ನಮ್ಮ ರಾಜ್ಯವು ಧಾರ್ಮಿಕತೆಯ ದೃಷ್ಠಿಯಿಂದ ಬಹಳ ಸಿರಿವಂತವಾಗಿದೆ. ಇಲ್ಲಿ ನಾನಾ ದೇವರುಗಳನ್ನು ನಾನಾ ರೂಪದಲ್ಲಿ ಪೂಜಿಸಲಾಗುತ್ತದೆ. ಅಂತಹ ದೇವರುಗಳ ಪಟ್ಟಿಯಲ್ಲಿ ಹನುಮನೂ ಕೂಡಾ ಸೇರುತ್ತಾನೆ. ಆಂಜನೇಯ ದೇವಾಲಯಗಳು ನಮ್ಮ ರಾಜ್ಯದಲ್ಲಿ ಸಾಕಷ್ಟಿವೆ. ಅದರಲ್ಲಿ ಒಂದು ಬೆಂಗಳೂರಿನಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ.
ಇಲ್ಲಿನ ಹನುಮನನ್ನು ಕಾರ್ಯ ಸಿದ್ಧಿ ಹನುಮ ಎನ್ನುತ್ತಾರೆ. ಈ ದೇವಾಲಯದ ವಿಶೇಷತೆಗಳು ಎಂದರೆ ಇಲ್ಲಿ ಯಾವುದೇ ಬೇಡಿಕೆಗಳನ್ನು ನಿಷ್ಠೆ ಇಂದ ಬೇಡಿದ್ದಲ್ಲಿ ನೇರವೇರುತ್ತದೆ ಎಂಬ ನಂಬಿಕೆ ಇದೆ.
ಈ ಅದ್ಭುತ ಕ್ಷೇತ್ರ ಇರುವುದು ಬೆಂಗಳೂರಿನ ನೈಋತ್ಯ ಭಾಗದಲ್ಲಿರುವ ಗಿರಿನಗರದಲ್ಲಿರುವ ಅವಧೂತ ದತ್ತ ಪೀಠದಲ್ಲಿ. ಇದನ್ನು ಎಲ್ಲರೂ ಕಾರ್ಯಸಿದ್ಧಿ ಆಂಜನೇಯ ಕ್ಷೇತ್ರ ಎನ್ನುತ್ತಾರೆ. ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿ ಭಕ್ತಿಯಿಂದ, ಮನಸ್ಸಾಪೂರ್ವಕವಾಗಿ ಬೇಡಿಕೊಂಡರೆ ಮನೋಕಾಮನೆಗಳು ಈಡೇರುತ್ತವಂತೆ.ಇದು ಏಕಶಿಲೆಯ ಅಂಜನೇಯನ ವಿಗ್ರಹವಾಗಿದ್ದು ಇದರ ತೂಕ ಸುಮಾರು 200 ಟನ್. ಸುಬ್ರಮಣ್ಯ ಅರ್ಚಾರ್ ಶಿಲ್ಪಿ ಮಾರ್ಗದರ್ಶನದಲ್ಲಿ ಸುಮಾರು 18 ಶಿಲ್ಪಿಗಳು ಈ ಶಿಲ್ಪವನ್ನು ರಚಿಸಲು ಕೆಲಸ ಮಾಡಿದ್ದಾರೆ.
ಅವರು ಈ ಶಿಲ್ಪವನ್ನು ಕೆತ್ತಿಸಲು 10 ತಿಂಗಳುಗಳನ್ನು ತೆಗೆದುಕೊಂಡರು. ಕಾರ್ಯ ಸಿದ್ಧ ಅಂಜನೇಯ ದೇವಾಲಯವನ್ನು ಅಷ್ಟಭುಜಾಕೃತಿಯಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನವು ಅನಘಾದೇವಿ ಸಮಾತೆ ಶ್ರೀ ದತ್ತಾತ್ರೇಯ, ಶಿವ, ಗಣಪತಿ ಮತ್ತು ನವಗ್ರಹ ಗುಡಿಗಳನ್ನು ಹೊಂದಿದೆ. ಈ ದೇವಸ್ಥಾನವು ಅವಧೂತಾ ದಟ್ಟ ಪೀಠದಿಂದ ನಡೆಸಲ್ಪಡುತ್ತದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಇಲ್ಲಿ ಹನುಮಂತನನ್ನು ಸ್ಥಾಪಿಸಿದ್ದಾರೆ.
ಈ ದೇವಸ್ಥಾನದಲ್ಲಿ ಪ್ರತೀದಿನ ನೂರಾರು ಭಕ್ತರು ಪ್ರದಕ್ಷಿಣೆ ಹಾಕುತ್ತಾ ಇರುವುದನ್ನು ನೀವು ನೋಡಬಹುದು. ಅಷ್ಟೇ ಅಲ್ಲ ದೇವಸ್ಥಾನದಲ್ಲಿ ಅಲ್ಲಲ್ಲಿ ತೆಂಗಿನಕಾಯಿ ಕಟ್ಟಿರುವುದು ನಿಮಗೆ ಕಾಣಿಸುತ್ತದೆ. ಹಾಗದರೆ ಈ ತೆಂಗಿನ ಕಾಯಿಯನ್ನು ಯಾಕಾಗಿ ಕಟ್ಟಿದ್ದಾರೆ ಎಂದರೆ ಈ ದೇವಸ್ಥಾನದಲ್ಲಿ ಕಟ್ಟಲಾದ ತೆಂಗಿನಕಾಯಿಯನ್ನು ಪೂರ್ಣಫಲ ಎನ್ನುತ್ತಾರೆ. ಇದನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಎಲ್ಲವೂ ಶುಭವಾಗುತ್ತದಂತೆ.
ಭಕ್ತರು ಮನೆಯಿಂದಲೂ ತೆಂಗಿನಕಾಯಿಯನ್ನು ತರಬಹುದು. ಇಲ್ಲವಾದರೆ ಅಲ್ಲೇ ಕೌಂಟರ್‌ನಲ್ಲಿರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಕೌಂಟರ್‌ನಲ್ಲಿ ಕೊಡಬೇಕು. ಅಲ್ಲಿ ಕಾಯಿಯ ಮೇಲೆ ಸಂಖ್ಯೆ ಹಾಗೂ ದಿನಾಂಕವನ್ನು ನಮೂದಿಸುತ್ತಾರೆ. ಆ ಕಾಯಿಯನ್ನು ತೆಗೆದುಕೊಂಡು ದೇವರ ಮುಂದೆ ಕುಳಿತು ಸಂಕಲ್ಪ ಮಾಡಬೇಕು.ಸಂಕಲ್ಪದ ನಂತರ ಪ್ರದಕ್ಷಿಣೆಗೆ ಸಿದ್ಧರಾಗಬೇಕು. ಪ್ರದಕ್ಷಿಣೆಯ ನಂತರ ಆ ತೆಂಗಿನಕಾಯಿಯನ್ನು ನಿಗದಿತ ಸ್ಥಳದಲ್ಲಿ ಕಟ್ಟಲಾಗುತ್ತದೆ.
16 ದಿನದಲ್ಲಿ ಪ್ರತೀ ದಿನ 108 ಬಾರಿ ಹನುಮಾನ್ ಚಾಲಿಸವನ್ನು ಪಠಿಸಬೇಕು. 4 ದಿನ ದಿನಕ್ಕೆ 41 ಬಾರಿ ಪ್ರದಕ್ಷಿಣೆ ಹಾಕಬೇಕು. ತೆಂಗಿನ ಕಾಯಿ ಕಟ್ಟಿದ 16 ನೇ ದಿನ ಬಂದು ಕಟ್ಟಿದ ಕಾಯಿಯನ್ನು ತೆಗೆದು ಸಿಹಿ ತಯಾರಿಸಿ ತಿನ್ನಬೇಕು ಆಗ ಎಲ್ಲವೂ ಶುಭವಾಗುತ್ತದೆ, ಮಾಡಿದ ಸಂಕಲ್ಪ ಈಡೇರುತ್ತದೆ ಎನ್ನುತ್ತಾರೆ.