2023 ರಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ಪಂಚರತ್ನ ಯೋಜನೆ ಜಾರಿಗೆ ತರುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಜೆ.ಡಿ.ಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ ಭವನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಯಾವ ಪಕ್ಷದ ಶಕ್ತಿ ಏನು ಎಂಬುದು ಗೊತ್ತಿದೆ. ನಮ್ಮ ಪಕ್ಷದ ಅಸ್ತಿತ್ವ ಗಟ್ಟಿಯಾಗಿದೆ. ಬಿಜೆಪಿಯವರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದಿದ್ದೇವೆ ಅಂತಿದ್ದಾರೆ. ಜಿಲ್ಲಾ, ತಾಲ್ಲೂಕು ಪಂಚಾಯ್ತಿಗಳಲ್ಲಿ ಗೆದ್ದೇಬಿಡ್ತೇವೆ ಅಂತಿದ್ದಾರೆ. ಆದರೆ, ಅದೆಲ್ಲಾ ಆಗೋದಿಲ್ಲಾ ಎಂದು ಹೇಳಿದರು. ಕೊರೋನಾ ಕಾರಣದಿಂದ ರಾಜ್ಯ ಪ್ರವಾಸ ಸಾಧ್ಯವಾಗಲಿಲ್ಲ. ಇದೇ ತಿಂಗಳ ಕೊನೆಯಲ್ಲಿ ಮೊದಲನೇ ಹಂತದ ಪ್ರವಾಸ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ ಎಂದರು.
ಜೆಪಿ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಪ್ರತಿ ಕುಟುಂಬಕ್ಕೆ ಒಂದು ಸೂರು, ಎಲ್.ಕೆ.ಜಿಯಿಂದ 12 ನೇ ತರಗತಿವರೆಗೆ ಉಚಿತ ಗುಣಮಟ್ಟದ ಶಿಕ್ಷಣ, ರಾಜ್ಯದ ಎಲ್ಲಾ ಜನರಿಗೆ ವಿಶೇಷ ಆರೋಗ್ಯ ಕಾರ್ಯಕ್ರಮ, ರಾಜ್ಯದ ರೈತರ ಅಭಿವೃದ್ಧಿಗೆ ವಿಶೇಷ ಯೋಜನೆ, ಪ್ರತಿ ಯುವಕರಿಗೂ ಉದ್ಯೋಗ ನೀಡುವ ಮಹತ್ವದ ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು. ಒಂದು ವೇಳೆ ನನ್ನ ಅಧಿಕಾರದಲ್ಲಿ ಈ ಯೋಜನೆಗೆಗಳನ್ನ ಜಾರಿಗೆ ತರದೇ ಹೋದರೆ ನನ್ನ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಸವಾಲು ಎಸೆದ ಎಚ್‌ಡಿಕೆ ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮೊದಲ ಪ್ರವಾಸ ಜನವರಿ 29, 30 ರಂದು ಹುಬ್ಬಳ್ಳಿ ಭಾಗದಿಂದ ಪ್ರಾರಂಭ ಮಾಡುವುದಾಗಿ ತಿಳಿಸಿದರು.
ಪಕ್ಷ ಸಂಘನೆಗಾಗಿ ಜೆಡಿಎಸ್ ಸಂಘಟನೆ ಮಾಡಲಾಗುತ್ತಿದೆ. ಹೀಗಾಗಿ ಹೊಸ ತಂಡ ರಚನೆ ಮಾಡುವ ನಿಟ್ಟಿನಲ್ಲಿ ಈಗ ಇರುವ ಎಲ್ಲಾ ಘಟಕಗಳನ್ನ ವಿಸರ್ಜನೆ ಮಾಡಲಾಗಿದೆ. ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮೈಸೂರು ಭಾಗ, ಬೆಂಗಳೂರು ನಗರ, ಕರಾವಳಿ ಭಾಗ, ಕೋಲಾರ, ಚಿಕ್ಕಬಳ್ಳಾಪುರ ಭಾಗ ಸೇರಿ 7 ವಿಭಾಗ ಮಟ್ಟದಲ್ಲಿ ವಿಶೇಷ ಸಮಿತಿ ರಚಿಸಲಾಗುತ್ತದೆ. ಅ ಸಮಿತಿಯು ಪ್ರತಿ ಜಿಲ್ಲೆಗೆ ಪ್ರವಾಸ ಮಾಡಿ ಅಲ್ಲಿನ ನಾಯಕರು, ಕಾರ್ಯಕರ್ತರು ಜೊತೆ ಸಂವಾದ, ಅಭಿಪ್ರಾಯ ನಡೆಸಿ ಸಮಿತಿ ರಚನೆ ಮಾಡಿ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಕೋರ್ ಕಮಿಟಿ ನಿರ್ಧಾರ ಮಾಡಿದೆ. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೂ ಪಕ್ಷ ಸಿದ್ದವಾಗಲಿದೆ ಎಂದು ವಿವರಿಸಿದರು.
ಇನ್ನೂ ಪಂಚರತ್ನ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದ ಕುಮಾರಸ್ವಾಮಿ ತನ್ನ ಯೋಜನೆಗಳನ್ನು ಬೇರೆಯವರು ಹೈಜಾಕ್ ಮಾಡಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಕ್ಷೇತ್ರಗಳ ಜೊತೆಗೆ ಸಾಲ ರಹಿತ ರೈತನ ಬದುಕು ರೂಪಿಸುವುದೇ ನನ್ನ ಪಂಚರತ್ನ ಯೋಜನೆ ಉದ್ದೇಶ. ಮೈತ್ರಿ ಸರ್ಕಾರದ ಹದಿನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ಯೋಜನೆಗಳನ್ನು ಕಾಪಿ ಮಾಡಿಲ್ಲ. ನನ್ನದೇ ಯೋಜನೆಗಳನ್ನು ಕೊಟ್ಟಿದ್ದೇನೆ. ಮೋದಿಯವರ ಆತ್ಮನಿರ್ಭಾರ್ ನನ್ನ ಕಾರ್ಯಕ್ರಮ. ನನ್ನ ಪಕ್ಷಕ್ಕೆ ಅವಕಾಶ ಕೊಟ್ಟರೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ. ಜನರ ಮುಂದೆ ಹೋಗುತ್ತೇವೆ. ಜನರು ಸ್ವೀಕರಿಸುತ್ತಾರೋ ಇಲ್ಲವೋ ನೋಡೋಣ ಎಂದು ಹೇಳಿದ್ದಾರೆ.