ಭಾರತ ಒಂದು ಪುರಾತನ ನಂಬಿಕೆ ಹಾಗೂ ವಿವಿಧ ಹಬ್ಬಗಳ ಬೀಡು. ತಿಂಗಳಿಗೆ ಒಂದು ಎರಡು ಹಬ್ಬಗಳು ಇದ್ದೆ ಇರುತ್ತದೆ. ಹೀಗೆ ನಡೆಯುವ ಹಬ್ಬಗಳ ಹಿಂದೆ ಒಂದೊಂದು ಕಥೆ ಹಾಗೂ ಪ್ರತೀತಿ ಇದೆ. ಹಬ್ಬಗಳ ವಿಶೇಷತೆ ಇದೆ. ದೀಪಾವಳಿಯ ದೀಪ ಬೆಳಗುವುದು, ನವರಾತ್ರಿಯಲ್ಲಿ ದಸರಾದಲ್ಲಿ ರಾವಣ ದಹನ, ದುರ್ಗಾ ವಿಸರ್ಜನೆ, ದೇವಿಯ ಒಂಭತ್ತು ದಿನಗಳು ಪೂಜೆ ಪುನಸ್ಕಾರ ಎಲ್ಲ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ವಿಶೇಷ ಹಬ್ಬಗಳಲ್ಲಿ ದಸರಾ ಕೂಡ ಒಂದು. ಹೀಗೆ ದಸರಾ ಹಬ್ಬ ಬಂದಾಗ ನೆನಪಾಗುವುದು ಮೈಸೂರಿನ ಅಂಬಾರಿ ಮೆರವಣಿಗೆ. ಈ ಅಂಬಾರಿಯ ಹಿಂದೆ ಒಂದು ಕಥೆ ಇದೆ ಅದೆನೆಂದು ನಾವು ತಿಳಿಯೋಣ.
ದಸರಾ ಎಂದಾಗ ಮೈಸೂರಿನ ಅರಮನೆ, ಅಂಬಾರಿ, ಆನೆಗಳು, ವಿವಿಧ ಮನರಂಜನಾ ಕಾರ್ಯಕ್ರಮಗಳು, ಪ್ರತಿಭಾ ಪ್ರದರ್ಶನ ಹೀಗೆ ತುಂಬಾ ನೆನಪಾಗುತ್ತದೆ. ಈ ಅಂಬಾರಿಯ ಮೂಲ ಏನು, ಇದರ ಇತಿಹಾಸ ನೋಡೊಣ. ಜಂಬೂ ಸವಾರಿಯ ಕೇಂದ್ರಬಿಂದು ಅಂಬಾರಿ ಮೆರವಣಿಗೆ. ಅಂಬಾರಿಯ ಮೇಲೆ ವಿರಾಜಮಾನಿಸುವ ತಾಯಿ ಚಾಮುಂಡೇಶ್ವರಿ ನೋಡಲು ಮನಮೋಹಕ ದೃಶ್ಯ. ಈ ಅಂಬಾರಿಯ ದರ್ಶನ ಮಾಡಲು ಸ್ವಲ್ಪವೂ ಜಾಗವಿಲ್ಲದಂತೆ ಜನಸಾಗರ ಸೇರುತ್ತದೆ. ಮೈಸೂರು ದಸರಾ ಹಬ್ಬವನ್ನು ಕಣ್ತುಂಬಿಸಿಕೊಳ್ಳಲು ದೇಶದಿಂದ ಅಷ್ಟೇ ಅಲ್ಲದೇ ವಿದೇಶಗಳಿಂದ ಕೂಡ ಬರುತ್ತಾರೆ. ಬಲರಾಮ ಆನೆ ಅಂಬಾರಿಯೊಂದಿಗೆ ತಾಯಿ ಚಾಮುಂಡೇಶ್ವರಿ ಅಮ್ಮನನ್ನು ಬನ್ನಿ ಮರದತ್ತ ಕರೆದೊಯ್ಯುತ್ತಾನೆ. ತಾಯಿ ಚಾಮುಂಡೇಶ್ವರಿಯ ಅಂಬಾರಿ ಬರೊಬ್ಬರಿ 750 ಕೆಜಿ ತೂಕ ಹೊಂದಿದೆ. ಅತ್ಯಂತ ಬೆಲೆ ಬಾಳುವ ರತ್ನಖಚಿತ ಅಂಬಾರಿಯಾಗಿದೆ. ಕೊಪ್ಪಳದ ಕುಮ್ಮಟ ದುರ್ಗಕ್ಕೂ ಈ ಅಂಬಾರಿ ಸಂಬಂಧಿಸಿದೆ. 14 ನೆ ಶತಮಾನದಲ್ಲಿ ಕಂಪಿಲರಾಯನ ಕುಮ್ಮಟ ದುರ್ಗದಲ್ಲಿ ಈ ಅಂಬಾರಿ ಇತ್ತು ಎಂದು ಇತಿಹಾಸ ಹೇಳುತ್ತದೆ. ಅಂಬಾರಿ ಮಹಾರಾಷ್ಟ್ರದ ದೇವಗಿರಿ ಎಂಬಲ್ಲಿ ಇತ್ತು. ದೇವಗಿರಿಯ ರಾಜ ಮಮ್ಮಡಿ ಸಿಂಗ್ ನಾಯಕ ಎನ್ನುವವನಿಗೆ ದೇವಗಿರಿ ನಾಶವಾದಾಗ ಇದನ್ನು ರಕ್ಷಿಸುವ ಹೊಣೆ ನೀಡಲಾಯಿತು. ಬಳ್ಳಾರಿ ರಾಮದುರ್ಗ ಕೋಟೆಯಲ್ಲಿ ಈ ಅಂಬಾರಿಯನ್ನು ಮಮ್ಮಡಿ ಸಿಂಗ್ ನಾಯಕ್ ಮುಚ್ಚಿಡುತ್ತಾನೆ.
ಮಮ್ಮಡಿ ಸಿಂಗ್ ನಾಯಕ್ ನ ಮಗ ಕಂಪಿಲರಾಯ ರಾಜ್ಯ ವಿಸ್ತರಿಸುತ್ತಾ ಹೋಗುತ್ತಾನೆ. ರಾಜಧಾನಿಯಾಗಿ ಕಮ್ಮಟದುರ್ಗವನ್ನು ಆರಿಸುತ್ತಾನೆ. ಕಂಪಿಲರಾಯ ದುರ್ಗಾದೇವಿಯ ಪ್ರತಿಷ್ಠಾಪನೆ ನಡೆಸಿ ಪೂಜಿಸುತ್ತಾನೆ. ಈ ದುರ್ಗಾ ಪೂಜೆಯ ಪ್ರತೀತಿ ಪಿಳಿಗೆಯಿಂದ ಪೀಳಿಗೆಗೂ ಬರುತ್ತದೆ. ದೆಹಲಿ ಸುಲ್ತಾನರ ದಾಳಿ ನಡೆದ ವರ್ಷ 1327 ರಲ್ಲಿ ಕಂಪಿಲ ರಾಜ್ಯ ನಾಶವಾಗುತ್ತದೆ. ಕಂಪಿಲ ರಾಜ್ಯದ ಸಂಪತ್ತು ರಕ್ಷಕರಾಗಿದ್ದ ಹಕ್ಕ ಮತ್ತು ಬುಕ್ಕರು ಹುತ್ತವೊಂದರಲ್ಲಿ ಅಂಬಾರಿಯನ್ನು ಮುಚ್ಚಿಡುತ್ತಾರೆ.
1336 ರ ಸಮಯದಲ್ಲಿ ದೆಹಲಿ ಸುಲ್ತಾನರಿಂದ ನಾಶವಾದ ರಾಜ್ಯವನ್ನು ವಿದ್ಯಾರಣ್ಯರ ಆಶಿರ್ವಾದ ಪಡೆದು ಹಕ್ಕ ಬುಕ್ಕರು ಮತ್ತೆ ಕಟ್ಟುತ್ತಾರೆ. ಹಂಪಿಯ ಬಳಿ ಇರುವ ಆನೆಗುಂಡಿಯಲ್ಲಿ ವಿಜಯನಗರದ ಸ್ಥಾಪನೆ ಆಗುತ್ತದೆ. ವಿಜಯನಗರದ ಮೊದಲ ರಾಜಧಾನಿ ಆನೆಗುಂಡಿ. ನಂತರ ಹಂಪಿಯನ್ನು ಎರಡನೆಯ ರಾಜಧಾನಿಯಾಗಿ ಹಕ್ಕ ಬುಕ್ಕರು ಆರಿಸಿಕೊಂಡರು. ನಂತರ ಹುತ್ತದಲ್ಲಿ ಮುಚ್ಚಿಟ್ಟ ಅಂಬಾರಿಯ ಸ್ಥಳಾಂತರ ಮಾಡುತ್ತಾರೆ. ಇವರ ನಂತರ ಸಂಗಮ, ಸಾಳವ, ತುಳು ಹಾಗೂ ಅರವೀಡು ಎಂಬ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯವನ್ನು ಆಳುತ್ತದೆ. ಕೊನೆಯ ವಂಶವೂ ಅವನತಿಯ ಹಂತದಲ್ಲಿ ಇದ್ದಾಗ ಆಂಧ್ರಪ್ರದೇಶದ ಪೆನುಗೊಂಡ ಎಂಬಲ್ಲಿ ಅಂಬಾರಿ ಸ್ಥಳಾಂತರಗೊಳ್ಳುತ್ತದೆ. ಕೆಲವು ವರ್ಷಗಳ ನಂತರ ಶ್ರೀರಂಗಪಟ್ಟಣ ಹಾಗೂ ಕೊನೆಯಲ್ಲಿ ಮೈಸೂರಿನ ಅರಮನೆಗೆ ಅಂಬಾರಿ ತಲುಪುತ್ತದೆ. ಹೀಗೆ ಮೈಸೂರು ಸಂಸ್ಥಾನ ಸೇರಿದ ಅಂಬಾರಿ ಪ್ರತಿ ವಿಜಯದಶಮಿಯಂದು ಅಂಬಾರಿಯ ದರ್ಶನ ಸಿಗುತ್ತದೆ. ಅಂಬಾರಿ ಹೊತ್ತು ನಡೆಯುವ ಜಂಬೂ ಸವಾರಿಯೂ ಆಕರ್ಷಣೀಯವಾಗಿರುತ್ತದೆ. ವಿಜಯದಶಮಿಯ ಕುಂಬಲಗ್ನದಲ್ಲಿ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಜಂಬೂ ಸವಾರಿ ಪ್ರಾರಂಭವಾಗುತ್ತದೆ. ಆನೆಯ ಮೇಲೆ ಅಂಬಾರಿಯ ಒಳಗೆ ರಾರಾಜಿಸುವ ಅಮ್ಮನವರಿಗೆ ಪುಷ್ಪಾರ್ಚನೆ ನಡೆಯುತ್ತದೆ. ಅರಮನೆಯ ಆವರಣದಿಂದ ಬನ್ನಿ ಮಂಟಪದ ವರೆಗೂ ಜಂಬೂಸವಾರಿ ನಡೆಯುತ್ತದೆ. ಜಂಬೂ ಸವಾರಿಯ ಜೊತೆ ಪೋಲಿಸ್ ಬ್ಯಾಂಡ್, ಕಂಸಾಳೆ ಕುಣಿತ, ಸಂಗೀತ, ಹಲವಾರು ವಿವಿಧ ಆಕರ್ಷಣೆಗಳು ಕಾಣಸಿಗುತ್ತದೆ. ಬಲರಾಮ ಮುಖ್ಯಸ್ಥನಾದರೆ ಅರ್ಜುನ, ಮೇರಿ, ಸೀತಾ, ಅಭಿಮನ್ಯು, ಶ್ರೀರಾಮ, ಹರ್ಷ,ವಿಕ್ರಮ, ಸರಳ, ಗಜೇಂದ್ರ, ಕವಿತಾ, ವರಲಕ್ಷ್ಮಿ, ಕಾಂತಿ ಸೇರಿ ಹನ್ನೆರಡು ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತವೆ. ನಾಗರಹೊಳೆಯ ಬಲರಾಮ ನೇತೃತ್ವದಲ್ಲಿ ಆರು ಆನೆಗಳ ಪಯಣ ಜಂಬೂ ಸವಾರಿಗೆ ಒಂದೂ ವರೆ ತಿಂಗಳಿರುವಾಗಲೆ ಮೈಸೂರಿಗೆ ಬರುತ್ತದೆ.
ಅಂಬಾರಿಯ ಸುತ್ತಲೂ ಅನೇಕ ಸ್ವಾರಸ್ಯಕರ ಘಟನೆಗಳು ಇವೆ. ಇನ್ನೂ ಮೈಸೂರಿನ ನಾಡಹಬ್ಬ ದಸರಾ ಕಣ್ತುಂಬಿಸಿಕೊಳ್ಳಲು ಅದಷ್ಟು ಪುಣ್ಯ ಮಾಡಿರಬೇಕೆನೊ ಅಂತಹ ಮನೊಹರ ದೃಶ್ಯ ಅಲ್ಲಿ ನಿರ್ಮಾಣ ಅಗಿರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಜಂಬೂ ಸವಾರಿಯ ದರ್ಶನ ಮಾಡಲೆಬೇಕು.