ಉತ್ತರ ಕರ್ನಾಟಕದ ತಿನಿಸುಗಳು, ಚಟ್ನಿಪುಡಿ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಉತ್ತರ ಕರ್ನಾಟಕದ ಕಡೆ ಹೋದಾಗ ಅಲ್ಲಿಯ ಚಟ್ನಿ ಪುಡಿಗಳನ್ನು ತರಲು ಕಷ್ಟವಾಗುತ್ತದೆ ಆದ್ದರಿಂದ ಮನೆಯಲ್ಲಿ ಮಾಡಿಕೊಳ್ಳುವುದು ಉತ್ತಮ. ಉತ್ತರ ಕರ್ನಾಟಕದ ಚಟ್ನಿಪುಡಿಗಳನ್ನು ಮನೆಯಲ್ಲಿ ಸುಲಭವಾಗಿ ದಿನನಿತ್ಯದ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು ಬಳಸಿ ಮಾಡಿಕೊಳ್ಳಬಹುದು. ಹಾಗಾದರೆ ಉತ್ತರಕರ್ನಾಟಕದ ಸ್ಪೆಷಲ್ ಚಟ್ನಿಪುಡಿಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.
ಉತ್ತರ ಕರ್ನಾಟಕದಲ್ಲಿ ಚಟ್ನಿಪುಡಿ ಫೇಮಸ್ ಆಗಿದೆ. ಅಲ್ಲಿ ಬಗೆ ಬಗೆಯ ಚಟ್ನಿ ಪುಡಿಗಳು ತಯಾರಾಗುತ್ತವೆ ಒಂದೊಂದು ಚಟ್ನಿಪುಡಿಯು ವಿಶೇಷವಾದ ರುಚಿಯನ್ನು ಹೊಂದಿರುತ್ತದೆ. ಚಟ್ನಿ ಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು 1 ಕಪ್ ಶೇಂಗಾ, ಒಂದು ಕಪ್ ಅಗಸೆ ಬೀಜ, ಒಂದು ಕಪ್ ಪುಟಾಣಿ, ಒಂದು ಕಪ್ ಒಣ ಕೊಬ್ಬರಿ, ಒಂದು ಕಪ್ ಗುರೆಳ್ಳು, ಬೆಳ್ಳುಳ್ಳಿ, ಜೀರಿಗೆ, ಸಕ್ಕರೆ, ಉಪ್ಪು, ಕರಿಬೇವು, ಮೆಣಸಿನಪುಡಿ. ಮೊದಲಿಗೆ ಶೇಂಗಾ ಚಟ್ನಿ ಪುಡಿ ಮಾಡುವ ವಿಧಾನವೆಂದರೆ ಮೊದಲು ಒಂದು ಪಾತ್ರೆಯಲ್ಲಿ ಶೇಂಗಾವನ್ನು ಒಂದೆ ಉರಿಯಲ್ಲಿ ಹುರಿದುಕೊಳ್ಳಬೇಕು, ಶೇಂಗಾ ಸ್ವಲ್ಪ ಕೆಂಪಗೆ ಆಗುವವರೆಗೂ ಹುರಿದುಕೊಳ್ಳಬೇಕು. ಹುರಿದುಕೊಂಡ ಶೇಂಗಾ ಸಿಪ್ಪೆಯನ್ನು ತೆಗೆಯಬೇಕು. ನಂತರ ಶೇಂಗಾವನ್ನು ತರಿತರಿಯಾಗಿ ಪುಡಿ ಮಾಡಬೇಕು, ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಬೇಕಾದಷ್ಟು ಮೆಣಸಿನ ಪುಡಿಯನ್ನು ಹಾಕಿ ಕೈಯಲ್ಲಿ ಮಿಕ್ಸ್ ಮಾಡಬೇಕು. ಕೈಯಲ್ಲಿ ಮಿಕ್ಸ್ ಮಾಡುವುದರಿಂದ ಟೇಸ್ಟ್ ಬರುತ್ತದೆ.
ನಂತರ ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಸ್ವಲ್ಪ ಸಕ್ಕರೆ, ಜೀರಿಗೆ, ಸ್ವಲ್ಪ ಬೆಳ್ಳುಳ್ಳಿ, ಕರಿಬೇವು ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಬೇಕು ಶೇಂಗಾ ಚಟ್ನಿ ಪುಡಿ ತಯಾರಾಗುತ್ತದೆ. ಗುರೆಳ್ಳು ಚಟ್ನಿ ಪುಡಿ ಮಾಡುವ ವಿಧಾನವೆಂದರೆ ಗುರೆಳ್ಳನ್ನು ಒಂದೆ ಉರಿಯಲ್ಲಿ ಹುರಿದುಕೊಳ್ಳಬೇಕು, ಗುರೆಳ್ಳು ಹುರಿದಾಗ ಬ್ರೌನ್ ಆಗುತ್ತದೆ. ನಂತರ ಹುರಿದ ಗುರೆಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಜೀರಿಗೆ, ಬೆಳ್ಳುಳ್ಳಿ ಕರಿಬೇವು ಮೆಣಸಿನ ಪುಡಿ ಇವುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಬೇಕು ಆಗ ಗುರೆಳ್ಳು ಚಟ್ನಿ ಪುಡಿ ತಯಾರಾಗುತ್ತದೆ. ಒಣಕೊಬ್ಬರಿ ಚಟ್ನಿಪುಡಿ ಮಾಡುವ ವಿಧಾನವೆಂದರೆ ಒಣಕೊಬ್ಬರಿಯನ್ನು ಹುರಿದುಕೊಂಡು ಹಾಕಬಹುದು ಅಥವಾ ಹುರಿಯದೆ ಹಾಕಬಹುದು. ಒಣಕೊಬ್ಬರಿಗೆ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ, ಮೆಣಸಿನ ಪುಡಿ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಬೇಕು ಆಗ ಒಣ ಕೊಬ್ಬರಿ ಚಟ್ನಿ ಪುಡಿ ತಯಾರಾಗುತ್ತದೆ. ಪುಟಾಣಿ ಚಟ್ನಿ ಪುಡಿ ಮಾಡುವ ವಿಧಾನವೆಂದರೆ ಪುಟಾಣಿ ಬೇಳೆಗೆ ಸ್ವಲ್ಪ ಒಣ ಕೊಬ್ಬರಿ, ರುಚಿಗೆ ಬೇಕಾದಷ್ಟು ಉಪ್ಪು, ಜೀರಿಗೆ, ಮೆಣಸಿನ ಪುಡಿ, ಬೆಳ್ಳುಳ್ಳಿ ಹಾಕಿ ಪುಡಿ ಮಾಡಬೇಕು.
ಅಗಸೆ ಬೀಜದ ಚಟ್ನಿಪುಡಿ ಮಾಡುವ ವಿಧಾನವೆಂದರೆ ಅಗಸೆ ಬೀಜವನ್ನು ಒಂದು ಪಾತ್ರೆಯಲ್ಲಿ ಹದವಾದ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು, ಅಗಸೆ ಬೀಜ ಹುರಿಯುವಾಗ ಸಿಡಿಯುತ್ತದೆ ಆದ್ದರಿಂದ ಎರಡು ಡ್ರಾಪ್ ನೀರು ಹಾಕಿಕೊಂಡು ಹುರಿದುಕೊಳ್ಳಬೇಕು ಮತ್ತು ಹುರಿಯುವಾಗ ಕೈಯಾಡಿಸುತ್ತಲೆ ಇರಬೇಕು. ಹುರಿದ ಅಗಸೆ ಬೀಜಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಮೆಣಸಿನಪುಡಿ ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಬೇಕು ಹೀಗೆ ಚಟ್ನಿಪುಡಿಗಳನ್ನು ಮಾಡಿಟ್ಟುಕೊಂಡು ಬಹಳ ದಿನಗಳವರೆಗೆ ಬಳಸಬಹುದು. ಚಟ್ನಿ ಪುಡಿಯನ್ನು ಮೊಸರಿನಲ್ಲಿ ಸೇರಿಸಿಕೊಂಡು ತಿನ್ನಬಹುದು, ತುಪ್ಪ ಅನ್ನದೊಂದಿಗೆ ಸೇರಿಸಿ ತಿನ್ನಬಹುದು. ಈ ಚಟ್ನಿ ಪುಡಿಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಚಟ್ನಿಪುಡಿಗಳನ್ನು ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ ಕಡಿಮೆ ಸಮಯದಲ್ಲಿ ಮತ್ತು ಮನೆಯಲ್ಲಿ ಬಳಸುವ ಸಾಮಗ್ರಿಗಳನ್ನು ಬಳಸಿ ಚಟ್ನಿ ಪುಡಿ ಮಾಡಿಕೊಳ್ಳಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ.