ರಾಮಾಯಣದ ಕಥೆ ನಮಗೆಲ್ಲರಿಗೂ ತಿಳಿದಿದೆ. ಹಾಗೆ ರಾಮಾಯಣದಲ್ಲಿ ಬರುವಂತಹ ಪಾತ್ರಗಳ ಪರಿಚಯ ಕೂಡಾ ಇದೆ. ಶ್ರೀರಾಮ ಅಗಸನ ಮಾತಿಗೆ ಕಿವಿಗೊಟ್ಟು ತನ್ನ ತುಂಬು ಗರ್ಭಿಣಿ ಮಡದಿ ಸೀತೆಯನ್ನ ಕಾಡಿಗೆ ಕಳುಹಿಸಿದ್ದ. ಕಾಡಿನಲ್ಲಿ ಋಷಿ ಮುನಿಗಳ ಆಶ್ರಯದಲ್ಲಿದ್ದ ಸೀತೆ ಅಲ್ಲಿಯೇ ತನ್ನ ಇಬ್ಬರು ಪುತ್ರರಾದ ಲವ – ಕುಶರಿಗೆ ಜನ್ಮ ನೀಡಿದ್ದು. ಸೀತೆ ಲವ – ಕುಶರಿಗೆ ಜನ್ಮ ನೀಡಿದ ಆ ಸ್ಥಳ ಯಾವುದು? ಎಲ್ಲಿದೆ ಅನ್ನೋದರ ಬಗ್ಗೆ ಪೂರ್ತಿ ವಿವರ ಇಲ್ಲಿದೆ ನೋಡಿ.

ಇದೆ ಸ್ಥಳದಲ್ಲಿ ಸೀತಾಮಾತೆ ಲವ ಕುಶರಿಗೆ ಜನ್ಮ ನೀಡಿದ್ದಳು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ಇಲ್ಲಿವೆ. ಹೀಗಾಗಿ ಮಕ್ಕಳು ಇಲ್ಲದವರು ಮತ್ತು ಮಕ್ಕಳ ಮೇಲೆ ಅಕ್ಕರೆ ಇರುವವರು ಈ ಬೆಟ್ಟದಲ್ಲಿ ಇರುವ ಧನುಷ್ಕೋಟಿಯಲ್ಲಿ ಸ್ನಾನ ಮಾಡಿ ದೇವಿಯ ಮುಂದೆ ನಿಂತಾಗ ಕನಸಿನಲ್ಲಿ ತೊಟ್ಟಿಲು , ಹೂವು, ಮಗು ಕಾಣಿಸಿಕೊಳ್ಳುತ್ತದೆಯಂತೆ ಆಗ ಮಕ್ಕಳಾಗುವುದು ಖಚಿತ ಎನ್ನುವ ನಂಬಿಕೆ ಅಲ್ಲಿನ ಜನರಲ್ಲಿದೆ. ಈ ಸ್ಥಳ ಕರ್ನಾಟಕ ರಾಜ್ಯದ ರಾಮೇಶ್ವರ ಎಂದೇ ಹೆಸರು ಪಡೆದಿರುವ, ಅವಂತಿಕಾ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಸುಪ್ರಸಿದ್ಧ ಕ್ಷೇತ್ರ ‘ಅವನಿ’. ರಾಮಾಯಣದ ಕರ್ತೃ ವಾಲ್ಮೀಕಿ ಮಹರ್ಷಿಗಳ ತಪೋ ಭೂಮಿ ಅವಣ್ಯ, ಅವಣೆ ಎಂದು ಕರೆಸಿಕೊಂಡಿದ್ದ ಈ ಊರು ಕಾಲಕ್ರಮೇಣ ಅವನಿ ಆಯಿತು ಎಂದು ಹೇಳಲಾಗುತ್ತದೆ. ಆದರೆ ಇನ್ನೊಂದು ಕಥೆಯ ಪ್ರಕಾರ, ಅವನಿ ಸುತೇ ಎಂದು ಕರೆಯಲ್ಪಡುವ ಸೀತಾ ಮಾತೇ ದೀರ್ಘ ಕಾಲ ಇಲ್ಲಿಯೇ ನೆಲೆಸಿದ್ದಳು. ಹೀಗಾಗಿ ಈ ಕ್ಷೇತ್ರಕ್ಕೆ ಅವನಿ ಎನ್ನುವ ಹೆಸರು ಬಂತು ಎಂದು ಪುರಾಣಗಳು ಹೇಳುತ್ತವೆ. ಈ ಕ್ಷೇತ್ರವು ತಾಲೂಕು ಕೇಂದ್ರವಾದ ಮುಳುಬಾಗಿಲಿನಿಂದ 13 ಕಿಲೋಮೀಟರ್ ದೂರದಲ್ಲಿದೇ ಹಾಗೂ ಜಿಲ್ಲಾಕೇಂದ್ರವಾದ ಕೋಲಾರದಿಂದ 30 ಕಿಲೋಮೀಟರ್ ದೂರದಲ್ಲಿದೆ. ಉತ್ತರ ಕರ್ನಾಟಕದ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದಿಂದ 524 ಕಿಲೋಮೀಟರ್ ದೂರದಲ್ಲಿದ್ದರೆ , ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕೇವಲ 95 ಕಿಲೋಮೀಟರ್ ದೂರದಲ್ಲಿದೆ.

ಪ್ರಸ್ತುತ ಅವನಿ ಕ್ಷೇತ್ರ ಎಂದು ಕರೆಯಲ್ಪಡುವ ಈ ಕ್ಷೇತ್ರದಲ್ಲಿ ತ್ರೇತಾಯುಗದ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ತನ್ನ ಪಾಪ ಪ್ರಾಯಶ್ಚಿತ್ತಕ್ಕಾಗಿ ಸ್ವತಃ ತಾನೇ ಪ್ರತಿಷ್ಠಾಪಿಸಿ , ಪೂಜಿಸಿದ ಬೃಹತ್ ರಾಮಲಿಂಗೇಶ್ವರ ದೇವಾಲಯವಿದೆ. ಶ್ರೀ ರಾಮ ಇಲ್ಲಿ ಲಿಂಗ ಪ್ರತಿಷ್ಠಾಪಿಸಿ ಪರಮೇಶ್ವರನನ್ನು ಪೂಜಿಸಿದ ಬಗ್ಗೆ ಹಲವಾರು ಪುರಾಣಗಳು ಇವೆ. ಪುರಾತನ ಕಾಲದಲ್ಲಿ ಈ ಪ್ರದೇಶಕ್ಕೆ ಅವಂತಿಕಾ ಪುರ ಎಂದು ಹೆಸರಿತ್ತಂತೆ. ಇಲ್ಲಿ ವಾಲ್ಮೀಕಿ ಮಹರ್ಷಿಗಳು ಆಶ್ರಮ ನಿರ್ಮಿಸಿ ತಪಸ್ಸಾಚರಿಸಿದ್ದರಂತೆ. ಅಗ್ನಿ ಪರೀಕ್ಷೆ ಮಾಡಿ ಸ್ವೀಕರಿಸಿದ ಸೀತೆಯ ಬಗ್ಗೆ ಪುರಜನರಲ್ಲೊಬ್ಬ ಅನುಮಾನದ ಮಾತನ್ನು ಆಡಿದ ಎಂಬ ಒಂದೇ ಕಾರಣಕ್ಕೆ ರಾಮನಿಂದ ದೂರವಾದ ಸೀತೆ ಅಯೋಧ್ಯೆಯಿಂದ ಇಲ್ಲಿಗೆ ಬಂದು ಮಹರ್ಷಿ ವಾಲ್ಮೀಕಿ ಅವರ ಆಶ್ರಯ ಪಡೆಯುತ್ತಾಳೆ. ಗರ್ಭಿಣಿಯಾಗಿದ್ದ ಸೀತಾ ಮಾತೇ ಇದೆ ಆಶ್ರಮದಲ್ಲಿ ಲವ ನಿಗೆ ಜನ್ಮ ನೀಡುತ್ತಾಳೆ.

ಒಮ್ಮೆ ಆಶ್ರಮದಲ್ಲಿ ಲವ ಅರಣ್ಯದಿಂದ ಕಾಣೆ ಆದಾಗ ಸೀತೆ ದರ್ಬೆಯಿಂದ ಲವನ ಪ್ರತಿ ರೂಪವನ್ನು ಸೃಷ್ಟಿಸಿದಳಂತೆ ಅವನೇ ಕುಶ. ಹೀಗೆ ಲವ ಕುಶ ಇಬ್ಬರ ಜನನವಾಯಿತು. ಈ ಇಬ್ಬರು ಅವಳಿ ಸಹೋದರರು ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಿದ್ದರು. ಅಶ್ವ ರಕ್ಷಣೆಗೆ ಎಂದು ಬಂದಿದ್ದ ಎಲ್ಲರೂ ಲವ ಕುಶರ ಜೊತೆಗೆ ಯುದ್ಧ ಮಾಡಿ ಸೋತಾಗ ಸ್ವತಃ ರಾಮನೆ ಯುದ್ಧಕ್ಕೆ ಬಂದನಂತೆ. ವಾಲ್ಮೀಕಿ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸಿ ಅವರೊಂದಿಗೆ ಏಕಾಂತದಲ್ಲಿ ಮಾತನಾಡಿ ಸತ್ಯ ತಿಳಿದು ಮತ್ತೆ ಸೀತೆಯಮನ್ನು ಪರೀಕ್ಷಿಸಲು ಯತ್ನಿಸಿದಾಗ ಭೂಮಿ ತಾಯಿಯ ಮಗಳಾದ ಸೀತೆಯನ್ನು ಭೂ ತಾಯಿ ಇಬ್ಬಾಗವಾಗಿ ತನ್ನ ಒಡಲಲ್ಲಿ ಸೇರಿಸಿಕೊಂಡಳಂತೆ.

ಅಂತಹ ಅಪರೂಪದ ಕ್ಷೇತ್ರವೇ ಈ ‘ಅವನಿ’. ಆಗ ಶ್ರೀರಾಮನಿಗೆ ತನ್ನ ತಪ್ಪಿನ ಅರಿವಾಗಿ ಮಹರ್ಷಿ ವಾಲ್ಮೀಕಿಗಳ ಉಪದೇಶದಂತೆ ಪ್ರಾಯಶ್ಚಿತ್ತಕ್ಕಾಗಿ ಒಂದು ಬೃಹತ್ ಲಿಂಗವನ್ನು ಸ್ಥಾಪಿಸಿ ಪೂಜಿಸಿದನಂತೆ. ಅದುವೇ ಇಲ್ಲಿರುವ ರಾಮಲಿಂಗೇಶ್ವರ ದೇವಾಲಯ. ನಂತರ ಲಕ್ಷ್ಮಣ, ಭರತ, ಶತ್ರುಘ್ನ, ಸುಗ್ರೀವ ಸೇರಿದಂತೆ ಶ್ರೀರಾಮನ ಪರಿವಾರದವರೆಲ್ಲರು ಇಲ್ಲಿ 108 ಲಿಂಗಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದರಂತೆ. ಈಗಲೂ ಈ ದೇವಾಲಯದ ಆವರಣದಲ್ಲಿ ಲಕ್ಷ್ಮಣ ಲಿಂಗೇಶ್ವರ, ಭರತ ಲಿಂಗೇಶ್ವರ, ಶತ್ರುಘ್ನ ಲಿಂಗೇಶ್ವರ ಹಾಗೂ ಸುಗ್ರೀವೇಶ್ವೆರ ಎಂಬ ದೇವಸ್ಥಾನಗಳು ಇವೆ. ಮಕ್ಕಳು ಇಲ್ಲದವರು ಈ ದೇಗುಲದ ಬೆಟ್ಟದ ಮೇಲೆ ಹೋಗಿ ಕಲ್ಲನ್ನು ಒಂದರ ಮೇಲೆ ಒಂದನ್ನು ಇಟ್ಟು ಹರಕೆ ಕಟ್ಟಿಕೊಂಡವರಿಗೆ ಮಗು ಆಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಿಗೆ ಇದೆ. ಹೀಗೆ ಮಾಡಿದ ಎಷ್ಟೋ ಜನ ಸಂತಾನ ಫಲ ಪಡೆದಿದ್ದಾರೆ ಎಂಬುದು ಇಲ್ಲಿನ ಹೇಳಿಕೆ ಆಗಿದೆ. ಈ ಗುಡ್ಡದ ಮೇಲೆ ವಾಲ್ಮೀಕಿ ಗುಹೆ, ಲಕ್ಷ್ಮಣ ತನ್ನ ಅತ್ತಿಗೆ ಸೀತೆಗಾಗಿ ನಿರ್ಮಿಸಿದ ಧನುಷ್ಕೋಟಿ ತೀರ್ಥ, ಕಷಾಯ ತೀರ್ಥ ಇಲ್ಲಿದೆ. ಬೆಟ್ಟಡ ತುದಿಯಲ್ಲಿ ಸೀತಾ ಮಾತೆಯ ದೇಗುಲಕ್ಕೆ ಹೋಗುವಾಗ ದಾರಿಯಲ್ಲಿ ಲವ ಕುಶರಿಗೆ ಜನ್ಮ ನೀಡಿದ ಗುಹೆಗಳು ಇವೆ. ಅದರ ಪಕ್ಕದಲ್ಲೇ ವಾಲ್ಮೀಕಿ ಗುಹೆ ಕೂಡಾ ಇದೆ. ಇವುಗಳನ್ನು ನೋಡುತ್ತಾ ಗಿರಿಯ ತುದಿಗೆ ತಲುಪಿ ಸುತ್ತಲಿನ ಪ್ರಪಂಚವನ್ನು ನೋಡಿದಾಗ ಆಗುವ ಸಂತೋಷ ಅವರ್ಣನೀಯ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!