ಜೂನ್ 21 ರಿಂದ ಕೋವಿಡ್ 19 ಲಸಿಕೆಯನ್ನು ಉಚಿತವಾಗಿ ಕೇಂದ್ರೀಕೃತ ವಿತರಣೆಯನ್ನು ಮತ್ತೆ ಆರಂಭಿಸುವುದಾಗಿ ಹೇಳಿದ್ದಾರೆ. ಈ ಕ್ರಮದಿಂದ ಲಸಿಕೆ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುವುದು ಹಾಗೂ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಎಲ್ಲಾ ರಾಜ್ಯಗಳಿಗೆ ಕೇಂದ್ರವೇ ಲಸಿಕೆ ಪೂರೈಸುವುದಾಗಿ ಕೊವಿಡ್ ಲಸಿಕೆ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಶೇಕಡಾ 75ರಷ್ಟು ಲಸಿಕೆಯನ್ನು ವಿತರಿಸುತ್ತದೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸೇವಾ ಶುಲ್ಕ ಎಂದು 150 ರೂಪಾಯಿ ನಿಗದಿಪಡಿಸಿರುವುದರಿಂದ ಲಸಿಕೆ ಅಭಿಯಾನ ಇನ್ನಷ್ಟು ಸುಗಮವಾಗಿ ಮುಂದುವರಿಯಲಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಹಾಗಿದ್ದರೆ ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಪ್ರಧಾನ ಮಂತ್ರಿ ಅವರು ಯಾವೆಲ್ಲಾ ವಿಷಯಗಳ ಕುರಿತು ಮಾತನಾಡಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ನಿನ್ನೆ ಸಂಜೆ ಮಾತನಾಡಿದ್ದು, ಇದೇ ಜೂನ್ 21 ರಿಂದ ಕೋವಿಡ್ 19 ಲಸಿಕೆಯ ಉಚಿತವಾಗಿ ಕೇಂದ್ರೀಕೃತ ವಿತರಣೆಯನ್ನು ಮತ್ತೆ ಆರಂಭಿಸುವುದಾಗಿ ಹೇಳಿದ್ದಾರೆ ಮತ್ತು ಇದರಿಂದ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಹೇಳಿಕೆ ಮೂಲಕ ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮವು ಕೋವಿಡ್ 19 ಇದರ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನು ಹಸಿವಿನ ದವಡೆಯಿಂದ ಪಾರು ಮಾಡುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಈ ಘೋಷಣೆಯಿಂದ ಲಸಿಕೆ ಅಭಿಯಾನ ಇನ್ನಷ್ಟು ಸುಗಮವಾಗಿ ಮುಂದುವರಿಯಲಿದೆ. ಕೊವಿಡ್ ವಿರುದ್ಧ ಹೋರಾಟದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಪ್ರಧಾನಿ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ವಿತರಣೆಯನ್ನು ದೀಪಾವಳಿ ಹಬ್ಬದವರೆಗೂ ವಿಸ್ತರಿಸಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಇನ್ನು ಉಚಿತ ಲಸಿಕೆ ವಿತರಣೆ ಘೋಷಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಕೂಡ ಸ್ವಾಗತಿಸಿದ್ದು, ಇದಕ್ಕಾಗಿ ರಾಜ್ಯದ ಜನರ ಪರವಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನವೆಂಬರ್ ತಿಂಗಳವರೆಗೆ ದೇಶದ 80 ಕೋಟಿ ಜನರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತ ಪಡಿತರ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಹಾಪಿಡುಗಿನ ಈ ಸಮಯದಲ್ಲಿ ಬಡವರ ಎಲ್ಲ ಅಗತ್ಯಗಳನ್ನು ಗಮನಿಸಿ, ನಾವು ಅವರ ಜೊತೆಗೆ ಇರುತ್ತೇವೆ. ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಧಾನ್ಯ ವಿತರಣೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೊಷಿಸಿದರು. ಈ ವರ್ಷ ಮೇ, ಜೂನ್ ತಿಂಗಳುಗಳಲ್ಲಿ ಉಚಿತ ಆಹಾರ ಧಾನ್ಯ ವಿತರಣೆ ಮಾಡಲು ಸೂಚಿಸಲಾಗಿತ್ತು. ಬಡವರು ಯಾರೂ ಹಸಿವಿನಿಂದ ಮಲಗಬಾರದು ಎಂದು ಇದನ್ನು ವಿಸ್ತರಿಸಿ ದೀಪಾವಳಿವರೆಗೂ ಉಚಿತವಾಗಿ ಆಹಾರ ಧಾನ್ಯ ನೀಡುತ್ತೇವೆ. ನವೆಂಬರ್ ತಿಂಗಳವರೆಗೂ ಆಹಾರ ಧಾನ್ಯ ವಿತರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಪ್ರಧಾನಿಯವರ ಈ ನಿರ್ಧಾರಗಳು ಸಂಕಷ್ಟದಲ್ಲಿರುವ ಜನರಿಗೆ ವರದಾನ ಎನಿಸಲಿವೆ. ಜನಪರ ಪ್ರಧಾನಿ ಎಂಬುದನ್ನು ನರೇಂದ್ರ ಮೋದಿ ಈ ಮೂಲಕ ಸಾಬೀತು ಮಾಡಿದ್ದಾರೆ. ಇದರಿಂದ ಪ್ರಧಾನಿಯವರ ಮೇಲೆ ಜನರ ವಿಶ್ವಾಸ ಇನ್ನಷ್ಟು ಹೆಚ್ಚಲಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಉತ್ಪಾದನೆ ಮತ್ತಷ್ಟು ಹೆಚ್ಚಾಗಲಿದೆ. ದೇಶದಲ್ಲಿ 7 ಕಂಪನಿಗಳು ಲಸಿಕೆಯನ್ನು ಉತ್ಪಾದಿಸುತ್ತಿವೆ. ಇನ್ನೂ ಮೂರು ಕಂಪನಿಗಳು ಪ್ರಯೋಗದ ಹಂತದಲ್ಲಿವೆ. ಎರಡು ಲಸಿಕೆಗಳ ಪ್ರಯೋಗ ಬಹಳ ವೇಗವಾಗಿ ನಡೆಯುತ್ತಿದೆ. ನೇಸಲ್ ವ್ಯಾಕ್ಸಿನ್ ಪ್ರಯೋಗ ನಡೆಯುತ್ತಿದೆ. ಭಾರತದ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದ್ದು, ಇದು ಅವರ ಕರ್ತವ್ಯಪರತೆಗೆ ಸಾಕ್ಷಿಯಂತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಜೂನ್ 21ರ ಯೋಗ ದಿನದ ನಂತರ ದೇಶದಲ್ಲಿ ಲಸಿಕೆ ವಿತರಣಾ ಅಭಿಯಾನ ಹೊಸ ವೇಗ ಪಡೆಯಲಿದೆ. ಭಾರತ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊಡಲಿದೆ. ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಕೊಡಲಾಗುವುದು. ಲಸಿಕೆ ವಿತರಣೆಯಲ್ಲಿ ಬಡವರು, ಮಧ್ಯಮ ವರ್ಗದವರು ಎಂಬ ಭೇದ ಇರುವುದಿಲ್ಲ. ಯಾರಿಗಾದರೂ ಉಚಿತ ಲಸಿಕೆಯ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತೇವೆ ಎಂದಾದರೆ ಅದಕ್ಕೂ ಅವಕಾಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ ಕೊವಿಡ್ ಪ್ಯಾಕೇಜ್ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಇನ್ನೂ ಹೆಚ್ಚಲಿದೆ. ದೇಶದ 7 ಕಂಪನಿಗಳು ಲಸಿಕೆ ತಯಾರಿಸುತ್ತಿವೆ. 3 ಟ್ರಯಲ್ಗಳು ನಡೆಯುತ್ತಿವೆ. ಇತರ ದೇಶಗಳ ಕಂಪನಿಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಕೆಲ ತಜ್ಞರ ಮೂಲಕ ಮಕ್ಕಳ ಸುರಕ್ಷೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಮಕ್ಕಳಿಗೆ ಲಸಿಕೆ ನೀಡುವ ಟ್ರಯಲ್ ನಡೆಯುತ್ತಿದೆ. ಮೂಗಿನ ಮೂಲಕ ಕೊಡುವ (ನೇಸಲ್) ಲಸಿಕೆಯ ಟ್ರಯಲ್ ಸಹ ನಡೆಯುತ್ತಿದೆ. ಈ ಲಸಿಕೆಯಲ್ಲಿ ಸಫಲತೆ ಸಿಕ್ಕರೆ ಭಾರತದಲ್ಲಿ ಲಸಿಕೆ ಅಭಿಯಾನ ಇನ್ನಷ್ಟು ವೇಗ ಪಡೆಯುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ಮಾಡುವುದರಿಂದ ವಿಶ್ವದ ಜನಸಮುದಾಯಕ್ಕೆ ಅನುಕೂಲವಾಗಿದೆ ಎಂದು ಅವರು ವಿವರಿಸಿದರು.