ತೆಲುಗಿನ ಈಶ್ವರ್ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟ ಪ್ರಭಾಸ್, ಬಿಲ್ಲಾ, ಡಾರ್ಲಿಂಗ್, ಮಿರ್ಚಿ, ಬಾಹುಬಲಿ, ಬಾಹುಬಲಿ 2, ಸಾಹೋ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ಸ್ ಕೊಟ್ಟಿರುವ ನಟ ಪ್ರಭಾಸ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಒಬ್ಬರು. ಬಾಹುಬಲಿ ಸಿನಿಮಾದ ಯಶಸ್ಸಿನ ಬಳಿಕ ಪ್ರಭಾಸ್​ ಪ್ಯಾನ್​ ಇಂಡಿಯಾ ಹೀರೋ ಆಗಿ ಮಿಂಚಲು ಆರಂಭಿಸಿದರು. ಅವರ ಕಾಲ್​ ಶೀಟ್​ಗಾಗಿ ನೂರಾರು ನಿರ್ಮಾಪಕರು ಕಾಯುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಸಂಭಾವನೆ ಹೆಚ್ಚಿದೆ. ಈಗ ಒಂದು ದುಬಾರಿ ಕಾರು ಖರೀದಿಸುವ ಮೂಲಕ ಪ್ರಭಾಸ್​ ಸುದ್ದಿ ಆಗಿದ್ದಾರೆ. ಅವರ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳು ಇವೆ. ಅವುಗಳ ಜೊತೆಗೆ ಈಗ ಲ್ಯಾಂಬೋರ್ಗಿನಿ ಕೂಡ ಸೇರಿಕೊಂಡಿದೆ. ಅದರ ಬೆಲೆ ಕೇಳಿ ಫ್ಯಾನ್ಸ್​ ಅಚ್ಚರಿಪಟ್ಟಿದ್ದಾರೆ.

ಸಾಮಾನ್ಯವಾಗಿ ಎಲ್ಲ ಸೆಲೆಬ್ರಿಟಿಗಳು ಕೂಡ ಲ್ಯಾಂಬೋರ್ಗಿನಿ ಕೊಂಡುಕೊಳ್ಳಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಅಂಥ ದುಬಾರಿ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಸದ್ಯ ಪ್ರಭಾಸ್​ ಅವರ ಮನೆಗೆ ಹೊಸ ಅತಿಥಿಯ ರೂಪದಲ್ಲಿ ಲ್ಯಾಂಬೋರ್ಗಿನಿ ಬಂದಿದೆ. ಆರೆಂಜ್​ ಬಣ್ಣದ ಈ ಕಾರಿನ ಅಂದಕ್ಕೆ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ. ಅತಿ ದುಬಾರಿ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಕೂಡ ಒಂದು. ಭಾರತದ ಕೆಲವೇ ಕೆಲವು ಸ್ಟಾರ್‌ಗಳ ಬಳಿ ಮಾತ್ರ ಲ್ಯಾಂಬೋರ್ಗಿನಿ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿಯೂ ಲ್ಯಾಂಬೋರ್ಗಿನಿ ಕಾರಿದೆ.

ಪ್ರಭಾಸ್​ ಮನೆಯಲ್ಲಿ ಈಗಾಗಲೇ ಬಿಎಂಡಬ್ಲ್ಯೂ, ಮರ್ಸೆಡಿಸ್​, ಆಡಿ ಕ್ಯೂ5 ಮುಂತಾದ ಕಾರುಗಳಿವೆ. ಅವೆಲ್ಲಕ್ಕಿಂತಲೂ ಈಗ ಬಂದಿರುವ ಲ್ಯಾಂಬೋರ್ಗಿನಿ ಬಗ್ಗೆ ಪ್ರಭಾಸ್​ಗೆ ವಿಶೇಷ ಪ್ರೀತಿ. ಯಾಕೆಂದರೆ, ಲ್ಯಾಂಬೋರ್ಗಿನಿ ಕಾರು ಖರೀದಿಸಬೇಕು ಎಂಬುದು ತಮ್ಮ ಕನಸು ಎಂದು ಈ ಹಿಂದಿನ ಒಂದು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು. ಈಗ ಅದು ನನಸಾಗಿದೆ. ಅದಕ್ಕಾಗಿ ಎಲ್ಲರೂ ಪ್ರಭಾಸ್​ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪ್ರಭಾಸ್​ ಮನೆಮುಂದೆ ಬಂದು ನಿಂತಿರುವ ಲ್ಯಾಂಬೋರ್ಗಿನಿಯ ಫೋಟೋ ಮತ್ತು ವಿಡಿಯೋಗಳು ಎಲ್ಲೆಡೆ ವೈರಲ್​ ಆಗುತ್ತಿವೆ. ಹಾಗಾದರೆ ಈ ಕಾರ್​ನ ಬೆಲೆ ಎಷ್ಟು ಎಂದು ಅನೇಕರು ಕೇಳುತ್ತಿದ್ದಾರೆ. ಎಲ್ಲ ಹೈ ಅಡ್ವಾನ್ಸ್​ ಫೀಚರ್​ಗಳು ಈ ಕಾರಿನಲ್ಲಿ ಇದ್ದು, ಇದರ ಬೆಲೆ ಬರೋಬ್ಬರಿ 6 ಕೋಟಿ ರೂ. ಎನ್ನಲಾಗಿದೆ. ದಿನದಿಂದ ದಿನಕ್ಕೆ ಪ್ರಭಾಸ್ ಅವರ ಶ್ರೀಮಂತಿಕೆ ಹೆಚ್ಚುತ್ತಲೇ ಇದೆ. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

ಕಿತ್ತಳೆ ಬಣ್ಣದ ಲ್ಯಾಂಬೋರ್ಗಿನಿ ಕಾರ್ ಕೊಂಡುಕೊಂಡಿರುವ ನಟ ಪ್ರಭಾಸ್‌ರವರ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲ್ಯಾಂಬೋರ್ಗಿನಿ ಕಾರ್ ಖರೀದಿ ಮಾಡಬೇಕು ಅನ್ನೋದು ಪ್ರಭಾಸ್‌ರವರ ಕನಸಾಗಿತ್ತು. ಆ ಕನಸು ಇದೀಗ ನನಸಾಗಿರುವುದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್​ ಲವರ್​ ಬಾಯ್​ ಆಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಅದರ ಜೊತೆಗೆ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಸಿನಿಮಾದಲ್ಲಿ ಪ್ರಭಾಸ್​ ಅಭಿನಯಿಸುತ್ತಿದ್ದಾರೆ. ಈ ಚಿತ್ರ ದೊಡ್ಡಮಟ್ಟದಲ್ಲಿ ಹೈಪ್​ ಸೃಷ್ಟಿ ಮಾಡಿದೆ. ಓಂ ರಾವುತ್ ನಿರ್ದೇಶನ ಮಾಡುತ್ತಿರುವ ಆದಿಪುರುಷ್​ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್​ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿವೆ.

Leave a Reply

Your email address will not be published. Required fields are marked *