ಕರ್ನಾಟಕ ಪ್ರೇಕ್ಷಣೀಯ ಸ್ಥಳಗಳ ಆಗರವಾಗಿದೆ. ಒಂದು ಕಡೆ ಪ್ರಕೃತಿಯ ಸೌಂದರ್ಯದ ಮೂಲಕ, ಇನ್ನೊಂದು ಕಡೆ ದೇವಾಲಯಗಳ ವಿಶಿಷ್ಟತೆಗಳಿಂದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಇಂತಹುದೆ ಒಂದು ಗುಹಾಂತರ ದೇವಾಲಯದ ಕುರಿತು ಈ ಲೇಖನದಲ್ಲಿ ತಿಳಿಯೋಣ.
ಕರ್ನಾಟಕ ರಾಜ್ಯದ ಕರಾವಳಿಯ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಕೊಲ್ಲೂರು ಮಾರ್ಗವಾಗಿ ಸಾಗಿದರೆ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯವಿದೆ. ಇದು ದಟ್ಟ ಕಾನನದ ಮದ್ಯ ಕೆಂಪು ಕಲ್ಲಿನ ವಿಸ್ಮಯಕಾರಿ ಗುಹೆಯಾಗಿದೆ. ಗುಹೆಯೊಳಗೆ ಯಾವಾಗಲೂ ನೀರಿನ ಸೆಲೆಯೊಂದು ಹರಿಯುತ್ತಾ ಇರುತ್ತದೆ. ಈ ನೀರಿನಲ್ಲಿ ಯಾವಾಗಲೂ ಹಾವುಗಳು ಮತ್ತು ಮೀನುಗಳು ಅತ್ತಿಂದಿತ್ತ ಸಂಚರಿಸುತ್ತಿರುತ್ತವೆ ಆದರೆ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅವು ತೊಂದರೆ ಮಾಡುವುದಿಲ್ಲ. ಈ ನೀರಿನಲ್ಲಿ ನಡೆದುಕೊಂಡು ಗುಹೆಯೊಳಗೆ ಸಾಗಿದರೆ, ಗುಹೆಯ ಪ್ರವೇಶ ದ್ವಾರದಿಂದ ಅಂದಾಜು ಇಪ್ಪತ್ತು ಅಡಿ ಒಳಗೆ ತೇಜೋಮಯವಾದ ಉದ್ಭವ ಶಿವಲಿಂಗದ ದರ್ಶನವಾಗುತ್ತದೆ, ಈ ಶಿವಲಿಂಗವನ್ನು ಕೇಶವನಾಥ ಎಂದು ಕರೆಯುತ್ತಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಪ್ರಕೃತಿ ನಿರ್ಮಿತವಾದ ಸುಂದರ ಗುಹಾದೇವಾಲಯವಿದ್ದರೂ ಪ್ರಚಾರದ ಕೊರತೆಯಿಂದಾಗಿ ಈ ದೇವಾಲಯದ ಕುರಿತು ಬಹಳಷ್ಟು ಜನರಿಗೆ ತಿಳಿದಿಲ್ಲ.
ಉಡುಪಿ ಜಿಲ್ಲೆಯಲ್ಲೆ ವಿಶಿಷ್ಟವಾದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯವು ಅತ್ಯಂತ ಪ್ರಾಚೀನ ಶಿವ ದೇವಾಲಯವಾಗಿದ್ದು ಸುಮಾರು ಎಂಟು ಅಡಿಗಳಷ್ಟು ಎತ್ತರವಿದೆ ಹಾಗೂ ದೇವಾಲಯದ ಒಳಗೆ ಸುಮಾರು ಎರಡು ನೂರು ಜನರು ನಿಲ್ಲುವಷ್ಟು ವಿಶಾಲವಾದ ಜಾಗವನ್ನು ಹೊಂದಿದೆ. ಪೂರ್ಣ ಕತ್ತಲು ತುಂಬಿದ ಈ ಗುಹೆಯೊಳಗೆ ದೇವರ ದೀಪದ ಬೆಳಕನ್ನು ಬಿಟ್ಟರೆ ಬೇರೆ ಬೆಳಕಿನ ವ್ಯವಸ್ಥೆಯಿಲ್ಲ. ಕೇಶವನಾಥ ಶಿವಲಿಂಗದ ಹಿಂಬಾಗದಲ್ಲಿ ಗುಹಾ ಮಾರ್ಗ ಮುಂದುವರೆಯುತ್ತದೆ. ಕತ್ತಲು ಮತ್ತು ನೀರಿನ ಹರಿವು ಕಾಣಿಸಲ್ಪಡುವ ಈ ಮಾರ್ಗದಲ್ಲಿ ಹೋಗಿ ಅನ್ವೇಷಣೆ ಮಾಡಲು ಇನ್ನೂ ಯಾರು ಕೂಡ ಮನಸ್ಸು ಮಾಡಿಲ್ಲ ಆದರೆ ನಂಬಿಕೆಗಳ ಪ್ರಕಾರ ಈ ಮಾರ್ಗವು ನೇರವಾಗಿ ಕಾಶಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಲಾಗುತ್ತದೆ. ಶಿವನು ಇದೆ ಮಾರ್ಗದ ಮೂಲಕ ಕಾಶಿಗೆ ತೇರಳುತ್ತಿದ್ದರು ಎಂಬ ನಂಬಿಕೆ ಇದೆ. ಸ್ಥಳೀಯ ದಂತ ಕಥೆಗಳ ಪ್ರಕಾರ ಇಲ್ಲಿ ಋಷಿ ಮುನಿಗಳು ಕಾಶಿಯಲ್ಲಿ ನೆಲೆಸಿರುವ ಶಿವನ ಕುರಿತು ಕಠಿಣ ತಪಸ್ಸು ಮಾಡಿದಾಗ,ಋಷಿ ಮುನಿಗಳ ತಪಸ್ಸಿಗೆ ಮೆಚ್ಚಿದ ಶಿವನು ಕೇಶವನಾಥರ ರೂಪದಲ್ಲಿ ಪ್ರತ್ಯಕ್ಷರಾಗಿ ಮುನಿಗಳಿಗೆ ಹರಸಿ ಇದೆ ಗುಹೆಯ ಮೂಲಕ ಕಾಶಿಗೆ ತೆರಳಿದ್ದಾರೆ ಎಂಬ ನಂಬಿಕೆಯಿದೆ.
ಅಲ್ಲದೆ ಈ ಗುಹೆಯು ಅದ್ಬುತಗಳ ಆಗರವಾಗಿದೆ. ಈ ಗುಹೆಯ ಎದುರು ಒಂದು ಅಶ್ವತ್ಥ ಕಟ್ಟೆಯಿದ್ದು ,ರಾತ್ರಿಯ ವೇಳೆ ಅಶ್ವತ್ಥ ಕಟ್ಟೆಯಿಂದ ಗುಹೆಯೊಳಗೆ ಬೆಳಕಿನ ಕಿರಣಗಳು ಹಾದು ಹೋಗುತ್ತವೆ ಎಂಬ ನಂಬಿಕೆಯಿದೆ. ಈ ಗುಹಾಲಯದಲ್ಲಿ ಪ್ರತಿದಿನ ಸಂಜೆ ಐದು ಗಂಟೆಗೆ ಸರಿಯಾಗಿ ಕೇಶವನಾಥ ಶಿವಲಿಂಗಕ್ಕೆ ಸೂರ್ಯನ ಕಿರಣಗಳು ಸ್ಪರ್ಶಿಸುತ್ತದೆ ಇದು ವಿಶೇಷವಾಗಿದೆ, ಮತ್ತೊಂದು ವಿಶೇಷವೇನೆಂದರೆ ಈ ಗುಹೆಯಲ್ಲಿ ವರ್ಷದ ಎಲ್ಲಾ ಕಾಲದಲ್ಲಿಯೂ ಮೊಣಕಾಲ ಮಟ್ಟಿಗೆ ನೀರು ತುಂಬಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ನೀರಿನ ಪ್ರಮಾಣ ಸ್ವಲ್ಪ ಜಾಸ್ತಿ ಇರುತ್ತದೆ ಆದರೆ ಶಿವಲಿಂಗ ಮಾತ್ರ ಎಂದು ಮುಳುಗುವುದಿಲ್ಲ.
ಈ ಗುಹಾಲಯದಲ್ಲಿ ಹಲವು ಪವಾಡ ಸದೃಶ ಘಟನೆಗಳು ನಡೆದಿವೆ. ಹಿಂದೆ ಒಬ್ಬ ಭೂ ಮಾಲೀಕನ ಗದ್ದೆಗೆ ಹಸುವೊಂದು ಬಂದು ರಾತ್ರಿಯ ಹೊತ್ತು ಹಾನಿ ಮಾಡುತ್ತಾ ಇರುತ್ತದೆ. ಹಾಗಿರುವಾಗ ಭೂ ಮಾಲೀಕನು ರಾತ್ರಿ ಸಮಯದಲ್ಲಿ ಕಾದು ಕುಳಿತು ಗದ್ದೆಗೆ ನುಗ್ಗಿದ ಹಸುವನ್ನು ಅಟ್ಟಿಸಿಕೊಂಡು ಬರುತ್ತಾನೆ. ಆಗ ಹಸು ಮೂಡುಗಲ್ಲು ಗುಹಾಲಯಕ್ಕೆ ಪ್ರವೇಶಿಸುತ್ತದೆ. ಅದನ್ನು ಹಿಂಬಾಲಿಸುತ್ತಾ ಭೂ ಮಾಲೀಕನು ಕೂಡ ಗುಹೆಯನ್ನು ಪ್ರವೇಶಿಸುತ್ತಾನೆ. ಆದರೆ ಹಸು ಸ್ವಲ್ಪ ದೂರ ಕ್ರಮಿಸಿ ಮಾಯವಾಗುತ್ತದೆ. ಕತ್ತಲೆಯ ಗುಹೆಯಲ್ಲಿ ಬಂಧಿಯಾದ ಭೂ ಮಾಲೀಕನಿಗೆ ಹೊರ ಬರಲು ಮಾರ್ಗವು ಕಾಣಿಸುತ್ತಿರುವುದಿಲ್ಲ. ಭಯಗೊಂಡ ಆತನು ದೇವರ ಸ್ಮರಣೆಯನ್ನು ಮಾಡಿದಾಗ ಗುಹೆಯ ಪ್ರವೇಶ ದ್ವಾರದಲ್ಲಿ ಸಣ್ಣ ಜ್ಯೋತಿಯೊಂದು ಪ್ರಕಾಶಿಸುತ್ತದೆ. ತನಗೆ ಗುಹೆಯಿಂದ ಹೊರಬರಲು ದೇವರೆ ಜ್ಯೋತಿಯಾಗಿ ದಾರಿ ತೋರಿಸಿದ್ದಾಗಿ ತಿಳಿದ ಭೂ ಮಾಲೀಕನು ಗೋವು ದಾಳಿ ಮಾಡಿದ ಗದ್ದೆಯನ್ನು ದೇವರಿಗಾಗಿ ಉಂಬಳಿ ಬಿಟ್ಟು ಬಿಡುತ್ತಾನೆ.
ಇತ್ತೀಚೆಗೆ ಮೂಡುಗಲ್ಲು ಗುಹಾಂತರ ದೇವಾಲಯದಲ್ಲಿ ಕೇಶವನಾಥ ಶಿವಲಿಂಗದ ಸಮೀಪದಲ್ಲಿ ಮತ್ತೊಂದು ಶಿವಲಿಂಗ ಉದ್ಭವಿಸಿ ಭಕ್ತರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಪ್ರತಿ ಸೋಮವಾರ, ವಿಶೇಷವಾಗಿ ಕಾರ್ತಿಕ ಸೋಮವಾರದಂದು ದೂರದ ಊರುಗಳಿಂದ ಭಕ್ತಾದಿಗಳು ಮೂಡುಗಲ್ಲು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಬರುವ ಎಳ್ಳಮಾವಾಸ್ಯೆಯಂದು ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತದೆ. ಅಂದು ಭಕ್ತಾದಿಗಳು ಬೆಳಗ್ಗೆ ನಾಲ್ಕು ಗಂಟೆಗೆ ಈ ಕ್ಷೇತ್ರಕ್ಕೆ ಆಗಮಿಸಿ ದೇವಸ್ತಾನದ ಪಕ್ಕದಲ್ಲೆ ಇರುವ ಮೇಳ್ಯಾ ಕೆರೆಯಲ್ಲಿ ತೀರ್ಥ ಸ್ನಾನವನ್ನು ಮಾಡಿ ದೇವರ ದರ್ಶನ ಪಡೆಯುತ್ತಾರೆ. ಗುಹಾಲಯದ ನೀರಿನಲ್ಲಿ ಅಪಾರ ಪ್ರಮಾಣದ ಮತ್ಸ್ಯ ಸಂಪತ್ತಿದ್ದರೂ ಸಹ ಯಾರೂ ಕೂಡ ಮೀನುಗಳಿಗೆ ತೊಂದರೆ ಕೊಡುವುದಿಲ್ಲ. ಸ್ಥಳೀಯ ಉಲ್ಲೇಖಗಳ ಪ್ರಕಾರ ಈ ಅಸಂಖ್ಯ ಮೀನುಗಳ ಜೊತೆಗೆ ಒಂದು ಬಂಗಾರದ ಮುಗುತ್ತಿ ಮೀನು ಸಹ ಇದೆ ಎನ್ನಲಾಗುತ್ತದೆ.ಇದು ಎಳ್ಳಮಾವಾಸ್ಯೆಯಂದು ಮಾತ್ರ ಕಾಣಿಸುತ್ತದೆ ಎನ್ನಲಾಗಿದೆ. ಈ ಗುಹಾಲಯಕ್ಕೆ ಆಗಮಿಸುವವರು ಇಲ್ಲಿಯಿಂದ ಸಮೀಪದಲ್ಲೇ ಇರುವ ಕೊಡಚಾದ್ರಿ ಬೆಟ್ಟದ ನಡುವೆ ಹರಿಯುವ ಬೆಣಕಲ್ ತೀರ್ಥ ಎಂಬ ಜಲಪಾತಕ್ಕೂ ಸಹ ಚಾರಣ ಕೈಗೊಳ್ಳಬಹುದು. ಕರ್ನಾಟಕದ ಉಡುಪಿಗೆ ಹೋದಾಗ ತಪ್ಪದೆ ಮೂಡುಗಲ್ಲು ಗುಹಾಂತರ ದೇವಾಲಯಕ್ಕೆ ಭೇಟಿ ನೀಡಬಹುದು.