ಖ್ಯಾತ ನಟ ಸರವಣನ್ ಶಿವಕುಮಾರ್ ಅಂದರೆ ಖಂಡಿತವಾಗಿಯೂ ಯಾರಿಗೂ ಗೊತ್ತಿಲ್ಲ. ಆದ್ರೆ ತಮಿಳು ನಟ ಸೂರ್ಯ ಅಂದರೆ ಕೇವಲ ಕಾಲಿವುಡ್ ಮಾತ್ರವಲ್ಲ, ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ಈ ಹೆಸರು ಚಿರಪರಿಚಿತ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಸೂರ್ಯ. ಹತ್ತಿ ಬಂದ ಏಣಿಯನ್ನು ಮರೆಯಬಾರದು ಎಂಬ ಮಾತಿದೆ. ಎಷ್ಟೋ ಜನರು ಊಟಕ್ಕೂ ಕಷ್ಟಪಡುವ ಪರಿಸ್ಥಿತಿಯಿಂದ 5 ಸ್ಟಾರ್ ಹೋಟೆಲ್ನಲ್ಲಿ ಊಟ ಮಾಡುವಂತ ಹಂತಕ್ಕೆ ಬಂದಿರುತ್ತಾರೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ ಎಂಬ ಮಾತಿನಂತೆ ಎಷ್ಟೋ ಮಂದಿ ತಾವು ಬೆಳೆದು ಬಂದ ಹಾದಿಯನ್ನು ಮರೆಯುತ್ತಾರೆ. ಕಷ್ಟಪಟ್ಟು ಮೇಲೆ ಬಂದವರು ಎಂದಿಗೂ ಹಳೆಯದನ್ನು ಮರೆಯುವುದಿಲ್ಲ. ಆ ಗುಂಪಿಗೆ ಸೇರಿದವರು ನಟ ಸೂರ್ಯ. ಶರವಣನ್ ಅಲಿಯಾಸ್ ಸೂರ್ಯ ತಮಿಳು ನಟ ಶಿವಕುಮಾರ್ ಪುತ್ರ. ಸೂರ್ಯ ಅವರ ಸರಳತೆಯ ಬಗ್ಗೆ ನಾವು ಈ ಲೇಖನದ ಮೂಲಕ ಮತ್ತಷ್ಟು ತಿಳಿದುಕೊಳ್ಳೋಣ.
ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಸೂರ್ಯ, ಸಿನಿಮಾ ಹೊರತಾಗಿ ಸರಳತೆ ಮತ್ತು ಸೌಮ್ಯ ಸ್ವಭಾವದ ಮೂಲಕ, ಚಿತ್ರಪ್ರಿಯರ ಹೃದಯಗೆದ್ದಿದ್ದಾರೆ. ತಮಿಳಿನ ಖ್ಯಾತ ನಟ ಶಿವಕುಮರ್ ಪುತ್ರ ಸೂರ್ಯ. 1997ರಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಸೂರ್ಯ ಇಂದು ಸ್ಟಾರ್ ನಟನಾಗಿ ಖ್ಯಾತಿಗಳಿಸಿದ್ದಾರೆ. ಕಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಬೆಳೆದುನಿಂತಿರುವ ಸೂರ್ಯ ಮೊದಲು ಬಣ್ಣ ಹಚ್ಚಿದ್ದು, 22ನೇ ವಯಸ್ಸಿನಲ್ಲಿ. ನೆರಕ್ಕು ನೆರ್ ಸಿನಿಮಾ ಮೂಲಕ 1997ರಲ್ಲಿ ಸಿನಿಮಾರಂಗದ ಪಯಣ ಪ್ರಾರಂಭಿಸುತ್ತಾರೆ. ಮಣಿ ರತ್ನಂ ನಿರ್ಮಾಣದ ಸಿನಿಮಾ. ಮಣಿರತ್ನಂ, ಸರವಣನ್ ಶಿವಕುಮಾರ್ ಗೆ ಸೂರ್ಯ ಎಂದು ಹೆಸರಿಡುತ್ತಾರೆ. ಕೊನೆಗೆ ಸೂರ್ಯ ಹೆಸರಿನ ಮೂಲಕವೇ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿಸುತ್ತಾರೆ.
ಹಿರಿಯ ನಟ ಶಿವಕುಮಾರ್ ಕೂಡಾ ಬಹಳ ಶ್ರಮ ವಹಿಸಿ ಮೇಲೆ ಬಂದವರು. ತಮ್ಮ ಪುತ್ರನಿಗೂ ಸರಳತೆಯನ್ನು ಕಲಿಸಿದರು. ಸೂರ್ಯ ಕರಿಯರ್ ಆರಂಭಿಸಿದ್ದು ಗಾರ್ಮೆಂಟ್ ಎಕ್ಸ್ಪೋರ್ಟ್ ಫ್ಯಾಕ್ಟರಿಯಲ್ಲಿ. ಅವರು ಎಷ್ಟು ಸರಳ ಎಂದರೆ ತಾನು ಸಿನಿಮಾ ನಟನ ಪುತ್ರ ಎಂಬುದನ್ನು ತಮ್ಮ ಬಾಸ್ಗೆ ಹಾಗೂ ಸಹೋದ್ಯೋಗಿಗಳಿಗೆ ರಿವೀಲ್ ಮಾಡಿರಲಿಲ್ಲವಂತೆ. ವಿಚಾರ ತಿಳಿದಾಗ ಎಲ್ಲರಿಗೂ ಶಾಕ್ ಆಗಿದೆ. ಅವರ ಸರಳತೆಗೆ ಎಲ್ಲರೂ ಫಿದಾ ಆಗಿದ್ದಾರೆ. ಸಿನಿಮಾಗಳಿಂದ ಮಾತ್ರವಲ್ಲ ತೆರೆ ಹಿಂದೆ ಕೂಡಾ ಸೂರ್ಯ ಹೀರೋನೇ. ತಮ್ಮ ಸರಳತೆ ಹಾಗೂ ಸಮಾಜ ಸೇವೆ ಗುಣದಿಂದಲೇ ಸೂರ್ಯ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಾನೊಬ್ಬ ಸ್ಟಾರ್ ಆದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬರೆಯುವ ಗುಣದಿಂದಲೇ ಸೂರ್ಯ ಎಲ್ಲರಿಗೂ ಬಹಳ ಇಷ್ಟವಾಗುತ್ತಾರೆ. ತಮ್ಮನ್ನು ಸ್ಟಾರ್ ಪಟ್ಟಕ್ಕೆ ಏರಿಸಿದ ಅಭಿಮಾನಿಗಳನ್ನು ಸೂರ್ಯ ಸ್ನೇಹಿತರಂತೆ ಕಾಣುತ್ತಾರೆ.
ಇತ್ತೀಚೆಗೆ ನಡೆದ ಅಭಿಮಾನಿಯೊಬ್ಬರ ಮದುವೆಗೆ ಹಾಜರಾಗುವ ಮೂಲಕ ಅವರು ಎಂತ ಸ್ನೇಹಜೀವಿ ಎಂಬುದನ್ನು ಸೂರ್ಯ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸೂರ್ಯ ಅವರ ಅಭಿಮಾನಿ ಹರಿ ಎಂಬುವವರು ತಮ್ಮ ಮದುವೆಗೆ ಮೆಚ್ಚಿನ ನಟನನ್ನು ಆಹ್ವಾನಿಸಿದ್ದಾರೆ. ನೀವೇ ಮುಂದೆ ನಿಂತು ಮದುವೆ ನಡೆಸಿಕೊಡಬೇಕು ಎಂದು ಮನವಿ ಕೂಡಾ ಮಾಡಿದ್ದಾರೆ. ಅಭಿಮಾನಿ ಆಹ್ವಾನವನ್ನು ಮನ್ನಿಸಿದ ಸೂರ್ಯ ಹರಿ ಹಾಗೂ ಪ್ರಿಯಾ ಮದುವೆಗೆ ಆಗಮಿಸಿ ವಧು-ವರರನ್ನು ಹರಸಿದ್ದಾರೆ. ಸ್ನೇಹಿತನಂತೆ ಅವರ ಕುಟುಂಬದವರ ನಡುವೆ ನಿಂತು ಎಲ್ಲರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಸ್ನೇಹಿತನಂತೆ ವಧು-ವರರಿಬ್ಬರನ್ನೂ ಪ್ರೀತಿಯಿಂದ ಮಾತನಾಡಿಸಿ ಎಲ್ಲರ ಹೃದಯ ಕದ್ದಿದ್ದಾರೆ.
ನನ್ನ ಆರಾಧ್ಯ ದೈವ ಸೂರ್ಯ ನನ್ನ ಮದುವೆಗೆ ಬಂದು ನನಗೆ ಆಶೀರ್ವಾದ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಎಷ್ಟೇ ಬ್ಯುಸಿ ಇದ್ದರೂ ನನಗಾಗಿ ಬಿಡುವು ಮಾಡಿಕೊಂಡು ನನ್ನ ಮದುವೆಗೆ ಬಂದು ಹೋದರು. ನನಗೆ ಇದಕ್ಕಿಂತ ದೊಡ್ಡ ಖುಷಿಯ ವಿಚಾರ ಬೇರೊಂದಿಲ್ಲ. ಸೂರ್ಯ ನಮ್ಮೆಲ್ಲರ ಹೀರೋ. ಅವರು ನನ್ನ ಮದುವೆಗೆ ಬಂದಿದ್ದೇ ನನಗೆ ಎಂದೂ ಮರೆಯಲಾರದ, ಅಮೂಲ್ಯವಾದ ಗಿಫ್ಟ್ ಎಂದು ಅಭಿಮಾನಿ ಹರಿ ಸಂತೋಷ ವ್ಯಕ್ತಪಡಿಸಿದ್ದಾರೆ. ಸೂರ್ಯ ಅಭಿಮಾನಿ ಮದುವೆಯಲ್ಲಿ ಹಾಜರಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸೂರ್ಯ ಎಷ್ಟು ಸಿಂಪಲ್ ಅಲ್ವಾ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.
ತಮ್ಮ ಸರಳತೆ ಮೂಲಕ ಮತ್ತೆ ಅನೇಕ ಹೃದಯಗಳನ್ನು ಕದ್ದಿದ್ದಾರೆ ಸೂರ್ಯ. ಇತ್ತೀಚೆಗೆ ಬಿಡುಗಡೆಯಾದ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾಗೆ ಕನ್ನಡಾಭಿಮಾನಿಗಳಿಂದ ಕೂಡಾ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯಕ್ಕೆ ಸೂರ್ಯ ತಮ್ಮ ಮುಂದಿನ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಹೊರತುಪಡಿಸಿ ಸೂರ್ಯ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2006 ರಲ್ಲಿ ಅಗರಾಮ್ ಫೌಂಡೇಶನ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಮೂಲಕ ವಿದ್ಯೆಯಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಈ ಮೂಲಕ ಸರಳತೆಗೆ ಇನ್ನೊಂದು ಹೆಸರು ಎಂದರೆ ಸುರ್ಯ ಎನ್ನಬಹುದು.