ಸರಳತೆಯ ಸಾಧಕಿ, ಸಜ್ಜನಿಕೆಯ ಪೋಷಕಿ ಸುಧಾಮೂರ್ತಿ ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು. ಬದುಕು ಬಡತನದಲ್ಲಿ ಆರಂಭವಾದರೂ ಮುಂದುವರೆಯುತ್ತಿರುವುದು ಮಾತ್ರ ಪರಿಶುದ್ಧ ಶ್ರೀಮಂತಿಕೆಯಲ್ಲಿ. ತನ್ನ ಮಾತೃ ಹೃದಯದಲ್ಲಿರುವ ಅಪಾರ ಪ್ರೀತಿಯನ್ನು ಬಡವರಿಗೆ , ನೊಂದವರಿಗೆ , ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ಹಂಚುತ್ತಿದ್ದಾರೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ತಾಯಿಭಾಷೆ, ತಾಯಿ ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಗ್ರಜನೆನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ತನ್ನನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ ಹಣ, ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿದ್ದಾರೆ. ಇಷ್ಟು ಸರಳ ವ್ಯಕ್ತಿತ್ವ ಹೊಂದಿದ ಸುಧಾ ಮೂರ್ತಿ ಅವರು ತನ್ನ ಹೆಸರಲ್ಲಿ ಟೀ ಸ್ಟಾಲ್ ತೆರೆದಿದ್ದ ಯುವಕನಿಗೆ ಕೊಟ್ಟ ದೊಡ್ಡ ಸರ್ಪ್ರೈಸ್ ಏನು ಗೊತ್ತಾ
ಗೆಜ್ಜಲಗೆರೆ ಗ್ರಾಮದ ಯುವಕ ಸುನೀಲ್‌ಕುಮಾರ್ ವರ್ಷದ ಹಿಂದೆ ಆರಂಭಿಸಿದ್ದ ಸ್ಟಾಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಬೆಂಗಳೂರು ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿ ಪಟ್ಟಣದ ಕೊಲ್ಲಿ ಸರ್ಕಲ್‌ನಲ್ಲಿರುವ ಸುಧಾಮೂರ್ತಿ ಅಮ್ಮ ಟೀ ಸ್ಟಾಲ್ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದಕ್ಕೆಲ್ಲಾ ಕಾರಣ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಒಂದು ಫೇಸ್‌ಬುಕ್ ಪ್ರಕಟಣೆ. ಹೆದ್ದಾರಿಯಲ್ಲಿ ಓಡಾಡುವಾಗ ಸುರೇಶ್‌ಕುಮಾರ್ ಅವರಿಗೆ ಈ ಕ್ಯಾಂಟೀನ್ ವಿಶೇಷ ಅನ್ನಿಸಿತ್ತು. ತಕ್ಷಣ ಸುನೀಲ್ ಕುಮಾರ್ ವಿವರ ಸಂಗ್ರಹ ಮಾಡಿ, ಸುನೀಲ್‌ಕುಮಾರ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸುರೇಶ್‌ಕುಮಾರ್ ಅವರು ಟೀ ಸ್ಟಾಲ್ ಚಿತ್ರ, ಮಾಲೀಕನ ಮೊಬೈಲ್ ನಂಬರ್ ಸಮೇತ ತಮ್ಮ ಫೇಸ್‌ಬುಕ್ ಪುಟದಲ್ಲಿ ಸಂದೇಶ ಪ್ರಕಟಿಸಿದ್ದರು. ಸುಧಾಮೂರ್ತಿ ಅವರನ್ನು ಭೇಟಿಯಾಗದಿದ್ದರೂ ಅವರ ಸರಳತೆ ಸಮಾಜ ಸೇವೆಯಿಂದ ಪ್ರೇರಣೆಗೊಂಡು ಸುನೀಲ್‌ಕುಮಾರ್ ಸುಧಾಮೂರ್ತಿ ಹೆಸರಿನಲ್ಲಿ ಟೀ ಸ್ಟಾಲ್ ಮಾಡಿದ್ದಾರೆ ಎಂದು ಸಚಿವರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದರು.
ಇದಾದ ನಂತರ ಸುಧಾಮೂರ್ತಿ ಅಮ್ಮ ಟೀ ಸ್ಟಾಲ್ ನೆಟ್ಟಿಗರ ಆಕರ್ಷಣೆಯ ತಾಣವಾಯಿತು. ಹೆದ್ದಾರಿಯಲ್ಲಿ ಓಡಾಡುವವರು ಟೀ ಸ್ಟಾಲ್‌ಗೆ ಭೇಟಿ ನೀಡಿ ತೆರಳುತ್ತಿದ್ದರು. ಈ ಸಂದೇಶ ಸ್ವತಃ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರಿಗೂ ತಲುಪಿತು. ಸುನೀಲ್‌ಕುಮಾರ್ ಜನ್ಮದಿನದ ದಿನದಂದು ಸ್ವತಃ ಸುಧಾಮೂರ್ತಿ ಅವರೇ ಕರೆ ಮಾಡಿ ಸುನೀಲ್‌ಕುಮಾರ್ ಅವರನ್ನು ಅಭಿನಂದಿಸಿದರು. ತಮ್ಮ ಸರಳತೆ ಹಾಗೂ ಸಮಾಜ ಸೇವೆಯ ಬಗ್ಗೆ ಅಪಾರ ಗೌರವವಿದೆ. ನೆರೆ ಸಂತ್ರಸ್ತರಿಗೆ ನೆರವು ಕೋವಿಡ್19 ಸಂದರ್ಭದಲ್ಲಿ ತಾವು ಸಮಾಜಕ್ಕೆ ನೀಡಿದ ಕಾಣಿಕೆಗಳನ್ನು ಗಮನಿಸಿ ನಿಮ್ಮ ಹೆಸರನ್ನು ಟೀ ಸ್ಟಾಲ್‌ಗೆ ಇಟ್ಟಿದ್ದೇನೆ ಎಂದು ಸುಧಾಮೂರ್ತಿ ಅವರಿಗೆ ಹೇಳಿರುವುದಾಗಿ ಸುನೀಲ್‌ಕುಮಾರ್ ಆನಂದದಿಂದ ಹೇಳಿಕೊಳ್ಳುತ್ತಾರೆ. ಕೊರೊನಾ ಸೋಂಕು ಕಡಿಮೆಯಾದ ತಕ್ಷಣ ಟೀ ಸ್ಟಾಲ್ ಗೆ ಭೇಟಿ ನೀಡಿ ಟೀ ಕುಡಿಯುವುದಾಗಿ ಸುಧಾಮೂರ್ತಿ ಅಮ್ಮ ತಿಳಿಸಿದ್ದಾರೆ. ಅವರ ಬರುವಿಕೆಗಾಗಿ ಕಾಯುತ್ತಿದ್ದೇನೆ ಎಂದು ಸುನೀಲ್‌ಕುಮಾರ್ ಹೇಳಿದರು.