ಇದೇ ತಿಂಗಳಿಂದ ಕನ್ನಡ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ತೆರೆಗೆ ಬರೋಕೆ ಸಿದ್ಧವಾಗಿದೆ. ಬಿಗ್ ಬಾಸ್ ಮನೆ ಒಳಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದ್ದು ಮನೆಯೊಳಗೆ ಹೋಗುವವರ ಹೆಸರು ಕೂಡಾ ಈಗ ಬಯಲಾಗಿದೆ. ಇದರ ಜತೆ ಜತೆಗೆ ಸುದೀಪ್ ಸಂಭಾವನೆ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಹರಿದಾಡುತ್ತಿವೆ. ಹಾಗಾದರೆ, ಸುದೀಪ್ ಒಂದು ಸೀಸನ್ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದಕ್ಕೆ ಇಲ್ಲಿದೆ ವಿವರ.
ಫೆಬ್ರವರಿ 28, 2021ರಂದು ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗುತ್ತಿದೆ. ಈ ಶೋ ಬಗ್ಗೆ ನಟ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಬಿಗ್ ಬಾಸ್ ಆರಂಭದಲ್ಲಿ ಹಿರಿತೆರೆ ಹಾಗೂ ಕಿರಿತೆರೆಯಲ್ಲಿ ಗುರುತಿಸಿಕೊಂಡವರನ್ನು ಮಾತ್ರ ಕರೆಸಿಕೊಳ್ಳುತ್ತಿದ್ದರು. ನಂತರ ಸಾಮಾನ್ಯ ವ್ಯಕ್ತಿಗಳಿಗೂ ಬಿಗ್ ಬಾಸ್ ಮನೆಯಲ್ಲಿ ಪ್ರವೇಶ ಸಿಕ್ಕಿತ್ತು. ಆದರೆ, ಕಳೆದ ಬಾರಿಯಿಂದ ಜನಸಾಮಾನ್ಯರಿಗೆ ಬಿಗ್ ಬಾಸ್ ಮನೆ ಪ್ರವೇಶಿಸೋದಕ್ಕೆ ಅವಕಾಶವಿಲ್ಲ. ಹೀಗಾಗಿ, ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬಿಗ್ ಬಾಸ್ ಮನೆಗೆ ಯಾರು ಫಿಟ್ ಆಗ್ತಾರೆ ಎನ್ನುವ ಗೊಂದಲ ಅಥವಾ ಪ್ರಶ್ನೆ ಸದಾ ಇರತ್ತೆ. ಬಿಗ್ ಬಾಸ್ ಮನೆಗೆ ಸ್ಪರ್ಧಿಗಳನ್ನು ಕಳಿಸುವಾಗ ಪ್ರತಿ ಸ್ಪರ್ಧಿಯೂ ಗೆಲ್ಲಲಿ ಎನ್ನುವ ಆಶಯದೊಂದಿಗೆ ಕಳಿಸುತ್ತೇವೆ. ಇನ್ನು ಅವರಲ್ಲಿರುವ ಪ್ರತಿಭೆ ಹೊರಬರಲಿ ಎಂದು ಕೂಡ ಕಳಿಸುತ್ತೇವೆ. ಇದು ಸೆಲೆಬ್ರಿಟಿ ಸೀಸನ್. ಕೊರೊನಾ ಕಾರಣಕ್ಕಾಗಿ ಈಗಾಗಲೇ ಕೊರೊನಾ ಪರೀಕ್ಷೆ ಮಾಡಿಸಿ ಈಗಾಗಲೇ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಮೂರು ಬಾರಿ ಕೊರೊನಾ ಪರೀಕ್ಷೆ ಮಾಡಲಾಗುವುದು. ಪಾಸಿಟಿವ್ ಬಂದಲ್ಲಿ ಆ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗುವುದಿಲ್ಲ. ಇದು ನಿಜಕ್ಕೂ ಸವಾಲಿನ ಕೆಲಸ. ಅನಿವಾರ್ಯತೆ ಇರೋದರಿಂದ ಈ ಸವಾಲು ಸ್ವೀಕರಿಸಿ ಸ್ಪರ್ಧಿಗಳನ್ನು ಮಕ್ಕಳ ರೀತಿ ನೋಡಿಕೊಳ್ಳಬೇಕು ಎಂದು ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.
ಸೀಸನ್ 1ರಿಂದ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ. ಈ ಬಾರಿಯು ಬಿಗ್ ಬಾಸ್ ಮನೆಗೆ ಸುದೀಪ್ ಸಾರಥ್ಯವೇ ಇರಲಿದೆ. ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳ ಜತೆ ಮಾತುಕತೆ ನಡೆಸುತ್ತಾರೆ. ಸುದೀಪ್ ತಮ್ಮ ಮಾತಿನ ಮೂಲಕವೇ ಎಲ್ಲರಿಗೂ ಇಷ್ಟವಾಗುತ್ತಾರೆ. ಅವರ ನಿರೂಪಣೆಯೆ ಬಿಗ್ ಬಾಸ್ಗೆ ಒಂದು ಶೋಭೆ ಎಂದರೆ ತಪ್ಪಾಗಲಾರದು. ಹೀಗಾಗಿ, ಬಿಗ್ಬಾಸ್ಗೆ ಸುದೀಪ್ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ.
ಬಿಗ್ ಬಾಸ್ ಮೂರು ಸೀಸನ್ಗಳನ್ನು ಯಾವುದೇ ಒಪ್ಪಂದ ಇಲ್ಲದೆ ಸುದೀಪ್ ನಡೆಸಿಕೊಟ್ಟಿದ್ದರು. ನಂತರದ ಐದು ಸೀಸನ್ಗೆ ಸುದೀಪ್ ಒಪ್ಪಂದ ಮಾಡಿಕೊಂಡಿದ್ದರು. ಸೀಸನ್ 8ಕ್ಕೆ ಈ ಒಪ್ಪಂದ ಪೂರ್ಣಗೊಳ್ಳಲಿದೆ. ಈ ಐದು ಸೀಸನ್ಗೆ ಸುದೀಪ್ 20 ಕೋಟಿ ರೂಪಾಯಿ ಪಡೆದಿದ್ದಾರೆ. ಅಂದರೆ, ಒಂದು ಸೀಸನ್ಗೆ 4 ಕೋಟಿ ರೂಪಾಯಿ ಆಗಲಿದೆ. ಇನ್ನು, 8 ಸೀಸನ್ ಪೂರ್ಣಗೊಂಡ ನಂತರವೂ ಸುದೀಪ್ ಅವರೇ ಬಿಗ್ ಬಾಸ್ ನಡೆಸಿಕೊಡುವ ಸಾಧ್ಯತೆ ಇದೆ. ಸಾಕಷ್ಟು ವೀಕ್ಷಕರು ಸುದೀಪ್ಗಾಗಿಯೇ ಬಿಗ್ ಬಾಸ್ ನೋಡುವವರಿದ್ದಾರೆ. ಹೀಗಾಗಿ ಮುಂದಿನ ಸೀಸನ್ಗಳನ್ನೂ ಅವರೇ ನಡೆಸಿಕೊಡಬಹುದು ಎನ್ನಲಾಗುತ್ತಿದೆ.