ಕೆಲವರು ಸಾಧನೆಯ ದಾರಿಯಲ್ಲಿ ಎಷ್ಟೇ ಕಷ್ಟ ಎದುರಾದರೂ ಸಾಧನೆಯನ್ನು ಮಾಡುತ್ತಾರೆ. ತಾವು ಕಲಿತ ವಿದ್ಯೆ ಕೇವಲ ಉದ್ಯೋಗಕ್ಕೆ ಸೀಮಿತ ಮಾಡಿಕೊಳ್ಳದೆ ಸಮಾಜದ ಒಳಿತಿಗಾಗಿ ಮೀಸಲಿಡುತ್ತಾರೆ. ಅವರಲ್ಲಿ ದಕ್ಷ, ಸಮರ್ಥ ಯುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕೂಡ ಒಬ್ಬರು. ರೋಹಿಣಿ ಅವರ ಜೀವನ ಹಾಗೂ ಸಾಧನೆಯ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರೋಹಿಣಿ ಸಿಂಧೂರಿ ಅವರು ಕರ್ನಾಟಕದ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದರು. ಅವರು ಮೂಲತಃ ಆಂಧ್ರಪ್ರದೇಶದ ತೆಲಂಗಾಣದವರು. ಅವರು 1984, ಮೇ 30 ರಂದು ರೆಡ್ಡಿ ಮನೆತನದಲ್ಲಿ ಜನಿಸಿದ್ದಾರೆ. ಅವರಿಗೆ ಚಿಕ್ಕಂದಿನಿಂದಲೂ ಓದುವ ಹವ್ಯಾಸವಿತ್ತು, ಬಿಟೆಕ್ ಪದವೀಧರೆಯಾಗಿ 2008-2009ರಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ಸಿವಿಲ್ ಸರ್ವೀಸ್ ಹುದ್ದೆಗೆ ಅರ್ಜಿ ಹಾಕುತ್ತಾರೆ. 2009ರಲ್ಲಿ ಭಾರತೀಯ ಆಡಳಿತ ಸೇವೆ ಪರೀಕ್ಷೆ ಬರೆದ ಅವರು ದೇಶಕ್ಕೆ 43ನೇ ರ್ಯಾಂಕ್ ಪಡೆದರು. ಅವರು ಐಎಎಸ್ ಪರೀಕ್ಷೆ ಪಾಸ್ ಮಾಡಿದಾಗ ಅವರಿಗೆ ಕೇವಲ 25 ವರ್ಷ ವಯಸ್ಸು.

ರೋಹಿಣಿ ಅವರು ಮೊದಲು ಕರ್ನಾಟಕದ ತುಮಕೂರಿಗೆ ಎಸಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ತುಮಕೂರಿನಲ್ಲಿ ಹಲವು ವರ್ಷಗಳಿಂದ 42 ಎಕರೆ ಕಮರ್ಷಿಯಲ್ ಭೂಮಿಯ ತೆರಿಗೆ ವಸೂಲಿಯಾಗದೆ ಇತ್ತು. ಅವರು 42 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡರು. ಸುತ್ತಮುತ್ತಲಿನ ಜಾಗದ ತೆರಿಗೆ ವಸೂಲಾತಿ ಕಂಪ್ಯೂಟರೈಸ್ಡ್ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅಷ್ಟೇ ಅಲ್ಲದೆ ಕೆಲವು ಭಾಗಗಳಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಕೆಲವು ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿ ಜನರಿಗೆ ಅನುಕೂಲವಾಗುವಂತೆ ರಸ್ತೆಗಳನ್ನು ನಿರ್ಮಿಸುತ್ತಾರೆ. ಇಂದಿಗೂ ಅಲ್ಲಿಯ ಜನರು ರೋಹಿಣಿ ಅವರನ್ನು ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಾರೆ. ತುಮಕೂರಿನಿಂದ ಬೆಂಗಳೂರಿಗೆ ವರ್ಗಾವಣೆ ಆಗುತ್ತಾರೆ ಅಲ್ಲಿ ರೂರಲ್ ಡೆವಲಪ್ಮೆಂಟ್ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ಸೆಲ್ಫ್ ಎಂಪ್ಲಾಯ್ಮೆಂಟ್ ಪ್ರಾಜೆಕ್ಟ್ ಗಳಿಗೆ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದರು. ನಂತರ ಮಂಡ್ಯದಲ್ಲಿ ಜಿಲ್ಲಾ ಪಂಚಾಯತ್ ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ನೇಮಕಗೊಳ್ಳುತ್ತಾರೆ. ಸ್ವಚ್ಛ ಭಾರತ ಕಲ್ಪನೆಯನ್ನು ರೋಹಿಣಿ ಅವರು ಮಂಡ್ಯದ ಗ್ರಾಮೀಣ ಭಾಗಗಳಲ್ಲಿ ರೂಪಿಸಲು ಹೋರಾಡಿದರು. ಬೆಳ್ಳಂಬೆಳಗ್ಗೆ ರೋಹಿಣಿ ಅವರು ಗ್ರಾಮೀಣ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಮುಂಜಾವು ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದರು. ಅಲ್ಲಿರುವ ಅಶುಚಿ ಮತ್ತು ಬಹಿರ್ದೆಸೆ ಸಮಸ್ಯೆಯನ್ನು ನಿರ್ಮೂಲನೆ ಮಾಡಿ 2014-2015ರಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದಾರೆ.

ಮಂಡ್ಯ ಜಿಲ್ಲೆಯು ದೇಶದ ಮೂರನೇ ಹಾಗೂ ರಾಜ್ಯದ ಮೊದಲನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಡೆದು ದಾಖಲೆಯನ್ನು ನಿರ್ಮಿಸಿತು ಇದರ ಸಂಪೂರ್ಣ ಕೀರ್ತಿ ರೋಹಿಣಿ ಸಿಂಧೂರಿ ಅವರಿಗೆ ಸಲ್ಲುತ್ತದೆ. ಕೇಂದ್ರ ಸರ್ಕಾರದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬಿಡುಗಡೆಯಾದ 65 ಕೋಟಿ ಅನುದಾನದ ಹಣವನ್ನು ರೋಹಿಣಿ ಸಿಂಧೂರಿ ಅವರು ಸಮರ್ಪಕವಾಗಿ ಬಳಸಿಕೊಂಡು ಮಂಡ್ಯದಲ್ಲಿ ನೂರಕ್ಕಿಂತ ಹೆಚ್ಚು ಶುದ್ಧ ನೀರಿನ ಘಟಕವನ್ನು ನಿರ್ಮಾಣ ಮಾಡಿದರು. ರೋಹಿಣಿ ಅವರ ಕೆಲಸವನ್ನು ಗಮನಿಸಿದ ಕೇಂದ್ರ ಸರ್ಕಾರ ಹೆಚ್ಚುವರಿ 6 ಕೋಟಿ ಹಣವನ್ನು ಬಿಡುಗಡೆ ಮಾಡಿತು ಇಷ್ಟೇ ಅಲ್ಲದೆ ರೋಹಿಣಿ ಅವರು ಕೃಷಿ ಕ್ಷೇತ್ರದತ್ತ ಗಮನ ಹರಿಸಿ ಕಬ್ಬು ಹಾಗೂ ಭತ್ತ ಬೆಳೆಗಾರರನ್ನು ಸೇರಿಸಿ ಅಧಿಕ ಇಳುವರಿಯ ಬಗ್ಗೆ ಸೂಕ್ತ ಸಲಹೆ ಹಾಗೂ ತರಬೇತಿಯನ್ನು ನೀಡಿದ್ದಲ್ಲದೆ ಕೃಷಿ ಕೆಲಸಗಳಿಗೆ ಬ್ಯಾಂಕ್ ನಿಂದ ಸಹಾಯವಾಗುವ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದರು. ಮಂಡ್ಯದಲ್ಲಿ ಹೆಣ್ಣು ಭ್ರೂಣಹತ್ಯೆ ಹೆಚ್ಚಾಗಿ ನಡೆಯುತ್ತಿತ್ತು ಅದರ ಬಗ್ಗೆ ಜನರಲ್ಲಿ ರೋಹಿಣಿ ಸಿಂಧೂರಿ ಅವರು ಜಾಗೃತಿ ಮೂಡಿಸಿದರು. ರೋಹಿಣಿ ಸಿಂಧೂರಿ ಅವರ ಆದೇಶದಂತೆ ಮಂಡ್ಯ ಜಿಲ್ಲಾ ಪಂಚಾಯತ್ ಜನಸಾಮಾನ್ಯರ ಡಾಕ್ಯುಮೆಂಟ್ ವೆರಿಫಿಕೇಶನ್ ಸರಳವಾಗುವಂತೆ ಒಂದು ಮೊಬೈಲ್ ಆಪ್ ಬಿಡುಗಡೆಗೊಳಿಸಲಾಯಿತು ಇದರಿಂದ ಜನಸಾಮಾನ್ಯರು ಅಧಿಕಾರಿಗಳ ಹಿಂದೆ ಅಲೆಯುವ ಬದಲು ಈ ಮೊಬೈಲ್ ಆಪ್ ಮೂಲಕ ತಮ್ಮ ಕೆಲಸವನ್ನು ಸರಳವಾಗಿ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರ ದೇಶದ ಮೂವರು ಡಿಸಿಗಳನ್ನು ದೆಹಲಿಗೆ ಡಿಸಿಗಳಿಗೆ ಸೆಮಿನಾರ್ ಕೊಡಲು ಆಹ್ವಾನಿಸಿತು ಅದರಲ್ಲಿ ರೋಹಿಣಿ ಅವರ ಪ್ರಗತಿಪರ ಕಾರ್ಯಗಳನ್ನು ಗಮನಿಸಿದ ಕೇಂದ್ರ ಸರ್ಕಾರ ರೋಹಿಣಿ ಅವರನ್ನು ಮೂವರು ಡಿಸಿಗಳಲ್ಲಿ ಒಬ್ಬರನ್ನಾಗಿ ಆಹ್ವಾನಿಸಿತು.

ಕರ್ನಾಟಕದ ಫುಡ್ ಎಂಡ್ ಸಿವಿಲ್ ಸರ್ವಿಸ್ ಕಾರ್ಪೊರೇಷನ್ ಇಲಾಖೆಯಲ್ಲಿ ಮ್ಯಾನೆಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ ರೋಹಿಣಿ ಅವರು ನಂತರ ಹಾಸನ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಹೋಗುತ್ತಾರೆ. ಆ ಸಮಯದಲ್ಲಿ ಹಾಸನ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಹಿಂದೆ ಉಳಿದಿತ್ತು. ರೋಹಿಣಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದರು ಅಲ್ಲದೆ ಹಾಸನದ ಪಾರಂಪರಿಕ ಆಚರಣೆಯಾದ ಮಹಾಮಸ್ತಕಾಭಿಷೇಕ ಆಚರಣೆಯನ್ನು ರೋಹಿಣಿ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು. ಅವರ ಆಡಳಿತದಲ್ಲಿ 2019ರಲ್ಲಿ ಎಸೆಸೆಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನ ರಾಜ್ಯಕ್ಕೆ ಮೊದಲ ಸ್ಥಾನವನ್ನು ಪಡೆಯಿತು. ಹಾಸನದ ಜನತೆಯ ಕುಂದು ಕೊರತೆಯನ್ನು ನಿವಾರಿಸಲು ಸ್ಪಂದನ ಎಂಬ ಆನ್ಲೈನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದರು. ರೋಹಿಣಿ ಅವರ ಆಡಳಿತ ಪಾರದರ್ಶಕತೆ ಹಾಗೂ ದಕ್ಷತೆಗೆ ಹೆಸರಾಗಿದೆ. ಅವರು ಹೋದಲ್ಲೆಲ್ಲಾ ಜನರ ಸಮಸ್ಯೆಯ ವಿರುದ್ಧ ಹೋರಾಡಿದ್ದಾರೆ. ಅತಿಯಾದ ಪ್ರಾಮಾಣಿಕತೆಗೆ ಅಡ್ಡಿ ಆತಂಕ ಎದುರಾಗುತ್ತದೆ ರೋಹಿಣಿ ಅವರು ತಮ್ಮ ಆಡಳಿತ ಸಮಯದಲ್ಲಿ ಅನೇಕ ಶಾಸಕ, ಸಚಿವರನ್ನು ಎದುರು ಹಾಕಿಕೊಂಡಿದ್ದರು. ಅನೇಕ ಉದ್ಯಮಿಗಳು, ಶ್ರೀಮಂತರ ವೈರತ್ವವನ್ನು ಕಟ್ಟಿಕೊಂಡಿದ್ದಾರೆ. ರೋಹಿಣಿ ಅವರು ಸುಧೀರ್ ರೆಡ್ಡಿ ಎಂಬುವವರನ್ನು ಮದುವೆಯಾಗಿದ್ದಾರೆ. ಸುಧೀರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಒಟ್ಟಿನಲ್ಲಿ ಪ್ರಾಮಾಣಿಕತೆ, ನಿಷ್ಠೆಗೆ ರೋಹಿಣಿ ಅವರು ಹೆಸರಾಗಿದ್ದಾರೆ. ಅವರ ಜೀವನ ಇಂದಿನ ಯುವಕ, ಯುವತಿಯರಿಗೆ ಮಾದರಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!