ಒಂದು ಕಾಲದ ಕನ್ನಡದ ಮೇರುನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಹೈದರಾಬಾದ್‌ನಲ್ಲಿ ಹುಟ್ಟಿದ್ದ ಮಾಧವಿಗೆ ಕೀರ್ತಿ ಕುಮಾರಿ ಮತ್ತು ಧನಂಜಯ ಎಂಬ ಸಹೋದರರಿದ್ದಾರೆ. ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್ ಮುಂತಾದ ಮೇರು ಸಿನಿ ಕಲಾವಿದರ ಜೊತೆ ಮಾಧವಿ ಅಭಿನಯಿಸಿದ್ದಾರೆ. 1976 ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ ಅವರು. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮಾಧವಿ ಅವರು 17 ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ಸಿನಿಮಾ ರಂಗದಲ್ಲಿ ಸುಮಾರು 300 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ದಾಸರಿ ನಾರಾಯಣ ರಾವ್ ಅವರ ತೂರ್ಪು ಪಡಮರ ಎಂಬ ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ತದನಂತರದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಓರಿಯಾ, ಬೆಂಗಾಳಿ ಭಾಷೆಗಳಲ್ಲಿ ನಟಿಸಿದ್ದಾರೆ. ದೊಡ್ಡ ದೊಡ್ಡ ನಟ ಮತ್ತು ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಮಾಧವಿಗೆ ಸಲ್ಲುತ್ತದೆ. ತುಂಬ ವಿಭಿನ್ನ ಪಾತ್ರಗಳ ಮೂಲಕ ಮಾಧವಿ ಹೆಸರಾಗಿದ್ದರು. ಆ ಸಮಯ ಅವರ ಸುವರ್ಣಯುಗವಾಗಿತ್ತು.
ಮಾಧವಿಯದ್ದು ಅರೇಂಜ್ ಮ್ಯಾರೇಜ್ ಆಗಿತ್ತು. ಮಾಧವಿ ಹಿತೈಷಿಗಳಾದ ಸ್ವಾಮಿರಾಮ ಅವರ ಅಣತಿಯಂತೆ ಅಮೆರಿಕದಲ್ಲಿರುವ ರಾಮ್ ಶರ್ಮಾ ಜೊತೆ ಫೆಬ್ರವರಿ 14 1996ರಂದು ಮಾಧವಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಭಾರತದಲ್ಲಿರುವಷ್ಟು ದಿನ ದೇವಸ್ಥಾನಕ್ಕೆ ಹೋಗುವುದು, ಪೂಜೆ ಮಾಡುವುದು, ಸಂಪ್ರದಾಯ ಆಚಾರ ಮತ್ತು ವಿಚಾರಗಳನ್ನು ಅಷ್ಟೊಂದು ಆಚರಿಸಿದ ಮಾಧವಿ ಅಮೆರಿಕಕ್ಕೆ ಹೋದ ನಂತರದಲ್ಲಿ ಭಾರತೀಯ ಸಂಸ್ಕೃತಿ ಮರೆಯಬಾರದೆಂದು ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರ, ಗಣಪತಿ ಸ್ತೋತ್ರವನ್ನು ಹೇಳುತ್ತಾರಂತೆ.
ಮಾಧವಿ ಗಂಡ ತುಂಬ ಮೃದು ಸ್ವಭಾವದ, ನಂಬಿಕಾರ್ಹ, ಉದಾರಿ ಅಷ್ಟೇ ಅಲ್ಲದೆ ಮಾಧವಿಯನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ. ತುಂಬ ಶಾಂತಿಯುತವಾಗಿ, ಪ್ರೀತಿಯಿಂದ ಈ ದಂಪತಿ ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಹಾಗೆಯೇ ಇವರಿಗೆ ಮೂರು ಮಕ್ಕಳಿದ್ದಾರೆ. ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಇವರು ಸುಮಾರು ಹತ್ತು ಸಾವಿರ ಕೋಟಿಯ ಒಡತಿಯಾಗಿದ್ದಾರೆ. ಅಮೆರಿಕಾದಲ್ಲಿ ಸುಂದರವಾದ ಮನೆಯನ್ನು ಕಟ್ಟಿಕೊಂಡಿದ್ದಾರೆ. ಹಾಗೆಯೇ ವಿಮಾನವನ್ನು ಓಡಿಸುವುದನ್ನು ಕೂಡ ಇವರು ಕಲಿತಿದ್ದಾರೆ.