ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸುತ್ತಾಳೆ ಎನ್ನುವುದಕ್ಕೆ ಹಲವರು ಉದಾಹರಣೆಯಾಗಿದ್ದಾರೆ. ಬಡ ಕುಟುಂಬದಿಂದ ಬಂದು, ಶಿಕ್ಷಣ ಪಡೆಯದೆ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಸಾಲುಮರದ ತಿಮ್ಮಕ್ಕ, ಸುಕ್ರಿ ಬೊಮ್ಮಗೌಡ ಮೊದಲಾದವರಾದರೆ ನಮ್ಮ ಸುತ್ತಮುತ್ತ ಬೆಳಕಿಗೆ ಬರದೆ ಸಾಧನೆ ಮಾಡಿದ ಮಹಿಳೆಯರು ಹಲವರಿದ್ದಾರೆ ಅವರಲ್ಲಿ ಭೀಮವ್ವ ಅವರು ಒಬ್ಬರು. ಭೀಮವ್ವ ಅವರ ಬಗ್ಗೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ.

ಗ್ರಾಮದ ಗದ್ದುಗೆ ಆಗಿರಲಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರ ಆಗಿರಲಿ ಒಮ್ಮೆ ಸಿಕ್ಕರೆ ಬಹುತೇಕ ಜನರ ಜೀವನ ಶೈಲಿಯೆ ಬದಲಾಗುತ್ತದೆ ಆದರೆ ಇಲ್ಲೊಬ್ಬರು ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗಿ ಒಂದು ವರ್ಷವಾದರೂ ಜೀವನೋಪಾಯಕ್ಕಾಗಿ ಕೂಲಿ ಕಾಯಕವನ್ನು ಬಿಟ್ಟಿಲ್ಲ. ಅಂದಿನ ಗುಡಿಸಲಿನಲ್ಲಿಯೆ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಇದು ಕುಂದಾಪುರದಿಂದ 5 ಕಿ.ಮೀ ದೂರದ ತಲ್ಲೂರು ಗ್ರಾಮ ಪಂಚಾಯತನ ಅಧ್ಯಕ್ಷೆ ಭೀಮವ್ವ ಅವರ ಕಥೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರಿ ನಿವಾಸಿ ಭೀಮವ್ವ ಅವರ ಪ್ರಾಮಾಣಿಕ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಭೀಮವ್ವ ಕಲಿತಿರುವುದು ಕೇವಲ 2ನೇ ತರಗತಿ. ಸಹಿ ಹಾಕುವುದು, ದೈನಂದಿನ ವ್ಯವಹಾರ ಎಲ್ಲವೂ ಸಲೀಸಾಗಿ ಮಾಡುತ್ತಾರೆ. ಎಲ್ಲಕ್ಕಿಂತ ಹೆಚ್ಚು ಇವರದ್ದು ಒಂದು ರೂಪಾಯಿಗೂ ಕೈ ಚಾಚದಷ್ಟು ಸ್ವಾಭಿಮಾನ. ಜೀವನಕ್ಕೆ ಅವರು ಕೂಲಿಯನ್ನು ನಂಬಿಕೊಂಡಿದ್ದಾರೆ. ಇದು ಊರವರಿಗೆ ಭೀಮವ್ವನ ಮೇಲೆ ಇನ್ನಷ್ಟು ಅಭಿಮಾನಕ್ಕೆ ಹೆಚ್ಚಾಗಲು ಕಾರಣವಾಗಿದೆ. ಅವರು ಆರಂಭದ ಗ್ರಾಮಸಭೆಗಳಲ್ಲಿ ಅಷ್ಟೇನು ಸಕ್ರಿಯರಾಗಿರಲಿಲ್ಲ ನಂತರ ದಿನ ಕಳೆದಂತೆ ತಮ್ಮ ಇತಿಮಿತಿಯಲ್ಲಿ ಉತ್ತಮ ರೀತಿಯಲ್ಲಿಯೆ ಅಧಿಕಾರ ಚಲಾಯಿಸ ತೊಡಗಿದರು ಅಲ್ಲದೆ ತಾನು ರಬ್ಬರ್‌ಸ್ಟಾಂಪ್‌ ಅಧ್ಯಕ್ಷೆ ಅಲ್ಲ ಎನ್ನುವುದನ್ನು ಅವರು ನಿರೂಪಿಸಿದ್ದಾರೆ. 52 ವರ್ಷ ಪ್ರಾಯದ ಭೀಮವ್ವ 27 ವರ್ಷಗಳ ಹಿಂದೆ ಪತಿ ಮರಿಯಪ್ಪ ಹಾಗೂ ಹಿರಿಯ ಮಗ ರಂಗಪ್ಪನೊಂದಿಗೆ ಉಡುಪಿ ಜಿಲ್ಲೆಗೆ ಬಂದಿದ್ದರು. ಅಲ್ಲಿ ಇಲ್ಲಿ ನೆಲೆಸಿ 14 ವರ್ಷಗಳಿಂದ ತಲ್ಲೂರಿನ ಪಿಂಗಾಣಿಗುಡ್ಡೆಯ 5 ಸೆಂಟ್ಸ್‌ ಕಾಲನಿಯಲ್ಲಿ ಪುಟ್ಟ ಗುಡಿಸಲು ಮನೆಯಲ್ಲಿದ್ದಾರೆ.

ಭೀಮವ್ವ ಅವರು ಕೂಲಿ ಕೆಲಸದಲ್ಲಿ ತಂಡದ ನಾಯಕಿಯೂ ಆಗಿದ್ದಾರೆ. ಕೂಲಿ ಕಾಯಕದ ಜತೆಗೆ ಪರಿಸರದ ಆಗುಹೋಗುಗಳಿಗೂ ಸ್ಪಂದಿಸುತ್ತಿದ್ದರು, ಅವರ ಈ ಗುಣವೆ ಪಂಚಾಯತ್‌ ಅಧ್ಯಕ್ಷೆಯನ್ನಾಗಿ ಮಾಡಿತು. ಸ್ಥಳೀಯ ನಾಯಕರೊಬ್ಬರು ಭೀಮವ್ವನಲ್ಲಿರುವ ನಾಯಕತ್ವ ಗುಣವನ್ನು ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಗ್ರಹಿಸಿದರು. ಮೊದಲ ಬಾರಿಗೆ ಸ್ಪರ್ಧಿಸಿದರು ಅಲ್ಲದೆ ಗೆದ್ದು ಬಂದರು, ಭೀಮವ್ವ ಅವರಿಗೆ ಎಸ್‌ಟಿ ಮೀಸಲಾತಿಯಡಿ ಅಧ್ಯಕ್ಷೆ ಗಾದಿಯು ಒದಗಿ ಬಂತು.

ಭೀಮವ್ವ ಅವರಿಗೆ ನಾಲ್ವರು ಪುತ್ರರು ಅವರಲ್ಲಿ ಎರಡನೆಯವರಾದ ಶಿವಾನಂದ ಯೋಧನಾಗಿದ್ದು, ಇನ್ನೋರ್ವ ಪುತ್ರನನ್ನು ಸಹ ಯೋಧನನ್ನಾಗಿ ಮಾಡುವ ಆಸೆ ಭೀಮವ್ವ ಅವರದು. ಹಿರಿಯ ಪುತ್ರ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಮನೆಯಲ್ಲಿದ್ದಾರೆ. ಗುಡಿಸಲು ವಾಸಿಯಾಗಿದ್ದರೂ ಭೀಮವ್ವ ಗ್ರಾಮಸ್ಥರ ನೋವುಗಳಿಗೆ ಮಾತ್ರ ಸದಾ ಸ್ಪಂದಿಸುತ್ತಾರೆ.

ಅವರು ಊರಿಗೆ ವರ್ಷಕ್ಕೊಂದು ಸಲ ಜಾತ್ರೆಗೆ ಹೋಗಿ ಬರುತ್ತೇವೆ, ಈಗ ಇದೆ ನನ್ನೂರು, ಇಲ್ಲಿಯೆ ಕೊನೆಯ ತನಕ ಇರುವಾಸೆ ಎಂದು ಹೇಳುತ್ತಾರೆ ಭೀಮವ್ವ. ಗ್ರಾಮಸ್ಥರು ಗ್ರಾಮಪಂಚಾಯತ್ ಸದಸ್ಯರು ನನಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ಉತ್ತಮ ಆಡಳಿತ ಕೊಡಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾರೆ. ಓದಿದರೆ ಮಾತ್ರ ಉತ್ತಮವಾಗಿ ಆಡಳಿತ ನಡೆಸಬಹುದು ಎಂಬ ಮಾತನ್ನು ಭೀಮವ್ವ ಸುಳ್ಳು ಮಾಡಿದ್ದಾರೆ. 2 ನೇ ತರಗತಿ ಓದಿ ಅಚ್ಚುಕಟ್ಟಾಗಿ ಆಡಳಿತ ನಡೆಸುತ್ತಾ ಗ್ರಾಮಸ್ಥರ ಕಷ್ಟಕ್ಕೆ ಸ್ಪಂದಿಸುವ ಭೀಮವ್ವ ಇಂದಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!