ಕುರಿಗಳು ಸಾಮಾನ್ಯವಾಗಿ ಜಾನುವಾರಾಗಿ ಇಟ್ಟುಕೊಳ್ಳಲಾದ ಒಂದು ಚತುಷ್ಪದಿ ಮತ್ತು ರೋಮಂಥಕ ಸಸ್ತನಿ. ಎಲ್ಲ ರೋಮಂಥಕಗಳಂತೆ ಕುರಿಯು ಆರ್ಟಿಯೊಡ್ಯಾಕ್ಟಿಲಾ ಗಣದ ಸದಸ್ಯ. ಕುರಿ ಎಂಬ ಹೆಸರು ಓವೀಸ್ ಜಾತಿಯಲ್ಲಿನ ಅನೇಕ ಪ್ರಜಾತಿಗಳಿಗೆ ಅನ್ವಯಿಸುತ್ತದಾದರೂ ದೈನಂದಿನ ಬಳಕೆಯಲ್ಲಿ ಅದು ಬಹುತೇಕ ಯಾವಾಗಲೂ ಓವೀಸ್ ಆರಿಯೆಸ್ ಅನ್ನು ನಿರ್ದೇಶಿಸುತ್ತದೆ. ಟೊಳ್ಳು ಕೊಂಬಿನ ಮೆಲುಕು ಹಾಕುವ ಸಸ್ಯಾಹಾರಿ ಸ್ತನಿಗಳನ್ನೊಳಗೊಂಡ ಬೋವಿಡೀ ಕುಟುಂಬದ ಕ್ಯಾಪ್ರಿನೀ ಎಂಬ ಉಪಕುಟುಂಬಕ್ಕೆ ಸೇರಿದ ಸ್ತನಿ ಇದಾಗಿದೆ. ಗ್ರಾಮಾಂತರ ಪ್ರದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ಕಿರುಕಾಮಧೇನು ಎಂದು ಕರೆಯಬಹುದು. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವನ್ನು ವಹಿಸಿದೆ. ಕುರಿ ಸಾಕಾಣಿಕೆ ಸಣ್ಣ ಮತ್ತು ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ. ನಮ್ಮ ರಾಜ್ಯದಲ್ಲಿ ಕುರಿಗಳನ್ನು ಮುಖ್ಯವಾಗಿ ಮಾಂಸ, ಉಣ್ಣೆ, ಚರ್ಮ ಮತ್ತು ಗೊಬ್ಬರಗಳಿಗಾಗಿ ಸಾಕುತ್ತಾರೆ. ಕುರಿ ಸಾಕಾಣಿಕೆ ಸುಲಭ ಹಾಗೂ ಲಾಭದಾಯಕ. ಕುರಿಗಳು ಎಂತಹ ಸಂಕಷ್ಟ ಸಮಯದಲ್ಲೂ ಬದುಕಿ ಉಳಿಯಬಲ್ಲವು. ಕುರಿಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಕುರಿಯಿಂದ ನಮಗೆ ಮಾಂಸ, ಹೊದಿಕೆ ತಯಾರಿಸಲು ಉಣ್ಣೆ ದೊರಕುತ್ತವೆ. ಇವಲ್ಲದೆ ಗೊಬ್ಬರ, ಚರ್ಮ, ಹಾಲು ಮುಂತಾದವುಗಳೂ ದೊರಕುತ್ತವೆ.
ದೊಡ್ಡ ಪ್ರಮಾಣದಲ್ಲಿ ಕುರಿಗಳನ್ನು ಮೇಯಿಸಿಕೊಂಡು ಊರಿಂದ ಊರಿಗೆ ಮೇವನ್ನು ಅರಸಿ ಕುರಿಗಾಯಿಗಳು ಹೋಗುತ್ತಾರೆ. ಕುರಿ ಕಾಯಿಸುವುದು ದಿನಕ್ಕೆ ಒಂದೊಂದು ಊರಿನಲ್ಲಿ ಮೇವನ್ನು ಇರುವ ಜಾಗದಲ್ಲಿ ಟೆಂಟ್ ಹಾಕಿಕೊಂಡು ಕುರಿಗಳನ್ನು ಮೇಯಿಸಲು ಬಿಡುತ್ತಾರೆ. ಮರಿಗಳನ್ನು ಆಟೋದ ಮೂಲಕ ಹಾಗೂ ದೊಡ್ಡ ಕುರಿಗಳನ್ನು ನಡಿಗೆಯ ಮೂಲಕವೇ ಇನ್ನೊಂದು ಊರಿಗೆ ಹೋಗಿ ಮೇಯಲು ಬಿಡುತ್ತಾರೆ. ಇವರು 3 ತಿಂಗಳಾದ ಕುರಿಯ ಮರಿಯನ್ನು ನಾಲ್ಕರಿಂದ ಐದು ಸಾವಿರ ರೂಗಳಿಗೆ ಮಾರುತ್ತಾರೆ. ಕುರಿಗಳು ಆರು ತಿಂಗಳಿಗೊಮ್ಮೆ ಮರಿಯನ್ನು ಹಾಕುತ್ತದೆ.
ವರ್ಷಕ್ಕೆ ಎರಡು ಮರಿಗಳು ದೊರಕುತ್ತದೆ. ಅಂದರೆ ಅವರ ಬಳಿ ಇರುವ 300 ಕುರಿಗಳಿಂದ ವರ್ಷಕ್ಕೆ 600 ಮರಿಗಳು ದೊರಕುತ್ತವೆ. ಇದರಿಂದ ವಾರ್ಷಿಕ ವರಮಾನ 6 ರಿಂದ 7 ಲಕ್ಷ ದೊರಕುತ್ತದೆ. ಇರುವ ಉತ್ಪನ್ನದಲ್ಲಿ ಅರ್ಧ ಖರ್ಚುಗಳು ಕುರಿಯ ಸಾಕಾಣಿಕೆಗೆ ಖರ್ಚಾಗುತ್ತದೆ. ಕುರಿಗಳಿಗೆ ಪೌಷ್ಟಿಕತೆಯ ಸಲುವಾಗಿ ಔಷಧಿಗಳನ್ನು ಮತ್ತು ಆಹಾರಗಳನ್ನು ನೀಡಬೇಕಾಗುತ್ತದೆ. ಕುರಿಯ ಸಾಕಣೆಯಲ್ಲಿ ಶ್ರಮಗಳು ಹೆಚ್ಚಾಗಿ ಬೇಕಾಗುತ್ತದೆ. ಊರಿಂದ ಊರಿಗೆ ಕುರಿ ಕಾಯಿಸಿಕೊಂಡು ಹೋಗುವವರಿಗೆ ಕುರಿಗಳಿಗೆ ಸರಿಯಾದ ಆಹಾರ ದೊರೆತರೆ ಮಾತ್ರ ಪ್ರಯೋಜನವಾಗುತ್ತದೆ. ಸರಿಯಾದ ಮೇವು ದೊರಕದಿದ್ದಲ್ಲಿ ಊರಿಂದ ಊರಿಗೆ ಅಲೆಯುವ ಕೆಲಸವೇ ಆಗುತ್ತದೆ.