ಬೇಗನೆ ಗರ್ಭಿಣಿಯಾಗ ಬಯಸುವವರು ಈ ಕೆಳಗಿನ ಮುಖ್ಯ ಅಂಶಗಳನ್ನು ಗಮನಿಸಬೇಕು ಹಾಗೂ ಅನುಸರಿಸಬೇಕು. ದಾಂಪತ್ಯ ಜೀವನ ಪರಿಪೂರ್ಣಗೊಳ್ಳೋದೇ ದಂಪತಿಗಳಿಗೆ ಒಂದು ಎರಡೋ ಮಕ್ಕಳಾದಾಗ. ಗಂಡು ಹೆಣ್ಣು ಮದುವೆಯಾಗಿ ಸತಿಪತಿಗಳಾದ ಮೇಲೆ, ಬಂಧು ಬಳಗದ ವಲಯದಲ್ಲಿ, ಆಪ್ತೇತರರ ಮನದಲ್ಲಿ ಮೂಡುವ ಮುಂದಿನ ಪ್ರಶ್ನೆ, ಇಬ್ಬರು ಮೂವರಾಗೋದು ಯಾವಾಗ? ಅಂತಾ. ಮದುವೆಯಾಗಿ ನಾಲ್ಕೈದು ವರ್ಷಗಳು ಕಳೆದರೂ ಇಬ್ಬರು ಮೂವರಾಗದೇ ಹೋದಲ್ಲಿ, ಅಂದರೆ ಇನ್ನೂ ಮಕ್ಕಳು ಆಗದೇ ಇದ್ದಲ್ಲಿ ಆ ದಂಪತಿಗಳನ್ನೂ ಒಳಗೊಂಡಂತೆ ಕುಟುಂಬ ವರ್ಗದವರ ಮನದಲ್ಲೂ ಚಿಕ್ಕದಾಗಿ ಆತಂಕ ಶುರುವಿಟ್ಟುಕೊಳ್ಳುತ್ತದೆ ಅಂತಹ ಆತಂಕಕ್ಕೂ ಅರ್ಥವಿದೆ. ವಿಷಯ ಹೀಗಿರೋವಾಗ ವರ್ಷಾನುಗಟ್ಟಲೆಯಾದರೂ ಅಂತಹ ಯಾವುದೇ ಸೂಚನೆ ಕಂಡುಬರದೇ ಹೋದಲ್ಲಿ ದಂಪತಿಗಳು ವಿಪರೀತ ಆತಂಕಕ್ಕೀಡಾಗೋದಂತೂ ಸಹಜ.

ಕಂಡಕಂಡ ದೇವರಿಗೆ ಮೊರೆಹೋಗುತ್ತಾರೆ. ಎಲ್ಲ ಬಗೆಯ ಹರಕೆಗಳನ್ನೂ ಕಟ್ಟಿಕೊಳ್ಳುತ್ತಾರೆ. ಸುಪ್ರಸಿದ್ಧ ವೈದ್ಯರನ್ನು ಭೇಟಿ ಆಗುತ್ತಾರೆ. ಮಕ್ಕಳಾಗಿಲ್ಲವೆಂಬ ಕೊರಗು ಅವರನ್ನ ಇನ್ನಿಲ್ಲದಂತೆ ಕಾಡೋಕೆ ಶುರುವಿಟ್ಟುಕೊಳ್ಳುತ್ತೆ ಹಾಗೂ ತಾವು ಅತೀ ಶೀಘ್ರದಲ್ಲೇ ಅಪ್ಪ-ಅಮ್ಮ ಅಂತಾ ಅನಿಸಿಕೊಳ್ಳೋಕೆ; ಅದೆಷ್ಟೇ ಕಷ್ಟದ್ದೇ ಆಗಿರಲೀ, ಯಾವುದೆಲ್ಲ ಮಾರ್ಗೋಪಾಯಗಳಿವೆಯೋ ಅವೆಲ್ಲವನ್ನೂ ಜಾಲಾಡಿಬಿಡುತ್ತಾರೆ. ಇದೇ ಸಾಲಿಗೆ ಸೇರಿದ ಎಷ್ಟೋ ಜನರು ಇರುತ್ತಾರೆ. ಆದರೆ ಈ ಕೆಲವು ಅಂಶಗಳನ್ನು ಪಾಲಿಸುವುದರಿಂದ ನೀವು ಬೇಗನೇ ಗರ್ಭಿಣಿಯಾಗಬಹುದು. ಅವುಗಳಲ್ಲಿ ಕೆಲವಂತೂ ಇಷ್ಟೇನಾ! ಎನ್ನಬಹುದು. ನಾವಿಲ್ಲಿ ಪ್ರಸ್ತಾವಿಸಿರುವ ಹತ್ತು ಅಂಶಗಳು ಬಹಳವೇ ಮುಖ್ಯವಾಗಿದ್ದು , ಬಹಳ ಬೇಗ ಗರ್ಭಧಾರಣೆಗೆ ಸಹಾಯ ಆಗಬಹುದು. ಆ ಅಂಶಗಳನ್ನು ನೋಡುವುದಾದರೆ ,

ಆದಷ್ಟು ಸಂತಾನ ನಿಯಂತ್ರಣಕಗಳನ್ನು ಬಳಸದೆ ಇರುವುದು ಒಳ್ಳೆಯದು. ಅದು ಗುಳಿಗೆಯೇ ಆಗಿರಬಹುದು, ಪ್ಯಾಚ್ ಅಥವಾ ಚುಚ್ಚುಮದ್ದೇ ಆಗಿರಬಹುದು ಅಥವಾ ಇನ್ನಿತರ ಯಾವುದೇ ಪ್ರಕಾರದ ಗರ್ಭನಿರೋಧಕವೂ ಆಗಿದ್ದಿರಬಹುದು ಅಂತದ್ದನು ತೆಗೆದುಕೊಳ್ಳೋದನ್ನ ಎಷ್ಟು ಬೇಗ ನಿಲ್ಲಿಸುತ್ತಿರೋ ಅಷ್ಟು ಬೇಗ ನಿಮ್ಮ ಋತುಚಕ್ರ ತನ್ನ ಸಹಜತೆಯತ್ತ ಮರಳುತ್ತದೆ. ಹಾರ್ಮೋನು-ಸಂಬಂಧೀ ಗರ್ಭನಿರೋಧಕಗಳು ಸಾಮಾನ್ಯವಾಗಿ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟೆರೋನ್ ನ ಒಂದು ಸಂಯೋಜನೆಯನ್ನ ಒಳಗೊಂಡಿರುತ್ತವೆ. ಇವು ಅಂಡಾಣುವು ಫಲಿತಗೊಳ್ಳುವುದನ್ನ ಅಥವಾ ಅಂಡಾಣುವು ಗರ್ಭಕೋಶದಲ್ಲಿ ಸ್ಥಿರಗೊಳ್ಳೋದನ್ನ ತಡೆಗಟ್ಟೋ ಮೂಲಕ ಗರ್ಭಧಾರಣೆಯನ್ನ ಅಡ್ಡಿಪಡಿಸುತ್ತವೆ. ಹಾಗಾಗಿಯೇ ನೀವು ಇವುಗಳನ್ನ ಸೇವಿಸೋದನ್ನ ನಿಲ್ಲಿಸಿದ ಮೇಲೂ, ನಿಮ್ಮ ಹಾರ್ಮೋನುಗಳ ಸ್ರವಿಕೆ ಸಹಜತೆಯತ್ತ ಹೊರಳಲು ಮತ್ತು ಆ ಮೂಲಕ ನಿಮ್ಮ ಋತುಚಕ್ರವು ಸಹಜ ಸ್ಥಿತಿಗೆ ಬರಲು ಕೆಲವು ತಿಂಗಳುಗಳೇ ಹಿಡಿಯುತ್ತದೆ. ಗರ್ಭನಿರೋಧಕ ಸೇವನೆಯನ್ನ ನಿಲ್ಲಿಸಲು ಅತ್ಯಂತ ಸೂಕ್ತ ಸಮಯದ ಕುರಿತು ಸ್ತ್ರೀರೋಗ ತಜ್ಞರಲ್ಲಿ ಸಮಾಲೋಚನೆ ನಡೆಸುವುದು ಸೂಕ್ತ. ಸಾಮಾನ್ಯವಾಗಿ ಗುಳಿಗೆ ಅಥವಾ ಪ್ಯಾಚ್ ನ ರೂಪದಲ್ಲಿ ಗರ್ಭನಿರೋಧಕವನ್ನ ಬಳಸುವ ಮಹಿಳೆಯರಿಗೆ ಮೂರು ತಿಂಗಳು ಆದ್ಯತಾ ಕಾಲಾವಧಿಯಾಗಿರುತ್ತದೆ. ಆದರೆ ಒಂದೊಮ್ಮೆ ನೀವು ಡೆಪೋ-ಪ್ರೊವೇರಾದಂತಹ ಚುಚ್ಚುಮದ್ದನ್ನ ಗರ್ಭನಿರೋಧಕದ ರೂಪದಲ್ಲಿ ಬಳಸುತ್ತಿದ್ದಲ್ಲಿ, ನಿಮ್ಮ ದೇಹದ ಸಂತಾನೋತ್ಪತ್ತಿ ವ್ಯವಸ್ಥೆಯು ಪುನ: ಸಹಜ ಸ್ಥಿತಿಯತ್ತ ಹೊರಳಲು ಒಂಭತ್ತು ತಿಂಗಳು ಅಥವಾ ಇನ್ನೂ ಹೆಚ್ಚಿನ ಸಮಯ ಹಿಡಿದೀತು.

ಇನ್ನೂ ಕೆಲವು ಬಾರಿ ಪತಿ-ಪತ್ನಿಯರಿಬ್ಬರೂ ದೈಹಿಕ ತಪಾಸಣೆಗೆ ಒಳಗಾಗಿ ಮಕ್ಕಳಾಗುವಂತಾಗಲು ಏನೇನು ಮಾಡಬೇಕು? ಏನೇನು ಮಾಡಬಾರದು? ಅನ್ನೋದರ ಬಗ್ಗೆ ಮಗುವಿನ ಜನನಕ್ಕೆ ತೊಂದರೆಯುಂಟು ಮಾಡುವಂತಹ ಜೌಷಧಗಳನ್ನ ಗುರುತಿಸಿ ಅವುಗಳ ಸೇವನೆಯನ್ನ ನಿಲ್ಲಿಸೋದರ ಬಗ್ಗೆ, ಮಗುವನ್ನ ಸೃಷ್ಟಿಸುವ ದಿಶೆಯಲ್ಲಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ಶರೀರ ಅತ್ಯುತ್ತಮ ಸ್ಥಿತಿಯಲ್ಲಿರುವುದರ ಬಗ್ಗೆ, ನಿಮ್ಮ ತಜ್ಞವೈದ್ಯರೊಂದಿಗೆ ಒಮ್ಮೆ ಸಮಾಲೋಚಿಸುವುದು ಉತ್ತಮ. ಒಮ್ಮೆ ಸಂಪೂರ್ಣವಾಗಿ ನಿಮ್ಮ ಶರೀರವನ್ನ ಸ್ಕ್ರೀನಿಂಗ್ ಮಾಡಿಸಿದಲ್ಲಿ, ನೀವು ಗರ್ಭಿಣಿಯಾಗೋದಕ್ಕೆ ಅಡಚಣೆಯಾಗಿರಬಹುದಾದ ಥೈರಾಯಿಡ್ ನ ರೋಗಗಳು, ಅಥವಾ ಗರ್ಭಕೋಶದ ಚೀಲಗಳಂತಹ (ಸಿಸ್ಟ್ಸ್) ದೀರ್ಘಕಾಲೀನ ಶಾರೀರಿಕ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಂಡಂತಾಗುತ್ತದೆ ಹಾಗೂ ಆ ಮೂಲಕ ಫಲವಂತಿಕೆಗೆ ಏನಾದರೂ ತೊಂದರೆಗಳಿವೆಯೋ? ಎಂಬುದರ ಬಗ್ಗೆ ಗೊತ್ತಾಗುತ್ತದೆ. ಒಂದೊಮ್ಮೆ ಸಂಬಂಧಪಟ್ಟ ನಿಮ್ಮ ಎಲ್ಲ ವ್ಯವಸ್ಥೆಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕಂಡುಬಂದರೆ, ನೀವು ಗರ್ಭಿಣಿಯಾಗುವ ದಿಕ್ಕಿನಲ್ಲಿ ನಿಶ್ಚಿಂತೆಯಿಂದ ಮುಂದುವರೆಯಬಹುದು.

ಇನ್ನು ದೇಹವು ಎಷ್ಟು ಸದೃಢವಾಗಿರುತ್ತದೆಯೋ ಅಷ್ಟರ ಮಟ್ಟಿಗೆ ನೀವು ಗರ್ಭಿಣಿಯಾಗೋ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಅಂತಾ ಅಧ್ಯಯನದ ಮೇಲೆ ಅಧ್ಯಯನಗಳು ತೋರಿಸಿಕೊಟ್ಟಿವೆ. ವ್ಯಾಯಾಮವು ದೇಹದ ಅಧಿಕ ತೂಕವನ್ನ ಕಳೆದುಕೊಳ್ಳುವುದಕ್ಕಷ್ಟೇ ನೆರವಾಗೋದಲ್ಲ ದೇಹದ ಅಧಿಕ ತೂಕವು ಫಲವಂತಿಕೆಗೆ ಅಡ್ಡಿಯಾಗಬಲ್ಲದು. ಜೊತೆಗೆ ಅದು ಅಧಿಕ ರಕ್ತದೊತ್ತಡವನ್ನ ತಗ್ಗಿಸುತ್ತದೆ, ಕಾರ್ಟಿಸಾಲ್ ನಂತಹ ಖಿನ್ನತೆಯ ಹಾರ್ಮೋನುಗಳ ಮಟ್ಟವನ್ನ ಇಳಿಸುತ್ತದೆ, ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಗಳಿಗೆ ರಕ್ತದ ಹರಿವನ್ನ ಹೆಚ್ಚು ಮಾಡುತ್ತದೆ. ಇವೆಲ್ಲವೂ ಗರ್ಭಿಣಿಯಾಗೋದಕ್ಕೆ ತುಂಬಾನೇ ಸಹಕಾರಿ. ಹಾಗಂತ ವ್ಯಾಯಾಮವನ್ನ ಅತಿಯಾಗಿ ಮಾಡೋದೂ ತಪ್ಪು. ಮತ್ತೊಂದು ಸಂಶೋಧನೆಯು ತೋರಿಸಿಕೊಟ್ಟಿರೋ ಪ್ರಕಾರ, ಈ ಕಠಿಣ ವ್ಯಾಯಾಮ ಅನ್ನೋದು ತೂಕ ಜಾಸ್ತಿ ಇರೋ ಅಥವಾ ಬೊಜ್ಜುಮೈ ಇರೋ ಸ್ತ್ರೀಯರಿಗೆ ತೂಕ ಇಳಿಸಿಕೊಂಡು ಆ ಮೂಲಕ ಬೇಗ ಗರ್ಭಿಣಿಯಾಗೋಕೆ ನೆರವಾಗುತ್ತೆ ಅನ್ನೋದೇನೋ ಸರಿ. ಆದರೆ, ಗರ್ಭಿಣಿಯಾಗೋಕೆ ಎಷ್ಟು ತೂಕವಿರಬೇಕೋ ಅಷ್ಟೇ ತೂಕದವರು ನೀವೀಗಾಗಲೇ ಆಗಿದ್ದಲ್ಲಿ, ವಿಪರೀತ ಶ್ರಮದಾಯಕ ವ್ಯಾಯಾಮದಲ್ಲಿ ನೀವು ತೊಡಗಿಕೊಳ್ಳೋದರಿಂದ, ಗರ್ಭಿಣಿಯಾಗೋ ನಿಮ್ಮ ಯೋಜನೆಯೇ ತಲೆಕೆಳಗಾಗಿಬಿಡುತ್ತೆ. ಇದ್ಯಾಕೆ ಹೀಗೆ ಅನ್ನೋ ಯೋಚನೆ ನಿಮಗೆ ಬಂದೀತು. ವೇಗಗತಿಯುಳ್ಳ ರನ್ನಿಂಗ್ ಅಥವಾ ಸೈಕ್ಲಿಂಗ್ ನಂತಹ ಏರೋಬಿಕ್ ಗಳು ನಿಮ್ಮ ಋತುಚಕ್ರಗಳ ಜೊತೆ ಚೆಲ್ಲಾಟವಾಡಬಹುದು ಹಾಗೂ ಜೊತೆಗೆ ಅಂಡಾಣು ಫಲಿತಗೊಳ್ಳೋದನ್ನೂ ತಾತ್ಕಾಲಿಕವಾಗಿ ನಿಲ್ಲಿಸುತ್ತವೆ. ಆದರೆ ಅದೇ ವೇಳೆಗೆ ಇಂತಹ ಏರೋಬಿಕ್ ಗಳು ಸ್ಥೂಲಕಾಯದ ದುಷ್ಪರಿಣಾಮಗಳನ್ನ ಹಿಮ್ಮೆಟ್ಟಿಸೋದರ ಮೂಲಕ ಬೊಜ್ಜುಮೈಯಿರೋ ಸ್ತ್ರೀಯರ ಪಾಲಿಗೆ ವರದಾನವೂ ಆಗುತ್ತವೆ. ಬೆವರು ಕಿತ್ತು ಬರೋ ಹಾಗೆ ವ್ಯಾಯಾಮ ಮಾಡೋದು ಹಾಗೂ ಸಾಕಷ್ಟು ವ್ಯಾಯಾಮವನ್ನೇ ಮಾಡದೆ ಇರುವುದು ಇವೆರಡರ ನಡುವೆ ಸಮತೋಲನವನ್ನ ಸಾಧಿಸೋದರ ಬಗ್ಗೆ ವೈದ್ಯರಲ್ಲಿ ಚರ್ಚಿಸಿ. ನಡಿಗೆಯಂತಹ ಕಡಿಮೆ ಪ್ರಭಾವವಿರೋ ವ್ಯಾಯಾಮವನ್ನ ನೀವು ಯಾವಾಗಲೂ ಮಾಡಬಹುದು.

ಅತ್ಯುತ್ತಮ ಕೊಬ್ಬಿನ ಪದಾರ್ಥಗಳನ್ನ ಸೇವಿಸುವುದರಿಂದ ನಿಮ್ಮ ಸಂಗಾತಿಗೂ ಈ ವಿಷಯದಲ್ಲಿ ನೆರವಾಗಿರಿ. ನೀವು ಬೇಗನೇ ಗರ್ಭಿಣಿಯಾಗಬೇಕೆಂದಿದ್ದಲ್ಲಿ, ನೀವು ಏನನ್ನ ತಿನ್ನುತ್ತೀರಿ ಅನ್ನೋದೂ ಅಷ್ಟೇ ಮುಖ್ಯವಾಗಿರುತ್ತದೆ. ಬೇಗನೇ ಗರ್ಭಿಣಿಯಾಗಬೇಕು ಅನ್ನೋ ವಿಚಾರಕ್ಕೆ ಬಂದಾಗ, ನಿಮ್ಮ ಸಂಗಾತಿಯೂ ಸರಿಯಾದ್ದನ್ನೇ ಸೇವಿಸಬೇಕಾದ ಅಗತ್ಯವಿದೆ ಅನ್ನೋದು ನಿಮಗೆ ತಿಳಿದಿದೆಯೇ ? ಒಮೇಗಾ – 3ಎಸ್ ನಂತಹ ಆರೋಗ್ಯಯುತ ಕೊಬ್ಬುಗಳು ನಿಮ್ಮ ಪುರುಷ ಸಂಗಾತಿಯ ವೀರ್ಯಾಣು ಸಂಖ್ಯೆಯನ್ನ ಹಾಗೂ ಚಲನೆಯನ್ನ ಹೆಚ್ಚಿಸುತ್ತದೆ. ಅದೇ ವೇಳೆಗೆ, ಚಿಪ್ಸ್ ಗಳಲ್ಲಿ ಮತ್ತು ಫ಼ಾಸ್ಟ್ ಫ಼ುಡ್ ಗಳಲ್ಲಿ ಬಳಸುವಂತಹ ಪರ್ಯಾಪ್ತ ಕೊಬ್ಬುಗಳು ವೀರ್ಯಾಣುಗಳ ಗಾತ್ರ ಮತ್ತು ಆಕಾರಗಳನ್ನ ನಾಶಪಡಿಸುತ್ತವೆ ಹಾಗೂ ಆ ಮೂಲಕ ಅವುಗಳನ್ನ ಕಡಿಮೆ ಗಡುಸಾಗಿಸುತ್ತವೆ. ಹಾಗಾಗಿ, ಬರ್ಗರ್ ಗಳಂತಹ ಅನಾರೋಗ್ಯಕರ ತಿನಿಸುಗಳನ್ನ ನಿಮ್ಮ ಪತಿದೇವರು ಸೇವಿಸದಂತೆ ನೋಡಿಕೊಳ್ಳಿ ಹಾಗೂ ಅವುಗಳಿಗೆ ಬದಲಾಗಿ ಸಾಲ್ಮನ್, ಸಾರ್ಡೈನ್, ಸೊಪ್ಪುಯುಕ್ತ ಹಸಿರು ತರಕಾರಿಗಳು, ಅಕ್ರೋಟಗಳಂತಹ ಆರೋಗ್ಯದಾಯಕ ತಿನಿಸುಗಳನ್ನ ತಿನ್ನುವುದು ಉತ್ತಮ.

ವೀರ್ಯಾಣುಗಳ ಸಂಖ್ಯೆಯನ್ನ ಹೆಚ್ಚಿಸುವ ಈ ಇತರ ಆಹಾರವಸ್ತುಗಳನ್ನು ಆದಷ್ಟು ಹೆಚ್ಚೆಚ್ಚು ಸೇವಿಸುವುದು ಉತ್ತಮ. ಓಯೆಸ್ಟರ್ ಗಳು ಈ ಓಯೆಸ್ಟರ್ ಗಳು (ಮೃದ್ವಂಗಿಗಳು)ಲೈಂಗಿಕ ಅಭೀಪ್ಸೆಯನ್ನ ಹೆಚ್ಚು ಮಾಡುತ್ತವೆ ಅನ್ನೋ ಮಾತಿದೆ. ಅದಂತೂ ಎಷ್ಟರಮಟ್ಟಿಗೆ ನಿಜವೋ, ಸುಳ್ಳೋ ತಿಳಿದಿಲ್ಲ. ಆದರೆ, ಈ ಓಯೆಸ್ಟರ್ ಗಳಲ್ಲಿರೋ ಸತುವಿನ ಪ್ರಮಾಣ ಪುರುಷನಲ್ಲಿ ವೀರ್ಯಾಣುಗಳ ಹಾಗೂ ಟೆಸ್ಟೋಸ್ಟೆರೋನ್ ನ ಉತ್ಪಾದನೆಯನ್ನ ಧಿಡೀರನೇ ಏರಿಸೋದಂತೂ ಗ್ಯಾರಂಟಿ ಅಂತಾ ನಮಗೆ ಚೆನ್ನಾಗಿ ಗೊತ್ತಿದೆ. ಆದರೂ, ಸಂತಾನೋತ್ಪತ್ತಿಗೆ ದಿವ್ಯೌಷಧವಾಗಿರೋ ಈ ಸತುವಿನ ಅಂಶ ಇವೆಲ್ಲದರವುಗಳಿಗಿಂತಲೂ ಅತೀ ಹೆಚ್ಚಿನ ಪ್ರಮಾಣದಲ್ಲಿರೋದು ಓಯೆಸ್ಟರ್ ಗಳಲ್ಲೇ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ವಿಟಮಿನ್ ಗಳು ಹೇರಳವಾಗಿರೋದು ಎಲ್ಲರಿಗೂ ಗೊತ್ತಿರುವಂತದ್ದೇ. ಇವು ನಿಮ್ಮ ಪತಿಯ ವೀರ್ಯಾಣುಗಳ ಕೋಶಗಳನ್ನು ಹಾನಿಯಾಗುವುದರಿಂದ ರಕ್ಷಿಸಬಲ್ಲವು. ಹಸಿರುಸೊಪ್ಪಿನ ತರಕಾರಿಗಳಿಂದ ಅವರಿಗೆ ಫ಼ೋಲೇಟ್ ಲಭಿಸುತ್ತದೆ. ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ ಯನ್ನ ಪುರುಷರು ಸೇವಿಸದೇ ಹೋದಲ್ಲಿ, ಅವರ ವೀರ್ಯಾಣುಗಳ ವಂಶವಾಹಿಗಳು ಅಸಹಜಗೊಳ್ಳುತ್ತವೆ. ವಿಟಮಿನ್ ಸಿ ಯ ಪೂರೈಕೆಗಾಗಿ ಸಿಟ್ರಸ್ ಆಮ್ಲಯುಕ್ತ ಹಣ್ಣುಗಳನ್ನ, ಟೊಮೆಟೋಗಳನ್ನ, ಬೆರ್ರಿ ಹಣ್ಣುಗಳನ್ನ ನಿಮ್ಮ ಪತಿರಾಯರು ಹೇರಳವಾಗಿ ತಿನ್ನಲಿ. ಜೊತೆಗೆ ವಿಟಮಿನ್ ಎ ಯ ಪೂರೈಕೆಗಾಗಿ ಗಜ್ಜರಿಗಳನ್ನ, ಕೆಂಪು ಮೆಣಸನ್ನ, ಹಾಗೂ ಆಪ್ರಿಕೋಟ್ ಗಳನ್ನ ಬೇಕಾದಷ್ಟು ತಿನ್ನಬೇಕು. ಕಡು ಸಿಹಿಯಾಗಿರೋ ಗೆಣಸುಗಳನ್ನ ತಿನ್ನೋದು ಇನ್ನೂ ಒಳ್ಳೆಯದು. ಏಕೆಂದರೆ ಈ ಗೆಣಸೊಂದೇ ಫ಼ೋಲೇಟ್, ವಿಟಮಿನ್ ಎ, ಮತ್ತು ವಿಟಮಿನ್ ಸಿ – ಈ ಮೂರನ್ನೂ ಯಥೇಚ್ಛವಾಗಿ ಒಳಗೊಂಡಿದೆ. ಜೇನುತುಪ್ಪದಲ್ಲಿ ಬೋರಾನ್ ಎಂಬ ಖನಿಜವಿದ್ದು ಇದು ಟೆಸ್ಟೋಸ್ಟೆರೋನ್ ನ ಮಟ್ಟವನ್ನ ಹೆಚ್ಚಿಸುತ್ತೆ ಹಾಗೂ ದಾಳಿಂಬೆ ರಸ ವೀರ್ಯಾಣುಗಳ ಸಂಖ್ಯೆಯನ್ನ ಹಾಗೂ ಗುಣಮಟ್ಟವನ್ನ ಹೆಚ್ಚಿಸುತ್ತೆ.

ಗರ್ಭಿಣಿಯಾಗಬಯಸುವವರಿಗೆ ಹಾಗೂ ನಿಮಗೆ ಹುಟ್ಟಲಿರುವ ಮಗುವಿಗೆ ಇಬ್ಬರಿಗೂ ಪ್ರೀನಾಟಲ್ ವಿಟಮಿನ್ ಒಂದು ಒಳ್ಳೆಯ ವಿಮೆ ಇದ್ದಂತೆ. ಅಧ್ಯಯನಗಳು ಹೇಳಿರುವ ಪ್ರಕಾರ ಪ್ರೀನಾಟಲ್ ವಿಟಮಿನ್ ನ ಗುಳಿಗೆಯನ್ನೂ ಪ್ರತಿದಿನವೂ ತೆಗೆದುಕೊಳ್ಳೋದರಿಂದ ನೀವು ಅವಧಿಗೆ ಮುನ್ನವೇ ಮಗುವನ್ನ ಹೆರುವ ಅಪಾಯವನ್ನ ತಗ್ಗಿಸಬಹುದು ಹಾಗೂ ಜೊತೆಗೆ ವಾಕರಿಕೆ ಮತ್ತು ವಾಂತಿಯ ಕಿರಿಕಿರಿಯನ್ನೂ ದೂರಮಾಡಬಹುದು. ಪ್ರೀನೇಟಲ್ ವಿಟಮಿನ್ ತೆಗೆದುಕೊಳ್ಳೋದರಿಂದ ಇವಿಷ್ಟೇ ಪ್ರಯೋಜನ ಇರೋದು ಅಂತಾ ಭಾವಿಸಬೇಡಿ. ಇತ್ತೀಚಿಗಿನ ಅಧ್ಯಯನವೊಂದು ತೋರಿಸಿಕೊಟ್ಟಿರೋ ಪ್ರಕಾರ, ಫಲವಂತಿಕೆಯ ಚಿಕಿತ್ಸೆಗೆ ಒಳಗಾಗಿರುವ ಹಾಗೂ ಪ್ರೀನೇಟಲ್ ಮಲ್ಟಿವಿಟಮಿನ್ ಗಳನ್ನ ತೆಗೆದುಕೊಳ್ಳುತ್ತಿರೋ ಮಹಿಳೆಯರು, ಅದೇ ಚಿಕಿತ್ಸೆಗೆ ಒಳಗಾಗಿರುವ ಆದರೆ ಬರೀ ಫ಼ೋಲಿಕ್ ಆಸಿಡ್ ಅನ್ನಷ್ಟೇ ತೆಗೆದುಕೊಳ್ತಿರೋ ಇತರ ಮಹಿಳೆಯರಿಗೆ ಹೋಲಿಸಿದಲ್ಲಿ, ಅವರು ಗರ್ಭಿಣಿಯಾಗೋ ಸಾಧ್ಯತೆ ಇವರದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿತ್ತು. ಹಾಗಂತ ಪ್ರೀನೇಟಲ್ ಮಲ್ಟಿವಿಟಮಿನ್ ಗಳನ್ನ ತಗೊಳ್ಳೋದ್ರಿಂದ ನೀವೂ ಬೇಗನೇ ಗರ್ಭಿಣಿಯಾಗುತ್ತೀರಿ ಅನ್ನೋದೇನೂ ಗ್ಯಾರಂಟಿ ಅಲ್ಲ. ಆದ್ರೂ ಕೂಡ ದಿನಕ್ಕೊಂದರಂತೆ ಈ ಗುಳಿಗೇನಾ ತಗೊಳ್ಳೋದ್ರಿಂದ ತಾಯಾಗೋ ತವಕದಲ್ಲಿರೋರಿಗೆ ಒಂದಲ್ಲ ಒಂದು ಪ್ರಯೋಜನವಂತೂ ಖಂಡಿತಾ ಇದೆ.

ಕೆಫೀನ್ ಸೇವಿಸುವುದು ಕಡಿಮೆ ಮಾಡಿ, ಜೊತೆಗೆ ಬೇಡದ ಇತರೆ ಪಾನೀಯಗಳ ಸೇವನೆಯನ್ನೂ ಕಡಿಮೆ ಮಾಡಬೇಕು . ಕೆಫೀನ್ ಹಾಗೂ ಮದ್ಯ ಸೇವನೆಯನ್ನ ಹೆಚ್ಚಾಗಿ ಮಾಡುತ್ತಾ ಇದ್ದರೆ ನೀವು ಬೇಗನೇ ತಾಯಿಯಾಗಬೇಕು ಅನ್ನೋ ಆಸೇಯನ್ನೂ ಕೈಬಿಡುವುದೇ ಒಳ್ಳೆಯದು. ಏಕಂದರೆ ವಿಪರೀತ ಕೆಫೀನ್ ಮತ್ತು ಮದ್ಯಗಳನ್ನ ಸೇವಿಸೋದ್ರಿಂದ ಗರ್ಭಿಣಿಯಾಗೋ ನಿಮ್ಮ ಯೋಜನೇಯೆ ಹಳ್ಳಹಿಡಿಯುತ್ತೆ ಅಂತ ಬೇಕಾದಷ್ಟು ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗಾಗಿ ನಿಮಗೆ ನಿಜವಾಗಿಯೂ ಬೇಗನೇ ತಾಯಿಯಾಗ್ಬೇಕು ಅನ್ನೋ ಆಸೆ ಇದ್ರೆ, ಕೆಫೀನ್ ಸೇವನೆಯನ್ನ ದಿನಕ್ಕೆ ಸುಮಾರು 200 ಮಿ.ಗ್ರಾಂ ನಷ್ಟೇ ಮಾಡಿದ್ರೆ ಸಾಕು. ಅರ್ಥಾತ್ ಇದು ಸುಮಾರು ಎರಡು ಕಪ್ ಗಳಷ್ಟು ಕಾಫಿ ಸೇವನೆಗೆ ಸಮ. ಕೆಫೀನ್ ನ ವಿಚಾರ ಆಯಿತು, ಗರ್ಭಿಣಿಯಾಗಬೇಕು ಅಂತಾ ಅಂದ್ಕೊಂಡಿರೋ ನೀವು ಮದ್ಯಸೇವನೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು. ಏಕೆಂದರೆ ಫಲವಂತಿಕೆಯ ವಿಚಾರಕ್ಕೆ ಬಂದಾಗ ಈ ಮದ್ಯಸೇವನೆ ನಿಮ್ಮಿಬ್ಬರಿಗೂ ಅತ್ಯಂತ ಅಪಾಯಕಾರಿ. ಮದ್ಯವು ನಿಮ್ಮ ಅಂಡಾಣುಗಳ ಕೋಶಗಳನ್ನ ಗಂಭೀರ ಸ್ವರೂಪದಲ್ಲಿ ಹಾಳುಮಾಡುತ್ತದೆ ಹಾಗೂ ಒಂದು ವೇಳೆ ನೀವು ಗರ್ಭಿಣಿಯಾದರೂ ಕೂಡ ಗರ್ಭಪಾತ ಆಗೋ ಸಾಧ್ಯತೆಯನ್ನು ಈ ಸುರಾಪಾನ ಹೆಚ್ಚಿಸುತ್ತದೆ.

ಲ್ಯುಬ್ರಿಕೆಂಟ್ ನ ಬಳಕೆ ಬೇಡ. ಸಂಭೋಗವನ್ನ ಸಲೀಸಾಗಿಸಿಕೊಳ್ಳೋಕೇಂತಾ ಲ್ಯುಬ್ರಿಕೆಂಟ್ ಗಳ ಮೊರೆ ಹೋಗೋದರ ಬದಲು ನಿಮ್ಮ ಸಂಗಾತಿಯ ಜೊತೆ ಫ಼ೋರ್ಪ್ಲೇ ಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಮಾಲೀಸು ತೈಲದಂತಹ ತೈಲಾಧಾರಿತ ಲ್ಯುಬ್ರಿಕೆಂಟ್ ಗಳು ನಿಮ್ಮ ಗರ್ಭಕೋಶದ ಒಳಪೊರೆಯ ಸ್ವರೂಪವನ್ನ ಹಾಗೂ ಯೋನಿದ್ವಾರದ pH ಮಟ್ಟವನ್ನ ಬದಲಾಯಿಸಿಬಿಡುತ್ವೆ. ಹೀಗಾದಾಗ ನಿಮ್ಮ ಸಂಗಾತಿಯ ವೀ ರ್ಯಾಣುಗಳು ನಿಮ್ಮ ಗರ್ಭಕೋಶದಲ್ಲಿ ತಲುಪಬೇಕಾದ ಜಾಗಕ್ಕೆ ತಲುಪಲು ವಿಫಲಗೊಳ್ಳುತ್ತವೆ. ಜೊಲ್ಲೂ ಕೂಡ ವೀ ರ್ಯಾಣು ಹಂತಕವೇ ಆಗಿದೆ. ರತಿಕ್ರೀಡೆಯಲ್ಲಿ ಆಸಕ್ತಿ ಉಂಟಾಗೋಕೆ ನೀವು ಮಾಡಬಹುದಾದ ಇನ್ನೊಂದು ಉಪಾಯವೆಂದರೆ ಇಬ್ಬರೂ ಜೊತೆಯಾಗಿ ಪ್ರಣಯಭರಿತ ದೃಶ್ಯಗಳನ್ನ ನೋಡೋದು. ಹಾಗೆ ಮಾಡೋದ್ರಿಂದ ನಿಮ್ಮ ಪುರುಷ ಸಂಗಾತಿಯ ವೀ ರ್ಯಾಣುವಿನ ಗುಣಮಟ್ಟ ನಿಜಕ್ಕೂ ಉತ್ತಮಗೊಳ್ಳುತ್ತೆ (ಒಂದೊಮ್ಮೆ ಇಂತಹ ಯಾವ ತಂತ್ರಗಳೂ ಕೆಲಸ ಮಾಡ್ದಿದ್ರೆ, ಕೆ-ವೈ ನಂತಹ ಜಲಾಧಾರಿತ ಲ್ಯೂಬ್ ಅನ್ನು ಪ್ರಯತ್ನಿಸಿ).

ಹೈನೋತ್ಪನ್ನಗಳನ್ನ ಹಾಗೂ ಕಬ್ಬಿಣಾಂಶದ ಸೇವನೆಯನ್ನ ಹೆಚ್ಚುಮಾಡಿ. ಸಂತುಲಿತ ಆಹಾರದ ಸೇವನೆ ಹಾಗೂ ಪ್ರೀನೇಟಲ್ ವಿಟಮಿನ್ ಗಳನ್ನ ತೆಗೆದುಕೊಳ್ಳೋದರ ಜೊತೆಗೆ, ನಿಮ್ಮ ಒಂದು ಹೊತ್ತಿನ ಊಟದಲ್ಲಿ ಒಂದು ದಿನಕ್ಕೆ ಸಾಕಾಗೋವಷ್ಟು ಹೈನೋತ್ಪನ್ನಗಳಿರೋದನ್ನ ಖಚಿತಪಡಿಸಿಕೊಳ್ಳಿ. ಈ ಹೈನೋತ್ಪನ್ನಗಳು ನಿಮ್ಮ ಶರೀರಕ್ಕೆ ಅಗತ್ಯವಾಗಿರೋ ಕ್ಯಾಲ್ಸಿಯಂ ನ ಪೂರೈಸುತ್ವೆ. ಸಂಶೋಧನೆ ತೋರಿಸಿಕೊಟ್ಟಿರೋ ಪ್ರಕಾರ ಒಂದು ಹೊತ್ತು ಇಡೀ ದಿನಕ್ಕೆ ಸಾಕಾಗೋವಷ್ಟು ಹಾಲು ಅಥವಾ ಗಿಣ್ಣು ಅಥವಾ ಪೂರ್ಣಪ್ರಮಾಣದಲ್ಲಿ ಕೊಬ್ಬಿನಂಶ ಇರೋ ಒಂದು ಸ್ಕೂಪ್ ಐಸ್ – ಕ್ರೀಮ್, ಅಂಡಾಣುಗಳ ಬಂಜೆತನದ ಅಪಾಯಾನ (ಗರ್ಭಿಣಿಯಾಗೋಕೆ ಬೇಕಾಗಿರೋ ಆರೋಗ್ಯಯುತ ಮೊಟ್ಟೆಗಳನ್ನ ಉತ್ಪಾದಿಸೋದಕ್ಕೆ ಆಗದೇ ಇರೋ ಸ್ಥಿತಿ) ತಗ್ಗಿಸಬಲ್ಲವು. ಇದರ ಜೊತೆಗೆ ದಿನದ ನಿಮ್ಮ ಎರಡು ಹೊತ್ತಿನ ಊಟಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರೋ ಹಸಿರು ಸೊಪ್ಪುಯುಕ್ತ ತರಕಾರಿಗಳು, ಹುರುಳಿಕಾಳು, ಹಾಗೂ ತೆಳು ಮಾಂಸ ಇರೋದನ್ನ ಖಾತ್ರಿ ಮಾಡ್ಕೊಳ್ಳಿ. ಯಾಕೇಂದ್ರೇ ಕೆಲವು ಸಂಶೋಧನೆಗಳು ತೋರಿಸಿಕೊಟ್ಟಿರೋ ಪ್ರಕಾರ, ಕಬ್ಬಿಣಾಂಶದ ಕೊರತೆಯ ಕಾರಣದಿಂದ ರಕ್ತಹೀನತೆಯಿಂದ ಬಳಲೋ ಮಹಿಳೆಯರಲ್ಲಿ ಋತುಚಕ್ರಗಳು ನಿಯಮಿತವಾಗಿರೋಲ್ಲ.

ಯಾವುದೇ ವಿಚಾರಕ್ಕೂ ಅತಿಯಾಗಿ ಚಿಂತೆ ಮಾಡಿಕೊಳ್ಳೋದು ಬೇಡ. ಅಧ್ಯಯನಗಳು ತೋರಿಸಿಕೊಟ್ಟಿರೋ ಪ್ರಕಾರ, ಅತಿಯಾದ ಚಿಂತೆ, ದುಗುಡ, ಮತ್ತು ಕಳವಳ; ನಿಮ್ಮ ದೇಹದ ಹಾರ್ಮೋನುಗಳ ಮಟ್ಟಗಳನ್ನ ಏರುಪೇರಾಗಿಸಿ ಹಾಗೂ ಗರ್ಭಕೋಶದ ಲೋಳೆಯನ್ನ ಬರಿದಾಗಿಸಿ, ನೀವು ಗರ್ಭಿಣಿಯಾಗೋ ಸಾಧ್ಯತೇನಾ ತಗ್ಗಿಸಿಬಿಡುತ್ತವೆ. ನಾವಿಲ್ಲಿ ಪ್ರಸ್ತಾಪಿಸುತ್ತಿರುವುದು ಅತಿಯಾದ ಚಿಂತೆ, ಉದ್ವೇಗಗಳ ಬಗ್ಗೆ; ಉದಾಹರಣೆಗೆ ಯಾವಾಗಲೂ ಕಿರಿಕಿರಿ ಮಾಡೋ ಮೇಲಾಧಿಕಾರಿ, ಅಥವಾ ಸಿಕ್ಕಾಪಟ್ಟೆ ಹಠಮಾಡೋ ಮಗು ಇಂತಹವುಗಳು. ಹಾಗಾಗಿ ವಿಪರೀತ ಕೆಲಸದೊತ್ತಡವನ್ನ ಭಾವೀ ತಾಯಾಗಲಿರೋ ನೀವು ಮೈಮೇಲೆ ಹಾಕ್ಕೋಬಾರ್ದು. ಮನಸ್ಸಿಗೆ ಹಿತ ನೀಡೋವಂತಹ ಯೋಗ ಅಥವಾ ಜುಂಬಾ ಕ್ಲಾಸ್, ಸಂಗೀತವನ್ನ ಆಲಿಸೋದು ಇಂತಹ ಚಟುವಟಿಕೆಗಳೇ ನಿಮ್ಮ ಈಗಿನ ಪರಿಸ್ಥಿತಿಗೆ ಪೂರಕವಾದವುಗಳು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!