ಅಪ್ಪನ ಸಾಲವನ್ನು ಅತಿ ಸಾಂದ್ರ ಪದ್ಧತಿಯ ಮೂಲಕ ಸೀಬೆ ಹಣ್ಣಿನ ಕೃಷಿ ಮಾಡಿ ಸಾಲವನ್ನು ತೀರಿಸಿದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಕೃಷಿಯಲ್ಲಿ ಹೊಸ ಹೊಸ ತಳಿ, ತಂತ್ರಜ್ಞಾನಗಳು ಬೆಳಕಿಗೆ ಬಂದರೂ ಅಳವಡಿಸಿಕೊಳ್ಳುವವರು ಕಡಿಮೆ. ಸಾಂಪ್ರದಾಯಿಕ ಕೃಷಿಗೆ ಜೋತು ಬೀಳುವವರೆ ಹೆಚ್ಚು ಕಬ್ಬು, ಮೆಕ್ಕೆಜೋಳ ಬೆಳೆಗಳನ್ನು ಬೆಳೆಯುತ್ತಿದ್ದ ಬೆಳಗಾವಿ ಜಿಲ್ಲೆಯ ರೈತರು 9 ಎಕರೆ ಜಮೀನನ್ನು ಹೊಂದಿದ್ದರೂ ಸಾಲ ಬೆಟ್ಟದಷ್ಟಿತ್ತು. ಈ ಸಮಯದಲ್ಲಿ ಅಪ್ಪನ ಸಾಲವನ್ನು ತೀರಿಸುವುದೆ ಗುರಿಯಾಗಿತ್ತು ಮಗ ಗೋಪಾಲನಿಗೆ. ಆಗ ಅವನಿಗೆ ಹೊಳೆದಿದ್ದು ಸೀಬೆ ಕೃಷಿ. ಸಾಂದ್ರ ಪದ್ಧತಿಯಿಂದ ಕೃಷಿ ಮಾಡುತ್ತಿದ್ದ ರೈತನಿಂದ ಪ್ರೇರಣೆಗೊಂಡು. ಅದೇ ಮಾದರಿಯಲ್ಲಿ ಸೀಬೆ ಕೃಷಿ ಮಾಡಲು ಮುಂದಾಗುವನು. ಸಾಮಾನ್ಯ ನಾಟಿ ಪದ್ಧತಿಗಿಂತ ಹೆಚ್ಚು ಗಿಡಗಳನ್ನು ಇಲ್ಲಿ ನಾಟಿ ಮಾಡಲಾಗುತ್ತದೆ. ಸಾಲುಗಳ ನಡುವೆ 10ಅಡಿ ಅಂತರವಿದ್ದರೆ ಗಿಡಗಳ ನಡುವೆ 5 ಅಡಿ ಅಂತರವಿದೆ. ಎಕರೆಗೆ 870 ಗಿಡಗಳಿವೆ. ಪ್ರಾರಂಭದಲ್ಲಿ ಅರ್ಧ ಎಕರೆಯಲ್ಲಿ ಪ್ರಾರಂಭಿಸಿ ಈಗ 2 ಎಕರೆ 10 ಗುಂಟೆಗೆ ವಿಸ್ತರಿಸಿದ್ದಾರೆ. ಜಿ ವಿಲಾಸ್ ತಳಿಯ ಗಿಡಗಳನ್ನು ಬೆಳೆಯಲಾಗಿದೆ.

ಇವರು ಮಿಶ್ರ ಬೆಳೆಯಿಂದಲೂ ಆದಾಯವನ್ನು ಗಳಿಸಿದ್ದಾರೆ. ಬೆಳ್ಳುಳ್ಳಿ ಸಿಪ್ಪೆಯನ್ನು ಗಿಡದ ಬುಡಕ್ಕೆ ಹಾಕುವುದು ಇವರ ಕೃಷಿಯ ವಿಶೇಷತೆಯಾಗಿದೆ. ಡ್ರಿಪ್ ಮೂಲಕ ನೀರು ಮತ್ತು ಜೀವಾಮೃತವನ್ನು ನೀಡುತ್ತಿದ್ದು ಕಾಯಿಯ ಗುಣಮಟ್ಟ ಉತ್ತಮವಾಗಿದೆ. ಇದರೊಂದಿಗೆ ಮಿಶ್ರ ಬೆಳೆಗಳಾದ ತರಕಾರಿ, ಹುರುಳಿ, ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ. ಸೀಬೆ ಬೆಳೆ 5 ತಿಂಗಳಿಗೆ ಆದಾಯ ಬರುವ ಬೆಳೆಯಾಗಿದ್ದು, ವಾರದಲ್ಲಿ 9 ತಾಸು ನೀರನ್ನು ಬಿಡಲಾಗುತ್ತದೆ. ಇದರೊಂದಿಗೆ ಕಡ್ಲೆಹಿಟ್ಟು, ತತ್ತಿ, ಬೆಲ್ಲ, ಗೊಮೂತ್ರ, ಗುಂತಿ ಮಣ್ಣು ಇವುಗಳನ್ನು 21 ದಿನ ಕೊಳೆ ಹಾಕಿ ಇದನ್ನು ಡ್ರಿಪ್ಪಿನಲ್ಲಿ ಬಿಡಲಾಗುತ್ತದೆ. ಇದರಿಂದ ಕಾಯಿ ಜಾಸ್ತಿ ಬಿಡುತ್ತದೆ ಮತ್ತು ರೋಗದಿಂದ ರಕ್ಷಿಸಲು ಸಹಾಯವಾಗುತ್ತದೆ. ಕೊಂಬೆಗಳನ್ನು ಮುರಿಯುವುದರಿಂದ 12 ತಿಂಗಳು ಕಾಯಿ ಬಿಡುತ್ತಿರುತ್ತದೆ.

ಅತಿ ಸಾಂದ್ರ ಪದ್ಧತಿಯ ಉದ್ದೇಶ ಎಕರೆವಾರು ಗಿಡಗಳನ್ನು ಹೆಚ್ಚಿಸುವುದು ಈ ಮೂಲಕ ಅಧಿಕ ಇಳುವರಿಯನ್ನು ಪಡೆಯುವುದು. ಈ ಪದ್ಧತಿಯಲ್ಲಿ ಬೇಗ ಇಳುವರಿ ಬರುತ್ತದೆ. ಪ್ರತಿ ಗಿಡದಿಂದ 35 ಕೆಜಿ ಯಿಂದ 40 ಕೆ.ಜಿ ಹಣ್ಣುಗಳನ್ನು ಪಡೆಯುತ್ತಿದ್ದಾರೆ. ಪ್ರತಿದಿನ 150-200 ಕೆ.ಜಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ವರ್ಷಕ್ಕೆ ಒಂದು ಎಕರೆಗೆ 35 ರಿಂದ 38 ಟನ್ ಫಸಲು ಬರುತ್ತಿದ್ದು ಖರ್ಚು ತೆಗೆದು 10 ಲಕ್ಷ ಆದಾಯ ಪಡೆಯುತ್ತಿದ್ದಾರೆ ಅಲ್ಲದೆ ಸೀಬೆ ಗಿಡಗಳನ್ನು ಮಾರುವುದರಿಂದ ಉಪ ಆದಾಯವನ್ನು ಗಳಿಸುತ್ತಿದ್ದಾರೆ. ಒಂದು ಕಾಯಿ 400-700 ಗ್ರಾಂ ಬರುತ್ತದೆ. 2-3 ಕಾಯಿ 1ಕೆ.ಜಿ ಯಾಗುತ್ತದೆ. 23 ವರ್ಷದ ಗೋಪಾಲ ಅವರು ಸಾಂಪ್ರದಾಯಿಕ ಕೃಷಿಗೆ ಹೊಸರೂಪ ನೀಡಿ ತಂದೆ ಮಾಡಿದ 12 ಲಕ್ಷ ರೂ ಸಾಲವನ್ನು ತೀರಿಸಿದ್ದಾರೆ. ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ಈತನಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ದೊರೆತಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!