ಮನುಷ್ಯ ಸತ್ತ ನಂತರ ಅವನ ಆತ್ಮ ಎಲ್ಲಿಗೆ ಹೋಗುತ್ತದೆ. ಭೂಮಿಯ ಮೇಲೆ ಸ್ವರ್ಗ, ನರಕವನ್ನು ಅನುಭವಿಸುತ್ತಾನೆ ಎನ್ನುವುದು ಸತ್ಯವೆ. ಕೆಟ್ಟ ಕೆಲಸ ಮಾಡಿದವರು, ಒಳ್ಳೆಯ ಕೆಲಸ ಮಾಡಿದವರು ಸತ್ತಮೇಲೆ ಏನಾಗುತ್ತಾರೆ ಈ ರೀತಿಯ ಪ್ರಶ್ನೆಗಳು ಎಲ್ಲರಲ್ಲೂ ಒಮ್ಮೆಯಾದರು ಉದ್ಭವಿಸುತ್ತದೆ. ಹಾಗಾದರೆ ಈ ಎಲ್ಲ ಪ್ರಶ್ನೆಗಳಿಗೆ ಶ್ರೀಕೃಷ್ಣನ ಗೀತಸಾರದ ಮೂಲಕ ಉತ್ತರಗಳನ್ನು ತಿಳಿದುಕೊಳ್ಳೋಣ. ಈ ಪ್ರಶ್ನೆಗಳಿಗೆ ಶ್ರೀಕೃಷ್ಣನು ಏನು ಹೇಳಿದ್ದಾನೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಕುರುಕ್ಷೇತ್ರ ರಣರಂಗದಲ್ಲಿ ಯುದ್ಧ ಪ್ರಾರಂಭವಾಗುವುದರಲ್ಲಿತ್ತು ಆಗ ತನ್ನ ಕುಟುಂಬದವರ, ಗುರು ಹಿರಿಯರ ವಿರುದ್ಧ ಯುದ್ಧ ಮಾಡಬೇಕಾ ಎಂದು ಅರ್ಜುನನಿಗೆ ಬೇಜಾರಾಗುತ್ತದೆ. ಅರ್ಜುನ ನಾನು ಯುದ್ಧ ಮಾಡುವುದಿಲ್ಲ ಎಂದು ಶಸ್ತ್ರಾಸ್ತ್ರ ತ್ಯಜಿಸಿ ರಣರಂಗದ ಮೂಲೆಯಲ್ಲಿ ಕುಳಿತುಕೊಳ್ಳುತ್ತಾನೆ ಇದನ್ನು ಗಮನಿಸಿದ ಕೃಷ್ಣ ಅರ್ಜುನನ ಮನವೊಲಿಸಲು ಭಗವದ್ಗೀತೆಯ ಗೀತಸಾರವನ್ನು ಭೋದಿಸಿದರು ಅದರಲ್ಲಿ ಮನುಷ್ಯ ಸತ್ತ ನಂತರ ಏನಾಗುತ್ತಾನೆ, ಅವನ ಆತ್ಮ ಎಲ್ಲಿಗೆ ಹೋಗುತ್ತದೆ ಎಂದು ಸರಳವಾಗಿ ಹೇಳುತ್ತಾನೆ. ಆತ್ಮ ಅವರವರ ಕರ್ಮಗಳಿಗೆ ಅನುಸಾರವಾಗಿ ಮೊದಲು ಬೇರೆಯವರ ದೇಹವನ್ನು ಸೇರಿಕೊಳ್ಳುತ್ತದೆ ಅಥವಾ ಪರ ಲೋಕವನ್ನು ಸೇರಿಕೊಳ್ಳುತ್ತದೆ. ನಮ್ಮ ಆತ್ಮ ಬೇರೆಯವರ ದೇಹವನ್ನು ಸೇರಿಕೊಂಡಾಗ ಮತ್ತೆ ನಾವು ಭೂಮಿಯ ಮೇಲೆ ಜನಿಸುತ್ತೇವೆ. ಭೂಮಿಯ ಮೇಲೆ ಪ್ರತಿಯೊಂದು ಜೀವಿಗೂ ಪಾಪ ಹಾಗೂ ಪುಣ್ಯ ಮಾಡುವ ಅವಕಾಶಗಳಿರುತ್ತದೆ, ಅದರ ಪ್ರಕಾರ ನಮ್ಮ ಪ್ರಾರಬ್ಧ ಕರ್ಮಗಳು ನಿಶ್ಚಯವಾಗುತ್ತದೆ.
ಭೂಮಿಯಲ್ಲಿ ಮಾತ್ರ ಪ್ರತಿಯೊಂದು ಜೀವಿಗೆ ಹುಟ್ಟು ಸಾವು ಎನ್ನುವುದು ಇದೆ, ಬೇರೆ ಲೋಕದಲ್ಲಿ ಹುಟ್ಟು ಸಾವು ಇರುವುದಿಲ್ಲ. ಆತ್ಮಗಳಿಗೆ ಸುಖ, ದುಃಖ ಎಲ್ಲವೂ ಭೂಮಿಯ ಮೇಲೆ ಇದೆ. ಸುಖ, ದುಃಖ ಎನ್ನುವುದು ಶರೀರದ ಭೋಗಕ್ಕಾಗಿ ಮಾತ್ರ ಆತ್ಮಕ್ಕೆ ಸಂಬಂಧವಿಲ್ಲ. ಒಬ್ಬ ಮನುಷ್ಯ ಸತ್ತು ಹೋಗುತ್ತಾನೆ ಎಂದರೆ ಆತನ ಹೊರಗಿನ ಸ್ಥೂಲ ದೇಹ ಸತ್ತು ಹೋಯಿತು ಎಂದು, ಒಳಗಿನ ಸೂಕ್ಷ್ಮ ಶರೀರ ಸಾಯುವುದಿಲ್ಲ ಅದು ಆತ್ಮ ಜ್ಯೋತಿಯನ್ನು ತೆಗೆದುಕೊಂಡು ಮೃತ್ಯುಲೋಕವನ್ನು ಬಿಟ್ಟು ಬೇರೆ ಲೋಕಕ್ಕೆ ಪ್ರಯಾಣಿಸುತ್ತದೆ. ಈ ಸೂಕ್ಷ್ಮ ಶರೀರವನ್ನು ಜೀವಾತ್ಮ ಎಂದು ಕರೆಯಲಾಗುತ್ತದೆ. ಜೀವಾತ್ಮ ಎನ್ನುವುದು ಆತ್ಮ ಜ್ಯೋತಿಯನ್ನು ತನ್ನೊಳಗೆ ಇಟ್ಟುಕೊಂಡು ಪ್ರಯಾಣ ಬೆಳೆಸುತ್ತದೆ. ಇದಕ್ಕೆ ಜೀವಾತ್ಮ ಪ್ರಯಾಣ ಅಥವಾ ಯಾತ್ರೆ ಎಂದು ಹೇಳಲಾಗುತ್ತದೆ. ಆತ್ಮ ಮನುಷ್ಯ ಮಾಡಿದ ಪ್ರಾರಬ್ಧ ಕರ್ಮಗಳ ಅನುಸಾರವಾಗಿ ಉಚ್ಛ ಯೋನಿ ಹಾಗೂ ನೀಚ ಯೋನಿಗೆ ಹೋಗುತ್ತದೆ. ಯಾರು ಬದುಕಿದ್ದಾಗ ಒಳ್ಳೆ ಕೆಲಸ ಮಾಡುತ್ತಾರೊ ಅವರು ಉಚ್ಛ ಯೋನಿಯಲ್ಲಿ ಜನ್ಮ ಪಡೆಯುತ್ತಾರೆ, ಇಲ್ಲವೆ ಸ್ವರ್ಗದಲ್ಲಿ ಇದ್ದು ಸುಖವನ್ನು ಅನುಭವಿಸುತ್ತಾರೆ.
ಯಾರು ಕೆಟ್ಟ ಕೆಲಸವನ್ನು ಮಾಡುತ್ತಾರೆ ಅವರು ನೀಚ ಯೋನಿಯಲ್ಲಿ ಹುಟ್ಟುತ್ತಾರೆ, ಇಲ್ಲವೆ ನರಕದಲ್ಲಿ ಇದ್ದು ಕಷ್ಟವನ್ನು ಅನುಭವಿಸುತ್ತಾರೆ. ಭೂಮಿ ಮೇಲೆ ಒಬ್ಬ ವ್ಯಕ್ತಿ ತುಂಬಾ ಶ್ರೀಮಂತನಾಗಿರುತ್ತಾನೆ ಅವನ ಬಳಿ ಎಲ್ಲವೂ ಇರುತ್ತದೆ, ಅವನ ಮನೆಯಲ್ಲಿ ಸುಖ ನೆಮ್ಮದಿ ಇರುತ್ತದೆ. ಆದರೆ ಅವನ ಮಗ ಅನಾರೋಗ್ಯದಿಂದ ಹಾಸಿಗೆ ಹಿಡಿಯುತ್ತಾನೆ ನಂತರ ಸತ್ತು ಹೋಗುತ್ತಾನೆ. ಶ್ರೀಮಂತ ಮಗನ ಅಗಲಿಕೆಯಿಂದ ಕೊರಗುತ್ತಾನೆ ಆಗ ಅವನಿಗೆ ಭೂಮಿಯ ಮೇಲೆ ನರಕ ದರ್ಶನವಾಗುತ್ತದೆ. ಭೂಮಿಯ ಮೇಲೆ ಎಲ್ಲ ಪ್ರಾಣಿಗಳಿಗಿಂತ ಮನುಷ್ಯ ಬುದ್ಧಿ ಮತ್ತು ವಿವೇಕವನ್ನು ಹೊಂದಿದ್ದಾನೆ. ಮನುಷ್ಯನನ್ನು ಬಿಟ್ಟು ಬೇರೆ ಯಾವ ಪ್ರಾಣಿಯು ತಪ್ಪನ್ನು ಅಳೆಯುವುದಿಲ್ಲ. ಹೀಗಾಗಿ ಪ್ರಾಣಿಗಳು ಪಾಪ-ಪುಣ್ಯದ ಲೆಕ್ಕಕ್ಕೆ ಬರುವುದಿಲ್ಲ ಎಂದು ಹೇಳುತ್ತಾರೆ. ವೈಕುಂಠಕ್ಕೆ ಬಂದ ಆತ್ಮವು ಮುಕ್ತಿ ಪಡೆಯುತ್ತದೆ ಆದರೆ ಅಲ್ಲಿಗೆ ಬರಬೇಕಾದರೆ ಬಹಳ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ ಆಗ ಅರ್ಜುನನು ಚಿಂತೆಯನ್ನು ಬಿಟ್ಟು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಯುದ್ಧಕ್ಕೆ ಸಿದ್ಧನಾಗುತ್ತಾನೆ.