ಚಳಿಗಾಲ ಬಂತೆಂದರೆ ಸಾಕು  ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಅವುಗಳಲ್ಲಿ ಒಂದು ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ನುಗ್ಗೆಕಾಯಿ ಸೂಪ್ ಕೂಡಾ. ನಾವು ಈ ಲೇಖನದಲ್ಲಿ ಚಳಿಗಾಲಕ್ಕೆ ಸರಿ ಹೊಂದುವ ನಿಗ್ಗೇಕಾಯಿ ಸೂಪ್ ಮಾಡುವ ಸರಳ ವಿಧಾನ ಹೇಗೆ ಮತ್ತು ನುಗ್ಗೆಕಾಯಿ ಕೆಲವು ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಮೊದಲಿಗೆ ನುಗ್ಗೆಕಾಯಿ ಆರೋಗ್ಯಕಾರಿ ಪ್ರಯೋಜನಗಳ ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ನುಗ್ಗೆಕಾಯಿ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಇದನ್ನು ನಾವು ಹಲವಾರು ವಿಧದಿಂದ ಬಳಸುತ್ತೇವೆ. ಹೆಚ್ಚಾಗಿ ಸಾಂಬಾರಿನಲ್ಲಿ ನುಗ್ಗೆಕಾಯಿ ಬಳಸಿದರೆ ಅದು ತುಂಬಾ ರುಚಿಕರವಾಗಿರುತ್ತದೆ. ನುಗ್ಗೆಕಾಯಿಯು ಬಾಯಿಗೆ ರುಚಿ ನೀಡುವ ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನುಗ್ಗೆಕಾಯಿಯಿಂದ ಸಿಗುವ ಲಾಭಗಳು ಇಲ್ಲಿವೆ. ನುಗ್ಗೆಕಾಯಿಯಲ್ಲಿ ಉನ್ನತ ಮಟ್ಟದ ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಇತರ ಕೆಲವೊಂದು ವಿಟಮಿನ್ ಗಳು ಇರುವ ಕಾರಣದಿಂದಾಗಿ ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ದಿನನಿತ್ಯವೂ ನುಗ್ಗೆಕಾಯಿ ತಿಂದರೆ ಅದರಿಂದ ಮೂಳೆಯ ಸಾಂದ್ರತೆ ಹೆಚ್ಚಾಗುತ್ತದೆ ಮತ್ತು ಮೂಳೆಯು ಆರೋಗ್ಯವಾಗಿ ಇರುವುದು.

ನುಗ್ಗೆಕಾಯಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ರಕ್ತವನ್ನು ಶುದ್ಧೀಕರಿಸುವ ಜತೆಗೆ ಇದು ಪ್ರಬಲ ರೋಗನಿರೋಧಕವಾಗಿಯೂ ಕೆಲಸ ಮಾಡುವುದು. ನುಗ್ಗೆಕಾಯಿ ತಿಂದರೆ ಇದು ಮೊಡವೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡುತ್ತದೆ. ನುಗ್ಗೆಕಾಯಿಯು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ. ನುಗ್ಗೆಕಾಯಿ ತಿಂದರೆ ಅದರಿಂದ ಮೂತ್ರಕೋಶವು ಸರಿಯಾಗಿ ಕಾರ್ಯ ನಿರ್ವಹಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುವುದು.

ಗರ್ಭಿಣಿ ಮಹಿಳೆಯರು ತಮ್ಮ ಆಹಾರ ಕ್ರಮದಲ್ಲಿ ನುಗ್ಗಕಾಯಿ ಸೇರಿಸಿಕೊಂಡರೆ ಅದರಿಂದ ಹೆರಿಗೆಯು ತುಂಬಾ ಸುಲಭವಾಗುವುದು ಮತ್ತು ಹೆರಿಗೆ ಬಳಿಕದ ಸಮಸ್ಯೆಗಳು ನಿವಾರಣೆ ಆಗುವುದು. ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ ಮತ್ತು ಇದು ಗರ್ಭಕೋಶವು ಜೋತು ಬೀಳುವುದನ್ನು ತಡೆಯುವುದು ಮತ್ತು ಎದೆಹಾಲಿನ ಉತ್ಪತ್ತಿ ಹೆಚ್ಚಿಸುವುದು. ಈ ರೀತಿಯಾಗಿ ಇನ್ನೂ ಹತ್ತು ಹಲವು ಪ್ರಯೋಜನಗಳು ನುಗ್ಗೆಕಾಯಿಯಿಂದ ಇವೆ.

ಇನ್ನೂ ನುಗ್ಗೆಕಾಯಿಯ ಸೂಪ್ ಮಾಡುವುದು ಹೇಗೆ ಮತ್ತು ಅದಕ್ಕೆ ಬೇಕಾಗುವ ಸಾಮಗ್ರಿಗಳು ಏನೂ ಎಂದು ನೋಡುವುದಾದರೆ, ಮೊದಲಿಗೆ ಸಾಮಗ್ರಿಗಳು ಈ ರೀತಿಯಾಗಿವೆ. ನುಗ್ಗೆಕಾಯಿ 3 , ಟೊಮೆಟೋ ಮತ್ತು ಈರುಳ್ಳಿ ತಲಾ ಒಂದರಂತೆ, ಶುಂಠಿ ಸ್ವಲ್ಪ, ಬೆಳ್ಳುಳ್ಳಿ 2 ಎಸಳು, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಒಂದು ಚಮಚ, ಜೀರಿಗೆ ಪುಡಿ 1 ಚಮಚ, ಕಾಳುಮೆಣಸು 1 ಚಮಚ ಹಾಗೂ ಕೊತ್ತಂಬರಿ ಸೊಪ್ಪು ಸ್ವಲ್ಪ. ಇನ್ನೂ ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ,

ಮಾಡುವ ವಿಧಾನ: ಮೊದಲು ಕುಕ್ಕರ್‌ಗೆ ಹೆಚ್ಚಿದ ನುಗ್ಗೆಕಾಯಿ, ಈರುಳ್ಳಿ ಟೊಮೆಟೋ, ಶುಂಠಿ, ಬೆಳ್ಳುಳ್ಳಿ , ಉಪ್ಪು, ಅರಿಶಿನ ಪುಡಿ ಜೀರಿಗೆ ಪುಡಿ ಮತ್ತು 2 ಕಪ್ ನೀರನ್ನು ಹಾಕಿ 3 ಸೀಟಿ ಕೂಗಿಸಿಕೊಳ್ಳಬೇಕು. ನಂತರ ಕುಕ್ಕರ್ ತಣ್ಣಗಾದ ನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾ ಯಿ ತಿರುಳನ್ನು ಸಿಪ್ಪೆಯಿಂದ ಬೇರ್ಪಡಿಸಿ ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸೂಪ್ ಸಿದ್ಧವಾಗುತ್ತದೆ.

Leave a Reply

Your email address will not be published. Required fields are marked *