ಇಡೀ ಚಿತ್ರರಂಗ ಅಪ್ಪು ಅವರ ಅಂತಿಮ ದರ್ಶನ ಪಡೆದ್ರು, ನಾನು ಮಾತ್ರ, ಕೊನೆ ಬಾರಿ ಅಪ್ಪು ಮುಖ ನೋಡಿಲ್ಲ ಯಾಕೆ ಗೊತ್ತಾ? ಮಂಡ್ಯ ರಮೇಶ್ ಭಾವುಕ ಮಾತು

0 5

ಸ್ಯಾಂಡಲ್‌ವುಡ್‌ನಲ್ಲಿ ಹೈವೋಲ್ಟೇಜ್ ಕರೆಂಟ್ ಆಗಿದ್ದವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ, ಎಲ್ಲರಿಂದ ಪ್ರೀತಿಯಿಂದ ಅಪ್ಪು ಅಂತ ಕರೆಯಿಸಿಕೊಳ್ಳುತ್ತಿದ್ದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ಇಂದು ನಮ್ಮೊಂದಿಗಿಲ್ಲ. ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ ಎಂದರೆ ತಪ್ಪಲ್ಲ. ಅವರು ಇಲ್ಲ ಎನ್ನುವ ಸುದ್ದಿ ಬಂದಾಗಿನಿಂದಲೂ ಅವರ ಬಗ್ಗೆ ಒಂದೆಲ್ಲ ಒಂದು ವಿಚಾರಗಳು ಹೊರಬರುತ್ತಿವೆ. ಅವರ ಸಾಮಾಜಿಕ ಕೆಲಸಗಳು, ಅವರು ಅಭಿಮಾನಿಗಳ ಜೊತೆ ಇರುತ್ತಿದ್ದ ರೀತಿ ಎಲ್ಲವೂ ಮಾದರಿ. ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಇಡೀ ಜಗತ್ತೇ ಮಾತಾಡಿದೆ. ಬೇರೆ ದೇಶದ ಸುದ್ದಿ ಮಾಧ್ಯಮಗಳು ಅಪ್ಪುಗೆ ನಮನ ಸಲ್ಲಿಸಿವೆ. ಅಪ್ಪು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಪುನೀತ್ ರಾಜಕುಮಾರ್ ಅವರ ಒಡನಾಟದಲ್ಲಿ ಇದ್ದವರಿಗಂತು ಅವರ ಸಾವು ನುಂಗಲಾರದ ತುತ್ತು.

ಸರಳ ಸಜ್ಜನಿಕೆಯ ಪುನೀತ್ ಅಗಲಿಕೆ ನುಂಗಲಾರದ ತುತ್ತು. ಇಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ ನೂರ್ಕಾಲ ಬದುಕಬೇಕಾಗಿತ್ತು. ಪುನೀತ್ ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದು ಮಂಡ್ಯ ರಮೇಶ್ ಅವರು ಸಂತಾಪ ಸೂಚಿಸಿದ್ದರು. ಮಂಡ್ಯ ರಮೇಶ್ ಅವರು ಪುನೀತ್ ರಾಜಕುಮಾರ್ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅವರ ಅಗಲಿಕೆಯ ನೋವಲ್ಲಿ ಭಾವನಾತ್ಮಕ ಮಾತುಗಳನ್ನ ಆಡಿದ್ದಾರೆ. ಅವರಿಗೆ ಅಪ್ಪು ಅಗಲಿಕೆಯ ವಿಷಯ ತಿಳಿದಾಗ ಆದ ಸಂಕಟ, ಅವರ ಜೊತೆ ತಾವು ಕಳೆದ ಕ್ಷಣಗಳು ಎಲ್ಲದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಮಂಡ್ಯ ರಮೇಶ್ ರಂಗಭೂಮಿ ತಜ್ಞರಾಗಿ ಪ್ರಖ್ಯಾತ ನಟನ ತಂಡದ ಸಂಸ್ಥಾಪಕರಾಗಿ, ಚಲನಚಿತ್ರ ರಂಗದಲ್ಲಿ ನೂರಾರು ಚಿತ್ರಗಳ ಯಶಸ್ವೀ ಕಲಾವಿದರಾಗಿ ಹೀಗೆ ಮಹತ್ವದ ಸಾಧನೆಗಳ ಕ್ರಿಯಾಶೀಲ ಕಲಾವಿದರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನಿತರಾಗಿದ್ದರು. ಪ್ರಸ್ತುತ ಮಜಾಟಾಕೀಸ್ ನಲ್ಲಿ ಹಾಸ್ಯನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಂಡ್ಯ ರಮೇಶ್ ಅವರು ಪುನೀತ್ ರಾಜ್‌ಕುಮಾರ್ ಜೊತೆಗಿನ ಒಡನಾಟ, ವ್ಯಕ್ತಿತ್ವದ ಬಗ್ಗೆ ಆಡಿದ ಮಾತುಗಳ ಬರಹ ಇಲ್ಲಿದೆ. ಮಂಡ್ಯ ರಮೇಶ್ ಮಾತುಗಳು ಆಗ 11.30. ನಟನದಲ್ಲಿ ಗೆಳೆಯ ಶಕೀಲರ ‘ಆಂಗಿಕಂ’ ಶಿಬಿರಕ್ಕೆ ಚಾಲನೆ ಕೊಡುತ್ತಾ ನಟರು ಸಂದರ್ಭಗಳನ್ನು ನಿಭಾಯಿಸುವ ಕುರಿತು ಆರಂಭದ ಮಾತುಗಳನ್ನಾಡಿ, ಆಗಷ್ಟೇ ಹೊರಬಂದಿದ್ದೆ. ಪತ್ನಿ ಸರೋಜ ಈ ಪ್ಲಂಬರ್ ಮಾಡಿದ ಎಡವಟ್ಟಿಗೆ ತೀರಾ ಉದ್ವೇಗಕ್ಕೆ ಒಳಗಾಗಿದ್ದಳು. ಸಮಾಧಾನಿಸಲು ಯತ್ನಿಸುತ್ತಿದ್ದೆ. ಬೆಂಗಳೂರಿನಿಂದ ಮಗಳು ಅಪ್ಪಾ, ಚಿತ್ರೀಕರಣ ನಿಲ್ಲಿಸಿದ್ದೇವೆ. ಕೆಟ್ಟ ಸುದ್ದಿ ಇದೆ, ಸತ್ಯ ಹೇಳು ಅಂದಳು. ಪೋನಾಯಿಸಿದೆ, ಮಾತನಾಡಿದವರೆಲ್ಲಾ ಖಚಿತಪಡಿಸಿದರು, ಸ್ತಂಭಿತನಾದೆ, ಮುಖ ನಿರ್ಭಾವದಿಂದ ಪೇಲವವಾಗಿದೆ. ಅರಿವಿಲ್ಲದೆ ಕಣ್ಣಿನಿಂದ ನೀರು ತನಗೆ ತಾನೇ ಹರಿಯುತ್ತಲೇ ಇದೆ. ಪತ್ನಿ ಸರೋಜಳಿಗೆ ವಿಷಯ ಹೇಳಿದೆ, ದಂಗಾದಳು. ಅಯ್ಯೋ ಇದು ತೀರಾ ಅನ್ಯಾಯ ಅಂದಳು. ಅವಳ ಟೆನ್ಶನ್ ಬದಲಿಸಿತು. ಈ ಆಘಾತದ ಮುಂದೆ ನಮ್ಮದು ಸಮಸ್ಯೆಯೇ ಅಲ್ಲ ಅನಿಸಿತು.

ಪೋನ್ ಕಾಲ್‍ಗಳು ಶುರುವಾದವು ಸಾವಿನ ಸುದ್ದಿ ಪ್ರಕಟಿಸುವ ಹಾಗಿಲ್ಲ. ಒಳಗುದಿಯ ತಾಪ ಹೆಚ್ಚುತ್ತಾ ಹೋಯಿತು ಕನ್ನಡ ನಾಡೇ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡಂತೆ ಆದರೇ ಭಾವವನ್ನು ಹೊರಗೆ ಚೆಲ್ಲದಂತೇ ಚಡಪಡಿಕೆಯಲ್ಲಿ ಧುಮುಗುಡುತ್ತಿತ್ತು ನನಗೆ ಇನ್ನೂ ಆಸೆ- ಇಲ್ಲ, ಆತ ಸದೃಢ ಆರೋಗ್ಯದ ಮನುಷ್ಯ ಎದ್ದು ಬರುತ್ತಾನೆ ಅಂತಲೇ ಮನ ತುಡಿಯುತ್ತಿತ್ತು ಓಡಿ ಹೋಗಿ ಟಿವಿ ಹಾಕಿದೆ ಅವರಿನ್ನೂ ಪ್ರಕಟಿಸಿರಲಿಲ್ಲ. ರವಿ ಸರ್, ದರ್ಶನ್, ಯಶ್ ಅನೇಕರು ಆಸ್ಪತ್ರೆಗೆ ಧಾಪುಗಾಲಿಕ್ಕುತ್ತಿರುವುದನ್ನು ಕಂಡೆ. ಶ್ರುತಿ ಮೇಡಂ ಕಾರಿನಲ್ಲಿ ಬಿಕ್ಕಳಿಸಿ ಅಳುವುದನ್ನು ಕಂಡೊಡನೇ ಪೂರ್ಣ ಖಚಿತವಾಗಿಬಿಟ್ಟಿತ್ತು ಸಾವರಿಸಿಕೊಳ್ಳಲೂ ಆಗುತ್ತಿಲ್ಲ. ಮಾಧ್ಯಮಮಿತ್ರರು ಕರೆ ಮಾಡಹತ್ತಿದರು. ತಿಳಿದಷ್ಟು ಮಾತನಾಡಿದೆ.

ಅಭಿಮಾನಿಗಳ ಭಾವೋದ್ರೇಕದ ಕಟ್ಟೆಯೊಡೆದ ಸುನಾಮಿಯನ್ನು ನಿಯಂತ್ರಿಸಲಾಗಲಿಲ್ಲ.
ಕೆಲವೇ ಕ್ಷಣಗಳಲ್ಲಿ ಕಂಡು ಕೇಳರಿಯದಷ್ಟು ಇಡೀ ಕರ್ನಾಟಕ ಸೂತಕದ ಮನೆಯಾಗಿಬಿಟ್ಟಿತು ಅಲ್ಲಿ ರಾಘಣ್ಣ ತುಂಬ ಪ್ರಬುದ್ಧವಾಗಿ ಪರಿಸ್ಥಿತಿ ನಿಭಾಯಿಸಲೆತ್ನಿಸುತ್ತಿದ್ದರು. ಕರುನಾಡು ಸ್ತಬ್ಧವಾಗಿದ್ದಂತೆ ಕಂಡೆ. ಅದ್ಯಾವುದೋ ಕ್ಷಣದಲ್ಲಿ ಇದ್ದಕ್ಕಿದ್ದಂತೇ ಸಹನೆಯ ಕಟ್ಟೆ ಒಡೆದದ್ದು ಕಂಡೆ. ಅವರ ಮನೆ ಮುಂದೆ, ಕಂಠೀರವ ಸ್ಟೇಡಿಯಂನಲ್ಲಿ, ರಸ್ತೆಗಳಲ್ಲಿ ಭೋರಿಡುತ್ತಿದ್ದುದು ಕಂಡೆ. ಪೋಲಿಸರೆಷ್ಟೇ ಹರಸಾಹಸ ಮಾಡಿದರೂ ಅಭಿಮಾನಿಗಳ ಭಾವೋದ್ರೇಕದ ಕಟ್ಟೆಯೊಡೆದ ಸುನಾಮಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮನಸ್ಸು ಮತ್ತೆ ಮತ್ತೆ ಮರುಗುತ್ತಲೇ ಹೋಯಿತು.

ಮಾ. ಲೋಹಿತ್ ಅನ್ನುವ ಈ ಪುಟ್ಟ ಹುಡುಗ ನನ್ನ ತಾರುಣ್ಯದಲ್ಲಿ ಜೊತೆಯಾದವ. ವಸಂತ ಗೀತದ ಕ್ಲೈಮಾಕ್ಸ್‌ನಲ್ಲಿ ಅಪಘಾತದ ಲಾರಿಯಡಿಯಲ್ಲಿ ಅವಿತಿಟ್ಟುಕೊಂಡು ಅಪ್ಪಾ ಅಂತ ನಗುತ್ತಾ ಎದ್ದು ಬರುತ್ತಾನೆ. ನನಗೆ ಆ ಚಿತ್ರಿಕೆ ನನ್ನ ಮನಸ್ಸಿನ ಭಿತ್ತಿಯಲ್ಲಿ ದಾಖಲಾಗಿಬಿಟ್ಟಿದೆ. ಎರಡು ನಕ್ಷತ್ರದ ಎರಡೂ ಪಾತ್ರಗಳು, ಭಾಗ್ಯವಂತದ ಅಸಹಾಯಕ ಬಾಲಕನ ಪಾತ್ರಗಳು ನನಗೆ ಅತಿಹೆಚ್ಚು ಪರಿಣಾಮ ಮಾಡಿದ್ದವು. ಚಲಿಸುವ ಮೋಡಗಳ ಅವನ ಅಭಿನಯಕ್ಕೆ ಮಾರುಹೋಗದವರಿಲ್ಲ. ಕಾಣದಂತೆ ಮಾಯವಾದನು ಅನ್ನುವ ತತ್ವಪದವನ್ನು ಸಿನಿಮಾ ಜನಪ್ರಿಯತೆಗೆ ಒಗ್ಗಿಸಿ ಈತನ ಮುಗ್ಧ ಟಪ್ಪಾಂಗೋಚಿ ನೃತ್ಯವಾಗಿಸಿದ್ದು ಈಗ ಇತಿಹಾಸ ಅವರ ಅಪ್ಪ ರಾಜ್ ರನ್ನು ಸೇರಿಸಿ ಸಿನಿಮಾ ಎಂದರೆ ಸುಂದರವಾಗಿರಬೇಕೆನ್ನುವ ಕಾಲದಲ್ಲಿದ್ದಾಗ ಥಿಯರಿಯನ್ನು ಒಡೆದು ಸುಂದರವಾಗಿರಬೇಕಾದ್ದು ಪ್ರತಿಭೆ ಸಹಜತೆ ಅಂತಾ ತನ್ನ ದ್ರಾವಿಡ ಸೌಂದರ್ಯವನ್ನು ಜಗತ್ತಿಗೆ ನಿರೂಪಿಸಿದ ಹುಡುಗ ಪುನೀತ್.

ಬೆಟ್ಟದ ಹೂನಲ್ಲಂತೂ ಅವನ ಅಭಿನಯ ಕಂಡು ಗಳಗಳನೆ ಅತ್ತವರೆಷ್ಟು, ಆ ಪ್ರಮಾಣ ಸಾತ್ವಿಕರೂಪಿ ಅಭಿನಯವನ್ನು ಪ್ರಕಟಿಸಿಬಿಟ್ಟ ಬಾಲಕ. ಭಕ್ತ ಪ್ರಹ್ಲಾದದಲ್ಲಿ ಮೇರುಪರ್ವತ ಅಪ್ಪನೆದುರಿಗೆ ನಿಂತು ಶ್ರುತಿ ಬದ್ಧವಾಗಿ ತನ್ನದೇ ದನಿಯಲ್ಲಿ ಹಾಡಿ ಸಂಗೀತವೂ ಗೊತ್ತೆಂದು ನಿರೂಪಿಸಿದ. ಅವನ ಪಾತ್ರಗಳು, ಚಲನಚಿತ್ರಗಳು ನಮ್ಮನ್ನು ನಾವೇ ಗುರುತಿಸಿಕೊಂಡು ಇವನು ಪರಿಚಿತನೇ, ನಮ್ಮನೆ ಪಕ್ಕದ ಮನೆ ಹುಡುಗ ಅಂತಲೇ ನನ್ನಂತೆಯೇ ನನ್ನಿಡೀ ವಯೋಮಾನದ ತಲೆಮಾರು ಭಾವಿಸಿಕೊಂಡೇ ಬೆಳೆಯುತ್ತಿತ್ತು.

ಕಾಲೇಜಿನ ಹೊತ್ತಿಗೆ ನನ್ನ ಆಯ್ಕೆಗಳು ಬದಲಾಗಿ, ರಂಗಭೂಮೀ, ಸಾಹಿತ್ಯ ಹೋರಾಟ ಅಂತೆಲ್ಲ ಚಲಿಸಿ ಅವನ ತಾರುಣ್ಯವನ್ನು ಅಷ್ಟೇನೂ ಗಂಭೀರವಾಗಿ ಗಮನಿಸಿರಲಿಲ್ಲ ನಾನು. ನನಗೆ ಜನುಮದ ಜೋಡಿಗೆ ಆಹ್ವಾನ ಬಂದಾಗ ಮೊದಲ ದಿನ ಮುಹೂರ್ತದ ಶಾಟ್‍ನಲ್ಲಿ ನನ್ನನ್ನೂ ಕರೆದು ತಾರುಣ್ಯ ದಾಟಿದ ಯೌವ್ವನಕ್ಕೆ ಅಡಿಯಿಡುತ್ತಿದ್ದ ಪುನೀತ್ ಹಾರ ಹಾಕಿ ಸ್ವಾಗತಿಸಿದಾಗ, ಮುಜುಗರದ ನಡುವೆಯೂ ಸಂತಸಪಟ್ಟಿದ್ದೆ.

ಮುಂದೇ ಅನೇಕ ಸಲ ‘ವಜ್ರೇಶ್ವರಿ ಕಂಬೈನ್ಸ್’ ಕಛೇರಿಯಲ್ಲಿ ಕುಳಿತ ಆತನನ್ನು ಅದೇ ಬಾಲ್ಯದ ಪ್ರೀತಿಯಿಂದ ಮಿತ್ರ, ನೀವ್ ಹೀರೋ ಯಾವಾಗಪ್ಪ ಅಂತ ಕೇಳಿದ್ದೆ, ಪಿಸುಗುಡುತ್ತಾ ಹೇಳಿದ್ದ ಆತ ನನಗೆ ಬೇಕಾದ ಕಂಟೆಂಟ್ ಆಧಾರಿತ ಸಿನಿಮಾ, ಒಳ್ಳೆ ಡೈರೆಕ್ಟರ್ ಸಿಕ್ಕಿಲ್ಲ ಕಾಯ್ತೀನಿ ಅಂತಲೇ ಹೇಳುತ್ತಿದ್ದರು. ಅದೇ ನಿಜವಾಯಿತು. ಆ ದಿನ ಬಂತು. ಮೊದಲ ದಿನ ಅವನ ನಾಯಕ ನಟನ ಫೈಟಿಂಗ್ ದೃಶ್ಯಗಳನ್ನು ಕಂಡು ನನ್ನಂತೆಯೇ ಕನ್ನಡ ಚಿತ್ರರಸಿಕರು ನಿಬ್ಬೆರಗಾದರು, ಶಕ್ತಿಯ ಪ್ರವಾಹವೇ ಅಲ್ಲಿತ್ತು.

ಇದಕ್ಕೇ ನಿಗಧಿಯಾಗಿಬಿಡ್ತಾನಾ ಅಂದುಕೊಳ್ಳುವಷ್ಟರಲ್ಲಿ ಅಭಿ, ಅರಸು, ಮಿಲನ, ಪೃಥ್ವಿ, ಮೈತ್ರಿ ಎಲ್ಲವೂ ಸುಂದರ, ಸಹಜ, ಸರಳ ಕಥಾವಸ್ತುಗಳನ್ನು ಆಯ್ದುಕೊಂಡ. ನಿಜ ಅರ್ಥದಲ್ಲಿ ರಾಜಕುಮಾರನಾಗಿಬಿಟ್ಟ. ಕಥೆಯ ಆಯ್ಕೆಯಲ್ಲಿ ಎಲ್ಲೂ ಸೋಲಲಿಲ್ಲ. ಸ್ಟಾರ್ ಆಗುತ್ತಲೇ ತನ್ನ ಚಹರೆಯನ್ನು ಬದಲಾಯಿಸಿಕೊಂಡದ್ದನ್ನು ಜವಾಬ್ದಾರಿಯುತ ನಡುವಳಿಕೆಗಳನ್ನು ಗಮನಿಸುತ್ತಲೇ ಹೋದೆ. ಹರವಾದ ಎದೆ, ತುಂಬು ತೋಳುಗಳು, ಆತ್ಮವಿಶ್ವಾಸದ ಸದೃಢ ಮೈಕಟ್ಟು, ಹದವರಿತ ಅಭಿನಯ ಜೊತೆಗೆ ದೊಡ್ಮನೆಯ ದ್ಯೋತಕ ವಿನಯದ ಹಾರ. ಸೂಪರ್ ಸ್ಟಾರ್ ಆಗಲು ಮತ್ತೇನು ಬೇಕು. ಸದಾ ಎಚ್ಚರದ ನಡೆ ಆತನದು ನನಗದು ಹೆಮ್ಮೆ ಅನಿಸಿತ್ತು.

ಸಿನಿಮಾ ಸೆಟ್‍ಗಳಲ್ಲಿ, ಮಜಾಟಾಕೀಸ್‍ನಲ್ಲಿ, ಮುಹೂರ್ತಗಳಲ್ಲಿ ಎಲ್ಲೇ ಸಿಕ್ಕರೂ ಕಂಡೊಡನೇ ಫಟ್ಟೆಂದು ಎದ್ದು ನಿಂತು ಚೆಂದವಾಗಿ ಕೈ ಮುಗಿದು, ತುಂಬು ನಗೆಯಲ್ಲಿ ಹಿತವಾಗಿ ಮಾತನಾಡುತ್ತಿದ್ದ. ನನಗೀಗ ಆತ ಅಪ್ಪು ಸರ್ ಆಗಿದ್ದರು. ಅವರ ಚಿತ್ರದ ಹಾಡುಗಳು ಈ ತಲೆಮಾರಿನವರಿಗೆ ಮಾತ್ರವಲ್ಲದೇ ಎಲ್ಲ ವಯೋಮಾನಕ್ಕೂ ಇಷ್ಟವಾಗುವ ಮಾಧುರ್ಯ ತುಂಬಿದ ಹಾಡುಗಳಾಗಿದ್ದವು. ಇವತ್ತಿನ ಹುಡುಗ ಹುಡುಗಿಯರಿಗೆ ಇಷ್ಟವಾಗುವ ಲಯ ಆಧಾರಿತ, ಡಿಂಕಿ-ಚಿಕಿ ಸಾಂಗುಗಳೂ ನನಗೂ ಇಷ್ಟವಾಗುತ್ತಿತ್ತು. ಯಾನ ನಿಲ್ಲಲಿಲ್ಲ.

ಪಿಆರ್‌ಕೆ. ಸ್ಟುಡಿಯೋ ಮೂಲಕ ಹೊಸ ಹುಡುಗರಿಗೆ ಬೆನ್ನು ತಟ್ಟಿದರು. ಕವಲುದಾರಿಯಂತಹ ಶ್ರೇಷ್ಟ ಚಿತ್ರ ಬಂತು, ಆಡಿಯೋ ತೆರೆದರು. ಮೈಸೂರು ರಾಜ್ಯದ ದೊರೆ ಅನ್ನುವ ರಂಗಗೀತೆ ಅಣ್ಣಾವ್ರ ಅನಿಮೇಷನ್ ಹಾಡು ಮನೆ ಮಾತಾಯಿತು. ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದರಂತೇ. ನನಗದರ ಅರಿವು ಹೆಚ್ಚಿರಲಿಲ್ಲ. ಅಣ್ಣಾವ್ರ ಹೆಸರಲ್ಲಿ ಹೋಟೆಲ್ ಮಾಡಿದ್ದು ನನಗೆ ವಿಶೇಷ ಅನಿಸಲಿಲ್ಲ, ಆದರೇ ಹಳ್ಳಿಗಾಡಿನ ಸಹಸ್ರಾರು ವಿದ್ಯಾರ್ಥಿಗಳಿಗೆ I.A.S I.P.S, K.A.S, K.P.S.C ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವಂತೆ ಉಚಿತ ತರಬೇತಿ ಕೇಂದ್ರವನ್ನು ಸ್ಥಾಪಿಸಿ ರಾಜ್ ಕುಮಾರ್ ಅವರ ಹೆಸರಲ್ಲಿ ಅನೇಕರಿಗೆ ಬದುಕು ಕಟ್ಟಿಕೊಡಲು ನೆರವಾದರು. ಇದು ಶ್ರೇಷ್ಠ, ಸಾರ್ಥಕತೆಯ ಕುರುಹೂ ಅನಿಸಿತು.

ಹೊಸ ತಂಡಗಳಿಗೆ ಹಾಡಿ ಪ್ರೋತ್ಸಾಹಿಸಿ ಅವರ ಜನಪ್ರಿಯತೆಯ ಭಾಗ ಕೊಟ್ಟರು. ಈಚಿನ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆ ವಿಸ್ತರಣೆಯಲ್ಲಿ ಪುನೀತ್‍ರವರ ಪಾಲು ಕೂಡ ಬಹಳ ಹಿರಿದಾದದ್ದು. ಉದ್ಯಮದ ಚೇತರಿಕೆಗೆ ಅದನ್ನು ನಂಬಿಕೊಂಡೇ ಬದುಕುವ ಅನೇಕ ತಂತ್ರಜ್ಞರು, ಕಲಾವಿದರ ಕುಟುಂಬಗಳಿಗೆ ‘ತಾರೆ’ಯೊಬ್ಬರ ದಿಢೀರ್ ಅಸ್ತಂಗತ, ಬರೀ ಭಾವುಕ ಪ್ರಶ್ನೆ ಮಾತ್ರ ಆಗಿರದೇ ವಾಸ್ತವದ ಬದುಕಿನ ಸಂಕಟವೂ ಆಗಿರುತ್ತದೆ. ಈ ದನಿಯ ತರಂಗಗಳ ಕಂಪನ ನಿಶ್ಶಕ್ತಿಯನ್ನುಂಟು ಮಾಡುತ್ತದೆ ಅನ್ನೋದು ನನ್ನ ಅಳಲು ಕೂಡ.

ಚಿತ್ರೀಕರಣದ ಸಂದರ್ಭಗಳಲ್ಲಿ ಹಾಸ್ಯನಟರನ್ನು ಪೋಷಕನಟರುಗಳನ್ನು ಒಟ್ಟಾಕಿಕೊಂಡು ಸಣ್ಣ ಸಣ್ಣ ಜೋಕ್‍ಗಳಿಗೂ ಮನತುಂಬಿ, ಮೈ ದುಂಬಿ ನಗುತ್ತಿದ್ದರು. ಅವರ ಆಲೋಚನೆಯ ವಿಸ್ತಾರಗಳು ಹರವಾಗಿತ್ತು. ಜಾಗತಿಕ ಚಿತ್ರಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವಂಥಾ ಆಧುನಿಕೋತ್ತರ ಚಿತ್ರಗಳ ನಿರ್ಮಾಣದ ಬಗ್ಗೆ ಯೋಚಿಸುತ್ತಿದ್ದ ಬುದ್ಧಿವಂತರು.

ಗೆಳೆಯ ಕಾರ್ತಿಕ್ ಸರಗೂರು ಬರೆದಿದ್ದ ಭತ್ತದ ಕಾಳುಗಳು ಅದ್ಭುತ ಕತೆಯನ್ನಿಟ್ಟುಕೊಂಡು ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೆವು. ಆ ಹೊತ್ತಿಗೆ ಎಲ್ಲಾ ತಾರೆಯರಿಗೂ ಆಗುವಂತೇ ಅವರ ಸುತ್ತಲೂ ವಲಯ ಸೃಷ್ಟಿಯಾಗಿತ್ತು. ಭೇದಿಸಲು ಸಾಧ್ಯವಾಗಲಿಲ್ಲ. ಮೊನ್ನೆ ಜಾಹಿರಾತೊಂದರಲ್ಲಿ ಅವರನ್ನು ಪಂಚೆಯಲ್ಲಿ ಕಂಡಾಗ ಖುಷಿಯಾಗಿ, ಅಯ್ಯೋ ಮತ್ತೊಂದು ಬಂಗಾರದ ಮನುಷ್ಯವಾಗಬಹುದಾದ ನಮ್ಮ ಕಾರ್ತಿಕ್ ಸರಗೂರಿನ ಕತೆ ಮಲಗೇಬಿಟ್ಟಿತ್ತಲ್ಲ ಅಂತ ಕೊರಗಿದೆ.

ಪುನೀತ್ ಅವರನ್ನೊಮ್ಮೆ ಭೇಟಿ ಮಾಡಿ ಸರ್, ಚಾಮರಾಜನಗರ ನಿಮ್ಮೂರು, ಅಲ್ಲಿ ಮತ್ತು ಸುತ್ತಮುತ್ತಲ ತಾಲೂಕುಗಳಲ್ಲಿ ಡಾ. ರಾಜ್ ಹೆಸರಲ್ಲಿ ಬಯಲು ರಂಗಮಂದಿರವನ್ನು ನಿರ್ಮಾಣ ಮಾಡಿಕೊಟ್ಟರೆ, ಸ್ಥಳೀಯರಿಗೆ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಮಾಡಲು, ವಿಶೇಷವಾಗಿ ಹಳ್ಳಿಗರಿಗೆ ಪೌರಾಣಿಕ ನಾಟಕಗಳನ್ನು ಮಾಡಲು ವೇದಿಕೆ ನಿರ್ಮಾಣವಾದಂತೆ ಆಗುತ್ತದೆ. ಅಪ್ಪನ ಹೆಸರಲ್ಲಿ ರಂಗಭೂಮಿಗೆ ದೊಡ್ಡ ಗೌರವವಾಗುತ್ತದೆ ಅಂತ ಮುಕ್ತವಾಗಿ ಮಾತನಾಡಬೇಕು ಅಂತ ಬಲವಾಗಿ ಅನಿಸಿತ್ತು.
ಬೃಹತ್ ತಾರೆಗಳ ಸುತ್ತಲಿನ ಕೋಟೆಯನ್ನು ಭೇದಿಸುವುದೇ ದೊಡ್ಡ ಸಮಸ್ಯೆ. ಸಂಕೋಚದಿಂದ ಸುಮ್ಮನಾದೆ. ಅವರೊಂದಿಗೆ ನನ್ನ ಕನಸುಗಳೂ ಮಸುಕಾದವು. ಮಕ್ಕಳಿಗೆ ಅವರು ಅದೆಷ್ಟು ಇಷ್ಟ ಅಂತಾ ಮಾತನಾಡಿಸಿಯೇ ನೋಡಬೇಕು. ನನಗೆ ಅವರ ಸರಳತೆ ಪ್ರಯೋಗಶೀಲತೆ ತುಂಬಾ ಇಷ್ಟ. ಪರಮಾತ್ಮದಂತಹ ಕತೆಯ ಆಯ್ಕೆಯೇ ವಿಶಿಷ್ಟ.

ತೀರಾ ಸಾಧಾರಣ ಎತ್ತರದ ಪುನೀತ್, ಅಪ್ಪನ ಮೂಗು, ಅಮ್ಮನ ಬಣ್ಣ, ಅಣ್ಣನ ಚೈತನ್ಯ, ಕನ್ನಡ ಮಣ್ಣಿನ ಸೌಹಾರ್ದ ಗುಣ, ಮನೆತನಕ್ಕಿರುವ ಕಲಾವಂತಿಕೆ, ಕೃಷಿಯ ಮಣ್ಣಿನ ಗುಣ, ಆಧುನಿಕ ಚಿಂತನೆ ಎಲ್ಲಾ ಸೇರಿ ಎರಕ ಹೊಯ್ದಂತಿದ್ದರು. ಕನ್ನಡ ನೆಲದ ಬೀದಿ, ಮನೆ ಮನಸ್ಸುಗಳು ಸ್ತಬ್ಧವಾಗಿದೆ. ಟಿ.ವಿ. ಆನ್ ಮಾಡಿದರೇ ಆ ಜನಸಾಗರದ ಆಕ್ರಂದನಕ್ಕೆ ಪ್ರತಿಯಾಗಿ ಏನೂ ತೋರದೇ ಮೌನವಾಗಿ ಕುಳಿತಿರುವ ಅಶ್ವಿನಿ ಪುನೀತ್ ಕಾಣುತ್ತಿದ್ದರು. ಅವರ ನೋಟ ತಲ್ಲಣಿಸುತ್ತಿದೆ. ಕಣ್ಣಿನಿಂದಿಳಿಯುವ ಹನಿಗಳಿಂದ ಮಾಸ್ಕ್ ಒದ್ದೆಯಾಗಿತ್ತು. ತಾಯಿ ಭುಜಕ್ಕೊರಗಿದ ಕಿರಿಯ ಮಗಳ ಕನ್ನಡಕದ ಗಾಜಿನಲ್ಲಿ ಸುತ್ತೆಲ್ಲ ಜನಜಂಗುಳಿ ಇದ್ದರೂ ಅಪ್ಪ ಎದ್ದೇಳುತ್ತಿಲ್ಲವೆಂಬ ಆತಂಕದ ಪ್ರತಿಫಲನ ಕಾಣುತಿತ್ತು ಆ ಸಂದರ್ಭದಲ್ಲಿ ಎಂದು ಮುಂದೆ ಮಾತನಾಡಲೂ ಸಾಧ್ಯವಾಗದೆ ಭಾವನಾತ್ಮಕ ಮಾತುಗಳನ್ನಾಡಿ ಮೌನಕ್ಕೆ ಶರಣಾದರು ಮಂಡ್ಯ ರಮೇಶ್.

Leave A Reply

Your email address will not be published.