ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನಕ್ಕೆ ದಿನಗಣನೆ ಶುರುವಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದೇ ಅಂದರೆ, ಮಾರ್ಚ್ 17ರಂದೇ ಅಪ್ಪು ನಾಯಕನಾಗಿ ಅಭಿನಯಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಸಿನಿಮಾ ಬಿಡುಗಡೆಯಾಗಲಿದೆ. ಹಾಗಾಗಿ ಎಲ್ಲೆಲ್ಲೂ ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಾಗುತ್ತಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ಜೊತೆಗೆ, ‘ಜೇಮ್ಸ್’ ಜಾತ್ರೆ ಕೂಡ ನಡೆಯಲಿದ್ದು ಅಪ್ಪು ಅಭಿಮಾನಿಗಳು, ಸಿನಿಮಾ ಪ್ರೇಕ್ಷಕರು ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ‘ಜೇಮ್ಸ್’ ಅಬ್ಬರ, ಸಮುದ್ರ ಅಲೆಯಂತೆ ಸಪ್ಪಳ ಮಾಡುತ್ತದೆ. 1976ರಲ್ಲಿ ತೆರೆಕಂಡ ಡಾ.ರಾಜ್‌ಕುಮಾರ್ ಅಭಿನಯದ ಚಿತ್ರ ‘ಪ್ರೇಮದ ಕಾಣಿಕೆ’. ಈ ಚಿತ್ರದಲ್ಲಿ ಆರು ತಿಂಗಳ ಪುಟಾಣಿ ಮಗು ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದರು. ಅಂದಿನಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಪುನೀತ್ ರಾಜ್‌ಕುಮಾರ್ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ತಮ್ಮ 46 ವರ್ಷದ ಸಿನಿ ಜೀವನದಲ್ಲಿ ಇದುವರೆಗೂ ಪುನೀತ್ ರಾಜ್‌ಕುಮಾರ್ ನಟಿಸಿದ ಯಾವ ಚಿತ್ರವೂ ಅವರ ಹುಟ್ಟುಹಬ್ಬದಂದು ತೆರೆಗೆ ಬಂದಿರಲಿಲ್ಲ. ಹೀಗಾಗಿ, 2022ರ ಮಾರ್ಚ್ 17ರಂದೇ ‘ಜೇಮ್ಸ್’ ಚಿತ್ರವನ್ನು ತೆರೆಗೆ ತರಬೇಕು ಎಂಬುದರ ಕುರಿತಾದ ಚರ್ಚೆ ಪುನೀತ್ ರಾಜ್‌ಕುಮಾರ್ ಅವರ ಜೊತೆ ಕಳೆದ ವರ್ಷವೇ ನಡೆದಿತ್ತು.
ಈಗಾಗಲೇ ಜೇಮ್ಸ್ ಚಿತ್ರದ ಥಿಯೇಟರ್ ಲಿಸ್ಟ್ ಹೊರ ಬಂದಿದೆ. ಜೇಮ್ಸ್ ಸಿನಿಮಾ ಯಾವೆಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎನ್ನುವ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಅವರಿಂದಲೇ ಜೇಮ್ಸ್ ಚಿತ್ರದ ತೂಕ ಮತ್ತಷ್ಟು ಹೆಚ್ಚಿದೆ. ಹಾಗಾಗಿ ಜೇಮ್ಸ್ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದು ಬಿಟ್ಟಿದೆ. ಜೇಮ್ಸ್’ ಚಿತ್ರದ ರಿಲೀಸ್ ಡೇಟ್ ಕುರಿತಾಗಿ ನಿರ್ದೇಶಕ ಚೇತನ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗೂ ಪುನೀತ್ ರಾಜ್‌ಕುಮಾರ್ ಮಧ್ಯೆ ಅನೇಕ ಬಾರಿ ಚರ್ಚೆ ನಡೆದಿದ್ದವು. ಆ ವೇಳೆ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು ಎಂಬುದನ್ನ ನಿರ್ದೇಶಕ ಚೇತನ್ ಕುಮಾರ್ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಅಪ್ಪು ಸರ್ ಜೊತೆಗೆ ಜೇಮ್ಸ್ ರಿಲೀಸ್ ಡೇಟ್ ಡಿಸ್ಕಷನ್ ತುಂಬಾ ಆಗಿತ್ತು. ಅವರು ಹೇಳ್ತಾಯಿದ್ದದ್ದು ಇಷ್ಟೇ. “ಯಾವ ಚಿತ್ರವೂ ಬರ್ತ್‌ಡೇಗೆ ರಿಲೀಸ್ ಆಗಿಲ್ಲ. ಇದನ್ನ ರಿಲೀಸ್ ಮಾಡೋಣ. ಆದರೆ ಬರ್ತ್‌ಡೇ ಅಂತ ಬೇಡ. ರಾಯರ ದಿನ ಅಂತ ಮಾಡೋಣ’’ ಅಂತ ಹೇಳ್ತಿದ್ರು. ಈ ಸಲ ಮಾರ್ಚ್ 17 ಗುರುವಾರ ಬಂದಿದೆ. ಹೀಗಾಗಿ ಅದೇ ಡೇಟ್‌ಗೆ ರಿಲೀಸ್ ಮಾಡೋಣ ಅಂತ ನಾವು ಟಾರ್ಗೆಟ್ ಇಟ್ಟುಕೊಂಡಿದ್ವಿ. ಈಗ ಅದೇ ರೀತಿಯಲ್ಲಿ ಅಪ್ಪು ಸರ್ ಅವರ ಹುಟ್ಟುಹಬ್ಬದಂದೇ ಜೇಮ್ಸ್ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಜೇಮ್ಸ್ ಕನ್ನಡ ವರ್ಷನ್ ಸೆನ್ಸಾರ್ ಆಗಿದೆ. ಈ ವಾರದಲ್ಲಿ ಇತರೆ ಭಾಷೆಗಳ ಸೆನ್ಸಾರ್ ನಡೆಯಲಿದೆ’’ ಎಂದು ಸಂದರ್ಶನದಲ್ಲಿ ‘ಜೇಮ್ಸ್’ ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.
ಇನ್ನೂ ಸಿನಿಮಾ ವಿತರಕರು ಹೆಚ್ಚಿನ ಹಣ ನೀಡಿ ‘ಜೇಮ್ಸ್’ ಸಿನಿಮಾ ದಕ್ಕಿಸಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಸಿನಿಮಾ ತಂಡ ಅಷ್ಟು ಸುಲಭಕ್ಕೆ ಚಿತ್ರವನ್ನು ಸೇಲ್ ಮಾಡುತ್ತಿಲ್ಲ. ಯಾಕೆಂದರೆ ಜೇಮ್ಸ್ ಸಿನಿಮಾ ಬಿಡುಗಡೆಯಾದ ಬಳಿಕ ಎಷ್ಟು ಗಳಿಕೆ ಮಾಡಬಹುದು? ಎಷ್ಟು ಮಂದಿ ಚಿತ್ರವನ್ನು ನೋಡಬಹುದು ಎನ್ನುವ ಅಂದಾಜು ಸಿಕ್ಕಿದೆ. ಮಾರ್ಚ್ 17ಕ್ಕೆ ‘ಜೇಮ್ಸ್’ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗಾಗಿ ವಿತರಕರು ಸಿನಿಮಾಗಾಗಿ ಮುಗಿ ಬಿದ್ದಿದ್ದಾರೆ. ಆದರೆ ಇದೇ ಸಮಯದಲ್ಲಿ ತಮಗೆ ಬಂದಿರುವ ದೊಡ್ಡ ಆಫರನ್ನು ಚಿತ್ರದ ನಿರ್ಮಾಪಕ ಕಿಶೋರ್ ತಿರಸ್ಕರಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಏಕೆಂದರೆ BKT ಬರೋಬ್ಬರಿ 12 ಕೋಟಿಯ ಆಫರ್ ನೀಡಲಾಗಿತ್ತಂತೆ.
ಅಂದರೆ ಇದು ಬೆಂಗಳೂರು, ತುಮಕೂರು ಮತ್ತು ಕೋಲಾರ ಮಾತ್ರ. ಈ ಮೂರು ಪ್ರದೇಶಗಳ ವಿತರಣೆ ಸೇರಿ 12 ಕೋಟಿ ಆಫರ್ ಮಾಡಲಾಗಿದೆಯಂತೆ. ಆದರೆ ಅದನ್ನು ಚಿತ್ರತಂಡ ತಿರಸ್ಕರಿಸಿದೆಯಂತೆ. ಅಪ್ಪು ಇಲ್ಲ ಆದರೆ, ಅಪ್ಪು ಅರ್ಧಕ್ಕೆ ಬಿಟ್ಟು ಹೋದ ಜೇಮ್ಸ್ ಚಿತ್ರಕ್ಕೆ ಯಾವುದೇ ಮೋಸ ಆಗೋದಿಲ್ಲ. ಈ ಚಿತ್ರದ ಬೆನ್ನಿಗೂ ಕೂಡ ಅಪ್ಪು ನಿಂತಿದ್ದಾರೆ. ಅಪ್ಪು ಅವರನ್ನು ಕಳೆದುಕೊಂಡ ಕರುನಾಡು ಜೇಮ್ಸ್ ಚಿತ್ರದ ಮೂಲಕ ಅವರನ್ನು ನೋಡಲು ಕಾತರದಿಂದ ಕಾಯುತ್ತಿದೆ. ಸಹಸ್ರಾರು ಕನ್ನಡಿಗರ ಮನಸ್ಸು ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಬೇಕು ಎಂದು ಮಿಡಿಯುತ್ತಿದೆ.
ಹಾಗಾಗಿ ಜೇಮ್ಸ್ ಸಿನಿಮಾವನ್ನು ಅತಿ ಹೆಚ್ಚು ಮಂದಿ ನೋಡೇ, ನೋಡುತ್ತಾರೆ ಎನ್ನುವ ಭರವಸೆ ಇದೆ. ಕೇವಲ ಕನ್ನಡಿಗರು, ಕರ್ನಾಟಕ ಮಾತ್ರವಲ್ಲ. ವಿಶ್ವದಾದ್ಯಂತ ಜೇಮ್ಸ್ ಸಿನಿಮಾವನ್ನು ಜನ ನೋಡುತ್ತಾರೆ ಎನ್ನುವ ನಿರೀಕ್ಷೆ ಕೂಡ ಇದೆ. ಜೇಮ್ಸ್ ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಮಲ್ಟಿಪ್ಲೆಕ್ಸ್‌ಗಳನ್ನು ಬಿಟ್ಟು, ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರು ಸೇರಿದಂತೆ ಹೊಸಪೇಟೆ, ಬಳ್ಳಾರಿಯಿಂದ ಹಿಡಿದು ಚಿತ್ರದುರ್ಗ, ಉತ್ತರ ಕರ್ನಾಟಕ, ಶಿವಮೊಗ್ಗ, ಸೇರಿದಂತೆ ತಾಲೂಕು ಸೆಂಟರ್‌ಗಳಲ್ಲೂ ‘ಜೇಮ್ಸ್’ ರಿಲೀಸ್ ಆಗಲಿದೆ. ಆದರೆ ಇಷ್ಟೇ ಅಲ್ಲಾ ಮತ್ತಷ್ಟು ಥಿಯೇಟರ್‌ಗಳ ಸಂಖ್ಯೆ ಹೆಚ್ಚಾಗಲಿದೆ.
ಜೇಮ್ಸ್ ಸಿನಿಮಾಗೆ ಪೈಪೋಟಿ ನೀಡುವ ಸಿನಿಮಾ ಇಲ್ಲ. ಮಾರ್ಚ್ 17 ಮತ್ತು ಆ ವಾರದಲ್ಲಿ ಬೇರೆ ಯಾವ ಚಿತ್ರವೂ ಬಿಡುಗಡೆ ಆಗುತ್ತಿಲ್ಲ. ಜೇಮ್ಸ್ ಸಿನಿಮಾ ಬಿಡುಗಡೆಗೆ ಒಂದು ವಾರ ಮುನ್ನ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಬಿಡುಗಡೆಯಾಗುತ್ತಿದೆ. ಜೇಮ್ಸ್ ತೆರೆಕಂಡ ಒಂದು ವಾರದ ಬಳಿಕ ರಾಜಮೌಳಿ ನಿರ್ದೇಶನದ RRR ರಿಲೀಸ್ ಆಗುತ್ತಿದೆ. ಹೀಗಾಗಿ ಎರಡು ದೊಡ್ಡ ಸಿನಿಮಾಗಳು ಜೇಮ್ಸ್ ಅಕ್ಕಪಕ್ಕನೇ ಬಿಡುಗಡೆಯಾದರೂ, ಒಟ್ಟಿಗೆ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಮೊದಲ ವಾರ ಜೇಮ್ಸ್ ಕನ್ನಡದಲ್ಲಿ ಹೊಸ ದಾಖಲೆಯನ್ನು ಬರೆಯಲಿದೆ. ಹಾಗಾಗಿ ಜೇಮ್ಸ್ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಜೇಮ್ಸ್’ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಲಿದೆ. ಅಂದಹಾಗೆ, ಜೇಮ್ಸ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ತಾರಾಗಣದಲ್ಲಿ ಪ್ರಿಯಾ ಆನಂದ್, ಶರತ್ ಕುಮಾರ್, ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ಚಿಕ್ಕಣ್ಣ, ಅವಿನಾಶ್, ಸಾಧು ಕೋಕಿಲ ಮುಂತಾದವರು ಇದ್ದಾರೆ.