ಹಿಂದೆ ತ್ರೇತಾಯುಗದಲ್ಲಿ ಶ್ರವಣಕುಮಾರ ಎಂಬ ಹೆಸರಿನ ಮುನಿ ಪುತ್ರನಿದ್ದ. ಅವನು ತನ್ನ ತಂದೆತಾಯಿಗಳಿಗೆ ಮುಪ್ಪಿನಲ್ಲಿ ಜನಿಸಿದ ಮಗ. ಶ್ರವಣಕುಮಾರನ ತಂದೆ ತಾಯಿ ಇಬ್ಬರೂ ಹುಟ್ಟುಕುರುಡರು ಹಾಗೂ ವಯೋವೃದ್ಧರು. ಶ್ರವಣಕುಮಾರನೆ ಅವರಿಬ್ಬರಿಗೂ ಸರ್ವಸ್ವವಾಗಿದ್ದು, ಅವರಿಗೆ ಏನೇ ಬೇಕಿದ್ದರೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿತ್ತು. ಹಾಗಾಗಿ ಶರಣಕುಮಾರ ಎಲ್ಲಿಗೂ ಹೋಗದೆ ತನ್ನ ತಂದೆ-ತಾಯಿಗಳ ಸೇವೆಯನ್ನು ಮಾಡಿಕೊಂಡು , ತಂದೆ ತಾಯಿಯರ ಸೇವೆ ದೇವರ ಸೇವೆ , ತನ್ನ ಬಾಳಿನ ಗುರಿ ಎಂದು ಭಾವಿಸಿದ್ದ. ಆದರೆ ಈಗ ಕಲಿಯುಗದಲ್ಲಿ ವಯಸ್ಸಾದ ತಂದೆ ತಾಯಿಯರನ್ನು ನೋಡಿಕೊಳ್ಳಲು ಆಗದೇ ಅನಾಥಾಶ್ರಮ , ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು ಇರುವಾಗ ಇಲ್ಲೊಬ್ಬ ವ್ಯಕ್ತಿ ಹುಡುಗಿಯೊಂದಿಗೆ ಸುತ್ತಾಡುವ ವಯಸ್ಸಲ್ಲಿ ತನ್ನ ತಾಯಿಯನ್ನು ಕರೆದುಕೊಂಡು ಹಿಮಾಲಯ ಟ್ರಿಪ್ ಮಾಡಿಸಿಕೊಂಡು ಬಂದಿದ್ದಾನೆ ಕಲಿಯುಗದ ಶ್ರವಣ ಕುಮಾರ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
14 ವಯಸ್ಸು ಆಗುತ್ತಿದ್ದಂತೆ ಬಹುತೇಕರು ಹುಡುಗ-ಹುಡುಗಿಯರ ಬಗ್ಗೆ ಆಕರ್ಷಣೆಗೆ ಒಳಗಾಗುತ್ತಾರೆ. ಕೆಲವರು ಇದರ ಬಗ್ಗೆ ಅಷ್ಟು ಸೀರಿಯಸ್ ಆಗಿ ಯೋಚಿಸದಿದ್ದರೂ, ಮತ್ತೆ ಕೆಲವರು ಬಹಳ ತಲೆ ಕೆಡಿಸಿಕೊಳ್ಳುವುದು ಉಂಟು. ಈ ಲವ್ ವಿಚಾರದಲ್ಲಿ ಎಷ್ಟೋ ಮಕ್ಕಳು ತಂದೆ-ತಾಯಿಯನ್ನು ಎದುರು ಹಾಕಿಕೊಂಡಿರುವುದುಂಟು. ಸಹವಾಸ ದೋಷದಿಂದಲೋ, ವಯಸ್ಸಿನ ಕಾರಣದಿಂದಲೋ ತಂದೆ-ತಾಯಿಯನ್ನು ಕಡೆಗಣಿಸುವ ಮಕ್ಕಳ ನಡುವೆ ಅಲ್ಲೋ ಇಲ್ಲೋ ಒಬ್ಬರು ಎಂಬಂತೆ ಹೆತ್ತವರನ್ನು ದೇವರಿಗಿಂತ ಹೆಚ್ಚಾಗಿ ಪೂಜಿಸುವ ಮಕ್ಕಳು ಇರುತ್ತಾರೆ. ತಂದೆ-ತಾಯಿ ಇಷ್ಟು ವರ್ಷ ಒಳ್ಳೆ ಬುದ್ಧಿ ಹೇಳಿ, ವಿದ್ಯಾಭ್ಯಾಸ ಕೊಡಿಸಿ, ಕೆಲಸ ಪಡೆಯುವ ಮಟ್ಟಿಗೆ ನಮ್ಮನ್ನು ನೋಡಿಕೊಂಡಿದ್ದಾರೆ. ಅವರ ವೃದ್ಧಾಪ್ಯದಲ್ಲಿ ನಾವು ಅವರನ್ನು ನೋಡಿಕೊಳ್ಳೋಣ ಎಂದು ಯೋಚಿಸುವ ಮಕ್ಕಳು ಬಹಳ ಕಡಿಮೆ. ಅಂತದ್ದರಲ್ಲಿ ಹುಡುಗಿಯ ಜೊತೆ ಸುತ್ತಾಡುವ ವಯಸ್ಸಲ್ಲಿ ಹೆತ್ತ ತಾಯಿಯನ್ನು ಆಕೆ ಇಷ್ಟಪಟ್ಟ ಸ್ಥಳಗಳಿಗೆ ಕರೆದುಕೊಂಡು ಹೋಗುವ ಮಕ್ಕಳು ಇರುವುದು ಕೋಟಿಗೊಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತಾಗಿ ಒಂದಿಷ್ಟು ಫೋಟೋ ಹರಿದಾಡುತ್ತಿರುವುದನ್ನು ನೋಡಿರಬಹುದು. ಈ ಫೋಟೋಗಳು ಬಹಳ ವೈರಲ್ ಆಗುತ್ತಿದೆ. ಆದರೆ ಇದು 2 ವರ್ಷಗಳ ಹಿಂದಿನ ಫೋಟೋಗಳು.
ಶರತ್ ಕೃಷ್ಣನ್ ಹಾಗೂ ಅವರ ತಾಯಿ ಗೀತಾ ರಾಮಚಂದ್ರನ್. ಕೇರಳ ರಾಜ್ಯದ ತ್ರಿಸೂರ್ ನಗರವಾಸಿಗಳು. ಶರತ್ ಕೃಷ್ಣನ್ ಸ್ವಂತ ಬ್ಯುಸ್ನೆಸ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಐಎಎಸ್ ಅಕಾಡೆಮಿ ನಡೆಸುತ್ತಿದ್ದರು. 50 ದಾಟಿದ ಮೇಲೆ ಸಾಮಾನ್ಯವಾಗಿ ಹಿರಿಯರಿಗೆ ಯಾತ್ರಾ ಸ್ಥಳಗಳನ್ನು ನೋಡುವ ಆಸೆ ಇರುತ್ತದೆ. ಇದಕ್ಕೂ ಮುನ್ನ ಗೀತಾ ಅವರು ಹೃಷಿಕೇಶ, ಶಿರಡಿ ಹಾಗೂ ಇನ್ನಿತರ ಸ್ಥಳಗಳನ್ನು ನೋಡಿದ್ದರು. ಮಗನ ಬಳಿ ಆಗಾಗ ತಾವು ಲಡಾಕ್, ಶಿಮ್ಲಾ, ಮನಾಲಿಯಂತ ಸ್ಥಳಗಳನ್ನು ನೋಡಬೇಕು ಎಂದು ಹೇಳಿಕೊಳ್ಳುತ್ತಿದ್ದರಂತೆ. ಆದರೆ ಅಲ್ಲಿಗೆ ಹೋಗಲು ಹೆಚ್ಚು ಹಣ ಖರ್ಚಾಗುವ ಕಾರಣ ಅದರ ಬಗ್ಗೆ ಹೆಚ್ಚು ಯೋಚಿಸದೆ ಸುಮ್ಮನಾಗಿದ್ದಾರೆ. 14 ಫೆಬ್ರವರಿ 2018 ರಂದು ವಿಚಿತ್ರ ಎಂಬಂತೆ ಶರತ್‍ಗೆ ತನ್ನ ತಾಯಿಯ ಕೈಯ್ಯನ್ನು ಹಿಡಿದು ಗಂಗಾನದಿಯ ದಡದಲ್ಲಿ ಓಡಾಡುತ್ತಿದ್ದ ಕನಸು ಬಿತ್ತಂತೆ. ಕೂಡಲೇ ಎಚ್ಚರಗೊಂಡ ಶರತ್ ತಾನೇಕೆ ಅಮ್ಮನನ್ನು ಅವಳಿಷ್ಟವಾದ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು ಎಂದು ಯೋಚಿಸಿದ್ದಾರೆ. ಸ್ವಲ್ಪವೂ ತಡ ಮಾಡದೆ ಸ್ನೇಹಿತರ ಟ್ರಾವೆಲ್ ಏಜೆನ್ಸಿ ಮೂಲಕ ಮೂರು ದಿನಗಳ ಟ್ರಿಪ್ ಪ್ಲ್ಯಾನ್ ಮಾಡಿದ್ದಾರೆ. ಟ್ರಿಪ್ ದಿನಾಂಕವನ್ನು ಫಿಕ್ಸ್ ಮಾಡಿ ಅಮ್ಮನ ಬಳಿ ಬಂದು ಬಟ್ಟೆ, ಸಾಮಾನುಗಳನ್ನು ಪ್ಯಾಕ್ ಮಾಡಿಕೊಳ್ಳಲು ಹೇಳಿದ್ದಾರೆ. ಅಮ್ಮನಿಗೆ ಆಶ್ಚರ್ಯವಾದರೂ ಮಗ ತನ್ನ ಮೇಲೆ ಇಷ್ಟು ಪ್ರೀತಿ ತೋರುತ್ತಿದ್ದಾನೆ ಎಂದು ಟ್ರಿಪ್‍ಗೆ ಖುಷಿಯಿಂದ ಒಪ್ಪಿಕೊಂಡು ಮಗನೊಂದಿಗೆ ಹೊರಟಿದ್ದಾರೆ. ಆದರೆ ಮೂರು ದಿನಗಳು ಹಾಗೂ ಮೂರು ಸ್ಥಳಗಳು ಎಂದು ಹೋಗಿದ್ದು 11 ದಿನಗಳ ಕಾಲ ಇನ್ನಿತರ ಸ್ಥಳಗಳನ್ನು ನೋಡಿಕೊಂಡು ಮನೆಗೆ ವಾಪಸಾಗಿದ್ದಾರೆ. ಶರತ್ ಟ್ರೈನ್, ಬಸ್, ಕಾರಿನ ಮೂಲಕ ಅಮ್ಮನನ್ನು ಸುತ್ತಾಡಿಸಿದ್ದಾರೆ.
ಕೆಲವೊಂದು ಸ್ಥಳಗಳಲ್ಲಿ ಬಾಡಿಗೆ ಬೈಕ್ ಪಡೆದು ಅಮ್ಮನನ್ನು ಹಿಂಬದಿ ಕೂರಿಸಿಕೊಂಡು ಪ್ರಕೃತಿಯ ಸೌಂದರ್ಯವನ್ನು ತೋರಿಸಿದ್ದಾರೆ. ನನ್ನ ಅಮ್ಮನಿಗೆ 60 ವರ್ಷ ವಯಸ್ಸು. ಫ್ರಿಡ್ಜ್‍ನಲ್ಲಿ ಮಾತ್ರ ಐಸ್ ನೋಡಿದ್ದ ಅಮ್ಮನನ್ನು ಹಿಮ ಬೀಳುವ ಜಾಗಕ್ಕೆ ಕರೆದೊಯ್ದಾಗ ಅವರು ನನ್ನ ಮೇಲೆ ಐಸ್ ಎಸೆದು 18 ವರ್ಷ ಹುಡುಗಿಯಂತೆ ಖುಷಿ ಪಡುತ್ತಿದ್ದರು. ಅಮ್ಮನನ್ನು ನೋಡಿ ನನಗೂ ಖುಷಿಯಾಗುತ್ತಿತ್ತು. ಅಮ್ಮನಿಗೆ ಮಧುಮೇಹ, ಬೆನ್ನುನೋವು ಸೇರಿದಂತೆ ವಯೋಸಹಜ ಆರೋಗ್ಯ ಸಮಸ್ಯೆಗಳಿವೆ. ಆದರೆ ಈ ಪ್ರವಾಸದಲ್ಲಿ ಅವರು ಸ್ವಲ್ಪವೂ ಸುಸ್ತಾಗಲಿಲ್ಲ. ಅವರನ್ನು ಲೇಹ್ ಲಡಾಕ್‍ಗೆ ಕರೆದೊಯ್ಯವ ಆಸೆ ಇತ್ತು. ಆದರೆ ಅಲ್ಲಿ ರಸ್ತೆ ಸರಿ ಇಲ್ಲ. ಆ ಜಾಗ ಸ್ವಲ್ಪ ಅಪಾಯಕಾರಿಯಾಗಿದ್ದರಿಂದ ಅಲ್ಲಿಗೆ ಹೋಗುವ ಪ್ಲ್ಯಾನ್ ಕ್ಯಾನ್ಸಲ್ ಮಾಡಬೇಕಾಯ್ತು ಎನ್ನುತ್ತಾರೆ ಶರತ್ ಕೃಷ್ಣನ್. ಅಮ್ಮನ ಲಿಸ್ಟ್ ನಲ್ಲಿ ಇನ್ನೂ ಕೆಲವು ಜಾಗಗಳಿವೆ. ಅವರು ಇಷ್ಟಪಟ್ಟ ಸ್ಥಳಗಳಿಗೆ ಕರೆದೊಯ್ಯಲು ನಾನು ರೆಡಿ ಎನ್ನುತ್ತಾರೆ ಈ ಅಪರೂಪದ ಮಗ. ಶರತ್ ಕೃಷ್ಣನ್, ಫೋಟೋಗಳೊಂದಿಗೆ ತಮ್ಮ ಟ್ರಿಪ್ ಬಗ್ಗೆ ಬ್ಲಾಗ್‍ನಲ್ಲಿ ಬರೆದಿದ್ದೇ ತಡ ಈ ಫೋಟೋಗಳು ಬಹಳ ವೈರಲ್ ಆಗಿದೆ. ನಮ್ಮ ಫೋಟೋಗಳು ಈ ರೀತಿ ವೈರಲ್ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ ಎನ್ನುತ್ತಾರೆ ಶರತ್. ಒಟ್ಟಿನಲ್ಲಿ ಹುಡುಗಿಗಾಗಿ, ಕಟ್ಟಿಕೊಂಡವಳ ಮಾತು ಕೇಳಿ ಹೆತ್ತವರನ್ನು ಕಸಕ್ಕಿಂತ ಕಡೆಯಾಗಿ ಕಾಣುವ ಮಕ್ಕಳ ನಡುವೆ ಶರತ್ ಕೃಷ್ಣನ್ ನಿಜಕ್ಕೂ ಮತ್ತಿನಂಥ ಮಗ ಎಂದೇ ಹೇಳಬೇಕು. ಆಧುನಿಕ ಶ್ರವಣ ಕುಮಾರ ಎಂದರೂ ತಪ್ಪಿಲ್ಲ.