ಕೋವಿಡ್ ಎರಡನೇ ಅಲೆ ಅತೀ ವೇಗವಾಗಿ ಹಬ್ಬುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಬಳಸುವುದು ಉತ್ತಮ ಪರಿಹಾರವೆಂದು ಅನೇಕ ಅಧ್ಯಯನಗಳು ಹೇಳುತ್ತಿದೆ. ಇದೆ ನಿಟ್ಟಿನಲ್ಲಿ ಮಾಸ್ಕ್ ಬೇಡಿಕೆಯೂ ಮಾರ್ಕೆಟ್ ನಲ್ಲಿ ಹೆಚ್ಚಾಗಿದೆ. ವಿವಿಧ ಕಂಪನಿಗಳು ನಾನಾ ತರಹದ ಮಾಸ್ಕ್ ತಯಾರಿಸುತ್ತಿದೆ. ಇದರ ನಡುವೆ ಮಂಗಳೂರಿನ ಯುವಕನೋರ್ವ ಪರಿಸರ ಸ್ನೇಹಿ ಮಾಸ್ಕ್ ತಯಾರು ಮಾಡುವ ಮೂಲಕ ಗಮನ ಸೆಳದಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಈ ವಿಶಿಷ್ಟವಾದ ಮಾಸ್ಕ್‌ನಲ್ಲಿ ಸಸ್ಯದ ಬೀಜಗಳನ್ನು ಅಳವಡಿಸಲಾಗಿದ್ದು ಬಳಸಿ ಬಿಸಾಡಿದರೂ ಮಾಸ್ಕ್ ಗಿಡವಾಗಿ ಬೆಳೆಯುತ್ತದೆ. ಜನ ಮಾಸ್ಕ್ ಬಳಸಿ ಬಿಸಾಡುವುದರಿಂದ ಮಣ್ಣಲ್ಲಿ ಕರಗದೆ ಮತ್ತೆ ಮಾಲಿನ್ಯವಾಗುವ ಸಾಧ್ಯತೆಗಳ ನಡುವೆ ಮಂಗಳೂರಿನ ಉತ್ಸಾಹಿ ಯುವಕ ಮಾಸ್ಕ್‌ಗೆ ನವೀನ ಸ್ಪರ್ಶ ನೀಡಿ ಗಮನ ಸೆಳೆದಿದಿದ್ದಾರೆ. ಮಂಗಳೂರು ನಗರ ಹೊರವಲಯದ ಕಿನ್ನಿಗೋಳಿ ಸಮಿಪದ ಪಕ್ಷಿಕೆರೆಯ ನಿವಾಸಿ ನಿತಿನ್ ವಾಸ್ ಈ ನೂತನ ಮಾಸ್ಕ್ ಆವಿಷ್ಕಾರದ ಜನಕ. ಹತ್ತಿಯಿಂದ ತಯಾರು ಮಾಡಿರುವ ಈ ಮಾಸ್ಕ್ ಪರಿಸರ ಸ್ನೇಹಿಯಾಗಿದೆ. ಬಿಸಾಡುವ ಹತ್ತಿಯನ್ನೇ ಬಳಸಿ ತಯಾರಿಸಿರುವ ಮಾಸ್ಕ್ ಹಲವು ವಿಶೇಷತೆಗಳನ್ನು ಹೊಂದಿದೆ.
ಹತ್ತಿಯನ್ನು ನೀರಿನಲ್ಲಿ ಅದುಮಿಸಿಟ್ಟು ಪೇಪರ್ ಶೀಟ್ ಗಳನ್ನಾಗಿ ಮಾಡಿ ಅದನ್ನು 12 ಗಂಟೆಗಳ ಕಾಲ ಒಣಗಿಸಿ ಮಾಸ್ಕ್ ತಯಾರಿಸಲಾಗುತ್ತದೆ. ಮಾಸ್ಕ್ ಹಿಂದಿನ ಭಾಗಕ್ಕೆ ತೆಳುವಾದ ಕಾಟನ್ ಬಟ್ಟೆಗಳನ್ನು ಹಾಕಲಾಗುತ್ತದೆ. ಈ ಮಾಸ್ಕ್ ದಾರಗಳನ್ನೂ ಹತ್ತಿಯಿಂದಲೇ ತಯಾರು ಮಾಡಲಾಗಿದೆ. ಈ ನಡುವೆ ಮಾಸ್ಕ್ ನಲ್ಲಿ ಗಿಡಗಳಬೀಜವನ್ನೂ ಹಾಕಲಾಗುತ್ತದೆ. ಇದು ಒಮ್ಮೆ ಬಳಸಿ ಬಿಸಾಡುವ ಮಾಸ್ಕ್ ಆಗಿದ್ದು ಬೆಲೆ 25 ರೂ.ಗಳು. ಸಂಪೂರ್ಣ ಕೈಯಿಂದಲೇ ಮಾಸ್ಕ್ ತಯಾರು ಮಾಡಲಾಗಿದೆ. ಈವರೆಗೆ 3000 ಸಾವಿರ ಮಾಸ್ಕ್ ಗಳನ್ನು ತಯಾರು ಮಾಡಲಾಗಿದ್ದು ನಿಧಾನವಾಗಿ ಬೇಡಿಕೆಯೂ ಜಾಸ್ತಿಯಾಗುತ್ತಿದೆ.
ನಿತಿನ್ ವಾಸ್ ಮತ್ತು ಗೆಳೆಯರು ಪೇಪರ್ ಸೀಡ್ ಎಂಬ ಉದ್ಯಮ ಸಂಸ್ಥೆ ಹೊಂದಿದ್ದು ಲಾಕ್ ಡೌನ್‌ಗೆ ಮೊದಲು ಹಲವು ಮಂದಿಗೆ ಉದ್ಯೋಗವನ್ನು ನೀಡಿದ್ದರು. ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವುದು ಈ ಸಂಸ್ಥೆಯ ಉದ್ದೇಶವಾಗಿತ್ತು. 2017ರಲ್ಲಿ ಆರಂಭವಾಗಿದ್ದ ಸಂಸ್ಥೆ ಮೊದಲು ಹಳ್ಳಿಗಳ 300ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿತ್ತು. ಆದರೆ ಲಾಕ್ ಡೌನ್ ಅವಧಿಯಲ್ಲಿ ಎಲ್ಲವೂ ನಷ್ಟವಾಗಿದ್ದು ಈಗ ಸಿಮೀತ ಸಂಖ್ಯೆಯಲ್ಲಿ ಮಾತ್ರ ಜನರು ಕೆಲಸ ಮಾಡುತ್ತಿದ್ದಾರೆ. ಇಂತಹ ಒಂದು ಉತ್ತಮ ಯೋಜನೆಗಳು ಸಮಾಜದ ಒಳಿತಿಗೆ ಸಾಕ್ಷಿಯಾಗುತ್ತದೆ.