ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಹಿಂದೂ ಧರ್ಮದ ಬ್ರಾಹ್ಮಣ ಮಧ್ವ ಸನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಆದ್ದರಿಂದ ನಾವು ಇಲ್ಲಿ ಅವರ ಬೃಂದಾವನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇವರ ಮೂಲ ಬೃಂದಾವನ ಅಂದರೆ ಈಗಿನ ಆಂಧ್ರಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ಒಂದು ಘಂಟೆ ಪ್ರಯಾಣ ಮಾಡಿದರೆ ಮಂತ್ರಾಲಯವು ದೊರಕುತ್ತದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆವರೆಗೂ ಭವ್ಯ ಆರಾಧನೆ ನಡೆಯುತ್ತದೆ. ಒಮ್ಮೆ ರಾಯರು 17ನೇ ಶತಮಾನದಲ್ಲಿ ಆಂಧ್ರಪ್ರದೇಶದ ಅದೋನಿ ಬಳಿಯಲ್ಲಿ ವಾಸ್ತವ್ಯವನ್ನು ಹೂಡಿರುತ್ತಾರೆ. ಆಗ ಅಲ್ಲಿಯ ನವಾಬನಾದಂತಹ ಸಿದ್ದಿ ಮಸೂದ್ ಕಾನ್ ಎನ್ನುವವನು ಗುರುಗಳ ಮಹಿಮೆಯನ್ನು ಪರೀಕ್ಷೆ ಮಾಡಲು ನಿರ್ಧರಿಸುತ್ತಾನೆ.
ಗುರುಗಳು ಶ್ರೀರಾಮನ ಪೂಜೆಯಲ್ಲಿ ಇದ್ದಾಗ ಈ ನವಾಬನು ಮಾಂಸದ ತುಂಡುಗಳನ್ನು ಬಟ್ಟೆಯಲ್ಲಿ ಮುಚ್ಚಿ ಅವರ ಮುಂದೆ ನೇವೇದ್ಯಕ್ಕೆ ನೀಡುತ್ತಾನೆ. ಅದನ್ನು ಮೊದಲೇ ತಿಳಿದ ರಾಯರು ಬಟ್ಟೆ ಮುಚ್ಚಿರುವಾಗಲೇ ಅದಕ್ಕೆ ತೀರ್ಥ ಪ್ರೋಕ್ಷಣೆ ಮಾಡಿ ಬಟ್ಟೆಯನ್ನು ತೆಗೆಯಲು ಹೇಳುತ್ತಾರೆ. ಮತ್ತೇನು ತೆಗೆದು ನೋಡಿದಾಗ ಅಲ್ಲಿ ಮಾಂಸದ ಬದಲು ಹಣ್ಣುಗಳು ಮತ್ತು ಗುಲಾಬಿಹೂಗಳನ್ನು ಕಂಡು ನವಾಬನು ದಿಗ್ಭ್ರಾಂತ ನಾಗುತ್ತಾನೆ. ಇದನ್ನು ಕಂಡ ನವಾಬರು ಗುರುರಾಯರಿಗೆ ಕಾಣಿಕೆಯನ್ನು ನೀಡಲು ಮುಂದಾಗುತ್ತಾರೆ. ರಾಯರು ಅದನ್ನು ನಯವಾಗಿ ತಿರಸ್ಕರಿಸುತ್ತಾರೆ.
ನವಾಬರು ಒತ್ತಾಯಪೂರ್ವಕವಾಗಿ ನೀಡಲು ಬಂದಾಗ ರಾಯರು ಈಗಿನ ಆಂಧ್ರಪ್ರದೇಶದ ಮಂಚಾಲೆ ಗ್ರಾಮವನ್ನು ಕೇಳುತ್ತಾರೆ. ಅದನ್ನು ರಾಯರಿಗೆ ದಾನವಾಗಿ ನವಾಬರು ನೀಡುತ್ತಾರೆ. ಅದೇ ಪ್ರದೇಶ ಈಗಿನ ರಾಯರ ಮೂಲ ಬೃಂದಾವನ ವಾಗಿದೆ. ಅದು ಈಗಿನ ಆಂಧ್ರಪ್ರದೇಶದ ಅದೋನಿ ಜಿಲ್ಲೆಯ ತುಂಗಭದ್ರಾ ನದಿಯ ತಟದಲ್ಲಿರುವ ಮಂತ್ರಾಲಯದಲ್ಲಿ ಇದೆ. ಈ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ ಮತ್ತು ಗುರುಗಳ ಆಶೀರ್ವಾದವನ್ನು ಪಡೆಯುತ್ತಾರೆ.