ನಮ್ಮ ದೇಶದಲ್ಲಿ ಸಾಕಷ್ಟು ಪುಣ್ಯಕ್ಷೇತ್ರಗಳು, ದೇವಸ್ಥಾನಗಳಿವೆ. ಪ್ರತಿಯೊಂದು ದೇವಾಲಯವು ತನ್ನದೇ ಆದ ಮಹಿಮೆ, ಇತಿಹಾಸವನ್ನು ಹೊಂದಿದೆ. ಕೆಲವು ದೇವಾಲಯದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ನಮ್ಮ ಕರ್ನಾಟಕದ ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿರುವ ಅಣ್ಣಪ್ಪ ದೇವರ ಬೆಟ್ಟದ ಬಗ್ಗೆ, ಅದರ ಪೌರಾಣಿಕ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳೋಣ.
ನೇತ್ರಾವತಿ ನದಿ ದಂಡೆಯ ಮೇಲಿರುವ ಪುಣ್ಯಕ್ಷೇತ್ರ ಧರ್ಮಸ್ಥಳವು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇಲ್ಲಿ ನೆಲೆನಿಂತು ಭಕ್ತರ ಕಾಯುತ್ತಿರುವ ಶ್ರೀ ಮಂಜುನಾಥ ದೇವರ ಮಹಿಮೆ ಅಪಾರವಾದದ್ದು. ದೇಶದ ನಾನಾ ಭಾಗಗಳಿಂದ ಈ ಕ್ಷೇತ್ರಕ್ಕೆ ಭಕ್ತರು ಬಂದು ದೇವರ ದರ್ಶನ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಧರ್ಮಸ್ಥಳಕ್ಕೆ ಬಂದು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಹೋಗುತ್ತಾರೆ ಆದರೆ ಇಲ್ಲಿ ನೋಡಲೆಬೇಕಾದ ಇನ್ನೊಂದು ಸ್ಥಳವಿದೆ ಅದೇ ಅಣ್ಣಪ್ಪ ಸ್ವಾಮಿಯ ಬೆಟ್ಟ.

ಧರ್ಮಸ್ಥಳದ ಹೊಸ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ ಒಂದುವರೆ ಕಿಲೋಮೀಟರ್ ಹಾಗೂ ಶ್ರೀಮಂಜುನಾಥ ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿ ಅಣ್ಣಪ್ಪ ದೇವರ ಬೆಟ್ಟವಿದೆ. ಶ್ರೀ ಮಂಜುನಾಥ ದೇವರು ಧರ್ಮಸ್ಥಳದಲ್ಲಿ ನೆಲೆಯೂರಲು ಮುಖ್ಯ ಕಾರಣವೇ ಅಣ್ಣಪ್ಪ ದೇವರು. ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸಲು ಪರಶಿವನು ಕಳುಹಿಸಿಕೊಟ್ಟ ಕಾಳರಾಹು, ಕುಮಾರಸ್ವಾಮಿ, ಕಾಳರ್ಕಾಯ, ಕನ್ಯಾಕುಮಾರಿ ಎಂಬ 4 ದೇವತೆಗಳ ದೂತನೇ ಅಣ್ಣಪ್ಪ ದೇವರು. ಅಣ್ಣಪ್ಪ ದೇವರು ಈ ಧರ್ಮ ದೇವತೆಗಳ ಆಜ್ಞೆಯಂತೆ ಮಂಗಳೂರಿನ ಕದ್ರಿಯಿಂದ ಶಿವಲಿಂಗವನ್ನು ತಂದು ಧರ್ಮಸ್ಥಳ ಕ್ಷೇತ್ರದಲ್ಲಿ ಸ್ಥಾಪಿಸುತ್ತಾರೆ. ಅಂದು ಅಣ್ಣಪ್ಪ ತಂದ ಶಿವಲಿಂಗವೇ ಇಂದು ಶ್ರೀ ಮಂಜುನಾಥ ದೇವರಾಗಿ ಪ್ರಸಿದ್ಧಿಯಾಗಿದೆ. ನಂತರ ಅಣ್ಣಪ್ಪ ದೇವರು ಅಣ್ಣಪ್ಪ ಬೆಟ್ಟದಲ್ಲಿ ನೆಲೆನಿಂತು, ಧರ್ಮಸ್ಥಳ ಕ್ಷೇತ್ರದ ರಕ್ಷಣೆ ಮಾಡುತ್ತಿದ್ದಾರೆ.
ಭಕ್ತರಿಗೆ ಅಣ್ಣಪ್ಪ ದೇವರ ಮೇಲೆ ಎಷ್ಟು ಭಕ್ತಿ ಇದೆಯೋ ಅಷ್ಟೇ ಭಯ ಇದೆ, ಈ ಸ್ಥಳದಲ್ಲಿ ಸುಳ್ಳು ಹೇಳಲು ಭಯಪಡುತ್ತಾರೆ ಏಕೆಂದರೆ ಸುಳ್ಳು ಹೇಳಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಬೆಟ್ಟದ ಮೇಲೆ ಅಣ್ಣಪ್ಪಸ್ವಾಮಿ ಮಂದಿರ ಹಾಗೂ 4 ಧರ್ಮದೇವತೆಗಳ ಮಂದಿರವಿದೆ. ಕೇರಳ ಶೈಲಿಯಲ್ಲಿರುವ ಅಣ್ಣಪ್ಪ ಹಾಗೂ ಧರ್ಮ ದೇವತೆಗಳ ಮಂದಿರ ಮರ, ಕಲ್ಲು, ಲೋಹಗಳಿಂದ ನಿರ್ಮಿಸಲಾಗಿದೆ. ಈ ದೇವಾಲಯದ ಒಳಗೆ ಒಂದು ಜೋಕಾಲಿ ಇದೆ ಇದನ್ನು ದೈವಗಳು ಉಪಯೋಗಿಸುತ್ತಾರೆ ಎಂಬ ನಂಬಿಕೆ ಇದೆ. ಈ ಬೆಟ್ಟ ಕಿರಿದಾಗಿದ್ದು ಏರಿ ಹೋಗಲು ಮೆಟ್ಟಿಲುಗಳಿವೆ.
ಸಾಮಾನ್ಯವಾಗಿ ಮೊದಲು ಅಣ್ಣಪ್ಪ ದೇವರ ದರ್ಶನ ಮಾಡಿದ ನಂತರ ಶ್ರೀ ಮಂಜುನಾಥ ದೇವರ ದರ್ಶನ ಮಾಡಬೇಕು ಎಂಬ ಪ್ರತೀತಿ ಇದೆ ಆದರೆ ಅನೇಕ ಭಕ್ತರಿಗೆ ಈ ವಿಷಯ ತಿಳಿದಿರುವುದಿಲ್ಲ. ಅಣ್ಣಪ್ಪ ಸ್ವಾಮಿಯ ಮಂದಿರಕ್ಕೆ ಮಹಿಳೆಯರಿಗೆ ಮತ್ತು ಚಿಕ್ಕ ಮಕ್ಕಳಿಗೆ ಪ್ರವೇಶವಿಲ್ಲ ಜೊತೆಗೆ ಈ ದೇವಾಲಯದಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯುವುದಿಲ್ಲ. ಪ್ರತಿದಿನ ಈ ದೇವಸ್ಥಾನ ಬೆಳಗ್ಗೆ 8.30 ರಿಂದ ಸಂಜೆ 6ಗಂಟೆಯವರೆಗೆ ತೆರೆದಿರುತ್ತದೆ. ಅಣ್ಣಪ್ಪ ದೇವರಿಗೆ ಗೌರವವನ್ನು ಸೂಚಿಸುವ ಸಲುವಾಗಿ ಭಕ್ತರು ಮಾತನಾಡುವಂತಿಲ್ಲ ಮೌನವಾಗಿ ದೇವರ ದರ್ಶನ ಮಾಡಿಕೊಂಡು ಬರಬೇಕು. ಸಂಕ್ರಮಣ ಹಾಗೂ ವಿಶೇಷ ದಿನಗಳಲ್ಲಿ ಅಣ್ಣಪ್ಪ ದೇವರು ಹಾಗೂ ಧರ್ಮದೇವತೆಗಳಿಗೆ ತಾಂಬೂಲ ಸೇವೆ, ದರ್ಶನ ಸೇವೆ ನಡೆಯುತ್ತದೆ. ಮಂಜುನಾಥ ದೇವರ ಸ್ಥಾಪನೆಗೆ ಕಾರಣರಾದ ಅಣ್ಣಪ್ಪ ದೇವರನ್ನು ಭಕ್ತಾದಿಗಳು ದರ್ಶನವನ್ನು ಮಾಡಿ ಪುನೀತರಾಗಬೇಕು.