Old Age Pay Karnataka Govt: ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ರಾಜ್ಯದ ಜನತೆಗೆ ಅನುಕೂಲ ಆಗುವ ಹಾಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಯುವನಿಧಿ ಯೋಜನೆಯನ್ನು ಕೂಡ ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ. ಈ ವೇಳೆ ಸರ್ಕಾರವು ನಮ್ಮ ರಾಜ್ಯದ ವೃದ್ಧರಿಗೆ ಸಹಾಯ ಆಗುವ ಹಾಗೆ ಹೊಸದೊಂದು ನಿರ್ಧಾರ ಮಾಡಿದೆ.

ವೃದ್ಧರಿಗೆ ನೀಡಲಾಗುವ ವೃದ್ಧಾಪ್ಯ ವೇತನದ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯರ ಸಬಲೀಕರಣ ಇಲಾಖೆ ಆಕ್ಟೊಬರ್ 1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಹೊಸ ಭರವಸೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕಾರ್ಯಕ್ರಮದಲ್ಲಿ ಮಾತನಾಡಿ ಹಿರಿಯರಿಗೆ ಕೊಡುವ ಪೆನ್ಶನ್ ಹಣವನ್ನು ಜಾಸ್ತಿ ಮಾಡಬೇಕು, ಅದರಿಂದ ಅವರೊಡನೆ ಸಹಾಯವಾಗಿ ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಆಗ ಸಿದ್ದರಾಮಯ್ಯ ಅವರು ಮಾತನಾಡಿ, ಮುಂದಿನ ವರ್ಷದ ಬಜೆಟ್ ನಲ್ಲಿ ಹಿರಿಯ ನಾಗರೀಕರ ಪೆನ್ಷನ್ ಹೆಚ್ಚಿಸಲಾಗುತ್ತದೆ ಎಂದು ಹೇಳುವ ಮೂಲಕ ಭರವಸೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯರ ಸಬಲೀಕರಣ ಇಲಾಖೆ ಇಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ನಮ್ಮ ರಾಜ್ಯದಲ್ಲಿ 2011ರ ಸೆನ್ಸಸ್ ಪ್ರಕಾರ 57.91 ಲಕ್ಷ ಹಿರಿಯರು ಇದ್ದಾರೆ, ಅಷ್ಟೇ ಅಲ್ಲದೆ ಸುಮಾರು 2,13,705 ಹಿರಿಯರಿಗೆ ಸೇವಾಸಿಂಧು ಆನ್ಲೈನ್ ಪೋರ್ಟಲ್ ಇಂದ ಐಡೆಂಟಿಟಿ ಕಾರ್ಡ್ ಅನ್ನು ನೀಡಲಾಗಿದೆ. ಒಟ್ಟು 57.91 ಲಕ್ಷ ಹಿರಿಯ ನಾಗರೀಕರಲ್ಲಿ 65 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವವರಿಗೆ ಸಂಧ್ಯಾ ಸುರಕ್ಷಾ ಯೋಜನೆ ಇಂದ 30,27,570 ಜನರಿಗೆ ಪ್ರತಿ ತಿಂಗಳು ₹1200 ರೂಪಾಯಿ ಪೆನ್ಶನ್ ಒದಗಿಸಲಾಗುತ್ತಿದೆ.

ಅಷ್ಟೇ ಅಲ್ಲದೆ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯ ಅಡಿಯಲ್ಲಿ 60 ರಿಂದ 64 ವರ್ಷದ ಒಳಗೆ ಇರುವ 18,90,358 ಜನರಿಗೆ 600 ರೂಪಾಯಿ ಪೆನ್ಷನ್ ನೀಡಲಾಗುತ್ತಿದೆ. ಪೆನ್ಶನ್ ವಿಚಾರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಡಿರುವ ಮನವಿ ಏನು ಎಂದರೆ, 1200 ರೂಪಾಯಿ ಪೆನ್ಶನ್ ಪಡೆಯುತ್ತಿರುವವರಿಗೆ 800 ರೂಪಾಯಿ ಸೇರಿಸಿ, ಪ್ರತಿ ತಿಂಗಳು ₹2000 ರೂಪಾಯಿ ಪೆನ್ಶನ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಹಾಗೆಯೇ ಇಂದಿರಾಗಾಂಧಿ ಯೋಜನೆಯ ಮೂಲಕ 600 ರೂಪಾಯಿ ಪೆನ್ಶನ್ ಪಡೆಯುತ್ತಿರುವವರಿಗೆ ಇನ್ನು 600 ರೂಪಾಯಿ ಸೇರಿಸಿ ಒಟ್ಟು ₹1200 ರೂಪಾಯಿ ಪೆನ್ಶನ್ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದು ಸಿದ್ದರಾಮಯ್ಯ ಅವರು ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಎರಡು ಯೋಜನೆಗಳ ಮೂಲಕ ನೀಡುವ ಪೆನ್ಶನ್ ಮೊತ್ತವನ್ನು ಹೆಚ್ಚಿಸುವುದು ಮಾತ್ರವಲ್ಲ, ಇನ್ನು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.

ನಮ್ಮ ರಾಜ್ಯದ ಒಟ್ಟು 24 ಜಿಲ್ಲೆಗಳಲ್ಲಿ 25 ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರವನ್ನು ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ..ಹಾಗೆಯೇ ಬಡತನದಲ್ಲಿ ಇರುವ ವೃದ್ಧರಿಗಾಗಿ 80 ವೃದ್ಧಾಶ್ರಮವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಹಿರಿಯರಿಗೆ 10 ಹಾಸಿಗೆಗಳನ್ನು ಮೀಸಲಾಗಿ ಇಡಬೇಕು ಎಂದು ತಿಳಿಸಿದ್ದಾರೆ. ಎಲ್ಲಾ ಹಿರಿಯ ನಾಗರೀಕರು ಈ ಸೌಲಭ್ಯ ಪಡೆಯಬಹುದು.

Leave a Reply

Your email address will not be published. Required fields are marked *