ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಮೇ 22 ಭಾನುವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಇಳಿಕೆಯಾಗಲಿದೆ. ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಲಿದೆ ಎಂದು ಕೇಂದ್ರ ನೇರ ತೆರಿಗೆ ಮತ್ತು ಸುಂಕ ಮಂಡಳಿ ತಿಳಿಸಿದೆ. ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಕಳೆದ ಎಂಟು ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿರುವ ನಡುವೆ, ಗ್ರಾಹಕರಿಗೆ ಕೊಂಚ ನಿರಾಳತೆ ನೀಡುವ ಗುರಿ ಹೊಂದಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲೂ ತೈಲ ಸುಂಕ ಕಡಿಮೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ರಾಜ್ಯದಲ್ಲೂ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಕಡಿತ ಮಾಡುವ ಪರಿಶೀಲನೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರವೂ ತೆರಿಗೆ ಕಡಿತ ಮಾಡುವ ಕುರಿತು ನಿರೀಕ್ಷೆ ಚಿಗುರಿದೆ. ಕರ್ನಾಟಕದ ನೆರೆಯ ರಾಜ್ಯ ಕೇರಳ ಸರ್ಕಾರ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲಿನ ತೆರಿಗೆಯನ್ನು ಲೀಟರ್‌ಗೆ ಕ್ರಮವಾಗಿ ₹ 2.41 ಮತ್ತು ₹ 1.36 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ.
ಕೇಂದ್ರ ಸರ್ಕಾರವು ಇಂಧನದ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ನಂತರ ಇಂತಹ ನಿರ್ಧಾರವನ್ನು ತೆಗೆದುಕೊಂಡ ಮೊದಲ ರಾಜ್ಯವಾಗಿದೆ ಕೇರಳ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿಯೂ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡುವ ನಿರೀಕ್ಷೆ ಜನರಲ್ಲಿ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿತ್ತು.
ಕಳೆದ ನಾಲ್ಕು ವಾರದಿಂದಲೂ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿತ್ತು. ಆದರೆ ಇಂದು ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂಧನ ಬೆಲೆ ಇಳಿಕೆಯಾಗಿದೆ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ ₹ 8 ಮತ್ತು ಡೀಸೆಲ್‌ಗೆ ₹ 6 ರಷ್ಟು ಕಡಿಮೆ ಮಾಡುತ್ತಿದ್ದೇವೆ. ಇದರಿಂದ ಪೆಟ್ರೋಲ್ ದರ ಲೀಟರ್‌ಗೆ ₹9.5 ಮತ್ತು ಡೀಸೆಲ್‌ಗೆ ₹7 ಇಳಿಕೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸುಮಾರು 9 ಕೋಟಿ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ. ಉಕ್ರೇನ್ ಯುದ್ಧದ ಹಿನ್ನೆಲೆ ಜಾಗತಿಕ ಕಚ್ಚಾತೈಲಬೆಲೆ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇದೆ. 100ರ ಗಡಿ ದಾಟಿ ಹೊರಟಿರುವ ಇಂಧನ ಬೆಲೆಗಳು ವಾಹನ ಸವಾರರಿಗೆ ಬರೆ ಎಳೆದಂತಾಗಿದೆ. ಆದರೆ ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ಘೋಷಣೆಯಿಂದ ಸ್ವಲ್ಪ ನಿರಾಳವಾದಂತಾಗಿದೆ.