ಕುಂಭ ರಾಶಿಯ ಮಹಿಳೆಯರ ಗುಣ ಸ್ವಭಾವ, ಅವರ ವಿಚಾರಗಳು, ಜೀವನಶೈಲಿ, ವ್ಯಕ್ತಿತ್ವ ಹೇಗಿರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕಾಲ ಪುರುಷ ಪತ್ರಿಕೆಯ ಅನುಸಾರ ಕುಂಭ ರಾಶಿಯು ಲಾಭ ಸ್ಥಾನದಲ್ಲಿ ಅಥವಾ ಏಕಾದಶ ಭಾವದಲ್ಲಿ ಇರುತ್ತದೆ. ಕುಂಭ ರಾಶಿಯ ಅಧಿಪತಿಯು ಶನಿ ದೇವನಾಗಿದ್ದು ಇದು ಪುರುಷ ರಾಶಿಯಾಗಿರುವುದರ ಜೊತೆಗೆ ವಾಯು ತತ್ವ ರಾಶಿಯಾಗಿದೆ. ಈ ರಾಶಿಯನ್ನು ಸ್ಥಿರ ರಾಶಿಯೆಂದು ಹೇಳಲಾಗಿದೆ. ಕುಂಭ ರಾಶಿಯ ಮಹಿಳೆಯರ ಜೀವನವು ಸರಳವಾಗಿರುತ್ತದೆ. ಇವರ ಹಣಕಾಸಿನ ಸ್ಥಿತಿ ಎಷ್ಟೇ ಉತ್ತಮವಾಗಿದ್ದರೂ ಸಹ ಇವರು ಇರುವುದು ಸಿಂಪಲ್. ಈ ರಾಶಿಯ ಮಹಿಳೆಯರು ತೋರಿಕೆ ಅಥವಾ ಆಡಂಬರವನ್ನು ಇಷ್ಟ ಪಡುವುದಿಲ್ಲ. ಇವರನ್ನು ನೋಡಿದ ತಕ್ಷಣ ಯಾರಿಗೂ ಇವರ ಆರ್ಥಿಕ ಸ್ಥಿತಿಯ ಬಗ್ಗೆ ತಿಳಿಯುವುದಿಲ್ಲ. ಕುಂಭ ರಾಶಿಯ ಮಹಿಳೆಯರ ಬೌದ್ಧಿಕ ಸ್ತರವು ಉನ್ನತವಾಗಿರುತ್ತದೆ. ಇವರು ಸಾಮಾನ್ಯರಂತೆ ಇದ್ದರು ಉತ್ತಮ ವಿಚಾರಧಾರೆಯನ್ನು ಹೊಂದಿದವರಾಗಿರುತ್ತಾರೆ. ಕುಂಭ ರಾಶಿಯ ಮಹಿಳೆಯರಿಗೆ ಶೃಂಗಾರ, ಆಡಂಬರ ಇಷ್ಟವಾಗುವುದಿಲ್ಲ. ಇವರು ಲಾಜಿಕ್ ಆಗಿ ವಿಚಾರ ಮಾಡುತ್ತಾರೆ. ಇವರು ಶಿಸ್ತುಬದ್ಧ ಜೀವನವನ್ನು ಇಷ್ಟಪಡುತ್ತಾರೆ. ಯಾವ ಸಮಯಕ್ಕೆ ಯಾವ ಕೆಲಸ ಮಾಡಬೇಕೊ ಆ ಕೆಲಸವನ್ನು ಮಾಡುತ್ತಾರೆ. ಮನೆಯಲ್ಲಿ ಅಥವಾ ಕೆಲಸ ಮಾಡುವ ಜಾಗದಲ್ಲಿ ಯಾವ ವಸ್ತು ಎಲ್ಲಿರಬೇಕೊ ಅಲ್ಲಿಯೇ ಇರಬೇಕು. ಇವರು ತಮ್ಮ ಕೆಲಸದ ಬಗ್ಗೆ ಬದ್ಧರಾಗಿರುತ್ತಾರೆ. ಇವರಿಗೆ ಯಾವ ಕೆಲಸ ನೀಡಿದರೂ ಸಮಯಕ್ಕೆ ಸರಿಯಾಗಿ ಮುಗಿಸಿರುತ್ತಾರೆ. ಇವರು ಮಾಡುವ ಕೆಲಸದಲ್ಲಿ ತಪ್ಪಿರುವುದಿಲ್ಲ. ಇವರಿಗೆ ವಹಿಸಿರುವ ಕೆಲಸವನ್ನು ಸಾಕಷ್ಟು ವಿಚಾರಿಸಿ, ವಿಮರ್ಶಿಸಿ ಶಿಸ್ತು, ಶ್ರದ್ಧೆಯಿಂದ ಮಾಡುತ್ತಾರೆ. ಇವರಿಗೆ ಬೌದ್ಧಿಕ ಸ್ತರ ಉನ್ನತವಾಗಿರುವುದರಿಂದ ಇವರು ಯಾವ ಕೆಲಸ ಯಾವಾಗ ಹೇಗೆ ಮಾಡಬೇಕು ಎಂದು ನಿರ್ಣಯಿಸಿ ಮಾಡುತ್ತಾರೆ. ಇವರು ನೆಪ ಹೇಳುವುದಿಲ್ಲ ಆದ್ದರಿಂದ ಇವರು ಕೆಲಸದ ಒತ್ತಡಕ್ಕೆ ಒಳಗಾಗುತ್ತಾರೆ. ಇವರು ಅಡುಗೆಯನ್ನು ಸಹ ಉತ್ತಮವಾಗಿ ಮಾಡುತ್ತಾರೆ. ಈ ರಾಶಿಯ ಮಹಿಳೆಯರು ಕರ್ಮನಿಷ್ಠರು ಮತ್ತು ಬದ್ಧರು ಆಗಿರುತ್ತಾರೆ. ಆದರೆ ಇವರು ಸಿಗಬೇಕಾದ ಪ್ರಶಂಸೆಗಳಿಂದ ವಂಚಿತರಾಗಿರುತ್ತಾರೆ. ಇವರು ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಹೇಳುತ್ತಾರೆ ಇವರ ಈ ಗುಣ ಎಲ್ಲರಿಗೂ ಇಷ್ಟವಾಗುವುದಿಲ್ಲ ಹಾಗಾಗಿ ಇವರಿಗೆ ಅವಕಾಶಗಳು ಒಮ್ಮೊಮ್ಮೆ ಲಭಿಸುವುದಿಲ್ಲ. ಇವರಿಗೆ ಭಾವನೆಗಳು ಕಡಿಮೆ ಎನ್ನಬಹುದು ಇವರು ಭಾವನೆಗಳಿಗಿಂತ ಕೆಲಸಕ್ಕೆ ಪ್ರಾಶಸ್ತ್ಯ ಕೊಡುತ್ತಾರೆ. ಇವರು ಮೈಗಳ್ಳತನವನ್ನು ಸಹಿಸುವುದಿಲ್ಲ ಇವರ ಕೆಳಗೆ ಕೆಲಸ ಮಾಡುವವರು ಸೊಂಬೇರಿಗಳಾಗಿದ್ದರೆ ಇವರು ಸಹಿಸುವುದಿಲ್ಲ. ಶ್ರದ್ಧೆಯಿಂದ ಕೆಲಸ ಮಾಡುವ ಸಹೋದ್ಯೋಗಿಗಳಿಗೆ ಹೆಚ್ಚಿನ ಗೌರವ ಕೊಡುತ್ತಾರೆ.

ಇವರ ವಿಚಾರಗಳು ಬೇರೆಯವರಿಗಿಂತ ಅಥವಾ ಸಮಾಜ ನಂಬಿರುವ ಸಿದ್ಧಾಂತಗಳಿಗಿಂತ ಮುಂದಿರುತ್ತದೆ. ಇವರು ಆಧುನಿಕ ವಿಷಯಗಳನ್ನು ಬಹುಬೇಗನೆ ಒಪ್ಪುತ್ತಾರೆ ಮತ್ತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಕುಂಭ ರಾಶಿಯ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿರುವವರು ಸಂಬಂಧದಲ್ಲಿ ಪಾರದರ್ಶಕರಾಗಿರಬೇಕು. ಸುಳ್ಳು, ವಂಚನೆ ಇವರು ಸಹಿಸುವುದಿಲ್ಲ. ಇವರೊಂದಿಗೆ ಸಂಬಂಧ ಹೊಂದಿರುವ ಪುರುಷ ಶಿಸ್ತು ಬದ್ಧವಾಗಿದ್ಧರೆ ಮಾತ್ರ ಸಂಬಂಧ ದೀರ್ಘ ಕಾಲದವರೆಗೆ ಉಳಿಯುತ್ತದೆ. ಈ ರಾಶಿಯ ಮಹಿಳೆಯರು ನೋಡಲು ಆಕರ್ಷಿಣೀಯವಾಗಿರುತ್ತಾರೆ. ಇವರು ಸ್ವತಂತ್ರರು ಮನಸ್ಸಿನ ಮಾಲೀಕರು ಆಗಿರುತ್ತಾರೆ ಇವರು ಬೇರೆಯವರು ಆಜ್ಞೆ ಮಾಡುವುದನ್ನು ಸಹಿಸುವುದಿಲ್ಲ. ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವ ಇವರು ಬೇರೆಯವರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡು ಸಹಾಯ ಕೇಳುವುದಿಲ್ಲ. ಇವರು ಮಾತನಾಡಿದರೆ ಇತರರಿಗೆ ಆತ್ಮೀಯತೆಯ ಅನುಭವವಾಗುತ್ತದೆ. ತಮ್ಮ ಮಾತಿನ ಶೈಲಿಯಿಂದ ಇನ್ನೊಬ್ಬರನ್ನು ಪ್ರಭಾವಿತರನ್ನಾಗಿ ಮಾಡುತ್ತಾರೆ. ಇವರಿಗೆ ಎಲ್ಲೆಡೆ ಸ್ನೇಹಿತರು ಸಿಗುತ್ತಾರೆ. ತಮ್ಮ ಮಾತನಾಡುವ ಕಲೆಯಿಂದ ತಮ್ಮ ಕಡೆ ಸೆಳೆದುಕೊಳ್ಳುತ್ತಾರೆ. ಇವರು ರಹಸ್ಯ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಿಲ್ಲ. ಇವರ ಸ್ನೇಹ ಬಳಗದಲ್ಲಿ ಎಲ್ಲ ಜಾತಿಯ, ಸಂಸ್ಕೃತಿಯವರು ಇರುತ್ತಾರೆ. ಇವರು ಸಂಬಂಧವನ್ನು ಪ್ರೀತಿ, ಗೌರವ ಮತ್ತು ಜೀವಂತಿಕೆಯಿಂದ ತುಂಬಿಸುತ್ತಾರೆ. ಇವರು ಕುಟುಂಬದವರೊಂದಿಗೆ ವಿಶೇಷ ಅನುಬಂಧ ಹೊಂದಿರುತ್ತಾರೆ. ತಮ್ಮ ಕುಟುಂಬದವರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಕುಟುಂಬದ ಶ್ರೇಯಸ್ಸಿಗಾಗಿ ಎಂತಹ ನಿರ್ಧಾರ ಬೇಕಾದರೂ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಜೀವನದಲ್ಲಿ ಎಂತಹ ಕ್ಲಿಷ್ಟ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಜೀವನವನ್ನು ನೀರಸವಾಗಿ ಕಳೆಯಲು ಇಷ್ಟಪಡುವುದಿಲ್ಲ. ಒಟ್ಟಾರೆಯಾಗಿ ಇವರು ಉಳಿದ ರಾಶಿಯ ಮಹಿಳೆಯರಿಗಿಂತ ವಿಭಿನ್ನವಾಗಿರುತ್ತಾರೆ.

By

Leave a Reply

Your email address will not be published. Required fields are marked *