ತೀರ್ಥಕ್ಷೇತ್ರವೆಂದರೆ ಮನುಷ್ಯರ ಒಂದು ಪುಣ್ಯ ಭಾವನೆಯನ್ನು ಮತ್ತು ಅವರ ಸಮಸ್ಯೆಗಳ ಪರಿಹಾರ ನೀಡುವ ಒಂದು ಸ್ಥಳವೆಂದು ಎಲ್ಲರೂ ಭಾವಿಸುತ್ತಾರೆ. ಈ ತೀರ್ಥಸ್ನಾನದ ಮೂಲಕ ತಮ್ಮ ಎಲ್ಲಾ ಮಾನಸಿಕ, ದೈಹಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಈ ಕ್ಷೇತ್ರಗಳಿಗೆ ಜನರು ಭೇಟಿ ಕೊಡುತ್ತಾರೆ. ಇಂತಹದೇ ಒಂದು ಕ್ಷೇತ್ರದ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.ಆ ಕ್ಷೇತ್ರದ ಹೆಸರೇ ನರಹರಿ ಸದಾಶಿವ ದೇವಸ್ಥಾನ. ಈ ದೇವಸ್ಥಾನ ಸುಂದರ ಮತ್ತು ರಮಣೀಯವಾದಂತಹ ನರಹರಿ ಪರ್ವತದಲ್ಲಿದೆ.
ನಮ್ಮ ದಕ್ಷಿಣ ಭಾರತಕ್ಕೂ ಮತ್ತು ಮಹಾಭಾರತದ ಕಥೆಗೂ ನಿಕಟ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಪಾಂಡವರು ಮಹಾಭಾರತ ಯುದ್ಧದ ನಂತರ ತಮ್ಮ ಶಾಪ ವಿಮೋಚನೆಗಾಗಿ ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅರ್ಜುನನು ಒಂದು ಬಂಡೆಯಿಂದ ಶಿವಲಿಂಗವನ್ನು ತಯಾರು ಮಾಡಿ ಇದನ್ನು ಪೂಜಿಸುತ್ತಾನೆ. ಪಾಂಡವರು ಅಂದರೆ ನರರು, ಹರಿಯ ಪೂಜೆ ಮಾಡಿದ್ದರಿಂದ ಈ ಕ್ಷೇತ್ರಕ್ಕೆ ನರಹರಿ ಸದಾಶಿವ ದೇವಸ್ಥಾನ ಎಂಬ ಹೆಸರು ಬಂದಿದೆ ಎಂದು ಇತಿಹಾಸವಿದೆ. ಈಲ್ಲಿಯ ಬಂಡೆ ಮೇಲೆ ಅವರು ನಿರ್ಮಿಸಿದ್ ಶಂಕ, ಚಕ್ರ, ಗದಾ, ಪದ್ಮ ಎಂಬ ತೀರ್ಥಕೆರೆಯಲ್ಲಿ ಭಕ್ತರು ಮಿಂದು ಪುನೀತರಾಗುತ್ತಾರೆ.
ನರಹರಿ ಕ್ಷೇತ್ರವೆಂದರೆ ಸಂಕಟದಲ್ಲಿ ಇರುವವರ ಸಂಕಟವನ್ನು ದೂರ ಮಾಡುವ ಕ್ಷೇತ್ರವೆಂದೇ ಪ್ರಸಿದ್ದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದ ದೇವಸ್ಥಾನಗಳಲ್ಲೊಂದಾಗಿ ರೂಪುಗೊಂಡಿದೆ. ನರಹರಿ ಪರ್ವತವು ಬರೀ ದೇಗುಲವಲ್ಲ, ಭಾವುಕರಿಗೆ ನಂದಗೋಕುಲ, ನಿಸರ್ಗ ಪ್ರಿಯರಿಗೆ ಪ್ರಕೃತಿ ಮಡಿಲು, ಬಾಳಿನಲ್ಲಿ ಬಳಲಿದವರಿಗೆ ಪ್ರಶಾಂತನೀಯ ಸ್ಥಳ, ಭಕ್ತರಿಗೆ ದೇವಸನ್ನಿಧಿ, ಅಂತೆಯೇ ಇಲ್ಲಿ ಸೂರ್ಯೋದಯವೇ ಆಗಲಿ ಸೂರ್ಯಾಸ್ತವೇ ಆಗಲಿ ಪ್ರತಿಯೊಬ್ಬರನ್ನೂ ಮಂತ್ರಮುಗ್ಧರನ್ನಾಗಿಸುವ ಶಕ್ತಿ ಈ ಬೆಟ್ಟದಲ್ಲಿದೆ.
ಕಾರ್ತಿಕ ಮಾಸದ ಸೋಮವಾರಗಳಲ್ಲಿ ಭಕ್ತರೂ ಬಂದು ಹರಿಹರನ ಸೇವೆ ಮಾಡಿ ಚತುರ್ವಿಧ ಪುಣ್ಯ ಫಲ ಪಡೆಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸೇವೆಯಿಂದ ಸರ್ವ ಭಯವು, ಪಾಶಾರ್ಪಣೆಯಿಂದ ಉಬ್ಬಸ ವ್ಯಾಧಿಯು, ತೊಟ್ಟಿಲು ಮಗು ಸೇವೆಯಿಂದ ಬಂಜೆತನವನ್ನು, ಎಳನೀರು ಅಭಿಷೇಕದಿಂದ ಇಷ್ಟಾರ್ಥ ಸಿದ್ಧಿಯು ದೊರಕುತ್ತದೆ ಎಂದು ಇಲ್ಲಿಯ ಭಕ್ತರ ಅಚಲ ನಂಬಿಕೆ. ಶ್ರೀ ನರಹರಿ ಬೆಟ್ಟದ ಮೇಲೆ ನಿಂತಾಗ ಎದುರುಗಡೆ ಪೂರ್ವದಲ್ಲಿ ಪ್ರಖ್ಯಾತ ಸೂಳ್ಳೆಮಲೈ, ಬಲ್ಲಮಲೈ, ಹಾಗೂ ದಕ್ಷಿಣದಲ್ಲಿ ಕೇಡಂಜಮಲೈ ಇದ್ದು, ಅವೆಲ್ಲವನ್ನೂ ಈ ಬೆಟ್ಟದ ಮೇಲೆ ನಿಂತು ಕಣ್ತುಂಬಿಕೊಳ್ಳಬಹುದು.
ಇನ್ನೊಂದು ವಿಶೇಷತೆಯೆಂದರೆ ಇದರ ಇನ್ನೊಂದು ಬದಿಯಲ್ಲಿ ಹಾಸನ, ಮಂಗಳೂರು ರೈಲು ಮಾರ್ಗ, ಮತ್ತೊಂದು ಬದಿಯಲ್ಲಿ ಜೀವನದಿ-ನೇತ್ರಾವತಿ ಹರಿಯುತ್ತದೆ. ಸುತ್ತಲು ಪರಿಸರದ ರಮಣೀಯತೆಯನ್ನು ಕಣ್ತುಂಬಿಕೊಳ್ಳಬಹುದು. ಈ ಕ್ಷೇತ್ರ ತ್ರಿವೇಣೀಸಂಗಮದಂತೆ ಮೂರು ಗ್ರಾಮಗಳಾದ ಪಾಣೆಮಂಗಳೂರು, ಅರ್ಮೂರು, ಗೋಳ್ತಾಮಜಲು, ಸೇರಿ ತ್ರಿವೇಣಿ ಬೆಟ್ಟದಂತೆ ಇದೆ. ಕಳೆದ 27 ವರ್ಷದಿಂದ ಬ್ರಹ್ಮೋತ್ಸವವನ್ನು ಕಾಣದ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಗೊಳಿಸುವ ಬಗ್ಗೆ ಹಲವಾರು ಭಕ್ತರು ಚಿಂತನೆ ನಡೆಸಿದ್ದಾರೆ. ಸುಮಾರು 8 ಕೋಟಿ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ,ಶ್ರೀ ಗಣಪತಿ ದೇವರ ಗುಡಿ, ರಾಜಗೋಪುರ, ಪ್ರಸಾದ ಮುಳಿಯಂಗರರ ಮಾರ್ಗದರ್ಶನದಲ್ಲಿ ಜೀರ್ಣೋದ್ದಾರ ಕಾಮಗಾರಿ ಚಾಲನೆ ದೊರೆತಿದೆ.
ನರಹರಿ ಬೆಟ್ಟವು ಮಂಗಳೂರಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ಇದು ಸುಮಾರು 350 ಅಡಿ ಹತ್ತಿರದಲ್ಲಿದೆ. ಈ ಬೆಟ್ಟದಲ್ಲಿ ಸೂರ್ಯಾಸ್ತವನ್ನು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಈ ಬೆಟ್ಟಕ್ಕೆ ಹೋಗಲು ರಸ್ತೆಯ ಮಾರ್ಗ ಮತ್ತು ಕೊನೆಯಲ್ಲಿ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಈ ದೇವಸ್ಥಾನ ಬೆಳಿಗ್ಗೆ 7:00 ಗಂಟೆಯಿಂದ ಸಾಯಂಕಾಲ 7:00 ಗಂಟೆಯವರೆಗೆ ತೆರೆದಿರುತ್ತದೆ.ಒಟ್ಟಾರೆ ಹೇಳಬೇಕೆಂದರೆ ಈ ಪರ್ವತವು ತೀರ್ಥಕ್ಷೇತ್ರವಾಗಿ, ಚಾರಣ ಕ್ಷೇತ್ರವಾಗಿ, ಪ್ರಕೃತಿ ಸೌಂದರ್ಯ ಆರಾಧಕರ ಪ್ರಿಯ ಕ್ಷೇತ್ರವಾಗಿ ಜನರ ಬಹುಬೇಡಿಕೆಯ ತಾಣವಾಗಿದೆ.