ಹಳೆಯ ಕ್ಯಾಲೆಂಡರ್ ಗಳನ್ನು ನಾವೂ ಎಸೆಯುತ್ತೆವೆ. ಇಲ್ಲವೇ ಅವುಗಳನ್ನು ಶೇಖರಿಸಿಟ್ಟು ರದ್ದಿಗೆ ಹಾಕುತ್ತೆವೆ. ಹಾಗೆ ಕ್ಯಾಲೆಂಡರ್ ಗಳನ್ನು ಶೇಖರಿಸಿಟ್ಟಿದ್ದರೆ ಈ ಮಾಹಿತಿ ತುಂಬಾ ಉಪಯೋಗವಾಗುತ್ತದೆ. ಹಳೆಯ ಕ್ಯಾಲೆಂಡರ್ ಬಳಸಿ ಗೋಡೆ ಮೇಲೆ ಹಾಕುವ ಹ್ಯಾಂಗಿಂಗ್ ಮಾಡುವ ಮಾಹಿತಿ ಇಲ್ಲಿದೆ. ಕ್ಯಾಲೆಂಡರ್ ನಿಂದ ಕೆಲವು ಹಾಳೆಗಳನ್ನು ಬಿಡಿಸಿಟ್ಟುಕೊಳ್ಳಬೇಕು. ನಂತರ ಒಂದು ಪೆನ್ಸಿಲ್ ನಿಂದ ಕ್ಯಾಲೆಂಡರ್ ಹಾಳೆಯ ಒಂದು ತುದಿಯಲ್ಲಿ ಇಟ್ಟುಕೊಂಡು ಮಡಿಸುತ್ತಾ ಬರಬೇಕು. ಹಾಗೆ ಮಡಿಸುತ್ತಾ ಇನ್ನೊಂದು ತುದಿಯ ಕಡೆ ಬಂದಾಗ ಅದಕ್ಕೆ ಗಮ್ ಹಾಕಿ ಅಂಟಿಸಿಕೊಳ್ಳಬೇಕು. ಹೀಗೆಯೆ ಕೆಲವು ಪೇಪರ್ ರೊಲ್ ಗಳನ್ನು ಮಾಡಿಕೊಳ್ಳಬೇಕು. ಅವುಗಳನ್ನು ಗಮ್ ನ ಸಹಾಯದಿಂದ ಒಂದರ ತುದಿ ಒಳಗೆ ಇನ್ನೊಂದರ ತುದಿ ಇಟ್ಟು ಅಂಟಿಸಿಕೊಳ್ಳಬೇಕು.
ಮಧ್ಯಮ ಗಾತ್ರದ ಒಂದು ಪಾತ್ರೆ ತೆಗೆದುಕೊಂಡು ಅದರ ಸುತ್ತಲು ಈ ಪೇಪರ್ ರೊಲ್ ನ್ನು ಸುತ್ತುತ್ತಾ ಹೋಗಬೇಕು. ಕೊನೆಯಲ್ಲಿ ಅದಕ್ಕೆ ಗಮ್ ಹಾಕಿ ಗಟ್ಟಿಯಾಗಿ ಅಂಟಿಸಿಕೊಳ್ಳಬೇಕು. ಮತ್ತಷ್ಟು ಗಟ್ಟಿಯಾಗಲೂ ಸೆಲ್ಲೊ ಟೆಪ್ ಗಳನ್ನು ಕೂಡ ಬಳಸಬಹುದು. ಮಾಡಿಟ್ಟ ಪೇಪರ್ ರೊಲ್ ಗೆ ಆರು ಎಳೆಗಳಲ್ಲಿ ಉಲ್ಲನ್ ತೆಗೆದುಕೊಂಡು ಸುತ್ತಬೇಕು. ಸುತ್ತುವ ಮೊದಲು ಪೇಪರ್ ರೊಲ್ ಹಾಗೂ ಉಲ್ಲನ್ನಿನ ತುದಿಗಳಿಗೆ ಗಮ್ ಹಾಕಿಕೊಳ್ಳಬೇಕು. ಬೇಕಾದಲ್ಲಿ ಗಮ್ ಹಾಕುತ್ತಾ ಎಲ್ಲಿಯೂ ಪೇಪರ್ ಕಾಣಿಸದಂತೆ ಸರಿಯಾಗಿ ಉಲ್ಲನ್ ಸುತ್ತಿಕೊಳ್ಳಬೇಕು. ಹೆಚ್ಚು ಉಲ್ಲನ್ ಎಳೆಗಳನ್ನು ಸಹ ಬಳಸಬಹುದು. ಪೂರ್ತಿ ಸುತ್ತಿದ ಆದ ಬಳಿಕ ಕೊನೆಯಲ್ಲಿ ಗೋಡೆಗೆ ತೂಗಿ ಹಾಕುವಂತೆ ಕೊಂಚ ದಾರವನ್ನು ಇಡಬೇಕು. ನಂತರ ಸಣ್ಣ ಸಣ್ಣ ಹೂವಿನ ಅಲಂಕಾರಕ್ಕಾಗಿ ಹೂವುಗಳನ್ನು ಮಾಡಿಕೊಳ್ಳಬೇಕು. ಅದು ಹೇಗೆಂದರೆ ಒಂದು ಪೋರ್ಕ್ ಗೆ ಉಲ್ಲನ್ನಿನ ಸಣ್ಣ ದಾರವನ್ನು ಮದ್ಯದಲ್ಲಿ ಸಿಕ್ಕಿಸಿಟ್ಟುಕೊಂಡು ನಿಮಗೆ ಬೇಕಾದ ಬಣ್ಣದ ಮತ್ತೊಂದು ಉಲ್ಲನ್ನನ್ನು ಫೊರ್ಕ್ ಗೆ ಸುತ್ತಿಕೊಳ್ಳಬೇಕು.
ಹೆಚ್ಚು ಸುತ್ತಿಕೊಂಡರೆ ಹೂವು ದಪ್ಪವಾಗಿ ಚೆಂದವಾಗಿ ಬರುತ್ತದೆ. ನಂತರ ಪೋರ್ಕ್ ಗೆ ಮೊದಲೆ ಸಿಕ್ಕಿಸಿಕೊಂಡ ದಾರದ ಸಹಾಯದಿಂದ ಸುತ್ತಿದ ಅರದ ಮಧ್ಯ ಭಾಗಕ್ಕೆ ಒಂದೆರಡು ಬಿಗಿಯಾದ ಗಂಟು ಹಾಕಿ ಪೋರ್ಕ್ ನಿಂದ ಉಲ್ಲನ್ ಅನ್ನು ಹೊರತೆಗೆಯಬೇಕು. ಅದನ್ನು ಹಾಗೆಯೆ ಬಿಡಬಹುದು ಇಲ್ಲವೇ ಅದನ್ನು ತುದಿಯಲ್ಲಿ ಕತ್ತರಿಸಿಕೊಳ್ಳಬಹುದು. ಈ ರೀತಿಯಲ್ಲಿಯೆ ಮತ್ತೊಂದು ಸ್ವಲ್ಪ ದೊಡ್ಡ ಗಾತ್ರದ ಹೂವನ್ನು ಹಾಗೂ ಚಿಕ್ಕ ಗಾತ್ರದ ಹೂವನ್ನು ಮಾಡಿಕೊಳ್ಳಬೇಕು. ನಂತರ ಟೈಸಲ್ ಮಾಡ ಬೇಕು ಹೇಗೆಂದರೆ ಅಂಗೈಗೆ ಬೇಕಾದ ಬಣ್ಣದ ಉಲ್ಲನ್ ಹದಿನೈದು- ಇಪ್ಪತ್ತು ಎಳೆಗಳಲ್ಲಿ ಸುತ್ತಿಕೊಳ್ಳಬೇಕು. ಅದಕ್ಕೆ ಬೇರೆ ಬಣ್ಣದ ಇಲ್ಲವೇ ಅದೇ ಬಣ್ಣದ ಸಣ್ಣ ಉಲ್ಲನ್ ದಾರದಿಂದ ಮಧ್ಯ ಗಂಟು ಹಾಕಿಕೊಂಡು ಅದರ ಮೇಲಿನ ಭಾಗಕ್ಕೆ ಸುತ್ತಿಕೊಳ್ಳಬೇಕು. ನಂತರ ಕೆಳಗಿನ ಭಾಗವನ್ನು ಕತ್ತರಿಸಿಕೊಳ್ಳಬೇಕು. ಈ ತರಹದ ಮೂರು ಟೈಸಲ್ ಗಳನ್ನು ಮಾಡಿಕೊಳ್ಳಬೇಕು.
ನಂತರ ಸೂಜಿ ದಾರ ತೆಗೆದುಕೊಂಡು ಟೈಸಲ್ ನ ಮೇಲ್ಭಾಗದಲ್ಲಿ ಚುಚ್ಚಿಕೊಂಡು ಬಂಗಾರ ಬಣ್ಣದ ಮಣಿಗಳನ್ನು ತೆಗೆದುಕೊಂಡು ಪೊಣಿಸಿಕೊಳ್ಳಬೇಕು. ಎಷ್ಷು ಉದ್ದ ಬೇಕು ಅಷ್ಟು ಉದ್ದವಾಗಿ ಪೊಣಿಸಿಕೊಳ್ಳಬಹುದು. ಆದರೆ ಒಂದು ಟೈಸಲ್ ಸ್ವಲ್ಪ ಉದ್ದವಾಗಿ ಉಳಿದೆರಡನ್ನು ಮೊದಲನೆಯ ಟೈಸಲ್ ಗಿಂತ ಗಿಡ್ಡವಾಗಿ ಪೊಣಿಸಿಕೊಳ್ಳಬೇಕು. ಹೀಗೆ ತಯಾರಾದ ಟೈಸಲ್ ಗಳನ್ನು ನಾವು ಮೊದಲೆ ಸಿದ್ದಪಡಿಸಿದ ಪೇಪರ್ ರೊಲ್ ಹ್ಯಾಂಗಿಂಗ್ ನ ಹಿಂಬಾಗದಲ್ಲಿ ಗಮ್ ನಿಂದ ಅಂಟಿಸಿಕೊಳ್ಳಬೇಕು. ಮಧ್ಯದಲ್ಲಿ ಉದ್ದದ ಟೈಸಲ್ ಹಾಗೂ ಅಕ್ಕಪಕ್ಕದಲ್ಲಿ ಸ್ವಲ್ಪ ಗಿಡ್ಡ ಇರುವ ಟೈಸಲ್ ನ್ನು ಅಂಟಿಸಿಕೊಂಡು ಒಣಗಲು ಬಿಡಬೇಕು. ಇದೇ ರೀತಿಯಲ್ಲಿ ಮೊದಲು ಮಾಡಿಟ್ಟಿರುವ ಒಂದು ಹೂವಿಗೆ ಮಣಿ ಪೊಣಿಸಿಕೊಂಡು ಹ್ಯಾಂಗಿಂಗ್ ನ ಮೇಲಿನ ಮಧ್ಯಭಾಗದಲ್ಲಿ ಅಂಟಿಸಿಕೊಳ್ಳಬೇಕು. ಹಾಗೆ ಅಂಟಿಸಿ ಆದ ಮೇಲೆ ಅದೇ ಜಾಗದಲ್ಲಿ ಮಾಡಿದ ದೊಡ್ಡ ಗಾತ್ರದ ಹೂವಿಗೆ ಗಮ್ ಹಾಕಿ ಅಂಟಿಸಬೇಕು. ನಂತರ ಚಿಕ್ಕ ಹೂವನ್ನು ನೇರವಾಗಿ ಕೆಳಗಡೆಗೆ ಅಂಟಿಸಿಕೊಳ್ಳಬೇಕು. ಹೀಗೆ ಅಂಟಿಸಿಯಾದ ನಂತರ ಖಾಲಿ ಇರುವ ಪೇಪರ್ ರೊಲ್ ಮೇಲೆ ಸ್ಟೊನ್ ನ ಹೂವು, ಎಲೆ, ಮಣಿ ಯಾವ ರೀತಿಯದು ಬೇಕು ಅದನ್ನು ಅಂಟಿಸಿಕೊಳ್ಳಬಹುದು. ಹೀಗೆ ನೀವು ಬೇಕಾದ ರೀತಿಯಲ್ಲಿ ಹ್ಯಾಂಗಿಂಗ್ ಅನ್ನು ಅಲಂಕಾರ ಮಾಡಿಕೊಳ್ಳಬಹುದು.