ಸಾಮುದ್ರಿಕಾ ಶಾಸ್ತ್ರದಲ್ಲಿ ಮುಖ ಸಾಮುದ್ರಿಕಾ, ಹಸ್ತ ಸಾಮುದ್ರಿಕಾ, ಅಂಗ ಸಾಮುದ್ರಿಕಾ ಹಾಗೂ ಪಾದ ಸಾಮುದ್ರಿಕಾ ಎಂಬ ವಿಭಾಗಗಳಿವೆ. ಈ ಶಾಸ್ತ್ರಗಳಿಗೆ ಉಗಮ ಸ್ಥಾನ ಭಾರತ. ರಾಮಾಯಣ, ಮಹಾಭಾರತಗಳಲ್ಲಿ ಸಾಮುದ್ರಿಕಾ ಶಾಸ್ತ್ರದ ಉಲ್ಲೇಖವಿದೆ. ಹನುಮಂತನು ಸೀತೆಯನ್ನು ಹುಡುಕಿಕೊಂಡು ಲಂಕೆಗೆ ಹೋದಾಗ ರಾವಣನ ಪಕ್ಕದಲ್ಲಿ ಮಂಡೋದರಿ ಮಲಗಿರುವುದನ್ನು ಕಂಡು ಸೀತೆಯೆಂದೇ ಭ್ರಮಿಸಿ ದುಃಖಿಸಿವಾಗ, ಮಂಡೋದರಿಯ ಕಾಲುಗಳನ್ನು ನೋಡಿ ಪದ್ಮರೇಖೆಗಳಿಲ್ಲ, ಕೈಯಲ್ಲಿ ಮತ್ಸ್ಯ ರೇಖೆಗಳಿಲ್ಲ, ವಿಧವೆಯ ಸೂಚನೆಗಳು ಕಾಣುತ್ತಿವೆಯಾದ್ದರಿಂದ ಸೀತೆ ಇವಳಲ್ಲ ಎಂಬುದನ್ನು ದೃಢಪಡಿಸಿಕೊಳ್ಳುತ್ತಾನೆ.
ಸಮುದ್ರ ಋಷಿ ತಿಳಿಸಿದಂತೆ, ಕಾಲು ಪುಷ್ಠವಾಗಿರಬೇಕು. ಮಾಂಸ ತುಂಬಿರಬೇಕು. ನರ ಕಾಣುವಂತಿರಬಾರದು. ಕಾಲುಗಳು ಹೊಳೆಯುವಂತಿರಬೇಕು. ಒಡೆದಂತಾಗಲೀ, ಚರ್ಮ ಕಿತ್ತುಬಂದಂತಾಗಲೀ ಇರಬಾರದು. ಕೈ ಮುಟ್ಟಿ ನೋಡಿದಾಗ ಕಾಲುಗಳು ಬಿಸಿಯಾಗಿರುವಂತೆ ಕಾಣಿಸಬೇಕು, ತಣ್ಣಗಿರಬಾರದು. ಕಾಲುಗಳು ಸುಂದರವಾಗಿರಬೇಕು. ಕಾಲುಗಳ ಮುಂಭಾಗ ಎದ್ದಂತಿರಬೇಕು. ಚಪ್ಪಟೆಯಾಗಿರಬಾರದು. ಬೆರಳುಗಳ ಕಡೆ ಧನುಷಾಕಾರದ ತಿರುವಿರಬೇಕು. ಕಾಲುಗಳಲ್ಲಿ ಬೆವರು ಬರಬಾರದು.
ಕಾಲಿನ ಗಾತ್ರ ಒಂದೇ ಸಮವಾಗಿರಬಾರದು. ಕಾಲ್ಬೆರಳುಗಳು ಚಿಕ್ಕದಾಗಿಯೂ ಇರಬಾರದು. ಅತಿ ದೊಡ್ಡದಾಗಿಯೂ ಇರಬಾರದು. ಉಗುರು ತಿರುಗಿರಬಾರದು, ಉಗುರು ರಹಿತವಾಗಿರಬಾರದು. ಈ ಎಲ್ಲ ಗುಣಗಳು ಶ್ರೇಷ್ಠ ಪುರುಷರಲ್ಲಿ ಇರುತ್ತವೆ. ಹಿಮ್ಮಡಿಯ ಮೇಲೆ ಕಾಲಿನ ಇಕ್ಕೆಲಗಳ ಸಂದುಗಳು ಎದ್ದು ಕಾಣುವಂತಿರಬೇಕು. ಕಾಲ್ಬೆರಲುಗಳಲ್ಲಿ, ಹೆಬ್ಬೆರಳಿನಪಕ್ಕದ ಬೆರಳು ಹೆಬ್ಬೆರಳಿಗಿಂತ ಚಿಕ್ಕದಾಗಿರಬೇಕು.
ಉಳಿದ ಬೆರಳುಗಳು ಕ್ರಮಶ: 1/8 ಭಾಗ ಒಂದಕ್ಕೊಂದು ಕಡಿಮೆ ಇದ್ದರೆ ಶುಭವೆಂದು ತಿಳಿಯಬೇಕು. ಹೇಗೆಂದರೆ ದೊಡ್ಡ ಬೆರಳಿನ ಉಗುರಿನ ತಳಕ್ಕೆ ಪಕ್ಕದ ಬೆರಳಿರಬೇಕು. ಹಾಗೇ ಬೆರಳುಗಳು ಜೋಡಿಸಿರಬೇಕು. ಹಿಮ್ಮಡಿಯ ತಳದಿಂದ ಹೆಬ್ಬೆರಳಿನ ತುದಿಯವರೆಗೆ ಅಂಗಾಲನ್ನು ಅಳೆದಾಗ 14 ಇಂಚು ಇರಬೇಕು. ಹಾಗೆಯೇ ಅಗಲ 6 ಅಂಗುಲವಿದ್ದರೆ ಉತ್ತಮವೆಂದು ತಿಳಿಯುವುದು. ಹಿಮ್ಮಡಿಯು 4 ಅಂಗುಲವಿರಬೇಕು. ಅದಕ್ಕಿಂತ ಜಾಸ್ತಿಯೂ ಇರಬಾರದು, ಕಡಿಮೆಯೂ ಇರಬಾರದು. ಹಿಮ್ಮಡಿಯು ಗುಂಡಗಿರಬೇಕು. ಬೆರಳುಗಳ ಅಗಲಕ್ಕಿಂತ ಶೇ. 25 ಕಡಿಮೆ ಅಗಲ ಹಿಮ್ಮಡಿ ಇದ್ದರೆ ಶುಭವೆನಿಸುವುದು.
ಪಾದತಳದಲ್ಲಿ ಶಂಖ, ಛತ್ರ, ಧ್ವಜ, ವಜ್ರ, ಕತ್ತಿ, ಕಮಲ, ಧನುಸ್ಸು, ಚಕ್ರ, ಸರ್ಪ ಮುಂತಾದ ಉತ್ತಮ ಚಿಹ್ನೆಗಳಿದ್ದರೆ ಶ್ರೇಷ್ಠ ಫಲವು ಸಿಗುತ್ತದೆ. ಹಿಂಗಾಲಿನ ತಳದಿಂದ ಉಗುರಿನ ತಳದವರೆಗೆ ಯಾವುದಾದರೂ ಊರ್ಧ್ವರೇಖೆಗಳು ಕಂಡುಬಂದರೆ ವ್ಯಕ್ತಿಯು ರಾಜನಾಗುತ್ತಾನೆ. ಹಿಂಗಾಲಿನಲ್ಲಿ ಯಾವುದೇ ರೇಖೆಗಳಿಲ್ಲದಿದ್ದರೆ ಹಿಂಗಾಲಿನ ಮಧ್ಯಭಾಗ ಉಬ್ಬಿದ್ದರೆ ಅದರ ತ್ವಚೆ, ಓಡಾಡದಿದ್ದರೂ ಅತ್ಯಂತ ಕಠೋರವಾಗಿದ್ದರೆ ದಪ್ಪ ಚರ್ಮವಾಗಿದ್ದರೆ ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ದಿನಗಳನ್ನು ನೋಡಲಾರ.
ಕಾಲ್ಬೆರಳುಗಳ ಉಗುರುಗಳಲ್ಲಿ ಯಾವುದಾದರೂ ಕೆಂಪು ಬಿಂದು, ಹಳದಿ ಅಥವಾ ಕಪ್ಪು ಚುಕ್ಕಿ ಕಂಡು ಬಂದರೆ ಅದು ವಿಶೇಷ ಫಲ ಸೂಚಕ. ಅಂಗಾಲಿನ ತಳದಿಂದ ಬೆರಳಿನ ತುದಿಯವರೆಗೂ ರೇಖೆ ಹೊರಬಂದಿದ್ದರೆ ವ್ಯಕ್ತಿಯು ಚಂಚಲ ಮನದವನು, ವಿಚಾರಗಳಲ್ಲಿ ಸ್ಥಿರತೆ ಇರದವರೂ ಜೀವನದಲ್ಲಿ ಸಾಫಲ್ಯವು ಬರುತ್ತ ಹೋಗುತ್ತಲಿರುತ್ತವೆ.
ಕಾಲಿನ ಹಿಂಭಾಗದಲ್ಲಿ ಯಾವುದಾದರೂ ಊರ್ಧ್ವರೇಖೆಗಳಲ್ಲದೆ ಬೇರೆ ರೇಖೆಗಳು ಯಾವುದಾದರೂ ಬೆರಳುಗಳ ಮೂಲದವರೆಗೆ ಹೋಗಿದ್ದರೆ ಆ ರೇಖೆ ಚಿಕ್ಕದಾಗಲೀ, ದೊಡ್ಡದಾಗಿರಲಿ ಅವರು ಯಾವಾಗಲೂ ತಿರುಗಾಡುತ್ತಿರುತ್ತಾರೆ. ಯಾವುದಾದರೂ ರೇಖೆಯು ಮಧ್ಯದ ಬೆರಳಿನವರೆಗೆ ಹೋದರೆ ವ್ಯಕ್ತಿಯು ಸ್ವಾಭಿಮಾನಿಯಾಗಿ ಸಫಲ ಜೀವನವನ್ನು ನಡೆಸುತ್ತಾನೆ. ಬಲ ಅಂಗಾಲಿನಲ್ಲಿ ಒಂದು ನಿಂತ ರೇಖೆಯು ಉಂಗುರದ ಬೆರಳಿನವರೆಗೆ ಹೋಗಿದ್ದರೆ ವ್ಯಕ್ತಿಯು ಆಲಸಿಯಾಗುತ್ತಾನೆ. ಎಡಕಾಲಿನ ತಳದಲ್ಲಿ ಹೆಬ್ಬೆರಳಿನ ಕೆಳಗೆ ಒಂದು ರೇಖೆ ಇದ್ದರೆ ಅಥವಾ ಮೊದಲ ಬೆರಳ ಹಾಗೂ ಹೆಬ್ಬೆರಳ ಮಧ್ಯದಲ್ಲಿದ್ದರೆ ವ್ಯಕ್ತಿಯು ಜೀವನದಲ್ಲಿ ಬಹಳ ಖ್ಯಾತಿಯನ್ನು ಪಡೆಯುತ್ತಾನೆ.
ಹಿಮ್ಮಡಿಯಲ್ಲಿ ಯಾವುದಾದರೂ ರೇಖೆಯಿದ್ದರೆ ಅಥವಾ ಹಲವು ರೇಖೆಗಳಿದ್ದರೆ ವ್ಯಕ್ತಿಯು ಯುವಾವಸ್ಥೆಯಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಬದಲಾಯಿಸುತ್ತಾನೆ. ಒಂದುವೇಳೆ ಬೆರಳುಗಳೆಲ್ಲವೂ ನೆಲವನ್ನು ಮುಟ್ಟುತ್ತಿದ್ದರೆ, ಬೆರಳುಗಳ ತುದಿಗಳು ನೆಲವನ್ನು ತಾಕುತ್ತಿದ್ದರೆ ದಂಪತಿ ಅನ್ಯೋನ್ಯವಾಗಿರುತ್ತಾರೆ. ಬೆರಳುಗಳಲ್ಲಿ ಒಂದು ಬೆರಳು ಅಧಿಕ ಉದ್ದವಿದ್ದರೆ ವ್ಯಕ್ತಿಗೆ ಗೌರವ, ಧನ, ಯಶಸ್ಸು ಸಿಗುತ್ತವೆ. ಕಾಲಿನ ಹೆಬ್ಬೆರಳಿನ ಮೇಲೆ ಯಾವುದಾದರೂ ಲಂಬರೇಖೆ ಇದ್ದು, ಅದೂ ಇಡೀ ಹೆಬ್ಬೆರಳನ್ನು ಆವರಿಸಿದ್ದರೆ ಇವರು ವಿವಾಹ ವಂಚಿತರಾಗುತದ್ತಾರೆ. ಇವರಿಗೆ ಮದುವೆಯೇ ಆಗುವುದಿಲ್ಲ.
ಹಿಮ್ಮಡಿಯ ಮೇಲೆ ಗುಲ್ಫಗಳ ಕೆಳಗೆ ಮೂರು ರೇಖೆಗಳು ಅಥವಾ ನಾಲ್ಕು ರೇಖೆಗಳು ಹೊರಟಿದ್ದು ಹಿಮ್ಮಡಿ ಪೂರ್ತಿ ಸುತ್ತುವರಿದಿದ್ದರೆ ವಿವಾಹ, ಮಕ್ಕಳು, ಆಯುಸ್ಸು, ಧನ, ಧರ್ಮ ಚೆನ್ನಾಗಿ ಲಭಿಸುತ್ತವೆ.
ಸ್ತ್ರೀಯರ ಕಾಲು ರೋಮರಹಿತವಾಗಿದ್ದು ನುಣುಪಾಗಿರಬೇಕು. ಅದು ಚಪ್ಪಟೆಯಾಗಿರದೆ ಆಮೆಯ ಬೆನ್ನಿನಂತೆ ಗೋಲಾಕಾರವಾಗಿರಬೇಕು. ಕಾಲು ನೋಡಿದರೆ ಪ್ರೀತಿ ಉಕ್ಕುವಂತಿರಬೇಕೆಂದು ಸಮುದ್ರ ಋಷಿ ಹೇಳಿರುತ್ತಾನೆ.
ಹೆಬ್ಬೆರಳಿಗಿಂತ ತೋರ್ಬೆರಳು ಉದ್ದವಾಗಿರಬಾರದು. ಇದು ಕಷ್ಟಸೂಚಕ. ತೋರ್ಬೆರಳಿಗಿಂತ ಮಧ್ಯದ ಬೆರಳು ಸಮವಾಗಿ ಅಥವಾ ಉದ್ದವಾಗಿದ್ದರೆ ಸ್ತ್ರೀಯು ಸ್ವಚ್ಛಂದ ಸ್ವಭಾವದವಳು ಎಂದರ್ಥ. ನಡೆಯುವಾಗ ಕಿರುಬೆರಳು ನೆಲಕ್ಕೆ ತಾಗದಂತಿದ್ದರೆ ಪತಿ ಅಲ್ಪಜೀವಿಯಾಗುತ್ತಾನೆ. ಕಿರುಬೆರಳು ಉಳಿದೆಲ್ಲ ಬೆರಳುಗಳಿಗಿಂತ ದೂರವಿದ್ದರೆ ಕೂಡ ಅಶುಭಫಲ. ಇನ್ನುಳಿದಂತೆ ಶುಭಚಿಹ್ನೆಗಳು ಕಾಲಲ್ಲಿ ಕಂಡುಬಂದರೆ ಶುಭಫಲ ಸಿಗುವುದು.