ಮಹಾನಾಯಕ ಧಾರವಾಹಿ ಮನೆ, ಮನಗಳಿಗೆ ತಲುಪಿದೆ. ಮಹಾನಾಯಕ ಭೀಮರಾವ್ ಅಂಬೇಡ್ಕರ್ ಧಾರವಾಹಿ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಈ ನೆಲದ ಅಮಾನವೀಯ ತಪ್ಪುಗಳನ್ನು ತಿದ್ದಿದ, ನೀಚ ಜಾತಿ ವ್ಯವಸ್ಥೆಯ ವಿರುದ್ದ ಒಂಟಿ ಸೈನಿಕನಂತೆ ಯುದ್ಧ ಮಾಡಿದ, ಹೈರಾಣಾಗಿದ್ದ ಮಹಾಸೇನೆಯ ಬಡಿದೆಬ್ಬಿಸಿದ ದಂಡನಾಯಕ ಬಾಬಾ ಸಾಹೇಬ್ ಡಾಕ್ಟರ್ ಭೀಮರಾವ್ ಅಂಬೇಡ್ಕರ್. ಧೈರ್ಯಕ್ಕೆ, ಜ್ಞಾನಕ್ಕೆ, ಶ್ರದ್ಧೆಗೆ, ಶಕ್ತಿಗೆ ಸಮಾನಾರ್ಥಕ ಪದವೇ ಆಗಿರುವ ಬಾಬಾ ಸಾಹೇಬ್ ರ ಜೀವನ ಆಧರಿಸಿದ ಮಹಾನಾಯಕ ಭೀಮರಾವ್ ಅಂಬೇಡ್ಕರ್ ಧಾರವಾಹಿ ಮಹಾನ್ ದಾಖಲೆಯನ್ನೇ ಮಾಡಿದೆ. ಆಫ್ಟ್ರೋಲ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಡೂಪ್ ಸ್ಟಾರ್ ಗಳಿಗೆ ಕಟೌಟ್ ಕಟ್ಟುತ್ತಿದ್ದರು, ಪುಡಾರಿ ರಾಜಕಾರಣಿಗಳು ತಾವಾಗಿಯೆ ಹಣಕೊಟ್ಟು ಕಟೌಟ್ ಹಾಕಿಸಿಕೊಳ್ಳುತ್ತಿದ್ದರು, ಆದರೆ ಮಹಾನಾಯಕನ ಅಭಿಮಾನಿಗಳು ಊರೂರಿನಲ್ಲೂ ತಮ್ಮ ಅಭಿಮಾನವನ್ನು ಕಟೌಟ್ ನಲ್ಲಿ ತೋರಿಸುತ್ತಿದ್ದಾರೆ. ಯಾವುದೋ ಥಿಯೇಟರ್ ಮುಂದೆ ಕಟೌಟ್ ಹಾಕಿಸಿಕೊಳ್ಳಬಹುದು ಆದರೆ ಇಡೀ ರಾಜ್ಯದ ಊರೂರಿನಲ್ಲೂ ಕಟೌಟ್ ಹಾಕಿಸಿಕೊಳ್ಳಲು ಮಹಾನಾಯಕನೆ ಆಗಿರಬೇಕು.
ಹಿಂದಿ ವಾಹಿನಿ ಎಂಡ್ ಟಿವಿಯಲ್ಲಿ ಮೊದಲಿಗೆ ಏಕ್ ಮಹಾನಾಯಕ್ ಧಾರವಾಹಿ ಪ್ರಸಾರವಾಯಿತು. ಕರ್ನಾಟಕದಲ್ಲಿ ಮಹಾನಾಯಕನನ್ನು ಜನ ಮೆಚ್ಚಿಕೊಂಡಷ್ಟು ಏಕ್ ಮಹಾನಾಯಕ್ ಮೆಚ್ಚುಗೆ ಗಳಿಸಲಿಲ್ಲ. ದಕ್ಷಿಣ ಭಾರತೀಯರು ಬಾಬಾಸಾಹೇಬ್ ಚಿಂತನೆಗಳಿಗೆ ಕೊಡುವ ಬೆಲೆ ಎಂಥದ್ದು ಹೇಳುವುದಕ್ಕೆ ಈ ಸಂಗತಿ ಸಾಕ್ಷಿಯಾಗಿದೆ. ದ್ರಾವಿಡ ನೆಲದಲ್ಲಿ ಮಹಾನಾಯಕರನ್ನು ಪ್ರೀತಿಸುತ್ತಾರೆ ಎನ್ನುವುದಕ್ಕೆ ಟಿಆರಪಿ ಸಾಕ್ಷಿಯಾಗಿದೆ. ಜೀ ತೆಲುಗು, ಜೀ ತಮಿಳು ವಾಹಿನಿಯಲ್ಲಿ ಮಹಾನಾಯಕ ಸೀರಿಯಲ್ ಡಬ್ ಆಗಿ ಪ್ರಸಾರವಾಗಲಿದೆ. ಮಹಾನಾಯಕ ಧಾರವಾಹಿ ಇನ್ನು ಹೆಚ್ಚಿನ ಜನಪ್ರಿಯತೆ ಗಳಿಸಲಿ.