ಭವಿಷ್ಯ ತಿಳಿದಿದ್ದರೂ ಹೇಳಲಾಗದ ಪರಿಸ್ಥಿತಿ ಸಹದೇವನದಾಗಿತ್ತು ಇದಕ್ಕೆ ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸ್ವರ್ಗದ ಹಾದಿಯಲ್ಲಿ ಹಿಮಪರ್ವತದ ನಡುವೆ ಪಾಂಚಾಲಿ ಕುಸಿದು ಬಿದ್ದಿದ್ದಳು ಮೊದಲೇ ತಿಳಿದಿದ್ದ ಸಹದೇವ ಅವಳ ಹತ್ತಿರವೇ ಇದ್ದ. ಪಾಂಚಾಲಿ ಬೀಳುತ್ತಿರುವಾಗ ಓಡೋಡಿ ಬಂದು ಅವಳನ್ನು ಹಿಡಿದುಕೊಂಡು ಕೆಳಗೆ ಮಲಗಿಸಿ ಪಾಂಡವರನ್ನು ಕೂಗಿ ಕರೆದ. ಅರ್ಜುನ ನಿರ್ಭಾವುಕನಾಗಿದ್ದ, ಭೀಮನಿಗೆ ದುಃಖವಾಯಿತು. ನಕುಲ, ಸಹದೇವರು ತಮ್ಮ ನೋವನ್ನು ಅದುಮಿಟ್ಟುಕೊಂಡಿದ್ದರು. ಭೀಮನು ಅಣ್ಣ ಯುಧಿಷ್ಠಿರನಿಗೆ ಪಾಂಚಾಲಿ ನಮ್ಮೊಂದಿಗೆ ನಡೆಯಬೇಕಿದ್ದವಳು ನಮ್ಮೆಲ್ಲ ಕಷ್ಟಗಳಲ್ಲಿ ಭಾಗಿಯಾದವಳು ಅವಳು ಸ್ವರ್ಗ ಸೇರುವ ಮುನ್ನವೇ ದೇಹತ್ಯಾಗ ಮಾಡಿದ್ದೇಕೆ ಎಂದು ಕೇಳಿದನು ಆಗ ಯುದಿಷ್ಟರ ಪಾಂಚಾಲಿ ಐದು ಜನರನ್ನು ವಿವಾಹವಾದರೂ ಅವಳಿಗೆ ಅರ್ಜುನನ ಮೇಲೆ ವಿಶೇಷವಾದ ಮೋಹವಿತ್ತು.
ಅರ್ಜುನ ಮತ್ತೊಂದು ವಿವಾಹವಾದರೂ ವ್ಯಾಮೋಹ ಅಸೂಯೆಯಾಗಿ ಬೆಳೆಯಿತು. ಕುರುಕ್ಷೇತ್ರ ಯುದ್ಧಕ್ಕೆ ಪಾಂಚಾಲಿಯ ಪ್ರಚೋದನೆಯೇ ಕಾರಣ. ತಾನು ಯಾವ ಕುಲದ ಸೊಸೆಯಾಗಿದ್ದಳೊ ಆ ಕುಲದ ನಾಶವನ್ನು ಬಯಸಿದಳು ಅದು ಅವಳು ಮಾಡಿದ ತಪ್ಪಾಗಿದೆ ಎಂದನು. ಸಹದೇವ ಪಾಂಡವರಲ್ಲಿ ಕೊನೆಯವನು ಕುಂತಿಗೆ ಅತ್ಯಂತ ಪ್ರೀತಿಪಾತ್ರ ಮಗ. ಇವನು ಶಕ್ತಿಶಾಲಿ ಹಾಗೂ ಸುಂದರನಾಗಿದ್ದನು. ಸಹದೇವನಿಗೆ ಪ್ರೀತಿ ಸಿಕ್ಕಿತೆ ಹೊರತು ಪ್ರಾಮುಖ್ಯತೆ ಆಗಲಿ ಜನಪ್ರಿಯತೆ ಆಗಲಿ ಸಿಗಲಿಲ್ಲ. ಸಹದೇವ ಬಿಲ್ಲುವಿದ್ಯೆಯಲ್ಲಿ ಪ್ರವೀಣನಾಗಿದ್ದ, ಯಾರಿಗೂ ಇಲ್ಲದ ಶಕ್ತಿ ಅವನಿಗಿತ್ತು, ಔಷಧಶಾಸ್ತ್ರವನ್ನು ಅವನು ಕಲಿತಿದ್ದ, ಪಶುಗಳ ಮನಸನ್ನು ಅರಿಯುವ ವಿದ್ಯೆಯು ಗೊತ್ತಿತ್ತು. ಪಾಂಡವರ ಅಜ್ಞಾತವಾಸದ ಸಮಯದಲ್ಲಿ ತಂತ್ರಿಪಾಲನ ಹೆಸರಿನಲ್ಲಿ ವಿರಾಟನ ಗೋ ಶಾಲೆಯ ಉಸ್ತುವಾರಿಯನ್ನು ವಹಿಸಿಕೊಂಡ. ಆಗ ವಿರಾಟನ ಗೋ ಸಂಪತ್ತು ಏಳ್ಗೆಯಾಯಿತು.
ಕಿಂದಮ ಮುನಿಯ ಶಾಪದ ಫಲವಾಗಿ ಪಾಂಡುರಾಜ ಕಾಡಿನಲ್ಲಿ ಕೊನೆಯುಸಿರೆಳೆಯುವ ಸಮಯದಲ್ಲಿ ಅಲ್ಲಿಯ ಋಷಿಗಳ ಆಶ್ರಮದಲ್ಲಿ ಪಾಂಡವರೈವರು ಶಾಸ್ತ್ರ ವಿದ್ಯೆಯ ಅಭ್ಯಾಸದಲ್ಲಿ ತೊಡಗಿದ್ದರು. ಸಹದೇವ ಅಥರ್ವವೇದದಲ್ಲಿ ಆಸಕ್ತಿ ಬೆಳೆಸಿಕೊಂಡ. ವೈದ್ಯ, ಮನಃಶಾಸ್ತ್ರ, ಲೋಹಶಾಸ್ತ್ರಗಳ ಅಪಾರ ಜ್ಞಾನ ಹೊಂದಿರುವ ಅಥರ್ವವೇದವನ್ನು ಅಭ್ಯಾಸ ಮಾಡತೊಡಗಿದ ಅದರ ಪರಿಣಾಮವಾಗಿ ಖಗೋಳ ಹಾಗೂ ಜ್ಯೋತಿಷ್ಯ ವಿಜ್ಞಾನಗಳು ಸಿದ್ಧಿಯಾದವು. ಅವನು ಜ್ಯೋತಿಷ್ಯ ಶಾಸ್ತ್ರದಲಿ ಪಾಂಡಿತ್ಯ ಪಡೆದಿದ್ದ ಮುಂದೇನಾಗುತ್ತದೆ ಎಂಬುದು ಅವನಿಗೆ ತಿಳಿಯುತ್ತಿತ್ತು ಆದರೆ ಮುಕ್ತವಾಗಿ ಹೇಳುವ ಸ್ವಭಾವ ಅವನದಾಗಿರಲಿಲ್ಲ.
ಅರಗಿನ ಮನೆಯಲ್ಲಿ ಅನಾಹುತ ನಡೆಯುವ ಸೂಚನೆಯೂ ಸಹದೇವನಿಗೆ ಸಿಕ್ಕಿತ್ತು ಅದರ ಬಗ್ಗೆ ಸಹೋದರರಿಗೆ ಹೇಳುವ ಮೊದಲೇ ವಿದುರನ ಮೂಲಕ ಪಾಂಡವರಿಗೆ ವಿಷಯ ತಿಳಿಯಿತು. ಸಹದೇವನ ಪಾಂಡಿತ್ಯದ ಬಗ್ಗೆ ಕೃಷ್ಣನಿಗೆ ತಿಳಿದಿತ್ತು. ಕೃಷ್ಣನು ಸಹದೇವನಿಂದ ಒಂದು ಮಾತು ಪಡೆದ ಭೂತ ಭವಿಷ್ಯದ ಬಗ್ಗೆ ತಿಳಿಯುವ ನಿನ್ನ ಕಾಲಜ್ಞಾನ ನಿನ್ನ ವಿರುದ್ಧವೇ ಕೆಲಸ ಮಾಡುವ ಸಾಧ್ಯತೆ ಇದೆ, ಹಾಗಾಗಿ ನನ್ನ ಅನುಮತಿಯಿಲ್ಲದೆ ಮುಂದಾಗಲಿರುವ ಹಾಗೂ ನಿನಗೆ ಗೊತ್ತಾಗುವ ರಹಸ್ಯದ ಬಗ್ಗೆ ಯಾರಿಗೂ ಹೇಳುವುದಿಲ್ಲ ಎಂದು ಭಾಷೆ ಕೊಡು ಎಂದು ಕೇಳುತ್ತಾನೆ. ಆಗ ಸಹದೇವ ನಾನು ಕಲಿತ ವಿದ್ಯೆಯನ್ನು ಹೇಳದೆ ಇರುವುದು ತಪ್ಪಾಗುತ್ತದೆ ಎಂದು ಹೇಳಿದನು ಅದಕ್ಕೆ ಕೃಷ್ಣ ನೀನು ಮುಗ್ಧ ಇದೇ ನಿನಗೆ ಮುಳುವಾಗುವುದು ಯಾರೂ ಕೇಳದ ಹೊರತು ನೀನು ಹೇಳಬಾರದು ಎಂಬ ಮಾತನ್ನು ಪಡೆಯುತ್ತಾನೆ ಆಗ ಸಹದೇವ ಯೋಚಿಸದೆ ಒಪ್ಪಿಕೊಂಡ. ಆವತ್ತಿನಿಂದ ಸಹದೇವ ಎಲ್ಲ ವಿಷಯ ಗೊತ್ತಿದ್ದರೂ ಸುಮ್ಮನಿರುತ್ತಿದ್ದ.