ಶರಾವತಿ ನದಿಯ ಹಿನ್ನೀರಿನ ಸಿಗಂದೂರಿನಲ್ಲಿ ತಾಯಿ ಚೌಡೇಶ್ವರಿ ನೆಲೆಸಿದ್ದಾಳೆ. ಚೌಡೇಶ್ವರಿ ದೇವಸ್ಥಾನ ಪಶ್ಚಿಮ ಘಟ್ಟದ ಹೃದಯ ಭಾಗದಲ್ಲಿದೆ ಅಲ್ಲದೆ ಆಕರ್ಷಕ ದ್ವೀಪಗಳ ಮಧ್ಯದಲ್ಲಿ ಇದೆ. ಚೌಡೇಶ್ವರಿ ದೇವಿ ಕಳ್ಳ ಕಾಕರಿಗೆ ದುಃಸ್ವಪ್ನವಾಗಿದ್ದಾಳೆ. ಇಂತಹ ತಾಯಿ ಚೌಡೇಶ್ವರಿ ದೇವಸ್ಥಾನದ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಧಾರ್ಮಿಕ ಕಾರಣದಿಂದ ಪ್ರಭಾವಿ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ, ಇಲ್ಲಿಯ ವಿಗ್ರಹ ಸ್ವಯಂಭು ವಿಗ್ರಹ ಎಂದು ನಂಬಲಾಗಿದೆ. ಈ ದೇವಸ್ಥಾನಕ್ಕೆ ಶರಾವತಿಯ ಹಿನ್ನೀರಿನ ಲಾರ್ಜ್ ಬಳಸಿ ದಾಟಿ ಹೋಗಬೇಕು.
ಚೌಡೇಶ್ವರಿ ದೇವಾಲಯದಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯ ದಿನದಂದು ಅತಿ ದೊಡ್ಡ ಜಾತ್ರೆ ನಡೆಯುತ್ತದೆ. ತಾಯಿ ಚೌಡೇಶ್ವರಿ ಕಳ್ಳರ ಭಯವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದ್ದಾಳೆ ಎಂದು ನಂಬಲಾಗಿದೆ. ತಾಯಿಗೆ ಹರಕೆ ಹೊತ್ತುಕೊಂಡು ಭಕ್ತರು ಕಳ್ಳ ಕಾಕರ ಭಯವಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಹರಕೆ ಹೊತ್ತುಕೊಂಡ ಮನೆಯಲ್ಲಿ ಕಳ್ಳತನವಾದರೆ ತಾಯಿ ಕಳ್ಳರನ್ನು ಭಯಂಕರವಾಗಿ ಶಿಕ್ಷಿಸುತ್ತಾಳೆ ಎಂಬ ನಂಬಿಕೆ ಹಾಗೂ ಪ್ರತೀತಿ ಇದೆ ಆದ್ದರಿಂದ ಈ ಭಾಗದ ಮನೆಗಳ ಮುಂದೆ ಕಳ್ಳತನ ಮಾಡಿದರೆ ದೇವಿ ಶಿಕ್ಷಿಸುವುದರ ಬಗ್ಗೆ ಹರಕೆ ಹೊತ್ತುಕೊಂಡು ಫಲಕಗಳನ್ನು ಹಾಕಿರುತ್ತಾರೆ.
ನಿಮ್ಮ ಮನೆಯಲ್ಲಿ ಅಮೂಲ್ಯವಾದ ವಸ್ತುಗಳು ಕಳುವಾದರೆ ತಕ್ಷಣ ದೇವಿಯಲ್ಲಿ ಹರಕೆ ಹೊತ್ತುಕೊಂಡರೆ ನಿಮ್ಮ ವಸ್ತುಗಳು ಸಿಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಿಗೆ ಇದೆ, ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ಸಿಗಂದೂರು ಶಿವಮೊಗ್ಗದಿಂದ 90 ಕಿಮೀ ದೂರದಲ್ಲಿದೆ, ರಾಜ್ಯದ ರಾಜಧಾನಿ ಬೆಂಗಳೂರಿನಿಂದ 405 ಕಿಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡದಿಂದ 213 ಕಿಮೀ ದೂರದಲ್ಲಿದೆ.
ಸಾಗರದಿಂದ ಹೊಳೆಬಾಗಿಲುವರೆಗೆ ರಸ್ತೆ ಇದೆ ಅಲ್ಲಿಂದ ಮುಂದೆ ರಸ್ತೆ ಇಲ್ಲ. ಹೊಳೆಬಾಗಿಲುನಲ್ಲಿ ಲಿಂಗನಮಕ್ಕಿ ಅಣೆಕಟ್ಟು ಹಿನ್ನೀರು ಎದುರಾಗುತ್ತದೆ. ಅದಕ್ಕೆ ಸೇತುವೆ ಇಲ್ಲ ಲಾರ್ಜ್ ಅಥವ ಬಾರ್ಜ್ ನಲ್ಲಿ ಹೋಗಬೇಕು, ಹಿನ್ನೀರು ಸುಮಾರು 2 ಕಿಮೀ ಅಗಲವಾಗಿದೆ. ಇಲ್ಲಿ ಲಾರ್ಜ್ ಬಳಸುವವರು ಬೆಳಗ್ಗೆ 8 ಗಂಟೆಯಿಂದ 11-30 ರವರೆಗೆ, ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ, ಸಾಯಂಕಾಲ 4 ಗಂಟೆಯಿಂದ 5-30ರವರೆಗೆ ಲಾರ್ಜ್ ತೆರೆದಿರುತ್ತದೆ. ಪ್ರತಿ 2 ಗಂಟೆಗೊಮ್ಮೆ ಸಾಗರ, ಶಿವಮೊಗ್ಗ, ಭಟ್ಕಳದಿಂದ ಸಿಗಂದೂರಿಗೆ ನೇರವಾಗಿ ಬಸ್ ವ್ಯವಸ್ಥೆ ಇದೆ.
ಇಲ್ಲಿ ಉಳಿಯಲು ಹೋಟೆಲ್ ಗಳು ಸಿಗುವುದಿಲ್ಲ. ದೇವಾಲಯದಲ್ಲಿ ತಂಗಲು ಅವಕಾಶವಿದೆ ಆದರೆ ಸೀಮಿತ ಸಂಖ್ಯೆಯಲ್ಲಿ ಕೊಠಡಿಗಳು ಲಭ್ಯವಿರುತ್ತವೆ. ಆಷಾಢ ಮಾಸ ಮತ್ತು ವಿಶೇಷ ಪೂಜೆಗಳ ಸಮಯದಲ್ಲಿ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ದೇವಸ್ಥಾನ ಬೆಳಗ್ಗೆ 7-30 ರಿಂದ 2 ಗಂಟೆ ಹಾಗೂ ಸಾಯಂಕಾಲ 3 ಗಂಟೆಯಿಂದ 7 ಗಂಟೆವರೆಗೂ ತೆರೆದಿರುತ್ತದೆ. ಸಿಗಂದೂರಿನ ಕೃಷಿ ಭೂಮಿಯ ಸಂಪಿಗೆ ಮರದಡಿ ನೆಲೆಯಿಂದ ಶಕ್ತಿವಂತ ಚೌಡೇಶ್ವರಿಯನ್ನು ಶ್ರದ್ದಾ ಭಕ್ತಿಯಿಂದ ಆರಾಧಿಸುವ ಸಹಸ್ರಾರು ಭಕ್ತರು ನಾಡಿನಾದ್ಯಂತ ನಂಬಿಕೆಯಿಂದ ಬದುಕುತ್ತಿದ್ದಾರೆ.
ಪ್ರಭಾವಿ ಪುಣ್ಯಕ್ಷೇತ್ರವಾಗಿ ಬೆಳೆಯುತ್ತಿರುವ ಅಧಿದೇವತೆ ಚೌಡೇಶ್ವರಿ ಇಂದಿನ ಧರ್ಮದರ್ಶಿ ರಾಮಪ್ಪ ಅವರ ಕುಲದೇವರು. ಕನಸಿನಲ್ಲಿನ ಆದೇಶದಂತೆ 1990ರಲ್ಲಿ ಆಗಮ ಶಾಸ್ತ್ರೋಕ್ತವಾಗಿ ಚೌಡೇಶ್ವರಿಯನ್ನು ಸಿಗಂದೂರಿನಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚೆಗೆ ಸರ್ಕಾರವು ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ನೇರವಾದ ಸೇತುವೆಯನ್ನು ಕಟ್ಟುವ ಭರವಸೆ ನೀಡಿದೆ. ತಾಯಿ ಚೌಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಕೇಳಿಕೊಳ್ಳೋಣ.