಭೇಟಿ ನೀಡಲೇಬೇಕು. ಈ ಬೆಟ್ಟದ ತಪ್ಪಲಿನಲ್ಲಿ ಹಲವಾರು ವಿಸ್ಮಯಗಳು ಇವೆ. ಈ ಬೆಟ್ಟದಲ್ಲಿ ಹಲವಾರು ಸನ್ಯಾಸಿಗಳು ಇಲ್ಲಿ ಮನೆ ಮಾಡಿಕೊಂಡು ಕೂಡ ಇದ್ದಾರೆ. ಹನುಮಾನ್ ದೇವಾಲಯ ಸಂಪೂರ್ಣ ಬಿಳಿಯ ಬಣ್ಣದಲ್ಲಿ ಪಿರಮಿಡ್ ರಚನೆಯೊಂದಿಗೆ ಮೇಲ್ಛಾವಣಿಯ ಮೇಲ್ಭಾಗದಲ್ಲಿ ಸಣ್ಣ ಕೆಂಪು ಗುಮ್ಮಟವನ್ನೂ ಹೊಂದಿದೆ. ಪ್ರವಾಸಿಗರು ದೇವಾಲಯದ ಮೇಲ್ಭಾಗದಲ್ಲಿ ಹನುಮಂತನ ದೇವಾಲಯ ಹೊರತಾಗಿ ಈ ಬೆಟ್ಟದಲ್ಲಿ ಭಗವಾನ್ ರಾಮ, ಸೀತೆ ಹಾಗೂ ಇನ್ನಿತರ ದೇವರುಗಳನ್ನು ಸಹ ದರ್ಶನ ಮಾಡಬಹುದು.
ಅಂಜನಾದ್ರಿ ಪರ್ವತದ ಮೇಲೆ ಇರುವ ಅಂಜನಾದ್ರಿ ಬೆಟ್ಟ ನಿಜಕ್ಕೂ ನಯನ ಮನೋಹರ ಆಗಿದೆ. ಈ ಬೆಟ್ಟಗಳ ಶ್ರೇಣಿಯನ್ನು ನೋಡುತ್ತಾ ಹೋದಂತೆ ನಮಗೆ ಕಾಣ ಸಿಗುವುದು ಹೇಮಕೂಟ ಪರ್ವತ, ಮಹಾಕುಟ ಪರ್ವತ ಮತ್ತು ಋಷ್ಯ ಮುಖ ಪರ್ವತಗಳು. ಹನುಮ ಜಯಂತಿಯಂದು ಈ ಬೆಟ್ಟಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ಇಲ್ಲಿ ಬಹಳ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ ಈ ಬೆಟ್ಟ ಹತ್ತುವವರಿಗೆ ನಿಜಕ್ಕೂ ಗಾಬರಿ ಆಗುವುದು ಸಹಜ. ಆದರೆ ಮೆಟ್ಟಿಲು ಹತ್ತಿ ಬೆಟ್ಟ ಏರಿದ ನಂತರ ನಿಮಗೆ ಸುತ್ತಲೂ ಹಚ್ಚ ಹಸಿರಿನ ಸೌಂದರ್ಯ ನಿಮ್ಮ ದಣಿವನ್ನು ನಿವಾರಣೆ ಮಾಡುತ್ತದೆ. ಅಂಜನಾದ್ರಿ ಬೆಟ್ಟವು ಹಂಪಿಯಿಂದ ಸುಮಾರು ೨೩ km ದೂರದಲ್ಲಿ ಇದ್ದರೂ ಸಹ ಅಂಜನಾದ್ರಿ ಬೆಟ್ಟದ ಮೇಲೆ ನಿಂತು ನೋಡಿದರೆ ಹಂಪಿಯಲ್ಲಿ ಇರುವ ದೇವಸ್ಥಾನಗಳು ಎಲ್ಲವೂ ಕಾಣುತ್ತವೆ. ಈ ಬೆಟ್ಟದ ಮೇಲೆ ಸಾಕಷ್ಟು ಕೋತಿಗಳು ವಾಸಿಸುತ್ತವೆ ಹಾಗೂ ಅವು ದೇವಾಲಯದ ಸುತ್ತ ಮುತ್ತಲೂ ನೆಲೆಸಿವೆ. ಪ್ರವಾಸಿಗರು ಮತ್ತು ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ಕೋತಿಗಳಿಗೆ ಕಡಲೆ ಮತ್ತು ಇತರ ಆಹಾರಗಳನ್ನು ನೀಡುತ್ತಾರೆ. ಸೂರ್ಯಾಸ್ತ ವೀಕ್ಷಣೆಗಾಗಿ ಪಾಶ್ಚಿಮಾತ್ಯ ಪ್ರವಾಸಿಗಳಲ್ಲಿ ಅಂಜನಾದ್ರಿ ಪ್ರಸಿದ್ಧಿ ಆಗಿದೆ. ಒಂದುವೇಳೆ ನೀವು ಹಂಪಿಗೆ ಹೋದರೆ ಅಂಜನಾದ್ರಿ ಬೆಟ್ಟವನ್ನು ಸಹ ತಪ್ಪದೇ ನೋಡಿ.