ಬಹುನಿರೀಕ್ಷಿತ ಆರ್.ಆರ್.ಆರ್ ಸಿನಿಮಾ ನೋಡಲು ಸಿನಿಪ್ರಿಯರು ಕಾತುರರಾಗಿದ್ದಾರೆ. ಈ ಸಿನಿಮಾ ಕುರಿತು ಹಲವು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆರ್.ಆರ್.ಆರ್ ಸಿನಿಮಾ ಹೇಗಿದೆ, ಅದರ ಜನಪ್ರಿಯತೆ ಹಾಗೂ ಸಿನಿಮಾದಲ್ಲಿ ಕಂಡುಬಂದ ತಪ್ಪುಗಳ ಬಗ್ಗೆ ವಿಮರ್ಶೆ ಮಾಡಲಾಗಿದೆ. ಹಾಗಾದರೆ ಈ ಸಿನಿಮಾ ಕುರಿತು ಕಂಡುಬರುವ ತಪ್ಪು, ಸರಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಕನ್ನಡ ಸಿನಿಮಾಗಳು ಯಶಸ್ವಿಯಾಗಿ ಬಿಡುಗಡೆಯಾಗಿ ಸಾಗುವ ಮಧ್ಯೆ ರಾಜಮೌಳಿ ತಮ್ಮ ಸಿನಿಮಾವನ್ನು ಕೂಡ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾದರು. ಅವರ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಕನ್ನಡದಲ್ಲಿ ಡಬ್ ಮಾಡಿಸುವ ಮೂಲಕ ಕನ್ನಡ ಭಾಷೆಯಲ್ಲಿಯೆ ಕನ್ನಡಿಗರು ಈ ಸಿನಿಮಾ ವೀಕ್ಷಿಸಬಹುದು ಎಂದು ಸಿನಿಮಾ ತಂಡ ಕರ್ನಾಟಕದ ಚಿಕ್ಕಬಳ್ಳಾಪುರದ ಜನತೆಯ ಮುಂದೆ ಪ್ರೀ ರಿಲೀಸ್ ಇವೆಂಟ್ ಇಟ್ಟು ಗಮನಸೆಳೆಯಿತು. ಸದ್ಯ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಸದ್ದು ಮಾಡುತ್ತಲೆ ಇಲ್ಲಿಯವರೆಗೂ ಬಂದ ಸಿನಿಮಾ ಅಂದರೆ ಅದು ಆರ್.ಆರ್.ಆರ್. ಇಡಿ ಭಾರತದಾದ್ಯಂತ ಈ ಸಿನಿಮಾ ತನ್ನದೆ ಶೈಲಿಯಲ್ಲಿ ಸಿನಿ ಪ್ರೇಕ್ಷಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುತ್ತಲೆ ಬಂದಿದೆ. ಕಳೆದ ಒಂದು ವಾರದಿಂದ ಆರ್.ಆರ್.ಆರ್ ಸಿನಿಮಾ ಕುರಿತು ಸಿನಿಪ್ರೇಕ್ಷಕರಲ್ಲಿ ಕಾತುರತೆ, ಆತುರತೆ ಕಂಡುಬಂದಿತು.
ಜ್ಯೂನಿಯರ್ ಎನ್.ಟಿ.ಆರ್ ರಾಮ್ ಚರಣ್ ತೇಜ, ಆಲಿಯಾ ಭಟ್ ಅಭಿನಯದ ಆರ್.ಆರ್.ಆರ್ ಸಿನಿಮಾಗಾಗಿ ಚಿತ್ರಮಂದಿರಗಳ ಬಾಗಿಲನ್ನು ಮುರಿದು ಚಿತ್ರವನ್ನು ನೋಡುವಷ್ಟು ತವಕ ಪ್ರೇಕ್ಷಕರಲ್ಲಿ ಹೆಚ್ಚಿದೆ. ಬಾಹುಬಲಿ ಎಂಬ ಯಶಸ್ವಿ ಸಿನಿಮಾ ಕೊಟ್ಟು ಇಂದು ಭಾರತದ ಅದ್ಭುತ ನಿರ್ದೇಶಕರ ಸಾಲಿನಲ್ಲಿ ರಾಜಮೌಳಿ ಒಬ್ಬರಾಗಿದ್ದಾರೆ. ಆರ್.ಆರ್.ಆರ್ ಚಿತ್ರವನ್ನು ಸಿನಿಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾದರಾ ಎಂಬುದು ಹಲವರ ಅನಿಸಿಕೆ. ಕನ್ನಡ ಭಾಷೆಯಲ್ಲಿ ಡಬ್ ಮಾಡಿಸಿ ಕನ್ನಡಿಗರಿಗೆ ತೃಪ್ತಿ ಪಡಿಸಿದರಾ ಎಂದು ಅನಿಸಿಕೆ ಕಂಡುಬರುತ್ತಿದೆ. ಈ ಸಿನಿಮಾ ಟ್ರೇಲರ್ ನಲ್ಲಿಯೇ ತಿಳಿಸಿರುವಂತೆ ಇಬ್ಬರ ಗೆಳೆಯರ ಸ್ನೇಹ ಬಂಧ, ಅನುಬಂಧ, ಪ್ರೀತಿಯ ಭಾಂಧವ್ಯತೆ ಹೇಗಿದೆ ಎಂಬುದನ್ನು ಸಿನಿಪ್ರೇಕ್ಷಕರಿಗೆ ಕಿರುಪರಿಚಯ ನೀಡಿತ್ತು. ಇಬ್ಬರ ಗೆಳೆಯರ ಸ್ನೇಹ ಯಾವ ಅಂಶವನ್ನು ಹೇಳಲು ಹೊರಟಿದೆ ಎಂಬ ಪ್ರಶ್ನೆ ಸಿನಿಪ್ರೇಕ್ಷಕರಲ್ಲಿ ಮೂಡಿತ್ತು ಎಂಬುದು ಗಮನಾರ್ಹ ಅಂಶ.
ಆರ್.ಆರ್.ಆರ್ ಸಿನಿಮಾ ಶೀರ್ಷಿಕೆಯಲ್ಲಿಯೆ ಇದೊಂದು ರೌದ್ರ, ರಣ, ರುಧಿರ ಎಂದು ಇದರ ಅರ್ಥ ಆದರೆ ಅನೇಕ ಸಿನಿಪ್ರೇಕ್ಷಕರಿಗೆ ಮೊದ ಮೊದಲು ತಿಳಿಯಲಾಗಲಿಲ್ಲ ಆದರೆ ಸಿನಿಮಾ ವೀಕ್ಷಿಸಿದ ಬಳಿಕ ಈ ಸಿನಿಮಾ ರೌದ್ರವಾಗಿ, ರಣವಾಗಿ, ರುಧಿರಮಯವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಯಂಗ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮರಾಜು ಆಗಿರುವ ರಾಮ್ ಚರಣ್ ತೇಜ ಮತ್ತು ಬುಡಕಟ್ಟು ಜನಾಂಗದ ಮುಗ್ಧ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭೀಮ ಆಗಿರುವ ಜ್ಯೂನಿಯರ್ ಎನ್.ಟಿ.ಆರ್ ಈ ಪಾತ್ರಗಳು ಈ ಸಿನಿಮಾಗೆ ಮೆರಗು ಎಂದೆ ಹೇಳಬಹುದು.
ಬೆಂಕಿ ಮತ್ತು ನೀರು ಇವೆರಡರ ಶಕ್ತಿ ಎಷ್ಟು ಅಪರಿಮಿತ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಬೆಂಕಿಯ ಶಕ್ತಿ ಅಧಿಕವೊ ಅಥವಾ ನೀರಿನ ಶಕ್ತಿ ಅಧಿಕವೊ ಎಂಬುದನ್ನು ಅಳಯಲಾಗುವುದಿಲ್ಲ ಕಾರಣ ಅಗ್ನಿ ಮತ್ತು ಜಲ ಇವೆರಡು ಕೂಡ ತನ್ನದೆ ಆದ ಶಕ್ತಿಯನ್ನು ಹೊಂದಿದೆ. ಎರಡು ಕೂಡ ಯಾವುದೆ ಕಾರಣಕ್ಕೂ ಬೆರೆಯುವುದಿಲ್ಲ. ತನ್ನ ಶಕ್ತಿ ಯಾವ ಮಟ್ಟಕ್ಕಿದೆ ಎಂಬುದು ಸಮಯ ಬಂದಾಗ ಉತ್ತರ ನೀಡುವುದು ಇವೆರಡರ ಹುಟ್ಟುಗುಣ. ಅದರಂತೆಯೆ ಜ್ಯೂನಿಯರ್ ಎನ್.ಟಿ.ಆರ್ ನೀರಿನ ಸಂಕೇತವನ್ನು ಸೂಚಿಸಿದರೆ, ರಾಮ್‍ಚರಣ್ ಬೆಂಕಿಯ ಸಂಕೇತವನ್ನು ಸೂಚಿಸುತ್ತಾರೆ. ಇದರ ಅರ್ಥ ಇವರಿಬ್ಬರ ಸ್ನೇಹ ಬೆಂಕಿ ಮತ್ತು ನೀರಿನಂತೆ. ತಮ್ಮ ಶಕ್ತಿ ಯಾವ ಸಮಯಕ್ಕೆ ಹೇಗೆ, ಯಾವ ತೀವ್ರತೆಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಊಹಿಸಲು ಅಸಾಧ್ಯ ಎಂಬುದನ್ನು ತಿಳಿಸುತ್ತದೆ. ಈ ಸಂಗತಿಯನ್ನು ಅರ್ಥೈಸಿಕೊಂಡರೆ ಪ್ರಾಯಶಃ ಈ ಸಿನಿಮಾ ಇಬರಿಬ್ಬರ ಸ್ನೇಹದ ಮೂಲಕ ಯಾವ ರೀತಿ ಕಥೆಯನ್ನು ಹೇಳಲು ಹೊರಟಿದೆ ಎಂಬುದು ತಿಳಿಯುತ್ತದೆ.
ಯಶಸ್ವಿ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನ ಅಂದಮೇಲೆ ಸಿನಿಪ್ರೇಕ್ಷಕರು ಒಂದಲ್ಲ, ದುಪ್ಪಟ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಿರೀಕ್ಷೆಗೆ ತಕ್ಕಂತೆ ಸಿನಿಮಾವನ್ನು ಸರಿದೂಗಿಸಿಕೊಂಡು ಹೋಗಿದ್ದಾರೆ ರಾಜಮೌಳಿ. 1920ರಲ್ಲಿ ಬ್ರಿಟಿಷ್ ರ ಆಳ್ವಿಕೆಯಲ್ಲಿ ಜನರ ಪರಿಸ್ಥಿತಿ ಹೇಗಿತ್ತು, ಅವರ ಕಾಲಡಿಯಲ್ಲಿ ಮುಗ್ದ ಜನರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎಂಬುದನ್ನು ಅದ್ಭುತವಾಗಿ ಚಿತ್ರೀಕರಿಸಿದೆ ಚಿತ್ರತಂಡ. ಮಲ್ಲಿ ಎಂಬ ಪುಟ್ಟ ಬುಡಕಟ್ಟು ಜನಾಂಗದ ಬಾಲಕಿಯನ್ನು ಬ್ರಿಟಿಷ್ ಆಡಳಿತದ ಲೇಡಿ ಸ್ಕಾಟ್ ಆಂಗ್ಲ ಭಾಷೆ ಬಾರದ ಮುಗ್ದ ಜನರ ಮುಖದ ಮೇಲೆ ಹಣ ಎಸೆದು ಬಾಲಕಿಯನ್ನು ಕರೆದುಕೊಂಡು ಹೋಗುತ್ತಾರೆ. ಮಲ್ಲಿ ಎಂಬ ಪುಟ್ಟ ಬಾಲಕಿಯನ್ನು ರಕ್ಷಿಸಿ ವಾಪಾಸ್ ಕರೆತರಲು ಹರಸಾಹಸ ಪಡುವ ಭೀಮ್ ನ ಕಥೆಯನ್ನು ಸಿನಿಪ್ರೇಕ್ಷಕರಿಗೆ ಎಳೆ ಎಳೆಯಾಗಿ ಹೇಳುತ್ತಾರೆ.
ಇನ್ನು ರಾಮರಾಜು ಬ್ರಿಟಿಷ್ ಸೇನೆಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಯಾರೊ ಒಬ್ಬನನ್ನು ಹುಡುಕಿಕೊಂಡು ಭೀಮ್ ವಾಸವಿರುವ ದೆಹಲಿ ಸಮೀಪ ಬರುವ ರಾಮರಾಜುಗೆ ಭೀಮ್ ನ ಸ್ನೇಹ ಸಿಗುತ್ತದೆ. ಅಲ್ಲಿಂದ ಇವರ ಸ್ನೇಹ ಹೇಗೆ ಸಾಗುತ್ತದೆ, ಇಬ್ಬರ ಉದ್ದೇಶ ಅವರವರಿಗೆ ಅರ್ಥವಾದಾಗ ಮುಂದೇನು ಎಂಬುದನ್ನು ಸಿನಿಮಾ ನೋಡಿದಾಗ ತಿಳಿಯುತ್ತದೆ. ಈ ಕಥೆಗೆ ಟ್ವಿಸ್ಟ್ ಸಿಗುವುದೆ ಉದ್ದೇಶಗಳು ಪರಸ್ಪರ ತಿಳಿದಾಗ. ಫಸ್ಟ್ ಹಾಫ್ ಸಿನಿಮಾ ಪ್ರೇಕ್ಷಕರಿಗೆ ಆಕ್ಷನ್, ಗಂಭೀರ, ಸ್ನೇಹ ಸಂಬಂಧ, ನಗುವಿನ ತುಣುಕು ಸೇರಿದಂತೆ ಮನರಂಜನೆಯ ಮಹಾಪೂರವನ್ನೆ ನೀಡುತ್ತದೆ. ಸೆಕೆಂಡ್ ಹಾಫ್ ಊಹೆಗೂ ಮೀರಿದ ಘಟನೆಗಳನ್ನು ಹಂತ ಹಂತವಾಗಿ ಬಿತ್ತರಿಸುತ್ತಾ ಹೋಗುತ್ತದೆ. ಈ ಸಿನಿಮಾದಲ್ಲಿ ಒಟ್ಟು 3 ಹಾಡುಗಳಿದ್ದು ಒಂದೊಂದು ಹಾಡು ಕೂಡ ವಿಭಿನ್ನವಾಗಿ ಪ್ರಸ್ತುತ ಘಟನೆಯನ್ನು ಹಾಡಿನಲ್ಲಿಯೆ ವಿವರಿಸುವ ಪರಿ ಉತ್ತಮವಾಗಿದೆ. ಸಿನಿಮಾಗೆ ಬಳಸಿರುವ ವಸ್ತುಗಳು, ಸಿನಿಮಾಟೋಗ್ರಾಫಿ ತೆರೆಮೇಲೆ ಅದ್ಭುತವಾಗಿ ಮೂಡಿಬಂದಿದೆ.
ಇನ್ನು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೀತಾ ಅಂದರೆ ಅಲಿಯಾ ಭಟ್, ಜೆನ್ನಿಫರ್ ಆಗಿರುವ ಓಲಿವಿಯಾ ಮಾರಿಸ್, ಸ್ಕಾಟ್ ಆಗಿರುವ ರೇ ಸ್ಟಿವಿನ್‍ಸನ್, ಸರೋಜಿನಿ ಆಗಿರುವ ಶ್ರೀಯಾ ಶರಣ್, ಅಜಯ್ ದೇವಗನ್ ಸೇರಿದಂತೆ ಪ್ರತಿಯೊಬ್ಬರ ಪಾತ್ರವೂ ಕೂಡ ಕಥೆಗೆ ಹೊಂದಿಕೆಯಾಗಿದ್ದು, ಸಿನಿಪ್ರೇಕ್ಷಕರಿಗೆ ಸುಲಭವಾಗಿ ಪರಿಚಯವಾಗುತ್ತಾರೆ. ಕ್ರೂರತ್ವ, ರಕ್ತಪಾತಗಳ ದೃಶ್ಯಗಳನ್ನು ಒಳಗೊಂಡಿರುವ ಈ ಸಿನಿಮಾ ಪ್ರೀತಿ, ಸ್ನೇಹ, ಭಾಂದವ್ಯತೆಯನ್ನು ಕೂಡ ಪಸರಿಸುತ್ತಾ ಹೋಗುತ್ತದೆ. ಈ ಸಿನಿಮಾದಲ್ಲಿ ಅತಿ ಹೆಚ್ಚಾಗಿ ಆಕ್ಷನ್ ಜಾನರ್ ಬಳಕೆ ಮಾಡಿರುವುದು ಕೆಲವರಿಗೆ ಬೇಸರ ಮೂಡಿಸುತ್ತದೆ. ಜೊತೆಗೆ ಸೆಕೆಂಡ್ ಹಾಫ್ ನಲ್ಲಿ 15 ನಿಮಿಷಗಳ ಕಾಲ ಪ್ರೇಕ್ಷಕರಿಗೆ ಕಥೆ ಹೇಳುವಲ್ಲಿ ತೊಡಕು ಉಂಟು ಮಾಡಿ ಬೋರ್ ಹೊಡಿಸುತ್ತಾರೆ ಎನ್ನಬಹುದು.
ಬಾಹುಬಲಿ ಸಿನಿಮಾದಲ್ಲಿ ಮಾಡಿದ್ದ ಕಮಾಲ್, ಗಳಿಸಿದ್ದ ಯಶಸ್ಸನ್ನು ಈ ಸಿನಿಮಾದಲ್ಲಿ ನಿರೀಕ್ಷಿಸಿ ಬಂದರೆ ಖಂಡಿತ ಬೇಸರವಾಗುತ್ತದೆ. ಕನ್ನಡದಲ್ಲಿ ರಾಮ್ ಚರಣ್ ತೇಜ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಈ ಸಿನಿಮಾವನ್ನು ಕನ್ನಡಿಗರು ಕನ್ನಡದಲ್ಲಿ ನೋಡಬೇಕು ಎಂದು ನಾವು ಬಯಸುತ್ತೇವೆ, ಇದೆ ಕಾರಣದಿಂದ ನಾವಿಬ್ಬರೂ ಕೂಡ ಭಾಷೆ ಬರದಿದ್ದರೂ ಕನ್ನಡದಲ್ಲೆ ಡಬ್ಬಿಂಗ್ ಮಾಡಿದ್ದೇವೆ ಎಂದು ಕನ್ನಡಿಗರನ್ನು ಸೆಳೆದಿದ್ದಾರೆ. ಕನ್ನಡ ಭಾಷೆಯಲ್ಲಿ ಡಬ್ ಮಾಡಿದ ಸಿನಿಮಾವನ್ನು ಕನ್ನಡ ಅವತರಣಿಕೆಯಲ್ಲಿ ನೋಡುವ ಭಾಗ್ಯ ಕನ್ನಡಿಗರಿಗೆ ಅಷ್ಟಾಗಿ ಸಿಗಲಿಲ್ಲ, ತೆಲುಗು ಭಾಷೆಗೆ ಚಿತ್ರಮಂದಿರ ಕೊಟ್ಟದ್ದು ಅಪಾರ ಸಂಖ್ಯೆ, ಕನ್ನಡ ಭಾಷೆಗೆ ಕೊಟ್ಟದ್ದು ಪುಡಿಗಾಸು ಇದು ನಿಜಕ್ಕೂ ಕನ್ನಡಿಗರಿಗೆ ಬೇಸರ ತಂದಿದೆ.
ಈ ಖುಷಿಗೆ ಯಾಕೆ ಕನ್ನಡದಲ್ಲಿ ಡಬ್ ಮಾಡಬೇಕಿತ್ತು ಎಂಬ ಪ್ರಶ್ನೆಯನ್ನು ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಅಂಶಗಳನ್ನು ಹೊರತುಪಡಿಸಿದರೆ ಈ ಸಿನಿಮಾ ನಿಜಕ್ಕೂ ಅದ್ಬುತವಾಗಿದೆ. ಸಂದೇಶವಿಲ್ಲದ ಸಿನಿಮಾವಾದರೂ ದೃಶ್ಯಾವಳಿಗಳು ರೋಮಾಂಚನ ನೀಡಲಿದೆ. ಕಥೆ ನೇರವಾಗಿ ಸಿನಿಪ್ರೇಕ್ಷಕರಿಗೆ ನಾಟುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಒಟ್ಟಾರೆಯಾಗಿ ಈ ಸಿನಿಮಾ ಅನೇಕ ವಿಷಯವನ್ನು ಒಳಗೊಂಡ ಕಥೆಯಾಗಿದೆ. ಆರ್. ಆರ್. ಆರ್ ಸಿನಿಮಾವನ್ನು ಚಿತ್ರಮಂದಿರದಲ್ಲಿಯೆ ಹೋಗಿ ನೋಡಿ.