ಮಹಾಭಾರತದ ಕಥೆ ನಮಗೆಲ್ಲಾ ತಿಳಿದಿರುವುದೆ. ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಜಯಗಳಿಸುತ್ತಾರೆ. ಕೌರವರು, ಅಭಿಮನ್ಯು, ಭೀಷ್ಮ ಪಿತಾಮಹರು, ಗುರು ದ್ರೋಣರು, ಉಪ ಪಾಂಡವರು ಎಲ್ಲರೂ ಹತರಾದರು. ಅವರನ್ನು ಅಲ್ಲಿಯೆ ದಹನ ಮಾಡಲಾಯಿತು. ಧರ್ಮಜನಿಗೆ ಪಟ್ಟಾಭಿಷೇಕ ಆಗಿ ಪಟ್ಟಕ್ಕೆರಿದ್ದ. ಪ್ರಜೆಗಳು ಕೂಡ ಸುಭಿಕ್ಷವಾಗಿ ಜೀವನ ನಡೆಸುತ್ತಿದ್ದರು. ಆದರೆ ಮೂರು ಜನರು ಮಾತ್ರ ನೋವಿನಲ್ಲಿದ್ದರು. ಪುತ್ರರನ್ನು ಕಳೆದುಕೊಂಡ ದೃತರಾಷ್ಟ್ರ ಹಾಗೂ ಗಾಂಧಾರಿ ಮತ್ತೆ ಪುತ್ರ ವಿಯೋಗ ಹಾಗೂ ಭೀಷ್ಮ ಪಿತಾಮಹರ ಅಂತ್ಯದಿಂದ ನೋವು ಪಡುತ್ತಿದ್ದ ಕುಂತಿ. ಪುತ್ರರು ಗೆದ್ದು ರಾಜ್ಯಭಾರ ನಡೆಸುವ ಕಾಲದಲ್ಲಿ ದೃತರಾಷ್ಟ್ರ ಹಾಗೂ ಗಾಂಧಾರಿಯೊಂದಿಗೆ ಅರಣ್ಯವಾಸಕ್ಕೆ ಸಿದ್ದಳಾದಳೂ ಕುಂತಿ. ಅವಳ ಈ ನಡೆಗೆ ಕಾರಣವೇನು ಎಂಬುದನ್ನು ನಾವೂ ತಿಳಿಯೋಣ.
ಮೊದಲಿಂದಲೂ ಕುಂತಿಯ ಪಾಲಿಗೆ ಸಿಕ್ಕಿದ್ದು ಬರಿಯ ನೋವುಗಳೆ. ಪಾಂಡುವಿನ ಪಟ್ಟದ ರಾಣಿಯಾದ ಕುಂತಿಯನ್ನು ಪದೆ ಪದೆ ಕೆಣಕುತ್ತಿದ್ದಳು ಎರಡನೆಯ ಹೆಂಡತಿ ಮಾದ್ರಿ. ಮಾದ್ರಿಯ ಜಿಂಕೆಯ ಆಸೆಗೆ ಪಾಂಡು ಶಾಪಗ್ರಸ್ಥನಾದರೂ ತನಗೆ ದೊರಕಿದ್ದ ವರದಿಂದ ಮಾದ್ರಿಯ ಮಡಿಲಿಗೆ ನಕುಲ ಸಹದೇವನ್ನು ಕೊಟ್ಟಳು ಕುಂತಿ. ನಂತರ ಪಾಂಡುವನ್ನು ಕಳೆದುಕೊಂಡಳು. ಕುಂತಿ ಮಕ್ಕಳು ಪಾಂಡವರಿಗೆ ಮೋಸ ಮಾಡಿ, ಪ್ರತಿ ಕ್ಷಣ ಅವಮಾನಿಸುತ್ತಿದ್ದ ದುರ್ಯೋಧನ. ಇಷ್ಟು ಸಾಲದೆಂಬಂತೆ ಭೀಮನಿಗೆ ವಿಷಪ್ರಾಶನ ಮಾಡಿದ್ದ. ಅರಗಿನ ಮನೆಯಲ್ಲಿ ಚಿಕ್ಕಮ್ಮನನ್ನು ಮಾತೃಸ್ವರೂಪಿ ಎಂದೂ ತಿಳಿಯದೆ ಬೆಂಕಿ ಹಚ್ಚಿದ್ದ. ಯುದಿಷ್ಠಿರನ ಇಂದ್ರಪ್ರಸ್ಥದ ನಗರಪೂಜೆಗೂ ಕುಂತಿಗೆ ಹೋಗಲು ಆಗಲಿಲ್ಲ. ದ್ರೌಪದಿಯ ವಸ್ತ್ರಾಪಹರಣ ಮಾಡಿ ಕುಂತಿಯ ಕುಲವಧುವಿನ ಅವಮಾನ ಮಾಡಿದ್ದ. ಇವೆಲ್ಲಾ ಅನ್ಯಾಯಗಳನ್ನು ದುರ್ಯೋಧನ ಮಾಡುತ್ತಿದ್ದರು ದೃತರಾಷ್ಟ್ರ ಮಗನಿಗೆ ಬುದ್ದಿ ಹೇಳದೆ ಸುಮ್ಮನೆ ಇರುತ್ತಿದ್ದ. ಗಾಂಧಾರಿಗೂ ಅಸಹಾಯಕತೆ ಕಾಡಿತ್ತೊ ಇಲ್ಲ ಮಗನ ಮೇಲಿನ ಮೋಹ ತಡೆದಿತ್ತೊ ದುರ್ಯೋಧನನ ನಡವಳಿಕೆ ಬದಲು ಮಾಡಲು ಹೋಗಲಿಲ್ಲ. ಇದರಿಂದ ಕುರುಕ್ಷೇತ್ರ ಯುದ್ಧವೇ ನಡೆದು ಹೋಯಿತು.
ಕುರುಕ್ಷೇತ್ರ ಯುದ್ಧ ಮುಗಿದು ಹದಿನೈದು ವರ್ಷಗಳ ಮೇಲೆ ರಾಜ್ಯ ಧರ್ಮ ಹಾಗೂ ಸುಭಿಕ್ಷದಿಂದ ಕೂಡಿರುವ ಸಮಯದಲ್ಲಿ ದೃತರಾಷ್ಟ್ರ, ಗಾಂಧಾರಿ ಮತ್ತೆ ಕುಂತಿ ಮಾತ್ರ ಜೀವನ ಜೀವಿಸದೆ, ಜೀವನ ತಳ್ಳುತ್ತಿದ್ದರು. ರಾಜ್ಯದ ವಿಷಯದಲ್ಲಿ, ಕುತಂತ್ರದಿಂದ ಶತ್ರುಗಳಂತಿದ್ದರೂ ನೋವು ಈ ಮೂವರಲ್ಲಿ ಒಂದೆ ತೆರೆನಾಗಿತ್ತು. ಕುಟುಂಬದ ಕಲಹದ ಕಾರಣದಿಂದ ಬಲಿಯಾದ ಮುಗ್ಧ ಕೋಟ್ಯಾಂತರ ಜೀವಗಳ ಸಾವು ಕಾಡುತ್ತಿತ್ತು. ಇಂತಹ ಸಮಯದಲ್ಲಿ ವಾನಪ್ರಸ್ಥ ಸ್ವೀಕರಿಸುವ ಸಲಹೆಯನ್ನು ವಿಧುರನಿಂದ ಪಡೆದು, ಅದನ್ನು ಘೋಷಿಸಿದ್ದರು ಗಾಂಧಾರಿ ಮತ್ತು ದೃತರಾಷ್ಟ್ರ. ಇದನ್ನು ತಿಳಿದ ಪಾಂಡವರು ತಡೆಯಲು ಯತ್ನಿಸಿದರು ಅವರಿಂದ ನಿರ್ಧಾರವನ್ನು ಬದಲಿಸಲು ಸಾಧ್ಯವಾಗಲಿಲ್ಲ. ತಮ್ಮ ದೊಡ್ಡಪ್ಪ, ದೊಡ್ಡಮ್ಮನನ್ನು ಚೆನ್ನಾಗಿಯೆ ನೋಡಿಕೊಳ್ಳುತ್ತಿದ್ದರು ಪಾಂಡವರು. ಆಗಾಗ ಭೀಮ ಕೊಂಕು ಮಾತನಾಡುತ್ತಿದ್ದ ಬಿಟ್ಟರೆ ಅವರ ವಾನಪ್ರಸ್ಥ ತಡೆಯಲು ಅವನು ಪ್ರಯತ್ನಿಸಿದ. ಗುರು ಹಿರಿಯರನ್ನು ಗೌರವಿಸುವ ಪಾಂಡವರ ಗುಣ , ಸಂಸ್ಕಾರ ಅನಾವರಣಗೊಂಡುತ್ತು. ಹಿರಿಯರ ಅಪೇಕ್ಷೆ ತಿರಸ್ಕರಿಸಲಾಗದೆ ಒಪ್ಪಿದ್ದರು ಅಷ್ಟರಲ್ಲಿಯೆ ಮತ್ತೊಂದು ಆಘಾತ ಅವರ ಪಾಲಿಗೆ ಇತ್ತು. ಕುಂತಿಯು ಕೂಡ ಅರಣ್ಯವಾಸಕ್ಕೆ ತೆರಳಲು ಸಜ್ಜಾಗಿ ನಿಂತಿದ್ದಳು. ಪಾಂಡವರ ಯಾವ ಮಾತಿಗೂ ಕರಗಲೆ ಇಲ್ಲ.
ದೃತರಾಷ್ಟ್ರ ಹಾಗೂ ಸಂಜಯ ಹುಟ್ಟಿದಾಗಿನಿಂದ ಬೇರೆ ಬೇರೆ ಇದ್ದವರಲ್ಲ. ಕುರುಕ್ಷೇತ್ರದ ಮಹಾಯುದ್ಧವನ್ನು ಸಂಜಯನ ಕಣ್ಣಿನ ಮುಖಾಂತರ ದೃತರಾಷ್ಟ್ರ ನೋಡುದ್ದ. ಈಗಲೂ ಸಂಜಯ ದೃತರಾಷ್ಟ್ರನನ್ನು ಬಿಟ್ಟು ಕೊಡಲಿಲ್ಲ. ಅವನು ಸಹ ದೃತರಾಷ್ಟ್ರನೊಂದಿಗೆ ವಾಸಪ್ರಸ್ಥಕ್ಕೆ ಹೊರಟ. ಅರಣ್ಯ ವಾಸ ಪ್ರಾರಂಭವಾದ ಮೇಲೆ ಗಂಗಾ ನದಿ ತೀರದಲ್ಲಿ ಬೀಡು ಬಿಡಲು ನಿಶ್ಚಯಿಸಿದರು. ಆಶ್ರಮವಾಸಿಗಳಾದರು. ಒಂದು ದಿನ ದೃತರಾಷ್ಟ್ರ ಗಂಗಾ ಸ್ನಾನ ಮಾಡುತ್ತಿದ್ದಾಗ ಗುಡಿಸಲಿಗೆ ಬೆಂಕಿ ಬಿದ್ದಿತ್ತು. ಹುಟ್ಟು ಕುರುಡನಾಗಿದ್ದ ದೃತರಾಷ್ಟ್ರನಿಗೆ ಏನಾದರೂ ಆದರೆ ಎಂಬ ಭಯಹೊತ್ತು ಗಾಂಧಾರಿ, ಕುಂತಿ ಹಾಗೂ ಸಂಜಯ ಓಡಿ ಬಂದಿದ್ದರು. ಅನ್ನ ಆಹಾರಗಳಿಲ್ಲದೆ ಜೀವಿಸುತ್ತಿದ್ದರು. ನೀರಿನಲ್ಲಿ ಇದ್ದ ದೃತರಾಷ್ಟ್ರನಿಗೆ ಸಂಜಯ ಕೂಗಿ ಹೇಳಿದ್ದ. ಕಾಡಿಗೆ ಬೆಂಕಿ ಬಿದ್ದಿದೆ ಬೇಗ ಬನ್ನಿ ಇಲ್ಲಿಂದ ಹೋಗಬೇಕು ಎಂದು. ಸಂಜಯನ ಮಾತು ಕೇಳುತ್ತಿದ್ದಂತೆ ದೃತರಾಷ್ಟ್ರ ಮುಕ್ತಿಯ ಆಲೋಚನೆಗೆ ಇಳಿದಿದ್ದ. ಇದು ಮುಕ್ತಿಯ ಸಮಯ ಮಾತೆ ಗಂಗೆಯಲ್ಲಿ ಸ್ನಾನ ಆಗಿದೆ ಈಗ ಅಗ್ನಿದೇವನ ಸ್ಪರ್ಶದಿಂದ ಎಲ್ಲಾ ಪಾಪ ನಿರ್ಮೂಲನೆ ಆಗುತ್ತದೆ ನಾನು ಎಲ್ಲಿಗೂ ಬರಲಾರೆ ಎಂದಿದ್ದ ದೃತರಾಷ್ಟ್ರ. ಗಾಂಧಾರಿಯ ಸಹಮತ ಸಿಗುತ್ತದೆ. ಕುಂತಿಯು ಅಲ್ಲೆ ಉಳಿಯುತ್ತಾಳೆ. ಅಗ್ನಿದೇವನಲ್ಲಿ ಲೀನವಾಗುತ್ತಾರೆ ಈ ಮೂವರು. ಇದನ್ನು ಕಂಡ ಸಂಜಯ ದುಃಖದಿಂದ ಹಿಮಾಲಯ ಸೇರುತ್ತಾನೆ. ಇದಾದ ಒಂದು ವರ್ಷದ ಮೇಲೆ ಹಸ್ತಿನಾಪುರಕ್ಕೆ ಆಗಮಿಸಿದ ನಾರದರನ್ನು ಕಂಡು ಯುದಿಷ್ಠಿರ ಸತ್ಕಾರ ಮಾಡುತ್ತಾನೆ. ಈ ಸಮಯದಲ್ಲಿ ದೊಡ್ಡಪ್ಪ , ದೊಡ್ಡಮ್ಮ ಹಾಗೂ ತಾಯಿ ಕುಂತಿ ಇರಬೇಕಿತ್ತು. ಅವರಿಗೂ ನಿಮ್ಮ ದರುಷನ ಭಾಗ್ಯ ದೊರೆಯುತ್ತಿತ್ತು ಎಂದು ಬೇಸರ ಪಡುತ್ತಾನೆ. ಆಗ ನಾರದ ಮುನಿಗಳು ತಾವು ಬಂದಿರುವುದೆ ಅವರ ವಿಚಾರ ತಿಳಿಸಲು ಒಂದು ವರ್ಷದ ಹಿಂದೆಯೆ ಮೂವರು ಸ್ವರ್ಗಸ್ಥರಾದರು. ಬೆಂಕಿಗೆ ಆಹುತಿಯಾಗಿ ಪರಮಾತ್ಮನನ್ನು ಸೇರಿದ್ದಾರೆ ಎಂದರು. ಇದನ್ನು ಕೇಳಿದ ಇಡಿ ಹಸ್ತಿನಾಪುರ ದುಃಖದಿಂದ ಮುಳುಗಿತು. ದೊಡ್ಡಪ್ಪ, ದೊಡ್ಡಮ್ಮ ಹಾಗೂ ಮಾತೆ ನೆಲೆಸಿದ ಹಾಗೂ ಸ್ವರ್ಗಸ್ಥರಾದ ಜಾಗದಲ್ಲಿ ಅವರ ಕ್ರಿಯೆ ಮಾಡಿ ಶೋಕ ಅನುಭವಿಸುತ್ತಾರೆ ಪಾಂಡವರು.
ಈಗಿನ ದುರಂತ ಎಂದರೆ ಇದೆ ಇರಬಹುದೇನೂ. ಮಹಾಕಾವ್ಯದಲ್ಲಿ ಒಂದಾದ ಮಹಾಭಾರತದಲ್ಲಿ ಇದ್ದ ಕೌರವರ ಹಾಗೂ ಪಾಂಡವರ ದಾಯಾದಿ ಕಲಹ ಈಗಲೂ ಜೀವಂತವಾಗಿದೆ. ಮಾತೆಯ ಸ್ವರೂಪದ ಚಿಕ್ಕಮ್ಮನನ್ನು ಗೌರವಿಸದ ಕೌರವರು ಸಮಾಧಿಯಾದರು. ಶಿವನ ಕುರಿತು ತಪಸ್ಸು ಮಾಡಿ ಪಡೆದ ನೂರು ಮಕ್ಕಳನ್ನು ಕಳೆದುಕೊಂಡ ಗಾಂಧಾರಿ ಕಣ್ಣಿರಲ್ಲಿ ಮುಳುಗುವಂತಾಯಿತು. ಮಕ್ಕಳ ಮೇಲಿನ ಮೋಹದಿಂದ ಅವರನ್ನು ಸರಿದಾರಿಯಲ್ಲಿ ನಡೆಸದೆ ಇರುವುದಕ್ಕೆ ದೃತರಾಷ್ಟ್ರ ಕೊರಗುವಂತಾಯಿತು. ಇವೆಲ್ಲಾ ಮಾರ್ಗದರ್ಶನ ಸಿಕ್ಕರೂ ಬದಲಾಗದ ಮಾನವ ಕುಲ ಯಾವಾಗ ಬದಲಾಗುವುದೊ ಗೊತ್ತಿಲ್ಲ.