ಜಮೀನು ಹೊಂದಿದ ಪ್ರತಿಯೊಬ್ಬರು ವಿಭಾಗ ಪತ್ರದ ಬಗ್ಗೆ ತಿಳಿದಿರಬೇಕು. ಜಮೀನಿಗೆ ಸಂಬಂಧಪಟ್ಟಂತೆ ವಿಭಾಗ ಪತ್ರ ಅಥವಾ ಪಾರ್ಟಿಶನ್ ಡೀಡ್ ಎಂದರೇನು, ವಿಭಾಗ ಪತ್ರವನ್ನು ಎಲ್ಲಿ ಮತ್ತು ಹೇಗೆ ಮಾಡಿಸಬೇಕು, ವಿಭಾಗ ಪತ್ರ ಮಾಡಿಸಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಹಾಗೂ ವಿಭಾಗ ಪತ್ರ ಮಾಡಿಸಲು ಏನೆಲ್ಲಾ ನಿಯಮಗಳಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ವಿಭಾಗ ಪತ್ರ ಎಂದರೆ ಭಾಗ ಮಾಡುವುದು ಎಂದರ್ಥ ಇದಕ್ಕೆ ವಾಟನಿ, ಪಾಲು ಮಾಡುವುದು ಎಂದೂ ಕೂಡ ಕರೆಯುತ್ತಾರೆ. ಆಸ್ತಿಯನ್ನು ಭಾಗ ಮಾಡಲು ವಿಭಾಗ ಪತ್ರ ಮಾಡಿಸಬೇಕಾಗುತ್ತದೆ. ಅಣ್ಣ ತಮ್ಮ ಆಸ್ತಿಯನ್ನು ತಾವೆ ವಿಭಾಗ ಮಾಡಿಕೊಂಡು ಉಳುಮೆ ಮಾಡಿದರೆ ಸಾಲುವುದಿಲ್ಲ ಕಾನೂನಾತ್ಮಕವಾಗಿ ವಿಭಾಗ ಮಾಡಬೇಕಾದರೆ ನೋಂದಣಿ ಕಚೇರಿಯಲ್ಲಿ ಆಸ್ತಿ ವಿಭಾಗ ಪತ್ರ ಮಾಡಿಸಬೇಕು. ವಿಭಾಗ ಪತ್ರ ಮಾಡಿಸಬೇಕಾದರೆ ಕೆಲವು ದಾಖಲಾತಿಗಳು ಬೇಕು ವಿಭಾಗ ಮಾಡಿಕೊಳ್ಳುವವರ ಆಧಾರ್ ಕಾರ್ಡ್, ಕುಟುಂಬದ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ ವಂಶಾವಳಿ ಪ್ರಮಾಣ ಪತ್ರದಲ್ಲಿ ಹೆಸರಿರುವರು ಕಡ್ಡಾಯವಾಗಿ ಹಾಜರಿದ್ದು ಸಹಿ ಮಾಡಬೇಕು.

ನೋಂದಣಿ ಮಾಡಿಸಲು ಸಾಕ್ಷಿದಾರರು ಹಾಜರಿದ್ದು ಸಾಕ್ಷಿ ಪತ್ರಕ್ಕೆ ಸಹಿ ಹಾಕಬೇಕು. 11 E ನಕ್ಷೆ ಕಡ್ಡಾಯವಾಗಿ ಬೇಕಾಗುತ್ತದೆ. ಈ ಎಲ್ಲಾ ದಾಖಲಾತಿಗಳೊಂದಿಗೆ ವಿಭಾಗ ಪತ್ರ ಬರೆಸಬೇಕು. ವಿಭಾಗ ಪತ್ರದಲ್ಲಿ ಭಾಗವಾಗಬೇಕಾದ ಜಮೀನಿನ ವಿಸ್ತೀರ್ಣ, ಯಾರ ಯಾರ ಪಾಲಿಗೆ ಎಷ್ಟೆಷ್ಟು ಜಮೀನು ಬರುತ್ತದೆ ಎಂದು ಪಾಲಿನ ವಿವರಣೆ ಹಾಗೂ ಹೊಣೆಗಾರಿಕೆ ಎಲ್ಲವನ್ನು ಸ್ಪಷ್ಟವಾಗಿ ವಿವರಿಸಬೇಕು. ವಿಭಾಗ ಪತ್ರದಲ್ಲಿ ಇಸ್ವಿ, ದಿನಾಂಕ ಬರೆಯಬೇಕು. ಪಾರ್ಟಿ ನಂಬರ್ 1 ಕುಟುಂಬದಲ್ಲಿ ಮೊದಲನೆಯವರ ಹೆಸರು, ಗ್ರಾಮದ ಹೆಸರು, ಆಧಾರ್ ಕಾರ್ಡ್ ನಂಬರ್ ಬರೆಯಬೇಕು. ಪಾರ್ಟಿ ನಂಬರ್ 2 ರಲ್ಲಿ ಎರಡನೇಯವರ ಹೆಸರು, ಗ್ರಾಮದ ಹೆಸರು, ಆಧಾರ್ ಕಾರ್ಡ್ ನಂಬರ್ ಬರೆಯಬೇಕು.

ಕುಟುಂಬದ ಸದಸ್ಯರ ಹೆಸರು, ಗ್ರಾಮದ ಹೆಸರು, ಆಧಾರ್ ಕಾರ್ಡ್ ನಂಬರ್ ಬರೆಯಬೇಕು. ನಂತರ ನಾವು ನಮ್ಮ ಜಮೀನನ್ನು ಪಾಲು ಮಾಡಿಕೊಂಡಿದ್ದೇವೆ ಎಂದು ಬರೆದು ಒಬ್ಬರ ಆಸ್ತಿಯ ಮೇಲೆ ಇನ್ನೊಬ್ಬರಿಗೆ ಹಕ್ಕು ಇರುವುದಿಲ್ಲ ಎಂದು ಕೂಡ ಬರೆಯಬೇಕು. ಪಾರ್ಟಿ ನಂಬರ್ 1 ರಲ್ಲಿ ಅವರ ಹೆಸರು, ಅವರ ಪಾಲಿನ ಜಮೀನಿನ ವಿವರ, ಊರಿನ ವಿಳಾಸ, ಚಕ್ಕುಬಂದಿ ವಿವರ ಬರೆಯಬೇಕು. ಹೀಗೆ ಕುಟುಂಬದ ಎಲ್ಲಾ ಸದಸ್ಯರ ಹೆಸರು, ಅವರ ಪಾಲಿಗೆ ಬಂದ ಜಮೀನಿನ ವಿವರ, ವಿಳಾಸ, ಚಕ್ಕುಬಂದಿ ವಿವರವನ್ನು ಬರೆಯಬೇಕು. ಹೆಣ್ಣುಮಕ್ಕಳು ಇದ್ದರೆ ಅವರಿಗೆ ಜಮೀನಿನ ಬದಲಿಗೆ ಹಣ ಕೊಟ್ಟಿದ್ದರೆ ಚೆಕ್ ನ ವಿವರ ಬರೆಯಬೇಕು. ಎಷ್ಟು ಹಾಳೆಗಳಲ್ಲಿ ಮುದ್ರಿಸಲಾಗಿದೆ ಎಂದು ಹಾಗೂ ಮುದ್ರಾಂಕ ಶುಲ್ಕ ಬರೆಯಬೇಕು. ಕೊನೆಗೆ ಎಲ್ಲರ ಹೆಸರು ಬರೆದು ಸಹಿ ಮಾಡಬೇಕು.

ಸಾಕ್ಷಿದಾರರ ಹೆಸರು ಬರೆದು ಸಹಿ ಮಾಡಬೇಕು. ನಂತರ ವಿಭಾಗ ಪತ್ರವನ್ನು ವಕೀಲರಿಂದ ನೋಟರಿ ಮಾಡಿಸಬೇಕು. ವಂಶಾವಳಿ ಪ್ರಮಾಣ ಪತ್ರದಲ್ಲಿ ಹೆಸರು ಇರುವವರು ದಾಖಲೆಗಳೊಂದಿಗೆ ಸಬ್ ರಿಜಿಸ್ಟ್ರಾರ್ ಆಫೀಸ್ ಗೆ ಹೋದರೆ ನೋಂದಣಿ ಮಾಡಿಕೊಡುತ್ತಾರೆ. ಹೀಗೆ ವಿಭಾಗ ಪತ್ರವನ್ನು ಮಾಡಿಸಿ ಪ್ರತಿಯೊಬ್ಬರು ತಮ್ಮ ತಮ್ಮ ಪಾಲಿನ ಜಮೀನಿನ ಹಕ್ಕು ಪತ್ರವನ್ನು ಪಡೆಯಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *