ಕೃಷಿಯನ್ನು ನಡೆಸುತ್ತಿರುವ ರೈತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಈಗ ನೀಡಿದ ಹಣವನ್ನು ವಾಪಸ್ ಪಡೆಯುತ್ತಿದೆ. ಅದು ಯಾವ ಯೋಜನೆ ಹಾಗೂ ಹಣ ವಾಪಸ್ ಪಡೆಯಲು ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕೃಷಿ ಉತ್ತೇಜನಕ್ಕಾಗಿ ಕೇಂದ್ರ ಸರಕಾರದ ಯೋಜನೆಯಾದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯಡಿ ಸಹಾಯಧನ ಪಡೆದ ರಾಜ್ಯದ 85 ಸಾವಿರಕ್ಕೂ ಹೆಚ್ಚು ರೈತರಿಗೆ ಈಗಾಗಲೆ ನೀಡಿದ ಹಣವನ್ನು ಹಿಂತಿರುಗಿಸುವ ಪರಿಸ್ಥಿತಿ ಎದುರಾಗಿದೆ. ರಾಜ್ಯಾದ್ಯಂತ ಈಗಾಗಲೇ ನೂರಾರು ರೈತರಿಂದ ಹಣವನ್ನು ವಾಪಸ್‌ ಪಡೆಯಲಾಗಿದೆ. ಈ ಯೋಜನೆಯನ್ನು 2018ರ ಡಿಸೆಂಬರ್ 1ರಿಂದಲೇ ಜಾರಿಗೊಳಿಸಿದ ಕೇಂದ್ರ ಸರಕಾರ 2019ರ ಮಾರ್ಚ್ ನಲ್ಲಿ ರೈತರ ಬ್ಯಾಂಕ್‌ ಖಾತೆಗೆ ಸಹಾಯಧನದ ಮೊದಲ ಕಂತಿನ 2,000 ರೂಪಾಯಿಗಳನ್ನು ಪಾವತಿಸಿತ್ತು.

ಜೊತೆಗೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ವಾರ್ಷಿಕ 4,000 ರೂಪಾಯಿಗಳನ್ನು ನೀಡಿತ್ತು. ಆದರೆ ಈಗ ಈ ಯೋಜನೆಯಡಿ ನಿಯಮಬಾಹಿರವಾಗಿ ಹಣ ಪಡೆದಿದ್ದಾರೆ ಎಂದು ಒಂದು ಪಟ್ಟಿ ತಯಾರಿಸಲಾಗಿದೆ. ಈ ಪಟ್ಟಿಯಲ್ಲಿರುವ ಹೆಚ್ಚಿನವರು ತೆರಿಗೆ ಪಾವತಿದಾರರಾಗಿದ್ದಾರೆ. ಅರ್ಜಿ ಸಲ್ಲಿಸುವಾಗಲೂ ಕೃಷಿ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳಿಂದ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಯೋಜನೆ ಕುರಿತು ಸ್ಪಷ್ಟ ಮಾಹಿತಿ ರೈತರಿಗೆ ಸಿಗುತ್ತಿರಲಿಲ್ಲ. ಬಹುತೇಕ ರೈತರು ಪಹಣಿ ಮಾಹಿತಿ ಒದಗಿಸಿ ಸೈಬರ್‌ ಸೆಂಟರ್‌ಗಳು ಹಾಗೂ ಏಜೆಂಟರ ಸಹಾಯದಿಂದ ಯೋಜನೆಗೆ ಅರ್ಜಿ ಸಲ್ಲಿಸಿದ್ದರು.

ರಾಜ್ಯದಲ್ಲಿ ಈ ಯೋಜನೆಗೆ ಈವರೆಗೆ 56,74,940 ರೈತರು ಹೆಸರು ನೋಂದಾಯಿಸಿದ್ದು, ನಾನಾ ಹಂತದ ಪರಿಶೀಲನೆ ನಂತರ 52,68,327 ರೈತರಿಗೆ ಸಹಾಯಧನ ಬಿಡುಗಡೆಯಾಗಿದೆ. ಕೇಂದ್ರ ಕೃಷಿ ಸಚಿವಾಲಯವು ರೈತರು ಸಲ್ಲಿಕೆ ಮಾಡಿರುವ ಆಧಾರ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ 85,208 ಜನರು ಆದಾಯ ತೆರಿಗೆ ಪಾವತಿಸಿರುವುದು ಕಂಡುಬಂದಿದೆ. ಆಗ ಅನರ್ಹ ರೈತರಿಂದ ಸಹಾಯಧನ ವಾಪಸ್‌ ಪಡೆಯುವಂತೆ ರಾಜ್ಯಗಳಿಗೆ ಅನರ್ಹ ರೈತರ ಪಟ್ಟಿಯನ್ನು ರವಾನಿಸಿದೆ. ಹಣವನ್ನು ಡಿ.ಡಿ ಮೂಲಕ ಸಹಾಯಕ ನಿರ್ದೇಶಕರ ಕಚೇರಿಗೆ ಹಿಂದಿರುಗಿಸಬೇಕು ಹಣ ಹಿಂತಿರುಗಿಸದಿದ್ದರೆ ಕೃಷಿ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಆ ರೈತರಿಗೆ ದೊರೆಯುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಸೌಲಭ್ಯ ಪಡೆಯುವ ರೈತರು ಎರಡು ಹೆಕ್ಟೇರ್‌ಗಿಂತಲೂ ಹೆಚ್ಚು ಕೃಷಿ ಜಮೀನು ಹೊಂದಿರುವಂತಿಲ್ಲ. ಅರ್ಜಿದಾರ ರೈತರ ಕುಟುಂಬ ಸದಸ್ಯರು ಸಾಂವಿಧಾನಿಕ ಹುದ್ದೆಯಲ್ಲಿರಬಾರದು, ಮಾಸಿಕ 10,000 ರೂಗಿಂತ ಹೆಚ್ಚು ಪಿಂಚಣಿ ಪಡೆಯಬಾರದು, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ನೋಂದಾಯಿತ ವೃತ್ತಿನಿರತ ವೈದ್ಯರು, ಎಂಜಿನಿಯರ್‌, ವಕೀಲರು, ಲೆಕ್ಕಪರಿಶೋಧಕರಾಗಿರಬಾರದು ಎಂಬ ನಿಯಮ ಇತ್ತು. ಸುಳ್ಳು ಮಾಹಿತಿ ನೀಡಿ ಯೋಜನೆಯ ಸೌಲಭ್ಯ ಪಡೆದಿರುವುದು ಕಂಡುಬಂದರೆ ಸಹಾಯಧನ ವಾಪಸ್‌ ನೀಡುವ ಷರತ್ತಿಗೆ ಬದ್ಧವಾಗಿರುವುದಾಗಿ ರೈತರಿಂದ ಘೋಷಣಾ ಪತ್ರವನ್ನು ಪಡೆಯಲಾಗಿತ್ತು. ಅದರಂತೆ ಹಣ ವಾಪಸ್ ಪಡೆಯಲಾಗುತ್ತಿದೆ.

Leave a Reply

Your email address will not be published. Required fields are marked *