ಕಳೆದ ವರ್ಷ ಲಾಕ್ ಡೌನ್ ಸಮಯದಿಂದ ನಟ ಸೋನು ಸೂದ್ ಅವರ ಹೆಸರನ್ನು ಹೆಚ್ಚು ಕೇಳುತ್ತಿದ್ದೇವೆ. ಸಿನಿಮಾದಲ್ಲಿ ನಟರಾಗಿ ದೇಶದ ಜನರು ಕಷ್ಟದಲ್ಲಿರುವಾಗ ಯಾವುದೆ ಸಹಾಯ ಮಾಡದೆ ಇರುವವರ ಮಧ್ಯೆ ಸೋನು ಸೂದ್ ಅವರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಕೊರೋನ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಜನರಿಗೆ ಸಹಾಯ ಹಸ್ತ ನೀಡಿದ್ದಾರೆ. ಸೋನು ಸೂದ್ ಅವರ ಸಹಾಯದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೊರೋನ ಹರಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ನೊಂದ ಜನರಿಗೆ ಆಶಾಕಿರಣವಾಗಿ ಸೋನು ಸೂದ್ ಅವರು ಕೆಲಸ ಮಾಡುತ್ತಿದ್ದಾರೆ. ಹೋದ ವರ್ಷ ಲಾಕ್ ಡೌನ್ ಸಮಯದಿಂದ ಈ ವರ್ಷದ ಲಾಕ್ ಡೌನ್ ಸಮಯದವರೆಗೂ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇಷ್ಟೊಂದು ಸಹಾಯ ಮಾಡುತ್ತಿರುವ ಸೋನು ಸೂದ್ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ಎಲ್ಲರಲ್ಲೂ ಪ್ರಶ್ನೆ ಮೂಡುತ್ತದೆ. ಮೊದಲು ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿ ಆನಂತರ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸೋನು ಸೂದ್ ಅವರಿಗೆ ಪತ್ರಕರ್ತರೊಬ್ಬರು ಸಹಾಯ ಮಾಡಲು ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರು. ಪತ್ರಕರ್ತರ ಈ ಪ್ರಶ್ನೆಗೆ ಸೋನು ಸೂದ್ ಅವರು ನನ್ನ ಆಸ್ತಿಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು ಮತ್ತು ಇದರ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು. ನಮ್ಮ ದೇಶ ಕೋಟಿ ಜನಸಂಖ್ಯೆ ಹೊಂದಿದ ಅನೇಕ ಧರ್ಮ, ಜಾತಿಯವರ ತವರೂರು. ಸಾಮಾಜಿಕ ಅವ್ಯವಸ್ಥೆ ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ವೈದ್ಯಕೀಯ ಕ್ಷೇತ್ರದ ಭ್ರಷ್ಟತೆ, ರಾಜಕಾರಣಿಗಳ ನಿರ್ಲಕ್ಷ ಇವೆಲ್ಲ ಮೊದಲಿನಿಂದಲೂ ಇದ್ದು ಕೊರೋನ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಜನರಿಗೆ ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದು ತಿಳಿಯಲಿಲ್ಲ ಇಂತಹ ಸಮಯದಲ್ಲಿ ಸೋನು ಸೂದ್ ಅವರು ಜನರ ಕಷ್ಟಕ್ಕೆ ಹೆಗಲಾದರು.
ಒಂದು ವರದಿಯ ಪ್ರಕಾರ ಅವರಿಗೆ ದಿನವೊಂದಕ್ಕೆ ದೇಶದ ನಾನಾ ಕಡೆಗಳಿಂದ ನಲವತ್ತು, ಐವತ್ತು ಸಾವಿರ ಕೋರಿಕೆ ಕರೆಗಳು ಬರುತ್ತಿದೆ. ಮನವಿ ಬಂದ ಕೆಲವು ಸಮಯದಲ್ಲಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಸೋನು ಸೂದ್ ಅವರು ಯಶಸ್ವಿಯಾಗಿದ್ದಾರೆ. ಸೋನು ಸೂದ್ ತುರ್ತು ಆಂಬುಲೆನ್ಸ್ ಸೇವೆ, ಸೋನು ಸೂದ್ ಆಕ್ಸಿಜನ್ ಪೂರೈಕೆ, ಸೋನು ಸೂದ್ ವಿಮಾನ ಯಾನ, ಸೋನು ಸೂದ್ ಸಾರಿಗೆ ಹೀಗೆ ಅವರ ಸಹಾಯದ ರೂಪ ವಿವಿಧ ರೀತಿಯಲ್ಲಿ ಹಂಚಿಕೆಯಾಗಿದೆ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ವಲಸಿಗರು, ದೂರದ ಊರುಗಳಿಂದ ಬಂದ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆಯನ್ನು ಮಾಡುವ ಮೂಲಕ ಪ್ರಾರಂಭವಾದ ಅವರ ಸಹಾಯ ಇವತ್ತು ಆಕ್ಸಿಜನ್, ಬೆಡ್, ಫುಡ್, ಐಸಿಯು ಮುಂತಾದ ಅಗತ್ಯ ವಸ್ತುಗಳ ಪೂರೈಕೆವರೆಗೂ ಮುಂದುವರೆದಿದೆ. ದೇಶದ ಯಾವುದೆ ಮೂಲೆಯಿಂದ ಅವರನ್ನು ಸಂಪರ್ಕಿಸಿದರೆ ಸಹಾಯಹಸ್ತವನ್ನು ನೀಡುತ್ತಿದ್ದಾರೆ. ಎಲ್ಲಾ ಕೆಲಸವನ್ನು ಮಾಡಲು ಅವರ ಬಳಿ 400 ಜನರನ್ನೊಳಗೊಂಡ ಒಂದು ಟೀಮ್ ಇದೆ. ಅವರದೆ ಆದ ಒಂದು ಚಾರಿಟಿ ಇದೆ ಅದರ ಹೆಸರು ಸೂದ್ ಚಾರಿಟಿ ಫೌಂಡೇಶನ್. ದೇಶದ ಎಲ್ಲಾ ಕಡೆಯಿಂದ ಬರುವ ಕರೆಯನ್ನು ಸ್ವೀಕರಿಸಿ ಸಹಾಯ ಮಾಡಬೇಕಾದರೆ ಸೋನು ಸೂದ್ ಅವರು ತಮ್ಮ ಫೌಂಡೇಶನ್ ನನ್ನು ಸಾರ್ವಜನಿಕ ಬೋರ್ಡ್ ಆಗಿ ಮಾರ್ಪಡಿಸಿ ಅದಕ್ಕೆ ಬರುವ ವಿನಂತಿಗಳನ್ನು ವರ್ಗೀಕರಿಸಿ ಒಂದೊಂದು ಕೆಲಸಕ್ಕೆ ಪ್ರತ್ಯೇಕ ಸಹಾಯವಾಣಿ, ಟೀಮ್ ಅನ್ನು ನೇಮಿಸಿ ಸಹಾಯ ಮಾಡುತ್ತಿದ್ದಾರೆ. ಅವರ ಟೀಮ್ ದಿನದ 24 ಗಂಟೆಯೂ ಕೆಲಸ ಮಾಡುತ್ತಿರುತ್ತದೆ, ಮಧ್ಯರಾತ್ರಿಯೂ ಅವರ ಸಹಾಯವಾಣಿ ನಂಬರ್ ಚಾಲ್ತಿಯಲ್ಲಿರುತ್ತದೆ.
ಸೋನು ಸೂದ್ ಅವರು ನಾನು ಒಬ್ಬ ಸಾಮಾನ್ಯ ಮನುಷ್ಯ, ನಾನು ಒಂದು ಸಮಯದಲ್ಲಿ ಅವಕಾಶಕ್ಕಾಗಿ ಕಾದಿದ್ದೇನೆ, ನನಗೆ ಹಸಿವಿನ, ಬಡತನದ ಕಷ್ಟ ಗೊತ್ತಿದೆ. ಈಗ ನನ್ನ ದೇವರು ಸುಸ್ಥಿತಿಯಲ್ಲಿಟ್ಟಿದ್ದಾನೆ, ನನ್ನ ಕೈಲಾದ ಸಹಾಯವನ್ನು ಬಡವರಿಗೆ, ನಿರ್ಗತಿಕರಿಗೆ ಮಾಡುತ್ತೇನೆ. ಸಹಾಯ ಪಡೆದವರು ಧನ್ಯವಾದ ತಿಳಿಸುತ್ತಾರೆ ಅದೆ ನನಗೆ ಸಾಕು ಎಂದು ಹೇಳುತ್ತಾರೆ. ಅವರ ಚಾರಿಟಿ ಕಡೆಯಿಂದ 7 ಲಕ್ಷಕ್ಕೂ ಅಧಿಕ ಜನರಿಗೆ ಬೆಡ್, ಹಾಸ್ಪಿಟಲ್ ವ್ಯವಸ್ಥೆ ಮಾಡಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಅನಾಥರನ್ನು ದತ್ತು ಪಡೆದಿದ್ದಾರೆ, 18 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನಾನಾ ರೀತಿಯಲ್ಲಿ ನೆರವಾಗಿದ್ದಾರೆ. ಹತ್ತುಸಾವಿರ ವಲಸಿಗರು ಅವರ ಊರುಗಳಿಗೆ ತೆರಳಲು ಸಹಾಯ ಮಾಡಿದ್ದಾರೆ. ಅವರ ಚಾರಿಟಿಗೆ ಬರುತ್ತಿರುವ ಹೆಚ್ಚು ಕರೆಗಳು ಆಕ್ಸಿಜನ್ ಗಾಗಿದೆ. ಉತ್ತರಪ್ರದೇಶ ಮತ್ತು ದೆಹಲಿಯಿಂದ ಹೆಚ್ಚಿನ ಸಹಾಯ ಕರೆಗಳು ಬರುತ್ತಿವೆ. ನಮ್ಮ ದೇಶದಲ್ಲಿಯೆ ಆಕ್ಸಿಜನ್ ಉತ್ಪಾದನೆಯ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ ಸಂಬಂಧಿಕರೊಬ್ಬರಿಗೆ ಆಕ್ಸಿಜನ್ ಕೊರತೆಯಿದ್ದು ಸೋನು ಸೂದ್ ಅವರಿಗೆ ತಿಳಿಸಿದಾಗ ಹತ್ತು ನಿಮಿಷದಲ್ಲಿ ಅವರು ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೊರೋನಾ ರೋಗಿಗಳಿಗೆ ಆಕ್ಸಿಜನ್ ಕೊರತೆಯಿರುವುದು ಪೊಲೀಸ್ ಅಧಿಕಾರಿಗಳಿಂದ ತಿಳಿದು ಸೂದ್ ಅವರು ವ್ಯವಸ್ಥೆ ಮಾಡಿ ಹೃದಯವಂತಿಕೆ ಮೆರೆದಿದ್ದಾರೆ. ಕೆಲವರು ಸೋನು ಸೂದ್ ಅವರು ಈ ಸಹಾಯವನ್ನು ರಾಜಕೀಯಕ್ಕೆ ಬರುವ ಉದ್ದೇಶದಿಂದ ಮಾಡುತ್ತಿದ್ದಾರೆ ಎಂದು ಹೇಳಿದರು, ಅದಕ್ಕೆ ಸೋನು ರಾಜಕೀಯಕ್ಕೆ ಬರುವ ಯಾವ ಉದ್ದೇಶವು ನನಗಿಲ್ಲ, ನನ್ನವರಿಗಾಗಿ ಸಹಾಯ ಮಾಡುತ್ತಿದ್ದೇನೆ ನನಗೆ ಆತ್ಮ ತೃಪ್ತಿ ಸಿಗುತ್ತದೆ ಎಂದು ಹೇಳಿದ್ದಾರೆ. ದೇಶದ ಜನತೆಯ ದೃಷ್ಟಿಯಲ್ಲಿ ಸೋನು ಸೂದ್ ಅವರು ನಿಜವಾದ ಹೀರೊ ಆಗಿದ್ದಾರೆ. ಅವರಿಗೆ ದೇವರು ಹೆಚ್ಚು ಸಹಾಯ ಮಾಡುವ ಶಕ್ತಿಯನ್ನು ಕೊಡಲಿ ಎಂದು ಆಶಿಸೋಣ.