ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಹೊಸ ವರ್ಷದ ಆರಂಭದೊಂದಿಗೆ, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನವನ್ನ ನಡೆಸೋಕೆ ಸಾಧ್ಯವಾಗೋ ರೀತಿಯಲ್ಲಿ ಹಾಗೂ ಎಲ್ಲ ಬಗೆಯ ಅನುಭವಗಳೊಂದಿಗೆ ಸೂಕ್ತ ರೀತಿಯಲ್ಲಿ ವ್ಯವಹರಿಸಲು ಸಾಧ್ಯವಾಗುವ ರೀತಿಯಲ್ಲಿ ನೀವು ನಿಮ್ಮ ಮಕ್ಕಳಿಗೆ ಕೆಲವು ಮೂಲಭೂತ ಮೌಲ್ಯಗಳು ಹಾಗೂ ಪಾಠಗಳನ್ನ ಕಲಿಸಿಕೊಡಬೇಕಾಗುತ್ತದೆ. ತನ್ನ ಮಗು ಬಹು ಆತ್ಮವಿಶ್ವಾಸವುಳ್ಳದ್ದಾಗಿ, ಒಬ್ಬ ಯಶಸ್ವೀ ವ್ಯಕ್ತಿಯಾಗಿ ಬೆಳೆಯಬೇಕೆಂದು ಎಲ್ಲಾ ತಂದೆ ತಾಯಿಯರ ಆಶಯ ಇದೆ ಆಗಿರುತ್ತದೆ. ನಿಮ್ಮ ಮಗುವು ಅತ್ಯುತ್ತಮ ವ್ಯಕ್ತಿಯಾಗಿ ಬೆಳೆಯಲೆಂದು ನೀವು ಹಾರೈಸುವುದರ ಜೊತೆಗೆ ಆತನೋ ಅಥವಾ ಆಕೆಯೋ ತನ್ನೆಲ್ಲ ಕನಸುಗಳನ್ನೂ ಸಾಕಾರಗೊಳಿಸಿಕೊಳ್ಳುವುದರ ಜೊತೆಗೆ, ತನ್ನೆಲ್ಲ ಮಹತ್ವಾಕಾಂಕ್ಷೆಗಳನ್ನೂ ಈಡೇರಿಸಿಕೊಳ್ಳುವಂತೆ ಆಗಲಿ ಎಂದು ತಾಯಿಯಾಗಿ ಎಲ್ಲರೂ ಹಾರೈಸುವಿರಿ ತಾನೇ ಆದರೆ ಓರ್ವ ಹೆತ್ತ ತಾಯಿಯಾಗಿ ನೀವು ನಿಭಾಯಿಸಬೇಕಾದ ಕೆಲ ಜವಾಬ್ದಾರಿಗಳೂ ಇರುತ್ತವೆ ಪ್ರತೀ ಹೆಜ್ಜೆಯಲ್ಲೂ ನಿಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಹಾಗೂ ಅವರಿಗೆ ಕೆಲವು ಮುಖ್ಯವಾದ ಜೀವನ ಪಾಠಗಳನ್ನ ಹೇಳಿಕೊಡುವುದೂ ನಿಮ್ಮ ಜವಾಬ್ದಾರಿಗಳೇ ಆಗಿರುತ್ತವೆ. ನಿಮ್ಮ ಮಗು ಸ್ವಾವಲಂಭಿಯಾಗಿ ಇರುವುದಕ್ಕೆ ಹಾಗೂ ಸಮರ್ಥವಾಗಿ ಬಾಳುವುದಕ್ಕೆ ದೀರ್ಘಾವಧಿಯಲ್ಲಿ ಇವೆಲ್ಲವನ್ನೂ ಮಕ್ಕಳು ತಿಳಿದುಕೊಂಡಿರಬೇಕಾದದ್ದು ತುಂಬಾನೇ ಮುಖ್ಯ. ನಿಮ್ಮ ಮಗುವಿಗೆ ನೀವು ಕಲಿಸಿಕೊಡಬಹುದಾದ ಕೆಲವು ಮೌಲ್ಯಗಳನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಮಯ ಪ್ರಜ್ಞೆ ಈಗಿನ ಕಾಲದಲ್ಲಿ ತುಂಬಾ ಮುಖ್ಯ ಹಾಗಾಗಿ ನಿಮ್ಮ ಮಗುವಿಗೆ ಸಮಯದ ಮೌಲ್ಯವನ್ನ ಮನವರಿಕೆ ಮಾಡಿಸಿ ಹಾಗೂ ತನ್ನ ಸಮಯವನ್ನ ಚೆನ್ನಾಗಿ ನಿಭಾಯಿಸೋದಕ್ಕೆ ಹೇಳಿಕೊಡಿ. ಕೊಟ್ಟ ಮಾತಿಗೆ ಬದ್ಧನಾಗಿ ಸಮಯಕ್ಕೆ ಸರಿಯಾಗಿ, ವಹಿಸಿಕೊಂಡ ಕೆಲಸವನ್ನ ಪೂರೈಸುವುದಕ್ಕೆ ಅಥವಾ ಪೂರ್ವನಿಗದಿತ ಸ್ಥಳದಲ್ಲಿ ಹಾಜರಾಗುವುದನ್ನು ಮಕ್ಕಳಿಗೆ ಕಲಿಸಿಕೊಡಿ. ಬೇರೆಯವರ ಸಮಯಕ್ಕೆ ಬೆಲೆ ಕೊಡುವುದನ್ನ ನಿಮ್ಮ ಮಗ ಅಥವಾ ಮಗಳಿಗೆ ಮೊದಲು ಕಲಿಸಿಕೊಡಿ. ಮಾಡಬೇಕಾದ ಕೆಲಸಗಳನ್ನ ಯೋಜನಾಬದ್ಧವಾಗಿ ಇರಿಸಿಕೊಳ್ಳುವ ಅಭ್ಯಾಸವನ್ನ ಮಕ್ಕಳಿಗೆ ಹೇಳಿಕೊಡಬೇಕು.

ಎರಡನೆಯದಾಗಿ ಗುರು ಹಿರಿಯರಿಗೆ ಗೌರವ ಸಲ್ಲಿಸಲು ಕಲಿಸುವುದು. ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ತಮ್ಮ ಗುರುಹಿರಿಯರಿಗೆ ಗೌರವ ಕೊಡಬೇಕೂ ಎನ್ನುವ ಪಾಠವನ್ನ ಎಲ್ಲ ಹೆತ್ತವರೂ ಕಲಿಸಿಯೇ ಇರುತ್ತಾರೆ ಆದರೆ ಅದಷ್ಟೇ ಸಾಲದು. ಎಲ್ಲರಿಗೂ ಅವರವರದೇ ಆದ ಗೌರವ , ಆತ್ಮ ಗೌರವ ಎನ್ನುವುದು ಇದ್ದೆ ಇರುತ್ತದೆ. ಗುರುಹಿರಿಯರ ಜೊತೆಗೆ ಪ್ರತೀ ವ್ಯಕ್ತಿಗೂ ಗೌರವ ನೀಡುವ ಪ್ರವೃತ್ತಿಯನ್ನ ನಿಮ್ಮ ಮಗುವಿಗೆ ಕಲಿಸಿಕೊಡಬೇಕು. ನಿಮ್ಮ ಮಗು ಯಾರನ್ನೂ ಕೀಳಾಗಿ ಕಾಣುವುದು ಬೇಡ. ಅವರು ಸಜ್ಜನ ನಾಗರಿಕರಾಗುವಂತಾಗಲು ಅವರಲ್ಲಿ ಸಹಾನುಭೂತಿಯ ಮನೋಭಾಅವನೆಯನ್ನ ಬೆಳೆಸಿರಿ.

ಇನ್ನೊಬ್ಬರ ಬಗ್ಗೆ ಕರುಣೆಯಿಂದ ಇರುವುದನ್ನು ಮಕ್ಕಳಿಗೆ ಕಲಿಸಬೇಕು. ಕಾರುಣ್ಯಭರಿತ ದೃಷ್ಟಿಕೋನವನ್ನ ನಿಮ್ಮ ಮಗು ಬೆಳೆಸಿಕೊಳ್ಳಲಿ ತನ್ನಿಂದ ಸಾಧ್ಯವಾದಷ್ಟು ಪರರಿಗೆ ಸಹಾಯ ಮಾಡುವ ಪ್ರವೃತ್ತಿ, ಸಜ್ಜನಿಕೆ, ಹಾಗೂ ದಯೆಯಂತಹ ಮಾನವೀಯ ಮೌಲ್ಯಗಳು ಇರುವ ಗುಣಗಳನ್ನ ನಿಮ್ಮ ಮಗು ಅತ್ಯಗತ್ಯವಾಗಿ ಅಳವಡಿಸಿಕೊಳ್ಳಬೇಕು. ಇತರರಿಗೆ ತನ್ನ ಕೈಲಾದ ನೆರವನ್ನು ನೀಡುವ ಗುಣ ಯಾವತ್ತೂ ನಿಮ್ಮ ಮಗುವಿನಲ್ಲಿ ನೆಲೆಯಾಗಿರಲಿ. ತಮ್ಮ ಸ್ವಂತ ಭಾವನೆಗಳಿಗೆ ಹಾಗೂ ಅವಶ್ಯಕತೆಗಳಿಗೆ ಅವರು ಅದೆಷ್ಟು ಮಹತ್ವವನ್ನ ನೀಡುತ್ತಾರೆಯೋ ಅಷ್ಟೇ ಮಹತ್ವವನ್ನ ಇತರ ಭಾವನೆ ಹಾಗೂ ಅವಶ್ಯಕತೆಗಳಿಗೂ ನೀಡುವುದನ್ನ ಅವರಿಗೆ ಕಲಿಸಿಕೊಡಬೇಕು.

ನಿಮ್ಮ ಮಗುವಿಗೆ ಅತ್ಯುತ್ತಮವಾಗಿ ಹೊರಹೊಮ್ಮುವುದಕ್ಕೆ ಬೇಕಾದ ಕೌಶಲ್ಯಗಳನ್ನ ಕಲಿಸಿದ್ದೀರ, ಅವರಲ್ಲಿ ಸ್ಪರ್ಧಾ ಮನೋಭಾವನೆಯನ್ನೂ ಬೆಳೆಸಿರಬೇಕು. ನಿಮ್ಮ ಮಗುವಿಗೆ ಅದೆಷ್ಟೇ ಸಾಮರ್ಥ್ಯವಿರಲೀ, ಅದೆಷ್ಟೇ ಕೌಶಲ್ಯಗಳಿರಲೀ, ಒಮ್ಮೊಮ್ಮೆ ಸ್ಪರ್ಧೆಯಲ್ಲಿ ನಿಮ್ಮ ಮಗುವಿಗೂ ಸೋಲಾಗುವ ಸಾಧ್ಯತೆ ಇದ್ದೇ ಇರುತ್ತದೆ ಅಂತಹ ಸನ್ನಿವೇಶಗಳಲ್ಲಿ ಅವರು ತಮ್ಮ ಸೋಲನ್ನ ಆಪ್ತವಾಗಿ ಹಾಗೂ ಗೌರವಪೂರ್ವಕವಾಗಿ ಈಗಿನ ಸೋಲು ತಮ್ಮ ಮುಂದಿನ ಗೆಲುವಿಗೆ ಒಂದು ಪಾಠ ಹಾಗೂ ಅದೊಂದು ಬುನಾದಿ ಎನ್ನುವ ರೀತಿಯಲ್ಲಿ ಸ್ವೀಕರಿಸುವಂತಾಗಬೇಕು ಹಾಗೂ ಅವರಲ್ಲಿನ ಸ್ಪರ್ಧಾ ಮನೋಭಾವನೆಯನ್ನ ಹಾಗೆಯೇ ಜೀವಂತವಾಗಿ ಇರಿಸಿಕೊಂಡಿರಬೇಕು. ವಿಶಾಲ ಹೃದಯದವರಾಗಿದ್ದು, ತಮ್ಮ ಸೋಲನ್ನ ನಿಭಾಯಿಸುವ ಸಾಮರ್ಥ್ಯ ಅವರಿಗೆ ಇರಬೇಕು ಅಂತಹಾ ಮನೋಭಾವನೆಯನ್ನ ನೀವು ಮಕ್ಕಳಲ್ಲಿ ಬೆಳೆಸಬೇಕು.

ಜೀವನದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಒಂದು ಬೆಲೆಯಿರುತ್ತದೆ. ಹಾಗಾಗಿ ಯಾವುದನ್ನೇ ಆದರೂ ಪಡೆದುಕೊಳ್ಳುವುದಕ್ಕಾದರೂ ಕಠಿಣ ಶ್ರಮ ಪಡಬೇಕಾದದ್ದು ಅಗತ್ಯ ಅನ್ನೋ ಸತ್ಯವನ್ನ ನಿಮ್ಮ ಮಗುವಿಗೆ ಕಲಿಸಿಕೊಡಿ. ತಮಗಿಷ್ಟವಾದ ಗೊಂಬೆಯನ್ನ ಪಡೆದುಕೊಳ್ಳೋದರಿಂದ ಹಿಡಿದು, ತಮ್ಮ ಜೀವನದ ಗುರಿಯನ್ನ ಸಾಧಿಸಿಕೊಳ್ಳುವ ವಿಚಾರದವರೆಗೂ, ಯಾವುದನ್ನೂ ಹಾಗೇ ಸಲೀಸಾಗಿ ತೆಗೆದುಕೊಳ್ಳಬಾರದೆಂಬ ಮಹತ್ತರ ಪಾಠವನ್ನ, ಯಾವುದೂ ಪುಕ್ಕಟೆಯಾಗಿ ದೊರಕಲಾರದೆಂಬ ಜೀವನ ಸತ್ಯವನ್ನ ಅವರಿಗೆ ಕಲಿಸಿ ತಿಳಿಸಿಕೊಡಿ. ಅರ್ಪಣಾ ಮನೋಭಾವ ಹಾಗೂ ಪ್ರಾಮಾಣಿಕತೆಯಿಂದ ಮಾಡುವ ಯಾವ ಕೆಲಸವೂ ವ್ಯರ್ಥವಾಗದೆಂಬ ಸತ್ಯವನ್ನೂ ಅವರಿಗೆ ಮನವರಿಕೆ ಮಾಡಿಕೊಡಿ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ!? ಎಂಬ ಗಾದೆ ಮಾತಿನ ಹಾಗೇ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಚಿಕ್ಕವರು ಇರುವಾಗಲೇ ತಿಳಿಸಿ ಹೇಳಿ ಸರಿ ಯಾವುದು ತಪ್ಪು ಯಾವುದು ಎನ್ನುವುದನ್ನು ಎಲ್ಲವನ್ನೂ ಹೇಳಿಕೊಟ್ಟು ತಿದ್ದಿ ತೀಡಬೇಕು. ಇಲ್ಲವಾದಲ್ಲಿ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಯಾವುದೇ ಜೀವನದ ಮೌಲ್ಯಗಳನ್ನು ಅರಿಯದೆ ಅವರಿಗೂ ತಂದೆ ತಾಯಿಗಳಿಗೆ ಕೂಡಾ ಅದು ಒಂದು ರೀತಿಯ ಹಿಂಸೆ ತೊಂದರೆ ಹಾಗಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವನ್ನೂ ತಿಳಿಸಿ ಹೇಳಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!