ಯಾವುದಾದರೂ ಊರಿಗೆ ಹೋದರೆ ಹೆಚ್ಚಾಗಿ ಒಂದಾದರೂ ಅಲ್ಲಿ ಹನುಮನ ಗುಡಿ ಇದ್ದೇ ಇರುತ್ತದೆ. ಏಕೆಂದರೆ ಯಾವುದೇ ದುಷ್ಟ ಶಕ್ತಿಗಳನ್ನು ತಡೆಯಲು ಹನುಮನ ಗುಡಿಯನ್ನು ಸ್ಥಾಪಿಸಿರುತ್ತಾರೆ. ಹಾಗೆಯೇ ನಮ್ಮ ರಾಜಧಾನಿಯಾದ ಬೆಂಗಳೂರು ಈಗ ತುಂಬಾ ಬೆಳೆದಿದೆ. ಬೆಂಗಳೂರು ಎಲ್ಲಿಂದ ಶುರುವಾಗುತ್ತದೆ ಎಲ್ಲಿಗೆ ಮುಗಿಯುತ್ತದೆ ಎಂದು ಯಾರಿಗೂ ತಿಳಿಯದಂತೆ ಬೆಳೆದಿದೆ. ಇಲ್ಲಿ ಕೆಲವು ಪ್ರಭಾವಶಾಲಿ ಹನುಮಂತನ ದೇವಾಲಯಗಳು ಇವೆ. ಅವುಗಳಲ್ಲಿ ರಾಗಿಗುಡ್ಡದ ಪ್ರಸನ್ನ ಆಂಜನೇಯ ದೇವಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಾಗಿಗುಡ್ಡದ ಪ್ರಸನ್ನ ಆಂಜನೇಯ ದೇವಸ್ಥಾನವು ಜಯನಗರದ 9ನೇ ಬ್ಲಾಕ್ ನಲ್ಲಿ ಇದೆ. ಇದು ನೋಡಲು ಬಹಳ ಸುಂದರವಾಗಿ ಇದೆ. ಹಾಗೆಯೇ ಬಡವಿದ್ಯಾರ್ಥಿಗಳ ದೇಗುಲವಾಗಿದೆ. ಇಲ್ಲಿ ಆಗಮಿಸಿದರೆ ಆಶ್ರಮಕ್ಕೆ ಪ್ರವೇಶಿಸಿದ ಅನುಭವ ಆಗುತ್ತದೆ. ಸೊಂಪಾಗಿ ಹುಲ್ಲಿನಿಂದ ಮತ್ತು ಸುಂದರವಾಗಿ ಬೆಳೆದಿರುವ ಹೂವಿನಗಿಡಗಳಿಂದ ಈ ದೇವಸ್ಥಾನ ಸುಂದರವಾಗಿ ಕಾಣುತ್ತದೆ. ಇಲ್ಲಿ ಗುಡ್ಡದ ಮೇಲೆ ಇರುವ ದೇವಾಲಯ, ಹೊಳೆಯುವ ಜಲಧಾರೆ, ಗರುಡಪಕ್ಷಿ ಮತ್ತು ಬೃಹದಾಕಾರದ ತ್ರಿಮೂರ್ತಿಗಳ ವಿಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಸುಮಾರು 5ವರೆ ಎಕರೆ ವಿಶಾಲವಾದ ಭೂಭಾಗದಲ್ಲಿ ಇದು ಇದ್ದು 58ಅಡಿಗಳ ಹೆಬ್ಬಂಡೆಯನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ ಈ ಪ್ರದೇಶದ ಸುತ್ತಮುತ್ತ ರಾಗಿ ಯಥೇಚ್ಛವಾಗಿ ಬೆಳೆಯುತ್ತಿತ್ತು. ಆಗ ಪಾಳೇಗಾರರು ಆಳ್ವಿಕೆ ಮಾಡುತ್ತಿದ್ದರು. ರಾಗಿಯನ್ನು 60ಅಡಿಗಳಷ್ಟು ಎತ್ತರದ ರಾಶಿ ಮಾಡಿ ಆ ರಾಶಿಗೆ ಪೂಜೆಯನ್ನು ಮಾಡುವ ಸಮಯದಲ್ಲಿ ಮೂವರು ತೇಜೋಮಯವಾದ ದಾಸಯ್ಯನವರು ಭಿಕ್ಷೆಯನ್ನು  ಬೇಡುತ್ತಾ ಆಗಮಿಸುತ್ತಾರೆ. ಪಾಳೇಗಾರರ ಸೊಸೆ ಮರದ ತುಂಬಾ ರಾಗಿಯನ್ನು ದಾಸರಿಗೆ ನೀಡಲು ಬಂದಾಗ ಜಿಪುಣೆಯಾದ ಪಾಳೇಗಾರರ ಪತ್ನಿ ಇದನ್ನು ತಡೆಯುತ್ತಾಳೆ.

ಆಗ ಸೊಸೆ ದಾನಕ್ಕೆ ಇಲ್ಲದ ರಾಗಿ ಇದ್ದರೆಷ್ಟು ಹೋದರೆಷ್ಟು ದೇವರಿಗೆ ಇಲ್ಲದ ರಾಗಿ ಕಲ್ಲಾಗಲಿ ಎಂದು ಶಪಿಸುತ್ತಾಳೆ. ಆಗ ಇಡೀ ರಾಗಿಯ ರಾಶಿಯು ಕಲ್ಲಾಗಿ ಹೋಗುತ್ತದೆ. ಹಾಗಾಗಿ ಅಂದಿನಿಂದ ಈ ಗುಡ್ಡಕ್ಕೆ ರಾಗಿಗುಡ್ಡ ಎಂದು ಕರೆಯುತ್ತಾರೆ. ದಾನ ಬೇಡಲು ಬಂದ ದಾಸರು ಕಲ್ಲಾಗಿ ಹೋಗುತ್ತಾರೆ. 1968ರಲ್ಲಿ ಈ ಗುಡ್ಡದ ಮೇಲೆ ಪ್ರಸನ್ನ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಬೆಟ್ಟವನ್ನು ಏರಲು 108 ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಚಾಲುಕ್ಯರ ಶೈಲಿಯಲ್ಲಿ ಮಂಟಪದ ವಿಗ್ರಹಗಳನ್ನು ಕೆತ್ತಲಾಗಿದೆ. ಇಲ್ಲಿ ಬರುವ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಆದ್ದರಿಂದ ನೀವು ಸಹ ಒಂದು ಬಾರಿ ಹೋಗಿ ಆಂಜನೇಯನ ದರ್ಶನ ಮಾಡಿಕೊಂಡು ಬನ್ನಿ.

Leave a Reply

Your email address will not be published. Required fields are marked *