ಕರ್ನಾಟಕ ಪ್ರವಾಸಿ ತಾಣಗಳ ಬೀಡು. ಅನೇಕ ಪ್ರವಾಸಿತಾಣಗಳನ್ನು ಕರ್ನಾಟಕದಲ್ಲಿ ನೋಡಬಹುದು. ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಸುಂದರವಾದ ಪ್ರವಾಸಿ ತಾಣಗಳಿವೆ. ಕರ್ನಾಟಕದ ಅತಿ ಎತ್ತರವಾದ ಪರ್ವತ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿಯ ಬಗ್ಗೆ ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಹಿಮಾಲಯ ಮತ್ತು ನೀಲಗಿರಿ ಬೆಟ್ಟದ ನಡುವಿನ ಪ್ರದೇಶದಲ್ಲಿ ಇರುವ ಅತಿ ಎತ್ತರದ ಪರ್ವತ ಮುಳ್ಳಯ್ಯನಗಿರಿ. ಸಮುದ್ರಮಟ್ಟದಿಂದ ಸುಮಾರು 6,300 ಅಡಿ ಎತ್ತರದಲ್ಲಿರುವ ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರವಾದ ಪರ್ವತವಾಗಿದೆ ಅಲ್ಲದೆ ಪಶ್ಚಿಮಘಟ್ಟದ ಪರ್ವತಶ್ರೇಣಿಗಳಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ಮುಳ್ಳಯ್ಯ ಸ್ವಾಮಿಯ ಗದ್ದುಗೆಯನ್ನು ಹೊಂದಿರುವ ಮುಳ್ಳಯ್ಯನಗಿರಿಗೆ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ಮುಳ್ಳಯ್ಯನಗಿರಿಗಿಂತ ಸುಮಾರು 3 ಕಿಲೋಮೀಟರ್ ಹಿಂದೆ ಧಾರ್ಮಿಕ ಮಹತ್ವದ ಸುಂದರ ಪ್ರವಾಸಿ ತಾಣ ಸೀತಾಳಯ್ಯನಗಿರಿ ಎಂಬ ತಾಣವು ಸಿಗುತ್ತದೆ. ಇದು ಚಿಕ್ಕಮಗಳೂರಿನಿಂದ 19 ಕಿಲೋಮೀಟರ್ ದೂರದಲ್ಲಿದೆ. ಮುಳ್ಳಯ್ಯನಗಿರಿಗೆ ಹೋಗುವಾಗ ಈ ದೇವಸ್ಥಾನದ ದೇವರ ದರ್ಶನ ಪಡೆದು ಮುಂದೆ ಸಾಗಬೇಕು ಎಂದು ಸ್ಥಳೀಯರು ನಂಬಿದ್ದಾರೆ.
ಧಾರ್ಮಿಕ ಮಹತ್ವವನ್ನು ಮಾತ್ರವಲ್ಲದೆ ಈ ತಾಣ ತನ್ನ ಸುತ್ತಲಿನ ಮನಮೋಹಕ ದೃಶ್ಯಗಳಿಂದ ಮುಳ್ಳಯ್ಯನಗಿರಿಯಷ್ಟೇ ಪ್ರಸಿದ್ಧಿಯನ್ನು ಪಡೆದಿದೆ. ಸೀತಾಳಯ್ಯನಗಿರಿ ಒಂದು ಮಠ ಹಾಗೂ ಸೀತಾಳ ಮಲ್ಲಿಕಾರ್ಜುನ ಆಲಯವನ್ನು ಹೊಂದಿದೆ. ಸುತ್ತಮುತ್ತಲಿನ ಗ್ರಾಮದ ಜನರು ಸೀತಾಳ ಮಲ್ಲಿಕಾರ್ಜುನ ದೇವರಿಗೆ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಸೀತಾಳ ಮಲ್ಲಿಕಾರ್ಜುನ ದೇವಾಲಯ ಶಿವನಿಗೆ ಮುಡಿಪಾಗಿದೆ. ಸೀತಾ ಎಂದರೆ ಒದ್ದೆ ಎಂದು ಅರ್ಥ. ಸೀತಾಳ ಮಲ್ಲಿಕಾರ್ಜುನ ಶಿವಲಿಂಗವು ಯಾವಾಗಲೂ ನೀರಿನಿಂದ ಆವೃತವಾಗಿರುತ್ತದೆ. ಪ್ರತಿದಿನ ಅರ್ಚಕರು ಆರತಿ ಮಾಡುವ ಸಂದರ್ಭದಲ್ಲಿ ಲಿಂಗದ ಸುತ್ತ ನೀರು ತುಂಬಿಕೊಂಡಿರುತ್ತದೆ ಆದ್ದರಿಂದ ಸೀತಾಳ ಮಲ್ಲಿಕಾರ್ಜುನ ಎಂಬ ಹೆಸರು ಬಂದಿದೆ. ಈ ದೇವಸ್ಥಾನದಿಂದ ಗಿರಿಗೆ ಸೀತಾಳಯ್ಯನಗಿರಿ ಎಂಬ ಹೆಸರು ಬಂದಿದೆ. ಸೀತಾಳ ಮಲ್ಲಿಕಾರ್ಜುನ ದೇವಾಲಯದ ಎಡಭಾಗದಲ್ಲಿ ಗುಹೆ ಇದೆ. ಈ ಗುಹೆಯು ಮುಳ್ಳಯ್ಯನಗಿರಿಯ ಮೇಲಿರುವ ಮುಳ್ಳಯ್ಯನ ಸ್ವಾಮಿಯ ಆಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಲಾಗುತ್ತದೆ.
ಸೀತಾಳಯ್ಯನ ಗಿರಿಧಾಮವು ಸಮುದ್ರಮಟ್ಟದಿಂದ ಸುಮಾರು ಐದು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಈ ಗಿರಿಯಲ್ಲಿ ಆಗಾಗ ಮಂಜಿನ ಶೃಂಗಾರ ಕಾವ್ಯ ನಡೆಯುತ್ತದೆ. ಮಂಜಿನಲ್ಲಿ ಮುಳುಗಿಹೋಗುವ ಸೀತಾಳಯ್ಯನ ಗಿರಿಯ ಆಲಯವನ್ನು ನೋಡಲು ಬಹಳ ಸುಂದರವಾಗಿರುತ್ತದೆ. ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿ ತಲುಪಲು ರಸ್ತೆಮಾರ್ಗ ಬಿಟ್ಟರೆ ಕಾಲುದಾರಿಯಿದೆ. ಕೆಲವು ಪ್ರವಾಸಿಗರು ತಮ್ಮ ವಾಹನವನ್ನು ಸೀತಾಳಯ್ಯನಗಿರಿಯಲ್ಲಿ ನಿಲ್ಲಿಸಿ ಕಾಲುದಾರಿಯಲ್ಲಿ ಚಾರಣವನ್ನು ಕೈಗೊಂಡು ಮುಳ್ಳಯ್ಯನಗಿರಿಯನ್ನು ತಲುಪುತ್ತಾರೆ. ದೇವಾಲಯದ ಸಮೀಪವಿರುವ ಕಡಿದಾದ ರಸ್ತೆಯಲ್ಲಿ ಸಾಗಿದರೆ ಮುಳ್ಳಯ್ಯನಗಿರಿಯ ಮೇಲ್ಭಾಗ ತಲುಪಬಹುದು. ಗಿರಿಯ ತುತ್ತತುದಿಯಲ್ಲಿ ನಿಂತಾಗ ಎಲ್ಲರಿಗಿಂತ ಎತ್ತರದಲ್ಲಿ ಇದ್ದೇವೆ ಎಂಬ ಭಾವ ಮನಸ್ಸಿಗೆ ಆನಂದವನ್ನು ನೀಡುತ್ತದೆ.
ಧಾರ್ಮಿಕ ಹಾಗೂ ಪ್ರಾಕೃತಿಕ ಐಸಿರಿಯಾದ ಈ ಪರ್ವತದ ಮೇಲೆ ನಿಂತಾಗ ರಭಸವಾದ ಗಾಳಿ ಬೀಸುತ್ತಿರುತ್ತದೆ ಅಲ್ಲದೆ ಮೋಡಗಳು ನಮ್ಮನ್ನು ಸವರಿಕೊಂಡೆ ಮುಂದೆ ಸಾಗುತ್ತವೆ ಇದು ರೋಮಾಂಚನ ಉಂಟು ಮಾಡುತ್ತದೆ. ಇಲ್ಲಿ ಹಲವು ಕನ್ನಡ ಚಿತ್ರಗಳ ಚಿತ್ರೀಕರಣ ನಡೆದಿದೆ. ಮುಳ್ಳಯ್ಯನಗಿರಿಗೆ ಭೇಟಿ ನೀಡುವ ಪ್ರವಾಸಿಗರು ಸೀತಾಳಯ್ಯನ ಗಿರಿಯಲ್ಲಿ ಸ್ವಲ್ಪ ಸಮಯ ವಿಶ್ರಮಿಸಿಕೊಂಡು ಇಲ್ಲಿ ಸಿಗುವ ತಿನಿಸುಗಳು, ಎಳನೀರನ್ನು ಸವಿದು ತಮ್ಮ ಪ್ರಯಾಣವನ್ನು ಮುಂದುವರಿಸುತ್ತಾರೆ. ಕ್ಷಣ ಕ್ಷಣಕ್ಕೂ ಬದಲಾಗುವ ಹೊಸ ಹೊಸ ರೋಮಾಂಚನವನ್ನು ಉಂಟು ಮಾಡುವ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿಗೆ ಒಮ್ಮೆ ಭೇಟಿ ನೀಡಲೇಬೇಕು.